ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಪರೀಕ್ಷೆ: ಆತ್ಮಸಂಯಮವೇ ಪರಮೌಷಧ

ಮಕ್ಕಳ ಪರಿಕ್ಷಾ ಅವಧಿಯಲ್ಲಿ ಪೋಷಕರು ತಮ್ಮ ಉದ್ವೇಗ, ದುಗುಡಗಳಿಗೆ ಕಡಿವಾಣ ಹಾಕಿಕೊಂಡರೆ, ಅರ್ಧ ಹೊಣೆಗಾರಿಕೆಯನ್ನು ನಿಭಾಯಿಸಿದಂತೆಯೇ ಸರಿ
Last Updated 25 ಮಾರ್ಚ್ 2022, 19:32 IST
ಅಕ್ಷರ ಗಾತ್ರ

‘ಔಷಧಿ ಬೇಕಾಗಿದೆ ಅಪ್ಪ ಅಮ್ಮನಿಗೆ!’ ಎಂಬ ಡಾ. ಕೆ.ಎಸ್.ಪವಿತ್ರ ಅವರ ಲೇಖನ (ಸಂಗತ, ಮಾರ್ಚ್ 24) ಸಮಯೋಚಿತವಾಗಿದೆ. ಮಕ್ಕಳು ಆನ್‌ಲೈನ್, ಆಫ್‌ಲೈನ್ ಗೌಜಿಗೂ ಮೀರಿ ಪಾಲಕರ ಅನಗತ್ಯ ಉದ್ವೇಗದಿಂದಲೇ ಹೆಚ್ಚು ಸೊರಗುತ್ತಾರೆ. ಉಪಾಹಾರ ಸೇವಿಸುವಾಗ, ಬೂಟಿಗೆ ದಾರ ಬಿಗಿಯುವಾಗ, ಬೈಕ್ ಹಿಂಬದಿ ಕೂತಾಗ, ಬಸ್ಸೇರಿ ಇಳಿಯುವಾಗ ಆಯಾ ದಿನದ ಪರೀಕ್ಷೆಗೆ ಕೊನೇ ಕ್ಷಣಗಳ ತಯಾರಿ ನಡೆದಿರುತ್ತದೆ. ರಸ್ತೆ ದಾಟುವಾಗಲೂ ಪರೀಕ್ಷಾರ್ಥಿಗಳನ್ನು ಏನೇನು ಪ್ರಶ್ನೆಗಳು ಬಂದಾವೆಯೋ ಏನು ಉತ್ತರ ಬರೆದೇನೊ ಎನ್ನುವ ಗುಂಗು ಕಾಡಿರುತ್ತದೆ.

ತರಾತುರಿಯ ತರಾವರಿ ತಯಾರಿಯಿಂದ ಇನ್ನಷ್ಟು ತಲ್ಲಣವೇ ವಿನಾ ಯಾವುದೇ ಪ್ರಯೋಜನವಾಗದು. ‘ಪರೀಕ್ಷೆ’ ಶೈಕ್ಷಣಿಕ ವರ್ಷದಲ್ಲಿ ಅತಿ ಮಹತ್ವದ ಪರ್ವ. ಹಾಗೆನ್ನುವುದಕ್ಕಿಂತ ಈ ಅವಧಿಗೆ ಅನಗತ್ಯ ಪ್ರಾಮುಖ್ಯ ನೀಡಿ ವೈಭವೀಕರಿಸಲಾಗಿದೆ. ಸರ್ಕಾರ, ಶಾಲಾ ಆಡಳಿತ, ಶಿಕ್ಷಕರು, ಪೋಷಕರು- ಎಲ್ಲರ ಪಾಲೂ ಇದರಲ್ಲಿದೆ. ಬಹುತೇಕ ಪೋಷಕರಂತೂ ಪರೀಕ್ಷೆಯನ್ನು ತಾವೇ ಎದುರಿಸುವಂತೆ ಕಂಗಾಲಾಗುತ್ತಾರೆ. ಇದರಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಂಡಿತ. ಹೆತ್ತವರು ನಗದೇ ಮಕ್ಕಳು ನಗುವುದೆಂತು?

ಹೀಗೊಂದು ವೃತ್ತಾಂತ. ಒಂದು ಶಾಲೆಯಲ್ಲಿ ಪೋಷಕರ ಸಭೆ ಏರ್ಪಡುತ್ತದೆ. ಪ್ರತ್ಯೇಕ ಕೊಠಡಿಗಳಲ್ಲಿ ಪೋಷಕರಿಗೆ, ಮಕ್ಕಳಿಗೆ ಒಂದೇ ಪ್ರಶ್ನೆಪತ್ರಿಕೆ ನೀಡಿ ಉತ್ತರಿಸಲು ಹೇಳಲಾಗುತ್ತದೆ. ಮೌಲ್ಯಮಾಪನ ನೆರವೇರಿ ಹೊರಬಂದ ಫಲಿತಾಂಶ ಅಚ್ಚರಿಯದಾಗಿರುತ್ತದೆ. ಪೋಷಕರಿಗಿಂತ ಮಕ್ಕಳ ಸಾಧನೆ ಉತ್ತಮವಾಗಿರುತ್ತದೆ! ಪರೀಕ್ಷೆಯನ್ನು ಪರಿಚಯಿಸಿಕೊಂಡ ಪೋಷಕರು ಇನ್ನು ಮುಂದೆ ತಮ್ಮ ಮಕ್ಕಳ ಮೇಲೆ ಯಾವುದೇ ಒತ್ತಡವೇರುವುದಿಲ್ಲ ಎಂದು ಸಂಕಲ್ಪಿಸುತ್ತಾರೆ. ತಾವು ಅವರೊಂದಿಗೆ ಭಾವನಾತ್ಮಕವಾಗಿ ಬೆರೆಯುವ ಅಗತ್ಯ ಮನಗಾಣುತ್ತಾರೆ. ಆತ್ಮಸಂಯಮದಿಂದ ಪರೀಕ್ಷೆಯು ಮಕ್ಕಳಿಗೆ ಶೈಕ್ಷಣಿಕ ಸಡಗರವಾಗುವಂತೆ ನೋಡಿಕೊಳ್ಳುತ್ತಾರೆ.

ಬಲವಂತ, ನಿಂದನೆ ಮಕ್ಕಳನ್ನು ಓದಿಸುವ ಸುಲಭೋಪಾಯವೆಂದೇ ಪೋಷಕರು ಭಾವಿಸುವುದಿದೆ. ಓದಿನಲ್ಲಿ ಆಸಕ್ತಿ ತಳೆಯುವಂತೆ, ಹಾಗೆ ಓದಿದ್ದನ್ನು ಚೆನ್ನಾಗಿ ತಿಳಿಯುವಂತೆ ಪ್ರೇರೇಪಿಸುವುದೇ ರಾಜಮಾರ್ಗ.

ನಿರ್ಬಂಧ, ಪೈಪೋಟಿರಹಿತ ಸಹಜ ಮನಃಸ್ಥಿತಿಯಲ್ಲಿ ‌ಮಾತ್ರ ಸಮರ್ಥ ಕಲಿಕೆ ಸಾಧ್ಯ. ಪೋಷಕರು ತಮ್ಮ ಮಕ್ಕಳ ಬಗ್ಗೆ ಅತಿ ಪ್ರತೀಕ್ಷೆ ಹೊಂದಿರಬಾರದು. ಇದು ಮಕ್ಕಳಲ್ಲಿ ಒತ್ತಡವನ್ನು ವಿನಾಕಾರಣ ವೃದ್ಧಿಸುತ್ತದೆ. ಒಂದು ವಿಷಯದ ಪರೀಕ್ಷೆ ಮುಗಿದ ಮೇಲೆ ಮತ್ತೆ ಮತ್ತೆ, ‘ಹೇಗೆ ಮಾಡಿರುವೆ, ಎಷ್ಟು ಅಂಕಗಳನ್ನು ನಿರೀಕ್ಷಿಸಬಹುದು’ ಎಂದು ಪೋಷಕರು ಪ್ರಶ್ನಿಸುವುದೇ ಬಾಲಿಶ. ಉಳಿದ ವಿಷಯಗಳಿಗೆ ಸಿದ್ಧವಾಗು ಎಂದು ಬೆನ್ನು ತಟ್ಟುವುದರಿಂದ ಮಕ್ಕಳಲ್ಲಿ ಮೂಡುವ ಹುರುಪಿಗೆ ಸಾಟಿಯಿಲ್ಲ.

ತಮ್ಮಲ್ಲಿ ವಿಶ್ವಾಸವಿಡಿ, ಯಥಾಶಕ್ತಿ ಓದಿ ಪರೀಕ್ಷೆಗೆ ತಯಾರಾಗುತ್ತೇನೆ ಎಂದು ಹಿರಿಯರಿಗೆ ಹೇಳುವ ಧೈರ್ಯ ಹೆಚ್ಚಿನ ಮಕ್ಕಳಿಗೆ ಇರದು. ಪೋಷಕರು ಮಕ್ಕಳ ಪರಿಕ್ಷಾ ಅವಧಿಯನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಬೇಕಾಗುತ್ತದೆ. ಅವರು ತಮ್ಮ ಉದ್ವೇಗ, ದುಗುಡಗಳಿಗೆ ಕಡಿವಾಣ ಹಾಕಿಕೊಂಡರೆ ಅರ್ಧ ಹೊಣೆಗಾರಿಕೆಯನ್ನು ನಿಭಾಯಿಸಿದಂತೆಯೆ. ಪುಸ್ತಕ ಸದಾ ಕೈಯಲ್ಲಿರಲಿ, ಗೆಳೆಯರೊಂದಿಗೆ ಮಾತಾಡಬೇಡ, ಹೊರಗೆ ಸುಳಿಯಬೇಡ, ಪಂದ್ಯ ವೀಕ್ಷಿಸಬಾರದು... ಇಂತಹ ಆದೇಶಗಳು ಮಕ್ಕಳನ್ನು ಲವಲೇಶವೂ ಪ್ರಭಾವಿಸವು. ಪೋಷಕರೇನೊ ಇದು ಉತ್ತೇಜನ ಎಂದುಕೊಳ್ಳುತ್ತಾರೆ. ಆದರೆ ಅವರ ಈ ಒಂದೊಂದು ಹೆಜ್ಜೆಯೂ ಪ್ರತಿಕೂಲವಾಗಿರುತ್ತದೆ.

ಆಗಾಗ್ಗೆ ಮಕ್ಕಳ ಕೊಠಡಿಗೆ ಹೋಗಿ, ಏನು ಮಾಡುತ್ತಿದ್ದಾರೆ ಎಂದು ನೋಡುವುದರಿಂದ ಮಕ್ಕಳ ಏಕಾಗ್ರತೆಗೆ ಭಂಗ. ನಿನಗೆ ಹೆಚ್ಚಿನ ಅಂಕಗಳು ಬರದಿದ್ದರೆ ಗತ್ಯಂತರವೇ ಇಲ್ಲವೆಂದು ಬೆದರಿಸುವುದು ತಕ್ಕುದಲ್ಲ. ಹೆತ್ತವರೇ ಬ್ಲ್ಯಾಕ್‍ಮೇಲ್ ಮಾಡಿದಂತಾಗುವುದು! ಕಿರುಚಾಟ, ಬೈದಾಟ, ಸಹಪಾಠಿಗಳೊಂದಿಗೆ ಹೋಲಿಕೆಯಿಂದ ಮಕ್ಕಳಿಗೆ ತಂದೆ, ತಾಯಿ ಆಗಂತುಕರೆಂಬ ಭಾವನೆ ಮೂಡೀತು. ಮನೆಯಲ್ಲಿ ಉಸಿರುಗಟ್ಟಿಸುವಂತಹ ವಾತಾವರಣ ವಿದ್ದರೆ ಯಾವ ಓದು, ಯಾವ ಮನನ ಸಾಧ್ಯ?

ಅಂದಹಾಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳು ಬಂದರೆ ಉಡುಗೊರೆ, ಬಳುವಳಿ ಘೋಷಣೆಯೂ ಅಷ್ಟೇ ಅಸಂಬದ್ಧ. ಹಾಗೆ ನೋಡಿದರೆ ಒಳ್ಳೆಯ ಅಂಕ, ಕೆಟ್ಟ ಅಂಕ ಎನ್ನುವುದೇ ಹುಸಿ! ಪರೀಕ್ಷೆಯಲ್ಲಿ ಭಾಗಿಯಾದ ಮಕ್ಕಳೆಲ್ಲ ಅನುಭವ ಗಳಿಸಿಯೇ ಇರುತ್ತಾರೆ. ಮಕ್ಕಳು ಪಾಠ ಅರ್ಥವಾದರೆ ಮಾತ್ರ ಉತ್ಸಾಹದಿಂದ ಬರೆಯುತ್ತಾರೆ. ಪ್ರಶ್ನೆಗಳನ್ನು ಉತ್ತರಿಸುವಾಗ ಅವರ ಆನಂದ ನಿಗದಿಯಾಗಿರುವ ಅಂಕಗಳನ್ನು ನಿರ್ಲಕ್ಷಿಸುವಷ್ಟು ತೀವ್ರವಾಗಿರುತ್ತದೆ. ಇನ್ನು ಹಿರಿಯರ ಬಲವಂತದಿಂದ ಪುಸ್ತಕದ ಮೇಲೆ ಕಣ್ಣಾಡಿಸಿದರೋ ಆಯಾ ಅಧ್ಯಾಯದ ಅಂಶಗಳು ಮಸ್ತಕಕ್ಕಿಳಿಯದೆ ತತ್ಕಾಲದ ನೆನಪಿನ ಬುತ್ತಿಯಾಗುತ್ತವೆ.

ಒಂದಷ್ಟು ಉರು ಹೊಡೆದು ಅಷ್ಟು ಅಂಕಗಳೂ ಲಭಿಸಬಹುದು. ಆದರೆ ಮುಂದೆ ಅವರು ಉನ್ನತ ವ್ಯಾಸಂಗ, ಉದ್ಯೋಗಾವಕಾಶಗಳನ್ನು ಅರಸುವಾಗ ಲಿಖಿತ ಮತ್ತು ಮೌಖಿಕ ಪರೀಕ್ಷೆಗಳು ಕಠಿಣತಮ ಎನ್ನಿಸುತ್ತವೆ. ಸಂದರ್ಶನದಲ್ಲಿ ಪರೀಕ್ಷೆಗಾಗಿ ಓದಿಕೊಂಡೆ ಎನ್ನಬೇಕಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT