ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಪ್ರಭುತ್ವ ಮತ್ತು ಸಾಹಿತಿಗಳ ಮೌನ

ಕನ್ನಡ ಭಾಷೆಯ ಬಳಕೆಯನ್ನು ವಿವಿಧ ಜ್ಞಾನಕ್ಷೇತ್ರಗಳಿಗೆ ವಿಸ್ತರಿಸುವ ಪ್ರಯತ್ನ ಆಗುತ್ತಿಲ್ಲ
Last Updated 13 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸಮರ್ಪಕವಾದ ಧೋರಣೆ ಜಾರಿಯಾಗದ ದೋಷವು ಕನ್ನಡ ಸಾಹಿತ್ಯ ವನ್ನು ಬಾಧಿಸುತ್ತಿದೆ. ಹಿಂದೆ, ಕರಾವಳಿ ಜಿಲ್ಲೆಗಳ ಕೆಲವು ಸರ್ಕಾರಿ ಶಾಲಾಭಿವೃದ್ಧಿ ಸಮಿತಿಗಳಲ್ಲಿ ಸೇರಿಕೊಂಡ ಖಾಸಗಿ ಶಕ್ತಿಗಳು ‘ಬಡವರಿಗೂ ಸಮಾನ ಶಿಕ್ಷಣ ಬೇಕು’ ಎಂಬ ಪ್ರತಿಪಾದನೆಯೊಂದಿಗೆ ಆ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿಬಿಟ್ಟವು. ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೌನ ಸಮ್ಮತಿ ನೀಡಿದ್ದರು. ಇದು ಅಕ್ರಮ ಎನ್ನುವಷ್ಟರಲ್ಲಿ ಸರ್ಕಾರವೇ ‘ಕರ್ನಾಟಕ ಪಬ್ಲಿಕ್ ಸ್ಕೂಲ್‌’ (ಕೆ.ಪಿ.ಎಸ್.) ಹೆಸರಿನಲ್ಲಿ ಒಂದು ಸಾವಿರ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಅಧಿಕೃತ ಗೊಳಿಸಿತು.

‘ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ: ಪ್ರಯೋಗ ಯಶಸ್ವಿ’ ಎಂಬಂತಹ ಶಿರೋನಾಮೆಯ ಪತ್ರಿಕಾ ವರದಿಗಳು ಗೋಚರಿಸುತ್ತಿವೆ. ಕೆ.ಪಿ.ಎಸ್.ಗಳಿಂದಾಗಿ ಕಾರ್ಮಿಕ ವರ್ಗದ ಮಕ್ಕಳು ಇಂಗ್ಲಿಷ್ ಅನ್ನು ಸುಲಲಿತವಾಗಿ ಮಾತನಾಡುವುದರಲ್ಲಿ ಸಂಶಯವಿಲ್ಲ ಎಂಬ ಅಭಿಪ್ರಾಯವನ್ನು ಒಬ್ಬ ಶಿಕ್ಷಕಿ ನೀಡಿದ್ದಾರೆ. ಇದರಿಂದ, ಈ ಬೆಳವಣಿಗೆಯು ಸರ್ಕಾರಿ ಶಾಲೆಗಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸುವುದು ಸಾಮಾಜಿಕ ನ್ಯಾಯದ ಒಂದು ಹೆಜ್ಜೆ ಎಂಬ ವ್ಯಾಖ್ಯಾನ ಪಡೆದಂತಾಗುತ್ತದೆ. ಹೀಗಾಗಿ, ಇನ್ನು ಕನ್ನಡ ಮಾಧ್ಯಮ ಶಾಲೆಗಳ ಅಸ್ಮಿತೆಯ ಬಗ್ಗೆ ಆಶಾವಾದ ಇಟ್ಟುಕೊಳ್ಳಬೇಕಾಗಿಲ್ಲ.

ಈ ಮಧ್ಯೆ, ಕನ್ನಡ ಮಾಧ್ಯಮದಲ್ಲಿ ಯಶಸ್ವಿಯಾದ ನಲಿ- ಕಲಿ ಮಾದರಿಯಲ್ಲಿ 1ರಿಂದ 3ನೇ ತರಗತಿಯವರೆಗೆ ಇಂಗ್ಲಿಷ್‌ ಭಾಷೆಯಲ್ಲಿ ಕಲಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಪ್ರಯೋಗದ ಆರಂಭ 2015-16ನೇ ಸಾಲಿನಲ್ಲೇ ಆಗಿದೆ. ಯುನಿಸೆಫ್ ಸಹಯೋಗದಿಂದ ಇಂಗ್ಲಿಷ್‌ ಭಾಷೆಯಲ್ಲಿ ನಲಿ-ಕಲಿ ಯೋಜನೆಯನ್ನು ‘ಸಮಗ್ರ ಶಿಕ್ಷಣ ಕರ್ನಾಟಕ’ದ ಅಡಿಯಲ್ಲಿ ತುಮಕೂರು ಜಿಲ್ಲೆ, ರಾಮನಗರ ಜಿಲ್ಲೆ, ಮೈಸೂರು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ 75 ಶಾಲೆಗಳಲ್ಲಿ ಮೊದಲ ಬಾರಿಗೆ ಅನುಷ್ಠಾನ ಮಾಡಲಾಗಿತ್ತು. ಅದು ಮುಂದುವರಿದು, 2019-20ನೇ ಸಾಲಿನಲ್ಲಿ 2,000 ಶಾಲೆಗಳಲ್ಲಿ ಅನುಷ್ಠಾನಕ್ಕೆ ಬಂದಿತು. ಈ ಪ್ರಯೋಗದ ಪ್ರಗತಿ ಪರಿಶೀಲನೆ ನಡೆದು ಯಶಸ್ಸು ದಾಖಲಾಗಿದೆ ಎನ್ನಲಾಗುತ್ತದೆ. ಅಧಿಕಾರಿಗಳು ಯಶಸ್ಸನ್ನು ದಾಖಲಿಸದಿದ್ದರೆ ಮುಂದಿನ ಅನುದಾನಗಳು ಬರುವುದಿಲ್ಲ.

ಶಿಕ್ಷಣ ಇಲಾಖೆಯು ಮುಂದಿನ ಶೈಕ್ಷಣಿಕ ವರ್ಷ ದಿಂದ ರಾಜ್ಯದ 43,000 ಕನ್ನಡ ಶಾಲೆಗಳು ಹಾಗೂ 5,000 ಉರ್ದು ಮಾಧ್ಯಮ ಶಾಲೆಗಳಲ್ಲಿ ಇದರ ಅನುಷ್ಠಾನಕ್ಕೆ ಸಿದ್ಧವಾಗಿದೆ. ಅಲ್ಲಿಗೆ ಇವಿಷ್ಟು ಶಾಲೆ ಗಳಲ್ಲಿಯೂ ಇಂಗ್ಲಿಷ್ ಮಾಧ್ಯಮದ ಪ್ರಭುತ್ವ ಬರುತ್ತದೆ. ಅಂದರೆ ಕನ್ನಡ ಮತ್ತು ಉರ್ದು ಮಾಧ್ಯಮಗಳು ಸುಮಾರು 50,000 ಶಾಲೆಗಳಲ್ಲಿ ಮರೆಯಾಗಿ ಹೋಗಲಿವೆ.

ಹಾಗಿದ್ದರೂ ಇಂತಹ ಬೆಳವಣಿಗೆಗಳ ವಿರುದ್ಧ ಕನ್ನಡದ ಸಾಹಿತಿಗಳು ಮೌನವಾಗಿರುವುದು ಅಚ್ಚರಿಯ ಸಂಗತಿ. ಕನ್ನಡ ಉಳಿಯಲಿ, ಬೆಳೆಯಲಿ ಎಂದೆಲ್ಲ ಹೇಳಿ, ತಮ್ಮ ಕರ್ತವ್ಯ ಮುಗಿಸಿದ ಭಾವ ಹೊಂದುತ್ತಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಸಿಕ್ಕಿ ದಶಕವೇ ಸಂದಿದೆ. ಆದರೆ ಅದಕ್ಕೆ ಒಂದು ಸುಭದ್ರ ನೆಲೆಯನ್ನು ಕಲ್ಪಿಸಲು ಸಾಧ್ಯವಾಗಿಲ್ಲ.

ಈಗ ಕನ್ನಡದಲ್ಲಿ ಶುದ್ಧ ಸಾಹಿತಿಗಳೂ ಇಲ್ಲ, ಶುದ್ಧ ಸಾಹಿತ್ಯವೂ ಇಲ್ಲ ಎಂಬಂತಹ ಪರಿಸ್ಥಿತಿ. ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿಯುವವನು ಸಾಹಿತಿ. ಇದನ್ನು ಒಪ್ಪುವುದಾದರೆ, ಸಾಹಿತಿಗಳು ವಿಜ್ಞಾನಿಗಳಂತೆ ವಾಸ್ತವದ ಮೇಲೆ ಬೆಳಕು ಚೆಲ್ಲುವವರಾಗಬೇಕು. ಆದರೆ ಈಗ ನಮ್ಮ ಸಾಹಿತಿಗಳು ತಾವು ಅಪ್ಪಿಕೊಂಡ ಸಿದ್ಧಾಂತದ ನೆರಳನ್ನು ವಾಸ್ತವದ ಮೇಲೆ ಪಸರಿಸುತ್ತ, ಸತ್ಯವನ್ನು ಮರೆಮಾಚಿ ಅತಿಶಯೋಕ್ತಿ ಗಳನ್ನು ಬಳಸಿ ಸಾಹಿತ್ಯ ರಚಿಸುವುದು ಸಮಾಜಕ್ಕೆ ಅಪಾಯಕಾರಿಯಾಗಿದೆ.

ಮುಖವಾಡದ ಕೆಲವು ಸಾಹಿತಿಗಳಿಗೆ ಸಾಹಿತ್ಯ ಸೃಷ್ಟಿಗಿಂತ ಬಣಗಳ ಸೃಷ್ಟಿಯೇ ಮುಖ್ಯವಾಗಿದ್ದರಿಂದ, ಇವರು ಶಿಕ್ಷಣ ಸುಧಾರಣೆಗೆ ಯಾವುದೇ ಕೊಡುಗೆ ನೀಡಿಲ್ಲ. ಕನ್ನಡ ಭಾಷೆಯನ್ನು ವಿವಿಧ ಜ್ಞಾನಕ್ಷೇತ್ರಗಳಲ್ಲಿ ವಿಸ್ತರಿಸುವ ಪ್ರಯತ್ನ ಮಾಡಿಲ್ಲ. ಉದಾಹರಣೆಗೆ, ವಿಜ್ಞಾನ-ತಂತ್ರಜ್ಞಾನದ ಬರವಣಿಗೆ ಕನ್ನಡದಲ್ಲಿ ಉತ್ತಮವಾಗಿಲ್ಲ. ತಾತ್ವಿಕ ಸಾಹಿತ್ಯದ ಸಮರ್ಥ ಅನುವಾದವೂ ಆಗಿಲ್ಲ. ಕಾನೂನು ಪುಸ್ತಕಗಳ ತರ್ಜುಮೆಯೂ ಆಗಿಲ್ಲದಿರುವುದು ಜನ ಸಾಮಾನ್ಯರಿಗೆ ನ್ಯಾಯ ದಕ್ಕಿಸಿಕೊಳ್ಳುವಲ್ಲಿ ತೊಡಕಾಗಿದೆ.

ಸಾಹಿತಿಗಳು ಇಷ್ಟೊಂದು ನಿಷ್ಕ್ರಿಯರಾಗಿರುವಾಗ ಸಾಹಿತ್ಯ ಸಮ್ಮೇಳನಗಳಿಗೆ ಅಧ್ಯಕ್ಷರಾಗಿ ಸಾಹಿತಿಗಳನ್ನೇ ಆಯ್ಕೆ ಮಾಡಬೇಕೆಂಬ ಸಂಪ್ರದಾಯದಿಂದ ಹೊರಬರಬೇಕು. ಪ್ರಕಟಿತ ಪುಸ್ತಕಗಳ ಲೆಕ್ಕ ನೋಡಿ ಆಯ್ಕೆ ಮಾಡಬೇಕಾಗಿಲ್ಲ. ಅವರು ಕನ್ನಡಕ್ಕಾಗಿ ಕಾಯಾ, ವಾಚಾ, ಮನಸಾ ಏನು ಶ್ರಮಪಟ್ಟಿದ್ದಾರೆ ಎನ್ನುವ ಲೆಕ್ಕ ಬೇಕು. ಕನ್ನಡ ಶಾಲೆಗಳಿಗೆ ಅವರು ತಮ್ಮ ಮಕ್ಕಳನ್ನು ಕಳಿಸಿರಬೇಕು ಎಂಬುದು ಒಂದು ಮಾನದಂಡವಾಗಿರಬೇಕು. ಅಂತಹವರು ಸಿಗದಿದ್ದಾಗ, ಕನ್ನಡವನ್ನು ಕಟ್ಟುವ ಕೆಲಸದಲ್ಲಿ ನಿರತರಾಗಿರುವವರು, ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸುವವರು, ಕನ್ನಡ ಶಾಲೆ ನಡೆಸುವವರು, ಕನ್ನಡದ ಪರವಾಗಿ ಧ್ವನಿ ಎತ್ತುವವರು, ಸರ್ಕಾರಿ ಶಾಲೆಗಳನ್ನು ಕನ್ನಡ ಮಾಧ್ಯಮದಲ್ಲೇ ಉಳಿಸಿ ಕೊಳ್ಳಲು ಹೋರಾಡಿದವರು... ಹೀಗೆ ನಿಜಾರ್ಥದಲ್ಲಿ ಕನ್ನಡದ ಸಾಹಿತಿಯೇತರ ಸಾಧಕರನ್ನು ಇನ್ನು ಮುಂದಿನ ತಾಲ್ಲೂಕು, ಜಿಲ್ಲಾ ಮತ್ತು ಅಖಿಲ ಭಾರತ ಸಮ್ಮೇಳನಗಳಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯಲ್ಲದವರು ಅಧ್ಯಕ್ಷರಾಗಬಹುದಾದರೆ ಸಾಹಿತ್ಯ ಸಮ್ಮೇಳನಕ್ಕೆ ಯಾಕಾಗಬಾರದು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT