ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಸಹಿಷ್ಣುತೆ: ಬಂದಿದೆ ಪರೀಕ್ಷಾ ಕಾಲ

ಮಾಡಬೇಕಾದ್ದು ಇತಿಹಾಸ ಬದಲಿಸುವುದಲ್ಲ... ಇತಿಹಾಸದಿಂದ ಪಾಠ ಕಲಿಯುವುದು
Published : 19 ಮೇ 2022, 19:45 IST
ಫಾಲೋ ಮಾಡಿ
Comments

ಭಾರತದ ಮೇಲಿನ ಅಸಂಖ್ಯ ಮುಸ್ಲಿಂ ಆಕ್ರಮಣಗಳು ಮತ್ತು ಅದರ ಪರಿಣಾಮವಾಗಿ 700 ವರ್ಷಗಳ ಕಾಲ ಈ ದೇಶವನ್ನು ಅವರು ಆಳಿದ್ದು ಇತಿಹಾಸದ ಕಟು ಸತ್ಯ. ನಿರಂಕುಶ ಪ್ರಭುತ್ವವಾಗಿದ್ದರಿಂದ ಮತ್ತು ಆಗ ಆಳಿದವರ ನಿಘಂಟಿನಲ್ಲೇ ಅನ್ಯಮತ ಸಹಿಷ್ಣುತೆ ಎಂಬುದು ಇರಲಿಲ್ಲವಾದ್ದರಿಂದ ಹಾಗೂ ತಮ್ಮ ಆಳ್ವಿಕೆಗೆ ಒಳಪಟ್ಟವರ ದೇವಾಲಯಗಳನ್ನು ನಿರ್ನಾಮ ಮಾಡಿ ಅಲ್ಲೇ ಮಸೀದಿಗಳನ್ನು ಕಟ್ಟುವುದು ತಮ್ಮ ಆದ್ಯ ಕರ್ತವ್ಯವೆಂದು ಅವರು ಭಾವಿಸಿದ್ದರಿಂದ ಸಹಸ್ರಾರು ದೇವಾಲಯಗಳು ಹಾಗೆ ಮಸೀದಿಗಳಾದದ್ದು ಕೂಡ ಐತಿಹಾಸಿಕ ಸತ್ಯ.

ಅದೊಂದು ರಕ್ತರಂಜಿತ ಅಧ್ಯಾಯ. ಇದನ್ನು ಎಲ್ಲ ಇತಿಹಾಸಕಾರರೂ ಸಾರುತ್ತ ಬಂದಿದ್ದಾರೆ. ಆ ಹಳೆಯ ಇತಿಹಾಸವನ್ನು ನಾವ್ಯಾರೂ ಬದಲಾಯಿಸಲು ಸಾಧ್ಯವಿಲ್ಲ. ಅದನ್ನು ಮರೆಯದೆ ಅಂಥ ಇತಿಹಾಸ ಪುನರಾವರ್ತಿತವಾಗದಂತೆ ನೋಡಿಕೊಳ್ಳುವುದಷ್ಟೇ ನಮ್ಮ ಹೊಣೆಗಾರಿಕೆ. ಆದರೆ ಅದಕ್ಕೆ ಈಗಿನ ಮುಸಲ್ಮಾನರಾರೂ ಹೊಣೆಗಾರರಲ್ಲವೇ ಅಲ್ಲ. ಆಗ ಆಳಿದವರ ಬಗ್ಗೆ ಇಡೀ ಮನುಕುಲಕ್ಕಿರುವುದು ತಿರಸ್ಕಾರ ಮಾತ್ರ ಎಂಬುದನ್ನು ಅರಿತು, ಹಿಂದಿನ ಇತಿಹಾಸದ ಆ ರಕ್ತರಂಜಿತ ಅಧ್ಯಾಯದಿಂದ ಈಗಿನ ಮುಸಲ್ಮಾನರು ಕಲಿಯಬೇಕಾದ ಪಾಠವೆಂದರೆ ಧರ್ಮ ಸಹಿಷ್ಣುತೆ.

ಹೊಸ ಸಂಗತಿಯೆಂದರೆ, ಸ್ವಾತಂತ್ರ್ಯಾ ನಂತರದ ಇಷ್ಟು ವರ್ಷಗಳ ಬಳಿಕ ಅದೂ ಅಯೋಧ್ಯಾ ವಿವಾದ ಮುಗಿದ ನಂತರದಲ್ಲಿ ಈಗ ಮತ್ತೆ ಮತ್ತೆ ಮಸೀದಿ- ಮಂದಿರದ ವಿವಾದವನ್ನು ಕೆದಕುತ್ತ ಹೋಗುತ್ತಿರು ವುದು ಮತ್ತು ಅಲ್ಲೆಲ್ಲಾ ಮತ್ತೆ ದೇವಾಲಯಗಳನ್ನು ಸ್ಥಾಪಿಸುತ್ತೇವೆಂದು ಹೊರಡುತ್ತಿರುವುದು. ಇದು ಎಷ್ಟೂ ಸರಿಯಲ್ಲ. ಈ ದೇಶದಲ್ಲಿ ಕೋಮು ಸೌಹಾರ್ದ, ಸಾಮರಸ್ಯ ಉಳಿದು ಬರಬೇಕೆಂದು ಬಯಸುವ ಯಾವ ನಾಗರಿಕನೂ ಇದನ್ನು ಒಪ್ಪಲಾರ. ಬಾಬರಿ ಮಸೀದಿ ಪ್ರಕರಣದ ನಂತರ ಇಂಥವಕ್ಕೆಲ್ಲ ಅಂತ್ಯವಿರಾಮ ಹಾಕಬೇಕೆಂಬುದೇ ಸಮಚಿತ್ತದಿಂದ ಯೋಚಿಸುವ ಯಾವುದೇ ಭಾರತೀಯನ ಅಭಿಪ್ರಾಯ ಎಂದು ನನಗನಿಸುತ್ತದೆ. ಹಿಂದೂಗಳು ಯಾವತ್ತೂ ಪರಧರ್ಮ ಸಹಿಷ್ಣುಗಳೆಂಬುದನ್ನು ಅಭಿಮಾನದಿಂದ ಹೇಳುತ್ತಿರುತ್ತೇವೆ. ಈಗ ಅದರ ನಿಜವಾದ ಪರೀಕ್ಷಾ ಕಾಲ.

ಇನ್ನೊಬ್ಬರ ಪೂಜಾ ಸ್ಥಳಗಳನ್ನು ಧ್ವಂಸ ಮಾಡಿ ಮಸೀದಿ ಸ್ಥಾಪಿಸುವುದು ಹೇಯ ಕೃತ್ಯ ಎನ್ನುವ ನಾವು, ಈಗ ನೂರಾರು ವರ್ಷಗಳಿಂದ ತಮ್ಮ ಪ್ರಾರ್ಥನಾ ಸ್ಥಳವಾಗಿ ಮಾರ್ಪಡಿಸಿಕೊಂಡಿರುವ ಮಸೀದಿಯನ್ನು ಧ್ವಂಸಗೊಳಿಸಬೇಕು ಎಂದು ಹೇಳುವುದು ಹೇಗೆ ಹೇಯವಲ್ಲ ಎನ್ನುವುದೇ ಅರ್ಥವಾಗುವುದಿಲ್ಲ. ಒಂದು ಕಾಲದಲ್ಲಿ ಅದು ಹಿಂದೂಗಳ ಪೂಜಾಸ್ಥಳವಾಗಿತ್ತು ನಿಜ. ಆದರೆ ಈಗ ಅದು ಹೇಗೋ ಅವರದಾಗಿರುವಾಗ ಮತ್ತೆ ಅದರ ಮೇಲೆ ಹಕ್ಕು ಸ್ಥಾಪಿಸುವ ಅಗತ್ಯವಿದೆಯೇ? ಒಂದು ಲೆಕ್ಕದಲ್ಲಿ ಆ ಜಾಗ ಮತ್ತು ಅದರಲ್ಲಿನ ಮೂರ್ತಿಗಳು ಅಪವಿತ್ರಗೊಂಡು ಇಲ್ಲವೇ ವಿಕೃತಗೊಂಡು ಅದೆಷ್ಟೋ ವರ್ಷಗಳಾಗಿವೆ.ಮಸೀದಿಯೊಂದರ ಗೋಡೆಯಲ್ಲಿ ರುವ ಪೂಜಾ ಮೂರ್ತಿಗಳನ್ನು ಅಲ್ಲಿಯೇ ಹೋಗಿ ಪೂಜೆ ಮಾಡಬೇಕಾಗಿದೆಯೇ? ಬೇರೆಲ್ಲಿ ಬೇಕಾದರೂ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸಬಹುದಲ್ಲವೇ? ಆಕಾರವೇ ಇಲ್ಲದ ಕಲ್ಲಿಗೂ ದೈವತ್ವ ಆರೋಪಿಸುವ ಹಿಂದೂ ಮನಸ್ಸಿಗೆ ಇದು ಸಲೀಸು.

ಧರ್ಮಗಳು ಮನುಷ್ಯರನ್ನು ಕೂಡಿಸುತ್ತವೆಂದು, ಧರ್ಮ ಸಂಸ್ಥಾಪಕರೆಲ್ಲಾ ಉದಾತ್ತ ವ್ಯಕ್ತಿಗಳೆಂದು, ಎಲ್ಲ ಧರ್ಮಗಳೂ ಸಮಾನವೆಂದು ಅವರು ಹೇಳುತ್ತಾರೆಂಬ ಮಾತನ್ನು ನಾವು ನಂಬೋಣ. ಆದರೆ ಧರ್ಮಗಳ ಅನುಯಾಯಿಗಳಲ್ಲಿ ಒಂದಿಷ್ಟು ಜನರಿಗೆ ಒಮ್ಮೊಮ್ಮೆ ತಮ್ಮ ಧರ್ಮ ಮತ್ತು ತಾವು ಆರಾಧಿಸುವ ದೈವ ಪರಮ; ಉಳಿದವೆಲ್ಲ ಅವಕ್ಕಿಂತ ಕನಿಷ್ಠ ಎನಿಸಿಬಿಡುತ್ತದೆ. ಅದಕ್ಕೇ ಅವರು ಒಂದು ಧರ್ಮದ ಆರಾಧ್ಯ ದೈವದ ಜಾಗದಲ್ಲಿ ತಮ್ಮ ಆರಾಧ್ಯ ದೈವವನ್ನು ಸ್ಥಾಪಿ ಸುತ್ತ ಬಂದಿರುವುದಕ್ಕೆ ಜಗತ್ತಿನ ಸರಿಸುಮಾರು ಯಾವ ಧರ್ಮದ ಅನುಯಾಯಿಗಳೂ ಅಪವಾದವಲ್ಲ. ಹಿಂದೂ ಧರ್ಮವೂ ಅಲ್ಲ.

ಕರ್ನಾಟಕದ ಉದಾಹರಣೆಯನ್ನೇ ತೆಗೆದು ಕೊಂಡರೂ ಶರಣ ಆದಯ್ಯನು ಸೌರಾಷ್ಟ್ರದಲ್ಲಿ ಜಿನ ಬಿಂಬವನ್ನು ಒಡೆದು ಅಲ್ಲಿ ಶಿವಲಿಂಗವನ್ನು ಸ್ಥಾಪಿಸಿ ದ್ದನ್ನು ಉಜ್ವಲವಾಗಿ ವರ್ಣಿಸುವುದನ್ನೇ ಉದ್ದೇಶವಾಗುಳ್ಳ ಕವಿ ರಾಘವಾಂಕನ ಸೋಮನಾಥ ಚಾರಿತ್ರ್ಯ ಮತ್ತು ಹರಿಹರನ ಆದಯ್ಯನ ರಗಳೆಗಳು ಶ್ರೇಷ್ಠ ಸಾಕ್ಷಿಗಳಾಗಿವೆ. ಏಕಾಂತರಾಮಯ್ಯನೂ ಅನೇಕ ಜಿನದೇವರುಗಳ ಜಾಗದಲ್ಲಿ ಲಿಂಗ ಸ್ಥಾಪಿಸಿದ್ದು ಕೂಡ ಇತಿಹಾಸ. ಕೊಪ್ಪಳದಲ್ಲಿ ಮತ್ತಿನ್ನಿತರ ಕಡೆ ಅನೇಕ ಜಿನಾಲಯಗಳನ್ನು ಶಿವಾಲಯಗಳನ್ನಾಗಿ ಪರಿವರ್ತಿಸಿದ್ದಕ್ಕೆ ಈಗಲೂ ಜ್ವಲಂತ ಸಾಕ್ಷ್ಯಗಳು ಲಭ್ಯ. ಹಾಗೆಯೇ ಜೈನ– ಶ್ರೀವೈಷ್ಣವರ ವ್ಯಾಜ್ಯಗಳು ಕರ್ನಾಟಕದ ಇತಿಹಾಸದಲ್ಲಿ ಸುಪ್ರಸಿದ್ಧ ಎಂಬುದಕ್ಕೆ ಬುಕ್ಕರಾಯ ಹಾಕಿಸಿಕೊಟ್ಟ ಶಾಸನವೇ ಇದೆ. ಅದೇ ರೀತಿ ಶೈವ– ವೈಷ್ಣವರ ವ್ಯಾಜ್ಯಗಳು ಇವೆ. ಬೌದ್ಧ ವಿಹಾರಗಳನ್ನೂ ದೇವಾಲಯಗಳನ್ನಾಗಿ ಪರಿವರ್ತಿಸಿದ್ದು ನಡೆದಿದೆ. ಹಾಗಾಗಿ ನಮ್ಮ ಬೆನ್ನನ್ನೂ ಒಮ್ಮೆ ನಾವೇ ನೋಡಿಕೊಂಡು ತಿಳಿಯಬೇಕಾದದ್ದು, ಮನುಷ್ಯರಿಗಾಗಿ ಧರ್ಮಗಳು ಇವೆಯೇ ವಿನಾ ಧರ್ಮ ಗಳಿಗಾಗಿ ಮನುಷ್ಯರಲ್ಲ.

ದೇಶದ ಸಕಲ ಜನರ ಸೌಹಾರ್ದ ಮತ್ತು ಸಾಮರಸ್ಯದ ದೃಷ್ಟಿಯಿಂದ, ದೇವಾಲಯ- ಮಸೀದಿ ವಿವಾದಗಳು ಅಂತಿಮಗೊಂಡಿವೆ ಎಂದು ಕೇಂದ್ರ ಸರ್ಕಾರ ಅಥವಾ ಸುಪ್ರೀಂ ಕೋರ್ಟ್ ಘೋಷಿಸಿ ಬಿಡಬೇಕು. ಇವಕ್ಕೆ ಎಲ್ಲಿಯಾದರೂ ಕೊನೆಯೊಂದು ಇಲ್ಲದಿದ್ದರೆ ಈ ವಿವಾದಗಳು ಸದಾ ಮುನ್ನೆಲೆಯಲ್ಲಿ ಇದ್ದುಬಿಡುವಂತಾಗಿ, ನೆಮ್ಮದಿ ಎಂಬುದು ಮೊಲದ ಕೋಡಾಗುವುದಷ್ಟೇ ಅಲ್ಲದೆ ಹಿಂದೂಗಳು ಶಾಂತಿ ಪ್ರಿಯರೆಂಬ ಖ್ಯಾತಿಗೂ ಭಂಗ ಬರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT