ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲರಿಮೆ ಕದಲಿಸದ ಕಲಿಕೆ

ಮಕ್ಕಳ ಮನಸ್ಸಿನಿಂದ ಜಾತಿ, ಅಂತಸ್ತಿನ ಪ್ರಜ್ಞೆಯನ್ನು ಕಿತ್ತೊಗೆದು ಸಮಾನತೆಯ ಪ್ರಜ್ಞೆ ಬಿತ್ತುವ ಶಿಕ್ಷಣವು ಸಮಾಜಕ್ಕೆ ಬೇಡವಾಗಿದೆಯೇ?
Last Updated 29 ಅಕ್ಟೋಬರ್ 2019, 19:43 IST
ಅಕ್ಷರ ಗಾತ್ರ

ಬಾಲ್ಯದಲ್ಲಿ ನಮಗೆ ಗಣಿತ ಹೇಳಿಕೊಟ್ಟ ಶಿಕ್ಷಕರೊಬ್ಬರು ಹಲವು ವರ್ಷಗಳ ನಂತರ ಸಿಕ್ಕಿದ್ದರು. ಉಭಯಕುಶಲೋಪರಿ ನಂತರ ಮಾತು ಅವರ ಮಗನ ಶಿಕ್ಷಣದತ್ತ ತಿರುಗಿತು. ‘ಮಗನನ್ನು ಎರಡು ತಿಂಗಳ ಹಿಂದಷ್ಟೆ ಬಾಂಬೆ ಐಐಟಿಗೆ ಸೇರಿಸಿ ಬಂದೆ’ ಎಂಬ ಅವರ ಮಾತು ಕೇಳಿ ಖುಷಿಯಾಯ್ತು.

ಬಾಂಬೆ ಐಐಟಿಯಲ್ಲಿ ಬಿ.ಟೆಕ್ ಕೋರ್ಸ್‌ಗೆ ದಾಖಲಾಗಿರುವ ಅವರ ಮಗ ಐಐಟಿ ಮತ್ತು ಎನ್‍ಐಟಿಯಲ್ಲಿ ಪ್ರವೇಶ ಪಡೆಯಲು ಬರೆಯಬೇಕಿರುವ ಜೆ.ಇ.ಇಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಕಾರಣವಾದ ಅಂಶಗಳಾದರೂ ಯಾವುವು ಎಂದು ತಿಳಿದುಕೊಳ್ಳುವ ಕುತೂಹಲದಿಂದ, ‘ನಿಮ್ಮ ಮಗ ಪಿಯುಸಿ ಓದಿದ್ದು ಎಲ್ಲಿ?’ ಎಂದು ವಿಚಾರಿಸಿದೆ. ‘ನವೋದಯ ವಿದ್ಯಾಲಯದಲ್ಲಿ’ ಎಂದರು. ನವೋದಯ ವಿದ್ಯಾಲಯದ ಮಕ್ಕಳು ಜೆ.ಇ.ಇ ಪರೀಕ್ಷೆ ಎದುರಿಸಲು ವಿಶೇಷ ತರಬೇತಿ ನೀಡಲೆಂದೇ ಇರುವ ‘ದಕ್ಷಣ’ ಕೇಂದ್ರದಲ್ಲಿ ತರಬೇತಿ ಪಡೆದಿರಬಹುದೆಂದು ಭಾವಿಸಿ, ‘ದಕ್ಷಣಕ್ಕೆ ಆಯ್ಕೆ ಆಗಿದ್ನಾ’ ಎಂದು ಪ್ರಶ್ನಿಸಿದೆ. ‘ಆಗಿದ್ದ, ಆದ್ರೆ ಅಲ್ಲಿಗೆ ಬರುವ ಬಹುತೇಕ ಮಕ್ಕಳು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ ಅನ್ನೋ ಕಾರಣಕ್ಕೆ ಆ ಕೇಂದ್ರಕ್ಕೆ ಹೋಗಲು ನಿರಾಕರಿಸಿದ’ ಎಂದರು.

ಅವರ ಮಗನ ಸಾಧನೆಯಿಂದ ಖುಷಿಗೊಂಡಿದ್ದ ನನಗೆ, ಈ ಮಾತು ಕೇಳಿ ಕಸಿವಿಸಿಯಾಯಿತು. ಐದನೇ ತರಗತಿಯಿಂದ ಜವಾಹರ್ ನವೋದಯ ವಿದ್ಯಾಲಯದಲ್ಲಿ ಓದಿ, ಬಾಂಬೆ ಐಐಟಿಯಲ್ಲಿ ಸೀಟು ದಕ್ಕಿಸಿಕೊಳ್ಳುವಷ್ಟು ಓದಿನಲ್ಲಿ ಮುಂದಿರುವ ಹುಡುಗನ ಮನಸ್ಸಿನಲ್ಲಿ ಬೇರೂರಿರುವ ಜಾತಿ ಮೇಲರಿಮೆ ಕಂಡು ಬೇಸರವೂ ಆಯಿತು. ನಮ್ಮಂತಹ ಅಸಂಖ್ಯ ಮಕ್ಕಳಿಗೆ ಓದು– ಬರಹ ಹೇಳಿಕೊಟ್ಟ ಶಿಕ್ಷಕರಿಗೂ ತಮ್ಮ ಮಗನಲ್ಲಿ ಬೇರೂರಿರುವ ಜಾತಿ ಪ್ರಜ್ಞೆಯ ಕುರಿತು ಆತಂಕವಾಗುವ ಬದಲಿಗೆ, ಆ ವರ್ತನೆ ಹೆಮ್ಮೆಪಡುವ ಸಂಗತಿ ಎಂದೇ ಅವರೂ ಭಾವಿಸಿದಂತಿತ್ತು.

ಜರ್ಮನಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎಸ್)ಪೂರೈಸಿ, ಅಲ್ಲಿನ ‘ಔಡಿ’ ಕಾರು ತಯಾರಿಕಾ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯುವಕನೊಬ್ಬ ಇತ್ತೀಚೆಗೆ ತಾನು ಎಂಜಿನಿಯರಿಂಗ್ ಓದಿದ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ವೇಳೆ ಆಡಿದ ಮಾತು ನೆನಪಾಯಿತು. ಜರ್ಮನಿಯಲ್ಲಿ ಉನ್ನತ ವ್ಯಾಸಂಗ ಮಾಡುವ ಆಸಕ್ತಿ ಹೊಂದಿರುವ
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಸಂವಾದ ನಡೆಸುತ್ತಿದ್ದ ಆತ, ‘ಜರ್ಮನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂದರೆ ಜರ್ಮನ್ ಭಾಷೆ ಗೊತ್ತಿರಲೇಬೇಕು. ಅಲ್ಲಿ ನಮ್ಮ Technical Knowledge (ತಾಂತ್ರಿಕ ಜ್ಞಾನ) ಜೊತೆಗೆ Social Skillsಗೂ(ಸಾಮಾಜಿಕ ಕೌಶಲಗಳು) ಮಹತ್ವ ನೀಡ್ತಾರೆ. ಬೇರೆ ದೇಶದಿಂದ ಬಂದವರು ಅಲ್ಲಿನ ಭಾಷೆ, ಸಂಸ್ಕೃತಿಯನ್ನು ಗೌರವಿಸುವರೋ ಇಲ್ಲವೋ, ಜನರೊಂದಿಗೆ ಮುಕ್ತವಾಗಿ ಬೆರೆಯುವರೋ
ಇಲ್ಲವೋ ಎಂಬ ಅಂಶಗಳೂ ಕೆಲಸ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ’ ಎಂದು ತಿಳಿಸಿದ್ದ.

ನಮ್ಮಲ್ಲಿ ಕೆಲಸ ನೀಡಲು ‘ಸಾಮಾಜಿಕ ಕೌಶಲ’ ಎಂದಾದರೂ ಮುಖ್ಯವಾಗುವುದೇ? ಸಾಮಾಜಿಕ ಕೌಶಲವೆಂದರೆ ಸಂವಹನ ಕೌಶಲವೆಂದಷ್ಟೇ ನಮ್ಮ ಉದ್ಯೋಗದಾತರು ಭಾವಿಸಿಲ್ಲವೇ? ನಮ್ಮ ಶಿಕ್ಷಣ ವ್ಯವಸ್ಥೆಯ ಗುರಿ ಮಕ್ಕಳಲ್ಲಿ ಸಾಮಾಜಿಕ ಕೌಶಲಗಳನ್ನು ರೂಢಿಸುವುದಾಗಿದೆಯೇ? ಮಕ್ಕಳ ಮನಸ್ಸಿನಲ್ಲಿ ಬೇರೂರಿರುವ ಗುರಿಗಳ ಪಟ್ಟಿಯಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಮನುಷ್ಯನಾಗಿ ಹೊರಹೊಮ್ಮುವುದಕ್ಕೆ ಸ್ಥಾನವಿದೆಯೇ? ಹಾಗೊಂದು ವೇಳೆ ಮಕ್ಕಳು ಗಳಿಸುವ ಅಂಕಗಳು, ರ್‍ಯಾಂಕ್‍ಗಳಿಗೂ ಅವರ ಸಾಮಾಜಿಕ ಕೌಶಲಕ್ಕೂ ನೇರ ಸಂಬಂಧವಿರುವುದು ನಿಜವೇ ಆಗಿದ್ದರೆ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್‍ ಪಡೆದ ಹುಡುಗನಿಗೆ ನಿರ್ದಿಷ್ಟ ಜಾತಿಯೊಂದರ ಮಕ್ಕಳೊಂದಿಗೆ ಬೆರೆಯುವುದು ಏಕೆ ಸಮಸ್ಯೆಯಾಗಿ ತೋರುತ್ತಿದೆ? ಆ ಮಕ್ಕಳ ಕುರಿತು ಇವನಲ್ಲಿ ಬೇರೂರಿರುವ ಅಸಹನೆಯನ್ನು ತೊಡೆಯಲು ಅವನ ಓದು ದಕ್ಕಿಸಿಕೊಟ್ಟ ಅರಿವಿಗೆ ಏಕೆ ಸಾಧ್ಯವಾಗಿಲ್ಲ?

ಶಿಕ್ಷಣದ ಯಶಸ್ಸನ್ನು ಅದರಿಂದ ದಕ್ಕಬಹುದಾದ ಉದ್ಯೋಗ ಮತ್ತು ಹಣದಿಂದಷ್ಟೆ ಅಳೆಯುವ ಸಮಾಜಕ್ಕೆ, ಮಕ್ಕಳ ಮನಸ್ಸಿನಲ್ಲಿ ಬೇರೂರತೊಡಗುವ ಜಾತಿ- ಅಂತಸ್ತಿನ ಪ್ರಜ್ಞೆಯನ್ನು ಕಿತ್ತೊಗೆದು ಎಲ್ಲರನ್ನೂ ಸಮಾನವಾಗಿ ಕಾಣುವ ಪ್ರಜ್ಞೆ ಬಿತ್ತುವ ಶಿಕ್ಷಣ ಬೇಡವಾಗಿದೆಯೇ? ಒಟ್ಟಾರೆ ಪರಿಸರದ, ಸಮುದಾಯದ ಹಿತದಲ್ಲಿ ತನ್ನ ಹಿತವೂ ಅಡಗಿದೆ ಎನ್ನುವ ಪ್ರಜ್ಞೆಯನ್ನು ಬಿತ್ತಲು ಸೋಲುತ್ತಿರುವ ಶಿಕ್ಷಣದ ಗುರಿಯನ್ನು ವ್ಯಾವಹಾರಿಕ ದೃಷ್ಟಿಕೋನದಿಂದ ಮಾತ್ರ ನಿಗದಿಪಡಿಸಿದರೆ ಎದುರಾಗಬಹುದಾದ ಅನಾಹುತಗಳೆಲ್ಲವೂ ಕಣ್ಣೆದುರೇ ಜರುಗುತ್ತಿದ್ದರೂ ನಾವಿನ್ನೂ ಆತ್ಮವಿಮರ್ಶೆಯ ದಾರಿ ತುಳಿದಂತೆ ತೋರುತ್ತಿಲ್ಲ. ಶಿಕ್ಷಣದ ಮೂಲಕ ಮಕ್ಕಳಲ್ಲಿ ಸುತ್ತಲಿನ ಸಮಾಜದ ಕುರಿತು ತಿಳಿವಳಿಕೆ ಮೂಡಿಸುವುದು, ಅವರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು ಮತ್ತು ವೈಚಾರಿಕ ಪ್ರಜ್ಞೆ ಬಿತ್ತುವುದು ನಮಗೆ ಮುಖ್ಯ ಅನ್ನಿಸದೇ ಇರುವುದು ವರ್ತಮಾನದ ದುರಂತವೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT