ಗುರುವಾರ , ಮೇ 13, 2021
17 °C
ವಿನೋದವು ದುಃಖ, ದುಮ್ಮಾನ, ಉದ್ವೇಗವನ್ನು ಕಡಿಮೆಗೊಳಿಸುವ ಮೂಲಕ ಮನಸ್ಸಿನ ಭಾರ ಇಳಿಸುತ್ತದೆ

ಸಂಗತ | ಇಂದು ಮೂರ್ಖರ ದಿನ: ಹಾಸ್ಯ ಎಂಬ ನಿರೀಕ್ಷಣಾ ಜಾಮೀನು!

ಯೋಗಾನಂದ Updated:

ಅಕ್ಷರ ಗಾತ್ರ : | |

Prajavani

ನೌಕರಿ ನಿಮಿತ್ತ ಸಂದರ್ಶನಕ್ಕೆ ಹೊರಟ ಮಗನನ್ನು ಅಡಿಯಿಂದ ಮುಡಿಯವರೆಗೆ ದಿಟ್ಟಿಸಿದ ಅವನ ತಂದೆ ‘ಎಲ್ಲಿ ರಾಜ ನಿನ್ನ ಮೇಲ್ವಸ್ತ್ರ’ ಎಂದು ಪ್ರಶ್ನಿಸುತ್ತಾರೆ. ‘ಅಪ್ಪ, ಸೂಟಿನ ಮೇಲೆ ಎಂಥ ಮೇಲ್ವಸ್ತ್ರ?’ ಅಂತ ಮಗ ಕಕ್ಕಾಬಿಕ್ಕಿ. ‘ಇದೆ ಕಣಪ್ಪ, ಈ ಸಿಡುಕು ಮೋರೆಯೇಕೆ? ರವಷ್ಟು ನಗು ಇರಲಿ’ ಎಂದು ತಂದೆ ಹೇಳಿದಾಗಲೇ ಮಗನಿಗೆ ವಿಷಯ ಅರಿವಾಗಿದ್ದು, ಮುಖ ಅರಳಿದ್ದು.

ಬದುಕಿನ ಒಟ್ಟಾರೆ ಗುಣಮಟ್ಟ ಸುಧಾರಿಸಬಲ್ಲ ಹಾಸ್ಯಪ್ರವೃತ್ತಿಗೆ ಎಲ್ಲರೂ ವ್ಯವಧಾನ ಕಲ್ಪಿಸಿಕೊಳ್ಳಬೇಕಿದೆ. ಕೆಣಕುಮುಕ್ತ ವಿನೋದ ಯಾವುದೇ ಸಮಸ್ಯೆಯ ಪರಿಹಾರದ ಒಳನೋಟಕ್ಕೆ ಆಕರವಾಗಲ್ಲದು. ತನ್ಮೂಲಕ ಪುನರ್ ಅವಲೋಕನಕ್ಕೆ ಆಸ್ಪದವಾಗುತ್ತದೆ. ಹಾಸ್ಯ ಎಂಥದ್ದೇ ಸಂಘರ್ಷವನ್ನು ಸೃಜನಾತ್ಮಕ ಪರಿಹಾರದತ್ತ ಒಯ್ದೀತು. ಪರಸ್ಪರ ವಿಶ್ವಾಸ ಮತ್ತು ಅನುಭೂತಿಗೆ ಹಾದಿಯಾದೀತು.

ಪತ್ನಿಗೆ ಪತಿ ‘ನಿನ್ನೆ ಚಟ್ನಿಗೆ ಉಪ್ಪು ಚಲೋ ಇತ್ತು’ ಅಂತ ಹೇಳುವುದು ದೂರೆನ್ನಿಸದು. ಇವೊತ್ತು ಖಾರ ಎನ್ನುವುದಕ್ಕೆ ಅದು ಪತಿಯ ಹಿತ ಪರ್ಯಾಯ ಆಯ್ಕೆ. ಟೀಕೆ ಅದೇ ಆದರೂ ನಯ, ನಾಜೂಕು. ವಿಡಂಬನೆಯ ಸಾಮರ್ಥ್ಯವೆಂದರೆ ಇದೇ ಅಲ್ಲವೇ? ಕಲಿಕೆಯ ಮನಃಶಕ್ತಿಯನ್ನು ಉತ್ತಮೀಕರಿಸುವ ತಮಾಷೆಯೆನ್ನುವುದೇ ಒಂದು ವಿಶಿಷ್ಟ ಭಾಷೆ. ಅದು ಸಿದ್ಧಮಾದರಿಯಾಗದೆ ಸಾಂದರ್ಭಿಕವಾಗಿರಬೇಕು. ಹಾಸ್ಯಪ್ರವೃತ್ತಿ ನಮ್ಮ ಭೌತಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪರಿಣಾಮಕಾರಿ ಔಷಧಿಗಳಲ್ಲೊಂದು. ಅಮೆರಿಕದ ಕಾದಂಬರಿಕಾರ ಜಾರ್ಜ್ ಸಾಂಡರ್ಸ್‌ ‘ನಿರೀಕ್ಷೆಗೂ ಮೀರಿ ತ್ವರಿತವಾಗಿ, ನೇರವಾಗಿ ನಿಜ ಹೇಳುವುದರ ಪರಿಣಾಮವೇ ಹಾಸ್ಯ’ ಎನ್ನುತ್ತಾರೆ. ಅಚ್ಚರಿಯೆಂದರೆ ರೋಚಕತೆಗಿಂತ ಹೆಚ್ಚಾಗಿ ರಚನಾತ್ಮಕತೆಯು ವಿನೋದದಲ್ಲಿ ಅಂತರ್ಗತ
ವಾಗಿರುತ್ತದೆ. ಅದು ಗೇಲಿಯಾಗದೆ ಗಂಭೀರವಾಗಿಇರಬೇಕಷ್ಟೆ. ಪರರನ್ನು ನಿಂದಿಸಿ, ಅಪಹಾಸ್ಯಕ್ಕೀಡಾಗಿಸಿ ನಗಬೇಕಾದ್ದು, ನಗಿಸಬೇಕಾದ್ದು ಏನೂ ಇಲ್ಲ.

ಪ್ರಹಸನ ಬ್ರಹ್ಮ ಟಿ.ಪಿ.ಕೈಲಾಸಂ ಅವರೊಂದಿಗಿನ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಏರ್ಪಟ್ಟ ಒಂದು ಸಂವಾದ. ಒಂದು ಹಂತದಲ್ಲಿ ‘ನಿಮ್ಮ ಜೋಕು ಅರ್ಥವಾಗಲಿಲ್ಲ, ಕೃಪೆಯಿಟ್ಟು ವಿವರಿಸಿ ಸಾರ್’ ಎಂದು ಸಭಿಕರೊಬ್ಬರು ವಿನಂತಿಸಿದರು. ಜೋಕು ವಿವರಿಸಿ ಅದನ್ನು ಕೊಲ್ಲಲಾರೆ ಎಂದರು ಕೈಲಾಸಂ! ತದನಂತರ ಕೈಲಾಸಂ ಇನ್ನೊಂದು ಜೋಕು ಹೇಳಿದವರೆ ‘ಇದು ಜೋಕು, ದಯವಿಟ್ಟು ನಗಿ’ ಎಂದಿದ್ದರು!

ಮೇಧಾವಿಗಳ ನವಿರು ವಿಡಂಬನೆಗಳು ಇಂದಿಗೂ ಹಸಿರಾಗಿರುವುದು ಅವುಗಳ ಪ್ರಬೋಧಶೀಲತೆ ಯಿಂದ. ಒಮ್ಮೆ ಭಾರತದ ಪ್ರಥಮ ಗವರ್ನರ್ ಜನರಲ್ ಚಕ್ರವರ್ತಿ ರಾಜಾಜಿಯವರು ಮನೆಯಲ್ಲಿ ತಮ್ಮ ಬೂಟಿಗೆ ಪಾಲೀಷು ಹಾಕುತ್ತಿದ್ದರು. ಆಪ್ತ ಮಿತ್ರರೊಬ್ಬರಿಗೆ ಈ ದೃಶ್ಯ ಅತಿಶಯವಾಯಿತೇನೋ. ‘ಸರ್, ಇದೇನು ತಮ್ಮ ಬೂಟಿಗೆ ತಾವೇ ಪಾಲೀಷು ಹಾಕುವುದೇ?’ ಎಂದರು. ಥಟ್ಟನೆ ರಾಜಾಜಿ ‘ಹೌದು, ನೀವು ಪಾಲೀಷು ಹಾಕುವುದು ಯಾರ ಬೂಟಿಗೆ?’ ಎನ್ನುವುದೇ? ಬೀಚಿಯವರು ಪಾದರಕ್ಷೆ ಅಪಹರಣಕಾರರ ಬಗ್ಗೆ ಎಚ್ಚರಿಸುವ ಪರಿ ಗಮನಿಸಿ: ‘ಮದುವೆ ಮನೆಗೆ ಚಪ್ಪಲಿ ಧರಿಸಿ ಹೋಗದಿರಿ, ಬರುವಾಗ ಧರಿಸಿ ಬನ್ನಿ’. ವಿನೋದವು ಸಾವನ್ನೂ ತನ್ನ ವ್ಯಾಪ್ತಿಯಲ್ಲಿ
ಇರಿಸಿಕೊಳ್ಳುತ್ತದೆ. ಎಚ್.ನರಸಿಂಹಯ್ಯ ತಮ್ಮ ಕೊನೆಯ ದಿನಗಳಲ್ಲಿ ‘ನನ್ನನ್ನು ಇದ್ದೂರಿನಲ್ಲೇ ಸುಡಬೇಕು...’ ಎನ್ನುತ್ತಿದ್ದರು. ಈ ಒಕ್ಕಣೆಯಂಚಿಗೆ ‘...ಸತ್ತಮೇಲೆ’ ಎನ್ನುವ ಷರಾ ಇರುತ್ತಿತ್ತು! ನಿಷ್ಠುರವಾದರೂ ವಿನೋದಕ್ಕೆ ಸಮಾಜದ ಓರೆ ಕೋರೆಗಳನ್ನು
ಸರಿಪಡಿಸುವ ಬದ್ಧತೆಯಿರುತ್ತದೆ. ಒಂದರ್ಥದಲ್ಲಿ ಹಾಸ್ಯಕ್ಕೆ ಪರರನ್ನು ನವಿರಾಗಿ ಅವಮಾನಿಸಿ, ನಿರೀಕ್ಷಣಾ ಜಾಮೀನು ಪಡೆದು ಅವರನ್ನು ತಿದ್ದುವ ಉದ್ದೇಶವೆನ್ನೋಣ.

‘ನಾವೇ ಎದ್ದು ಬೊಗಳೋಕೆ ನಾಯಿ ಯಾಕೆ ಸಾಕ್ಬೇಕು?’, ‘ಅರಮನೆ ಮುಂದೆ, ಕುದುರೆ ಹಿಂದೆ ಹೋಗಬೇಡ’, ‘ಆನೆಯಂಥದ್ದೂ ಮುಗ್ಗರಿಸ್ತದೆ’... ಗಾದೆಗಳೇ ಜನಪದರ ಅನುಭವಜನ್ಯ ವಿವೇಕಯುತ ವಿನೋದಕ್ಕೆ ಸಾಕ್ಷಿ. ತೆರೆದ ಮನಸ್ಸು ಸಹಜವಾಗಿಯೇ ಹಾಸ್ಯ ಆವಾಹಿಸಬಲ್ಲದು, ಕಟ್ಟಬಲ್ಲದು, ಹಂಚಬಲ್ಲದು. ವಿನೋದವು ದುಃಖ, ದುಮ್ಮಾನ, ಉದ್ವೇಗಗಳನ್ನು ಹಗುರಾಗಿಸಿ ವರ್ತಮಾನಕ್ಕೆ ಆದ್ಯತೆ ಕಲ್ಪಿಸುತ್ತದೆ. ‘ಒಳಗೆ ಹಗಿಯಿಲ್ಲದ ನಗಿ’ ಅದರ ಆಶಯ. ಜಂಜಡ ಮೀರಿ ಮುಖವು ನಿತ್ಯಹರಿದ್ವರ್ಣ ಕಾಡಿನಂತಿರಬೇಕು, ಕಾಡು ಬಾ ಎನ್ನುವಂತಿರಬಾರದು.

ಅರವತ್ತು-ಎಪ್ಪತ್ತರ ದಶಕಗಳಲ್ಲಿ ಚಲನಚಿತ್ರಗಳಲ್ಲಿ ಗಂಭೀರ ಹಾಸ್ಯ ರಾರಾಜಿಸಿತ್ತು. ತಾವು ತಯಾರಿಸಬೇಕೆಂದಿದ್ದ ಸಿನಿಮಾಗಳಿಗೆ ನಿರ್ಮಾಪಕ, ನಿರ್ದೇಶಕರು ಮೊದಲು ಪ್ರಸಿದ್ಧ ಹಾಸ್ಯ ಪಾತ್ರಧಾರಿಗಳನ್ನು ನಿಗದಿಪಡಿಸಿಕೊಂಡು ನಂತರವೇ ಉಳಿದ ಪಾತ್ರಧಾರಿ
ಗಳಿಗೆ ಹುಡುಕಾಡುತ್ತಿದ್ದರಂತೆ. ಮನೆಗೆ ಬಂದ ವೈದ್ಯ, ರೋಗಿಯನ್ನು ಪರೀಕ್ಷಿಸುತ್ತ ನೀರು ಕೇಳುವುದು, ವೈದ್ಯ ತನ್ನ ಕಿಸೆಯಿಂದ ಗುಳಿಗೆ ತೆಗೆದು ನುಂಗುವವರೆಗೆ ಮನೆಮಂದಿ (ಪ್ರೇಕ್ಷಕರೂ) ಗುಳಿಗೆ ರೋಗಿಗೆಂದೇ ಭಾವಿಸಿರುತ್ತಾರೆ! ಅಂದಕಾಲತ್ತಲೆ ಇಂಥ ಮೆಲುಕು ಹಾಕುವಂಥ ಹಾಸ್ಯ ಪ್ರಸಂಗಗಳು ತೆರೆಯಲ್ಲಿ ಮೆರೆಯು ತ್ತಿದ್ದವು. ಇಂದೋ ಬಹುತೇಕ ದ್ವಂದ್ವಾರ್ಥಗಳೇ ವಿನೋದವೆನ್ನಿಸಿವೆ.

‘ತಮಾಷೆ ಹಬ್ಬ’ ಅಥವಾ ‘ವಿನೋದೋತ್ಸವ’ ಎಂದರೆ ಸನ್ನಿವೇಶಪ್ರೇರಿತವಾಗದ ನಗೆಯ ತುಣುಕುಗಳು ಯಾಂತ್ರಿಕವಾಗಿ ವೇದಿಕೆಯಿಂದ ಪುಂಖಾನುಪುಂಖ ಪ್ರೇಕ್ಷಕರಿಗೆ ರವಾನೆಯಾಗುವುದಲ್ಲ. ಪೈಪೋಟಿಯಲ್ಲಿ ಯಥಾಶಕ್ತಿ ಸಂಗ್ರಹಿತ ಜೋಕು ಗಳ ಬುತ್ತಿ ಮಂಡಿಸುವುದಲ್ಲ. ಇದು ಹೇಗೂ ಇರಲಿ, ಇಷ್ಟು ಹೊತ್ತು ನಗಿಸಲು ಇಷ್ಟು ಎನ್ನುವಷ್ಟು ನಗೆ ಮಾರುಕಟ್ಟೆಯಾಗಬೇಕೇ? ನಗೆ ಪ್ರಖರ ಅನುಸಂಧಾನವಾಗಿ, ಬದುಕಿನ ಸಂಸ್ಕಾರವಾಗಿ ಮೈದಳೆಯಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.