ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ವಿಜ್ಞಾನಧರ್ಮ ಮೊದಲಾಗಲಿ

Last Updated 27 ಫೆಬ್ರುವರಿ 2020, 20:01 IST
ಅಕ್ಷರ ಗಾತ್ರ

ಅದು ತೊಂಬತ್ತರ ದಶಕದ ಮಧ್ಯಭಾಗ. ಗಣೇಶನ ಮೂರ್ತಿ ಹಾಲು ಕುಡಿದ ಘಟನೆ ದೇಶದಾದ್ಯಂತ ವಿಚಿತ್ರ ಸಂಚಲನ ಉಂಟುಮಾಡಿ, ವಿಜ್ಞಾನ ಮತ್ತು ನಂಬಿಕೆಗಳ ನಡುವಿನ ಸಂಘರ್ಷವನ್ನು ಬಿಸಿಯಾಗಿಸಿದ್ದಾಗಲೇ ಎರಡು ಪ್ರಮುಖ ಚಿತ್ರಗಳು ಸುದ್ದಿವಾಹಿನಿಗಳಲ್ಲಿ ಪದೇ ಪದೇ ಪ್ರಸಾರಗೊಂಡವು. ಒಂದೆಡೆ, ರಾಷ್ಟ್ರೀಯ ಭೌತವಿಜ್ಞಾನ ಪ್ರಯೋಗಾಲಯದ ನಿರ್ದೇಶಕರು ಗಣೇಶನ ಮೂರ್ತಿಯಲ್ಲದೆ ಇನ್ನೂ ಯಾವ್ಯಾವ ವಸ್ತುಗಳು ಮತ್ತು ಆಕಾರಗಳು ಹಾಲು ಕುಡಿಯಬಲ್ಲವು ಮತ್ತು ಅದಕ್ಕಿರುವ ವೈಜ್ಞಾನಿಕ ಕಾರಣಗಳೇನೆಂದು ಸ್ಪಷ್ಟೀಕರಣ ನೀಡುತ್ತಿದ್ದರು. ಇನ್ನೊಂದೆಡೆ, ಅದೇ ಕಟ್ಟಡದ ಮುಂದೆ ಚಮ್ಮಾರನೊಬ್ಬ ಚಪ್ಪಲಿಯ ಮೊಳೆ
ಯನ್ನು ಕುಟ್ಟಲು ಬಳಸುವ ತನ್ನ ಕಬ್ಬಿಣದ ಉಪಕರಣವೂ ಹಾಲು ಕುಡಿಯುತ್ತಿದೆ ಎಂಬ ಬಗ್ಗೆ ದಾರಿಹೋಕರು ಹಾಗೂ ಟಿ.ವಿ. ವಾಹಿನಿಯವರಿಗೆ ಪ್ರಾತ್ಯಕ್ಷಿಕೆ ನೀಡುತ್ತಿದ್ದ. ಆದರೆ ಇವರಿಬ್ಬರ ಪ್ರಯತ್ನ ಮತ್ತು ಪ್ರಯೋಗಗಳು ನಮ್ಮನ್ನು ಅಷ್ಟಾಗಿ ಸೆಳೆಯದಿದ್ದುದು, ಭಾರತದಲ್ಲಿ ವಿಜ್ಞಾನ ಮತ್ತು ಮರುಳುತನ ಒಟ್ಟೊಟ್ಟಿಗೇ ಇರುವುದನ್ನು ಬಿಂಬಿಸುವುದರ ಜೊತೆಗೆ, ಭಾರತೀಯರ ವೈಜ್ಞಾನಿಕ ಮನೋ
ಧರ್ಮ ಕುರಿತಾದ ದೊಡ್ಡ ಪ್ರಶ್ನೆಗಳನ್ನೇ ಹುಟ್ಟುಹಾಕಿತ್ತು. ಜನರ ಸಮೂಹಸನ್ನಿಯನ್ನು ಕಂಡ ಪ್ರಜ್ಞಾವಂತರು ಮಾತಿಲ್ಲದವರಾಗಿದ್ದರು. ಸಂಶೋಧನಾ ಸಂಸ್ಥೆಗಳ ನಿಲುವನ್ನು ಜನರಿಗೆ ತಲುಪಿಸುವುದೇ ದುಸ್ತರವಾಗಿತ್ತು.

ಅಲ್ಲಿಂದಾಚೆಗೆ ಭಾರತವು ಜಗತ್ತಿನ ವೈಜ್ಞಾನಿಕ ರಂಗದಲ್ಲಿ ಎದ್ದು ಕಾಣುವ ಸಾಧನೆ ಮಾಡಿದ್ದರೂ ಪರಂಪರಾಗತ ಮೂಢನಂಬಿಕೆ ಮತ್ತು ಆಚರಣೆಗಳಲ್ಲಿ ಮುಳುಗಿರುವ ನಮ್ಮ ಜನರಿಗೆ ವಿಜ್ಞಾನ ಹೇಳುವ ಸತ್ಯಗಳ ಬಗೆಗೆ ನಂಬಿಕೆ ಮತ್ತು ಆಸಕ್ತಿ ಕಡಿಮೆ ಎಂಬುದು ಅನೇಕ ಸಂದರ್ಭಗಳಲ್ಲಿ ಪ್ರಕಟಗೊಳ್ಳುತ್ತಲೇ ಇದೆ. ಮಳೆ, ಬಿರುಗಾಳಿ, ಭೂಕಂಪ, ಸುನಾಮಿ, ಕಾಳ್ಗಿಚ್ಚು, ಗ್ರಹಣದಂತಹ ಪ್ರಕೃತಿಸಹಜ ಘಟನೆಗಳ ಹಿಂದಿನ ವಿಜ್ಞಾನವನ್ನು ಅರಿಯುವ ಬದಲು ಅವುಗಳನ್ನು ದೈವ ಅಥವಾ ದುಷ್ಟಶಕ್ತಿಯ ಆಟಗಳೆಂದು ಬಿಂಬಿಸುತ್ತಾ, ತಮ್ಮ ವೈಜ್ಞಾನಿಕ ಮನೋಧರ್ಮ ಎಷ್ಟು ಟೊಳ್ಳು ಮತ್ತು ಅಪಾಯಕಾರಿ ಎಂದು ಕಾಲಕಾಲಕ್ಕೆ ಪ್ರಚುರುಪಡಿಸುತ್ತಲೇ ಇದ್ದಾರೆ.

ಅಚ್ಚರಿ ಎಂದರೆ, ಪ್ರತಿ ಮಗುವಿನಲ್ಲೂ ವೈಜ್ಞಾನಿಕ ಪ್ರಜ್ಞೆ ಮತ್ತು ಆಸಕ್ತಿ ಇದ್ದೇ ಇರುತ್ತವೆ. ಆದರೆ ಶಾಲೆ ಮತ್ತು ಸಮಾಜವಾಹಿನಿಯಲ್ಲಿ ಒಂದಾಗುವ ಮಗು ಅನೇಕ ಸಾಮಾಜಿಕ, ಧಾರ್ಮಿಕ ಆಚರಣೆಗಳ ಪ್ರಭಾವಕ್ಕೆ ಸಿಲುಕಿ ತನ್ನಲ್ಲಿರುವ ವಿಜ್ಞಾನ ಪ್ರಜ್ಞೆಯನ್ನೇ ಅನುಮಾನಿಸತೊಡಗುತ್ತದೆ. ಕಂಡದ್ದನ್ನು ಪ್ರಶ್ನಿಸುವ, ಪ್ರಶ್ನಿಸಿದ್ದನ್ನು ಪರೀಕ್ಷಿಸುವ ಶಿಕ್ಷಣ ಪಡೆಯುವ ಮಗು, ಪರೀಕ್ಷಿಸಿದ್ದನ್ನು ನಂಬುವ ವೇಳೆಗೆ ಮೂಢನಂಬಿಕೆಗಳನ್ನು ಒತ್ತಾಯಪೂರ್ವಕವಾಗಿ ಹೇರುವವರನ್ನು ಎದುರಿಸಲಾಗದೆ, ಸತ್ಯಾನ್ವೇಷಣೆಯ ದಾರಿಯನ್ನೇ ಮರೆತುಬಿಡುತ್ತದೆ. ಮುಂದೊಂದು ದಿನ, ಮೇಲ್ನೋಟಕ್ಕೆ ಕಾಣಿಸದ ವೈಜ್ಞಾನಿಕ ಸತ್ಯಗಳಿಗೂ ಜೀವನ ನಿರ್ವಹಣೆಗೂ ಅಂಥ ಸಾವಯವ ಸಂಬಂಧವೇನೂ ಇಲ್ಲ ಎಂಬ ನಿರ್ಧಾರ ಗಟ್ಟಿಗೊಂಡು, ವೈಜ್ಞಾನಿಕ ಮನೋಧರ್ಮ ಮಾಯವಾಗುತ್ತದೆ.

ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ವಿಜ್ಞಾನಪ್ರಜ್ಞೆಯನ್ನು ಜಾಗೃತಗೊಳಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಲೇ ಇವೆ. ಜೊತೆಗೆ ಭಾರತೀಯ ವಿಜ್ಞಾನಿಗಳು ದೇಶದ ಅಭಿವೃದ್ಧಿಗೆ ಬೇಕಾದ ಸಂಶೋಧನೆ
ಗಳನ್ನು ಕೈಗೊಳ್ಳುತ್ತಲೇ ಇದ್ದಾರೆ. ಆದರೂ ವಿಜ್ಞಾನ ಮತ್ತು ಅದರ ಆಚರಣೆಗಳ ಅನುಷ್ಠಾನದ ಪ್ರಶ್ನೆ ಬಂದಾಗಲೆಲ್ಲ ನಾಗರಿಕರು ಆಷಾಢಭೂತಿಗಳಂತೆ ವರ್ತಿಸತೊಡಗುತ್ತಾರೆ. ಇದಕ್ಕೆ ಪುಷ್ಟಿ ನೀಡುವಂತೆ ವರ್ತಿಸುವ ಅನೇಕ ವಿಜ್ಞಾನಿಗಳೂ ನಮ್ಮಲ್ಲಿದ್ದಾರೆ. 1980ರ ಖಗ್ರಾಸ ಸೂರ್ಯಗ್ರಹಣದಂದು ಪ್ರಜೆಗಳೆಲ್ಲ ಮನೆಯನ್ನು ಶುದ್ಧೀಕರಿಸಿ ಪುಣ್ಯಸ್ನಾನ ಮಾಡಬೇಕೆಂದು ಹೇಳಿದ ಮುಂಬೈನ ವಿಜ್ಞಾನಿ
ಯೊಬ್ಬರು ಇಡೀ ದೇಶದ ಜನರನ್ನು ದಿಕ್ಕುತಪ್ಪಿಸಿದ್ದರು.

ವಿಜ್ಞಾನದ ಸಮಸ್ಯೆಗಳಿಗೆ ಧರ್ಮದಲ್ಲಿ ಮತ್ತು ನಂಬಿಕೆಗಳ ಸತ್ಯಾಸತ್ಯತೆಯ ಕುರಿತು ವಿಜ್ಞಾನದಲ್ಲಿ ಸಂಪೂರ್ಣ ಉತ್ತರಗಳಿಲ್ಲದೇ ಇರುವುದರಿಂದ, ಜನರ ಮನೋಧರ್ಮ ಯಾವುದೇ ಒಂದರಿಂದ ತುಂಬಿರಲು ಸಾಧ್ಯವೇ ಇಲ್ಲ. ಮೂಢನಂಬಿಕೆಗಳಿಗೆ ಕಟ್ಟುಬಿದ್ದು ವಿಜ್ಞಾನವನ್ನು ಅನುಮಾನದಿಂದ ನೋಡುವವರಲ್ಲಿ ವಿದ್ಯಾವಂತರ ಸಂಖ್ಯೆಯೇ ಹೆಚ್ಚು. ನಿರಕ್ಷರಿಯೊಬ್ಬ ತನಗೆ ಗೊತ್ತಿಲ್ಲದ ವಿಜ್ಞಾನ ಮತ್ತು ಧಾರ್ಮಿಕ ನಂಬಿಕೆಗಳೆರಡರ ಬಗೆಗೆ ಸಮಾನ ಅಂತರ ಕಾಯ್ದುಕೊಂಡೇ ಅವುಗಳ ಪ್ರಭಾವಕ್ಕೆ ಸಿಲುಕಿರುತ್ತಾನೆ. ಆದರೆ ಅರೆಬರೆ ವಿದ್ಯೆ ಕಲಿತವರು ಅತ್ತ ವಿಜ್ಞಾನವನ್ನು ಪ್ರಶ್ನೆ ಮಾಡುತ್ತ, ಇತ್ತ ಕಂದಾಚಾರಗಳಲ್ಲಿ ಮುಳುಗಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಪುಕ್ಕಟೆ ಸಲಹೆಗಳನ್ನೂ ನೀಡುತ್ತಾರೆ.

ನಮ್ಮ ಸಂವಿಧಾನಕ್ಕೆ ತಿದ್ದುಪಡಿ ತಂದು, ಎಲ್ಲ ಪ್ರಜೆಗಳೂ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು, ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಸುಧಾರಣೆಯ ಜೊತೆಗೆ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳತಕ್ಕದ್ದು ಎಂದು ನಿಖರವಾಗಿ ಹೇಳಲಾಗಿದೆ. ವೈಜ್ಞಾನಿಕ ಮನೋಧರ್ಮ ಬೆಳೆಸಿಕೊಳ್ಳುವುದರ ಕುರಿತ ಈ ಮಾತು ಸಂವಿಧಾನದಲ್ಲಿ ಭದ್ರವಾಗಿ ಕುಳಿತಿದೆ. ರಾಷ್ಟ್ರೀಯ ವಿಜ್ಞಾನ ದಿನದ (ಫೆ.28) ಈ ಸಂದರ್ಭದಲ್ಲಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಜನಜಾಗೃತಿ ಮೂಡಿಸಲು ಇನ್ನಷ್ಟು ಶ್ರಮಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT