ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ‘ಜಾತಿಗಣತಿ’– ಬೇಕಿದೆ ಮಾತೃವಾತ್ಸಲ್ಯ

ಈ ವರದಿಯ ಬಗ್ಗೆ ಕೆಲವರಿಗೆ ಹುಸಿ ಕಲ್ಪನೆಗಳಿರುವುದು ದುರದೃಷ್ಟಕರ
ಬಿ.ಎಸ್.ಶಿವಣ್ಣ
Published 12 ಜನವರಿ 2024, 19:38 IST
Last Updated 12 ಜನವರಿ 2024, 19:38 IST
ಅಕ್ಷರ ಗಾತ್ರ

ರಾಜ್ಯದ ಹಿಂದುಳಿದ ವರ್ಗಗಳಲ್ಲಿ ತಮ್ಮ ರಾಜಕೀಯ ಹಕ್ಕುಗಳ ಬಗ್ಗೆ ಆಗಷ್ಟೇ ಪ್ರಜ್ಞೆ ಮೂಡುತ್ತಿದ್ದ ಕಾಲ. ವಿಧಾನಸೌಧದಂಥ ಆಡಳಿತ ಕೇಂದ್ರದಲ್ಲಿ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಸಮುದಾಯದ ಹಲವು ಶಾಸಕರು ಇದ್ದರೂ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೂ ರಾಜಕೀಯ ಮೀಸಲು ಪಡೆಯಬಹುದೆಂಬ ಭಾವನೆ ಚಿಗುರೊಡೆಯುತ್ತಿದ್ದ ಸಮಯ. ಆಗ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಪಾಲಿಕೆ, ನಗರಸಭೆ, ಪುರಸಭೆಯಂತಹ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ಜಾರಿ ಮಾಡಬೇಕೆಂಬ ಒತ್ತಡವು ಶೋಷಿತ ಹಾಗೂ ಹಿಂದುಳಿದ ವರ್ಗಗಳಿಂದ ಪ್ರಬಲವಾಗಿ ಪ್ರತಿಪಾದನೆಯಾಗುತ್ತಿತ್ತು. ಸಹಜವಾಗಿಯೇ ಸಮಾಜದ ಪ್ರಬಲ ವರ್ಗಗಳಿಂದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಕೆಲವು ಶಾಸಕರು ಹಾಗೂ ಸಚಿವರಿಂದ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಿದ್ದರು. ಆ ಸಮಿತಿಯು ಮೀಸಲಾತಿಗೆ ಶಿಫಾರಸು ಮಾಡಿದಾಗ, ಪ್ರಬಲ ವರ್ಗದವರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆಗ, ‘ವರದಿಯನ್ನು ಒಪ್ಪಿಕೊಳ್ಳುವುದು ಕಷ್ಟವಾಗಬಹುದು’ ಎಂದು ಸಿದ್ದರಾಮಯ್ಯ ಅವರನ್ನು ಓಲೈಸುವ ಪ್ರಯತ್ನವನ್ನು ಕೆಲವರು ಮಾಡಿದ್ದರು. ಆ ಸಂದರ್ಭದಲ್ಲಿ, ಹಟ ಬಿಡದ ಸಿದ್ದರಾಮಯ್ಯ ಅವರಿಗೆ ಒತ್ತಾಸೆಯಾಗಿ ನಿಂತವರು ಜೆ.ಎಚ್.ಪಟೇಲ್.

ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ ಸಚಿವರನ್ನು ಸಂಪುಟ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಪಟೇಲರು, ‘ಸಮಾಜದಲ್ಲಿ ಮೇಲ್ವರ್ಗದವರು ಎನಿಸಿಕೊಂಡಿರುವ ನಾವು ಹಿಂದುಳಿದ ಜಾತಿಗಳವರ ಬಗ್ಗೆ ಸದಾ ಮಾತೃವಾತ್ಸಲ್ಯ ಹೊಂದಿರಬೇಕು. ಅದನ್ನು ಬಿಟ್ಟು ಮೀಸಲಾತಿಯನ್ನು  ವಿರೋಧಿಸುವುದು ಸರಿಯಲ್ಲ. ಭಾಷಣದಲ್ಲಿ ಬಸವಣ್ಣನ ಸಮಾನತೆಯ ವಚನ ಹೇಳಿ ಕೃತಿಯಲ್ಲಿ ಹಿಂದುಳಿದ ಸಮುದಾಯಗಳನ್ನು ಅಧಿಕಾರದಿಂದ ವಂಚಿಸುವಂಥ ಕೆಲಸ ಆಗಬಾರದು’ ಎಂದಿದ್ದರು. ಇದರ ಪರಿಣಾಮವಾಗಿ, ವರದಿಯನ್ನು ಒಪ್ಪುವುದು ಸರ್ಕಾರಕ್ಕೆ ಅನಿವಾರ್ಯವಾಯಿತು. ಅದರ ಫಲವನ್ನು ‘ಅಹಿಂದ’ ವರ್ಗದವರು ಈಗ ಅನುಭವಿಸುತ್ತಿದ್ದಾರೆ.

ಸಮಾಜದಲ್ಲಿ ಪ್ರಬಲರು ಎನಿಸಿಕೊಂಡವರು ಸಮಸಮಾಜದ ದೃಷ್ಟಿಯಿಂದ ಅಂಥದ್ದೇ ವರದಿಯೊಂದನ್ನು ಒಪ್ಪಿಕೊಳ್ಳುವ ಔದಾರ್ಯ ತೋರುವುದಕ್ಕೆ ಈಗ ಕಾಲ ಪಕ್ವವಾಗಿದೆ. ಅದು, ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆ ಅರ್ಥಾತ್ ‘ಜಾತಿ ಜನಗಣತಿ’ ವರದಿ.

ಸಿದ್ದರಾಮಯ್ಯ ಮೊದಲನೇ ಬಾರಿ ಮುಖ್ಯಮಂತ್ರಿ ಆಗಿದ್ದಾಗ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಅವರ ನೇತೃತ್ವದಲ್ಲಿ ಈ ಸಮೀಕ್ಷೆ ನಡೆಸುವುದಕ್ಕೆ ಆದೇಶ ನೀಡಿದ್ದರು. ಆದರೆ ಆಯೋಗವು ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅಣಿಯಾದ ಹೊತ್ತಿಗೆ ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿತು. ವರದಿ ಮೂಲೆ ಸೇರಿತು. ನಂತರ ಅಧಿಕಾರದ ಚುಕ್ಕಾಣಿಯು ಬಿಜೆಪಿ ಕೈಸೇರಿತು. ಆ ಅವಧಿಯಲ್ಲೂ ವರದಿಗೆ ಮುಕ್ತಿ ಸಿಗಲಿಲ್ಲ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂತರಾಜ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಸಿದ್ದರಾಮಯ್ಯ ಈ ಬಾರಿ ಚುನಾವಣೆಗೂ ಮುನ್ನ ಅಹಿಂದ ಸಮುದಾಯಕ್ಕೆ ವಚನ ನೀಡಿದ್ದರು. ಹೀಗಾಗಿ, ಸಹಜವಾಗಿಯೇ ಶೋಷಿತ ಸಮುದಾಯವು ಈ ವಚನ ಪಾಲನೆಯ ಬಗ್ಗೆ ಕಾತರದಿಂದಿದೆ. ಆದರೆ ಸಮಾಜದ ಎರಡು ಪ್ರಬಲ ಸಮುದಾಯಗಳಿಂದ ವಿರೋಧ
ವ್ಯಕ್ತವಾಗಿರುವುದು ಈಗ ತೊಡಕಾಗಿ ಪರಿಣಮಿಸಿದೆ.

ಅಷ್ಟಕ್ಕೂ ಈ ವರದಿಯ ಬಗ್ಗೆ ಕೆಲವರಿಗೆ ಮಿಥ್ಯಾ ಕಲ್ಪನೆಗಳಿದ್ದರೆ, ಇನ್ನು ಕೆಲವರಂತೂ ಇದರಲ್ಲಿ ಸೇಡಿನ ಕ್ರಮವನ್ನು ಹುಡುಕುವ ಪ್ರಯತ್ನ ನಡೆಸಿದ್ದಾರೆ. ವರದಿ ಸಲ್ಲಿಕೆಯಾಗಿ, ಅದರಲ್ಲಿನ ಅಂಶಗಳು ಬಹಿರಂಗವಾದರೆ ತಮ್ಮ ಸಮುದಾಯದ ರಾಜಕೀಯ ಪ್ರಾಬಲ್ಯಕ್ಕೆ ಧಕ್ಕೆಬರುತ್ತದೆ, ಜನಸಂಖ್ಯೆಗೆ ಅನುಗುಣವಾಗಿ ಸಿಗಬೇಕಾದ ಹಕ್ಕುಗಳನ್ನು ತಪ್ಪಿಸುವ ಕುತಂತ್ರ ಇದರಲ್ಲಿ ಅಡಕವಾಗಿದೆ ಎಂಬಂತಹ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ.

ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲು ನಿಗದಿಪಡಿಸುವುದಕ್ಕೆ ಯಾವ ಮಾನದಂಡವನ್ನು ಅನುಸರಿಸುತ್ತೀರಿ ಎಂದು ವರ್ಷದ ಹಿಂದೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದಾಗ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡುವುದಕ್ಕೆ ರಾಜ್ಯ ಸರ್ಕಾರದ ಮುಂದೆ ಯಾವುದೇದತ್ತಾಂಶಗಳು ಇರಲಿಲ್ಲ. ಈ ಸಮೀಕ್ಷೆಯ ವರದಿಯನ್ನು ಸರ್ಕಾರ ಸ್ವೀಕರಿಸದೇ ಇದ್ದುದರಿಂದ ಲಭ್ಯ ದತ್ತಾಂಶವನ್ನು ಸಾದರಪಡಿಸುವುದು ಅಸಾಧ್ಯವಾಗಿತ್ತು. ಹೀಗಾಗಿ, ಈ ವರದಿ ಎಲ್ಲ ದೃಷ್ಟಿಯಿಂದಲೂ ಸಾಮಾಜಿಕ ಸ್ವಾಸ್ಥ್ಯಕ್ಕೆ ಅನುಕೂಲಕರವಾಗಿದೆಯೇ ವಿನಾ ಮಾರಕ ಅಲ್ಲ. ಹೀಗಾಗಿ, ಪ್ರಬಲ ವರ್ಗಗಳವರು ಮತ್ತೆ ಮಾತೃವಾತ್ಸಲ್ಯ ಪ್ರದರ್ಶಿಸುವ ಕಾಲ ಈಗ ಬಂದಿದೆ.

ಈ ಹಿಂದೆ ಹಾವನೂರು ವರದಿ ಮತ್ತು ಮಂಡಲ್ ವರದಿ ಜಾರಿ ಸಂದರ್ಭದಲ್ಲಿ ರಾಜಕೀಯ ಪಟ್ಟಭದ್ರರು ಹಾಗೂ ಸಾಮಾಜಿಕ ನ್ಯಾಯದ ವಿರೋಧಿಗಳು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರೂ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಮತ್ತು ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್‍ ಅವರು ರಾಜಕೀಯ ಇಚ್ಛಾಶಕ್ತಿಯಿಂದ ಆ ವರದಿಗಳನ್ನು ಜಾರಿಗೊಳಿಸಿದ್ದರು. ಇದರಿಂದ ಅಹಿಂದ ವರ್ಗಗಳ ಕೋಟ್ಯಂತರ ಯುವಕರು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಸೌಲಭ್ಯ ಪಡೆದುದು ನಮ್ಮೆಲ್ಲರ ಕಣ್ಣಮುಂದಿದೆ. ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕರಾದ ಸಿದ್ದರಾಮಯ್ಯ ಅವರು ಈಗ ‘ಜಾತಿ ಜನಗಣತಿ’ ವರದಿಯನ್ನು ತಕ್ಷಣವೇ ಸ್ವೀಕರಿಸಲಿ.

ಲೇಖಕ: ಅಧ್ಯಕ್ಷ, ರಾಮಮನೋಹರ ಲೋಹಿಯಾ ವಿಚಾರ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT