ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಕತ್ತಲು ತಂದೀತು ವಿದ್ಯುತ್!

ಮನುಕುಲಕ್ಕೆ ದೊರೆತ ಮಹತ್ವದ ‘ಶಕ್ತಿ’ ಎಂದು ಪರಿಗಣಿಸಲಾಗಿರುವ ವಿದ್ಯುತ್‌ನಿಂದ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಬೇಕು
Published 28 ಜೂನ್ 2024, 19:42 IST
Last Updated 28 ಜೂನ್ 2024, 19:42 IST
ಅಕ್ಷರ ಗಾತ್ರ

ವಿದ್ಯುತ್ ಸುರಕ್ಷಾ ಸಪ್ತಾಹ ಆರಂಭವಾಗುವ (ಜೂನ್ 26ರಿಂದ ಜುಲೈ 2) ಮುನ್ನಾ ದಿನವೇ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ದಾಸರಮಡ್ಡಿಯ ಮನೆಯೊಂದರ ಮೇಲೆ, ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಂಡಾಗಿ ಬಿದ್ದು ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡ ವರದಿ (ಪ್ರ.ವಾ., ಜೂನ್ 26) ಓದಿ ಬೇಸರವಾಯಿತು. ಆ ಮನೆಯಲ್ಲಿ ಮದುವೆಯ ಸಿದ್ಧತೆ ನಡೆದಿತ್ತು. ವರ ಮೃತಪಟ್ಟಿದ್ದಾನೆ. ಕನ್ಯೆ ಗಾಯಗೊಂಡಿದ್ದಾಳೆ. ಸಂಭ್ರಮದಿಂದ ತುಂಬಿದ್ದ ಮನೆಯಲ್ಲಿ ದುಃಖದ ಛಾಯೆ ಆವರಿಸಿದೆ.

ರಾಜ್ಯದಲ್ಲಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಸುರಕ್ಷತೆಗೆ ಗಮನ ಕೊಡುವಲ್ಲಿ ಬಳಕೆದಾರರು ಮತ್ತು ಸರ್ಕಾರ ಹಿಂದೆ ಬಿದ್ದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದಲ್ಲಿ ಒಂದು ವರ್ಷದ ಅವಧಿಯಲ್ಲಿ ವಿದ್ಯುತ್ ಅವಘಡದಲ್ಲಿ 473 ಜನ ಹಾಗೂ 476 ಪ್ರಾಣಿಗಳು ಮೃತಪಟ್ಟಿರುವುದು ಇದಕ್ಕೆ ನಿದರ್ಶನ.

ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಬಳಕೆದಾರರ ಮನೆ, ನಿವೇಶನ, ಕಚೇರಿ, ಕಾರ್ಖಾನೆ, ಪಂಪ್‌ಸೆಟ್‌ಗಳಿಗೆ ವಿದ್ಯುತ್ ಅಳವಡಿಸುವ ಎಲ್ಲ ಹಂತದಲ್ಲೂ ಸುರಕ್ಷತೆಗೆ ಆದ್ಯತೆ ನೀಡುವುದು ಬಹಳ ಅಗತ್ಯ. ವಿದ್ಯುತ್ ಅವಘಡದಿಂದ ಜನ, ಪ್ರಾಣಿ-ಪಕ್ಷಿ ಮಾತ್ರವಲ್ಲದೆ, ಶಾರ್ಟ್ ಸರ್ಕಿಟ್‌ನಿಂದ ಅಗ್ನಿ ಅನಾಹುತ ಉಂಟಾಗಿ ಆಸ್ತಿ, ಬೆಳೆ, ಅರಣ್ಯ ನಷ್ಟವೂ ಸಂಭವಿಸುತ್ತದೆ. ಇದು ಭಾರಿ ಪ್ರಮಾಣದ ಹಾನಿಯಾಗಿದ್ದು, ಈ ಬಗ್ಗೆ ಲೆಕ್ಕ ನೀಡುವ ಕೆಲಸವನ್ನು ಇಂಧನ ಇಲಾಖೆ ಮಾಡುವುದಿಲ್ಲ. ಇದು ಜಾಣ ಮೌನ ಇರಬಹುದು.

ಬಳಕೆದಾರರು ವಿದ್ಯುತ್ ಸೇವೆಯ ಅಳವಡಿಕೆಗೆ ಪರಿಣತರನ್ನು ಅವಲಂಬಿಸಬೇಕು. ಗುಣಮಟ್ಟದ ಉಪಕರಣಗಳನ್ನು ಬಳಸಬೇಕು. ನಿರ್ಲಕ್ಷ್ಯ ವಹಿಸಿದರೆ ಶಾರ್ಟ್ ಸರ್ಕಿಟ್ ತಲೆದೋರುವ ಅಪಾಯವಿರುತ್ತದೆ. ಮನೆಗೆ ವಿದ್ಯುತ್ ಪೂರೈಸುವ ಕೊಂಡಿಯಾಗಿರುವ ಫ್ಯೂಸ್ ತಂತಿಯ ಪಾತ್ರ ಬಹಳ ಮುಖ್ಯವಾದದ್ದು. ಇದರೊಂದಿಗೆ ಮಿನಿಯೇಚರ್‌ ಸರ್ಕಿಟ್ ಬ್ರೇಕರ್ (ಎಂಸಿಬಿ) ಮತ್ತು ಅರ್ಥ್ ಲೀಕೇಜ್ ಸರ್ಕಿಟ್ ಬ್ರೇಕರ್ (ಇಎಲ್‌ಸಿಬಿ) ಅಳವಡಿಕೆ ಮಾಡಬೇಕು. ಪ್ರತಿ ಸಂಪರ್ಕದೊಂದಿಗೆ ಅರ್ಥಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು. ಅರ್ಥಿಂಗ್‌ಗೆ ತಾಮ್ರದ ತಂತಿಯನ್ನೇ ಬಳಸಬೇಕು. ಅಲ್ಯೂಮಿನಿಯಂ ತಂತಿ ಬಳಕೆ ಸುರಕ್ಷಿತವಲ್ಲ. ಇಲಾಖೆ ವತಿಯಿಂದ ಪರಿಶೀಲನೆ ನಡೆಸಿ ವಿದ್ಯುತ್ ಬಳಕೆಗೆ ಒಪ್ಪಿಗೆ ನೀಡುವ ಕಡ್ಡಾಯ ವ್ಯವಸ್ಥೆ ಜಾರಿಯಾಗಬೇಕು.

ವಿದ್ಯುತ್ ಉತ್ಪಾದನಾ ಕೇಂದ್ರದಿಂದ ದೂರದ ಪ್ರದೇಶಗಳಿಗೆ 400 ಕೆ.ವಿ.ಗಿಂತ ಹೆಚ್ಚು ವಿದ್ಯುತ್ ಪ್ರವಹಿಸಲು ಭವ್ಯ ವಿದ್ಯುತ್‌ ಟವರ್‌ಗಳನ್ನು ನಿರ್ಮಿಸಲಾಗುತ್ತದೆ. ಇವುಗಳಲ್ಲಿ ಸತತ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುತ್ತಿರುತ್ತದೆ. ಈ ಟವರ್‌ಗಳ ಸಮೀಪ ಯಾರೂ ವಾಸಿಸಬಾರದು ಎಂಬ ನಿಯಮ ಇದ್ದರೂ ಕಡೆಗಣಿಸಿ, ಅಂತಲ್ಲಿ ಅನೇಕ ಜನವಸತಿಗಳು ಹುಟ್ಟಿಕೊಂಡಿವೆ.

ಭೂಮಿಯ ಒಳಗೆ ಕೇಬಲ್ ಹಾಕುವುದು ಹೆಚ್ಚು ಸುರಕ್ಷಿತ ವಿಧಾನವಾಗಿದೆ. ಆದ್ಯತೆಯ ಮೇಲೆ ಈ ಕೆಲಸ ಪೂರ್ಣಗೊಳಿಸಬೇಕು. ಅತಿ ಅಪಾಯದ ಸಂಗತಿ ಎಂದರೆ, ನೀರಾವರಿ ಪಂಪ್‌ಸೆಟ್‌ಗಳಿಗೆ ರೈತರು ತಾವೇ ಮುಂದಾಗಿ ಅಕ್ರಮ ವಿದ್ಯುತ್ ಸಂಪರ್ಕ ಕೊಟ್ಟು ಕೊಳ್ಳುವುದು. ಇಂಥ ಸಂಪರ್ಕಗಳನ್ನು ಇಲಾಖೆ ಗುರುತಿಸಿ ಸಕ್ರಮ ಮಾಡಿಕೊಡುತ್ತದೆ. ಆರಂಭದಲ್ಲಿಯೇ ಸಕ್ರಮ ಸಂಪರ್ಕ ಪಡೆಯುವುದು ಸುರಕ್ಷಿತ ನಡೆ ಎಂಬುದನ್ನು ಮರೆಯಬಾರದು. ಸಾರ್ವಜನಿಕ ಸಮಾರಂಭ, ಜಾತ್ರೆ, ಉತ್ಸವ, ಧಾರ್ಮಿಕ ಕಾರ್ಯಗಳನ್ನು ನಡೆಸುವಾಗ ವಿದ್ಯುತ್ ತಂತಿಗೆ ನೇರವಾಗಿ ಹುಕ್ ಹಾಕಿ ವಿದ್ಯುತ್ ಪಡೆಯುವ ಅಕ್ರಮ ನಡೆಯುತ್ತದೆ. ಇದು ಅತ್ಯಂತ ಅಪಾಯಕಾರಿ ವಿಧಾನವಾಗಿದೆ. ತಾತ್ಕಾಲಿಕ ವಿದ್ಯುತ್ ಪೂರೈಕೆಗೆ ಅವಕಾಶವಿದೆ. ಇದನ್ನು ನಿಯಮಾನುಸಾರ ಬಳಸಿಕೊಳ್ಳಬೇಕು.

ವಿದ್ಯುತ್ ಅವಘಡದಿಂದ ಮರಣ ಸಂಭವಿಸಿದಾಗ ಅಧಿಕಾರಿಗಳು ಮೃತರ ಕುಟುಂಬಕ್ಕೆ ಒಂದಷ್ಟು ಪರಿಹಾರ ಕೊಟ್ಟು ನ್ಯಾಯಾಲಯಕ್ಕೆ ಹೋಗದಂತೆ ಮಾಡುವ ಕಾರ್ಯ ಕೆಲವು ಸಂದರ್ಭಗಳಲ್ಲಿ ನಡೆಯುತ್ತದೆ. ಇದು ಕಾನೂನುಬದ್ಧ ಕ್ರಮವಲ್ಲ. ಅವಘಡಕ್ಕೆ ಯಾರು ಕಾರಣ, ಏನು ಕಾರಣ ಎಂಬುದನ್ನು ನ್ಯಾಯಾಲಯ ತೀರ್ಮಾನಿಸಬೇಕು. ಇದರಿಂದ ತಪ್ಪುಗಳನ್ನು ಗುರುತಿಸುವುದಕ್ಕೆ ಮತ್ತು ತಪ್ಪು ಮಾಡಿದ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡುವುದಕ್ಕೆ ನೆರವಾಗುತ್ತದೆ.

ಎಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯ ಕೂಡ ಅವಘಡಕ್ಕೆ ಕಾರಣವಾಗಿರುತ್ತದೆ. ವಿದ್ಯುತ್ ತಂತಿ ದುರಸ್ತಿ
ಗೊಳಿಸುವಾಗ ಲೈನ್‌ಮನ್‌ಗಳೇ ಮೃತಪಟ್ಟ ಪ್ರಕರಣಗಳು ನಡೆದಿವೆ. 2023– 24ರಲ್ಲಿ ನಡೆದ ವಿದ್ಯುತ್‌ ಅವಘಡದಲ್ಲಿ ಇಲಾಖೆಯ 35 ಸಿಬ್ಬಂದಿ ಅಸುನೀಗಿದ್ದಾರೆ. ಇಲಾಖೆಯೂ ಜಾಗೃತಗೊಳ್ಳಬೇಕು, ಜನರನ್ನೂ ಜಾಗೃತಗೊಳಿಸಬೇಕು ಎಂಬ ಹಿರಿಯರೊಬ್ಬರ ಮಾತು ಅರ್ಥಪೂರ್ಣವಾಗಿದೆ.

ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ವಿಜ್ಞಾನ, ತಂತ್ರಜ್ಞಾನ ಬಹಳಷ್ಟು ಬೆಳೆದಿದೆ. ನೈಸರ್ಗಿಕವಾಗಿ ದೊರಕುವ ಗಾಳಿ, ನೀರು, ಬಿಸಿಲು, ಸಮುದ್ರದ ತೆರೆಗಳನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲಾಗುತ್ತಿದೆ. ವಿದ್ಯುತ್‌ ಮನುಕುಲಕ್ಕೆ ದೊರೆತ ‘ಮಾಯಾದೀಪ’ ಎಂದು ಭಾವಿಸಲಾಗಿದೆ. ಎಲ್ಲ ರಂಗಗಳಲ್ಲಿಯೂ ವಿಶಾಲವಾಗಿ ಆವರಿಸಿರುವ ಡಿಜಿಟಲ್ ಲೋಕವು ವಿದ್ಯುತ್ ಕೊಡುಗೆ. ಇಂತಹ ವಿದ್ಯುತ್ತನ್ನು ಸುರಕ್ಷತೆ ಮತ್ತು ದಕ್ಷತೆಯಿಂದ ಬಳಸಬೇಕಾದುದು ನಮ್ಮೆಲ್ಲರ ಹೊಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT