ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ ಅಂಕಣ | ಕಾಳ್ಗಿಚ್ಚು ತಡೆ: ಇದೆಂಥಾ ವಿಧಾನ?

Last Updated 27 ಫೆಬ್ರುವರಿ 2023, 0:15 IST
ಅಕ್ಷರ ಗಾತ್ರ

ಸಕಲೇಶಪುರದ ಬಳಿ ಅರಣ್ಯ ಇಲಾಖೆ ನೌಕರರೊಬ್ಬರು ಇತ್ತೀಚೆಗೆ ಕಾಳ್ಗಿಚ್ಚನ್ನು ನಂದಿಸಲು ಹೋಗಿ ಮೃತಪಟ್ಟ ಸುದ್ದಿ ತಿಳಿದು ಮನಸ್ಸಿಗೆ ನೋವಾಯಿತು. ‘ಕಾಡಿದ್ದರೆ ನಾಡು, ನಾಡಿದ್ದರೆ ನಾವು’ ಎಂಬುದೇನೋ ನಿಜ, ಆದರೆ ಈ ಪ್ರಕ್ರಿಯೆಯಲ್ಲಿ ಮನುಷ್ಯನೊಬ್ಬನಿಗೆ
ಪ್ರಾಣಾಪಾಯ ಇದೆ ಎಂದರೆ ಅದು ಖಂಡಿತಾ ಒಪ್ಪುವಂತಹದ್ದಲ್ಲ.

ಪ್ರತಿವರ್ಷವೂ ಜನವರಿ ಮಧ್ಯಭಾಗದಿಂದ ಏಪ್ರಿಲ್ ಮಧ್ಯಭಾಗದವರೆಗೆ ಕಾಳ್ಗಿಚ್ಚು ಕಾಣಿಸಿಕೊಳ್ಳುವ ಸಮಯ. ಕಾರಣಗಳು ಅನೇಕ. ಮೊದಲನೆಯದು, ಕಾಡುಗಳಿಂದ ಆವೃತವಾದ ಜಮೀನಿನ ಮಾಲೀಕರು ಕಾಡುಪ್ರಾಣಿಗಳ ಹಾವಳಿಯಿಂದ ಬೇಸತ್ತು ಈ ರೀತಿ ಬೆಂಕಿ ಹಚ್ಚಬಹುದು. ಬೆಂಕಿ ಕಂಡು ಪ್ರಾಣಿಗಳು ಬೆದರಿ ಓಡುತ್ತವೆ ಎಂಬುದು ಅವರ ಲೆಕ್ಕಾಚಾರ.

ಎರಡನೆಯದು, ಕೆಲವು ಕೃಷಿಕ ಕುಟುಂಬಗಳು ತಮ್ಮ ಜಾನುವಾರುಗಳ ಮೇವಿಗೆ ಕಾಡನ್ನೇ ಆಶ್ರಯಿ ಸಿರುತ್ತವೆ. ಬೆಳೆದುನಿಂತ ಬಲಿತ–ಒರಟು ಹುಲ್ಲು ಹಸುಕರುಗಳಿಗೆ ಸೂಕ್ತವಲ್ಲ ಎಂಬುದು ಕೆಲವರ ಅನಿಸಿಕೆ. ಹಾಗಾಗಿ ಈ ಒಣಗಿದ ಹುಲ್ಲಿಗೆ ಬೆಂಕಿ ಹಾಕಿ ಉರಿಸಿಬಿಟ್ಟರೆ, ಮಳೆ ಬಂದು ಹೊಸದಾಗಿ ಬೆಳೆಯುವ ಎಳೆ ಹುಲ್ಲು ಮೃದುವಾಗಿಯೂ ಹುಲುಸಾಗಿಯೂ ಇದ್ದು, ಜಾನುವಾರುಗಳಿಗೆ ಸ್ವಾದಿಷ್ಟ ಭೋಜನವಾಗ ಬಹುದು ಎನ್ನುವ ಆಸೆ.

ಮೂರನೆಯದು, ಕೆಲವು ಕಿಡಿಗೇಡಿಗಳ ಚೇಷ್ಟೆ ಮತ್ತು ಅಚಾತುರ್ಯದಿಂದ ಆಗುವಂತಹದ್ದು. ವಾರಾಂತ್ಯದ ಮೋಜು, ಮಸ್ತಿಗಾಗಿ ನಗರಗಳಿಂದ ಕಾಡಂಚಿನ ಪ್ರದೇಶಗಳಿಗೆ ಬರುವ ಕೆಲವರು ಸೇದಿ ಮುಗಿಸಿದ ಸಿಗರೇಟು, ಬೀಡಿಯ ತುಂಡುಗಳನ್ನು ಎಲ್ಲೆಂದರಲ್ಲಿ ಎಸೆಯುವುದುಂಟು. ರಾತ್ರಿ ವೇಳೆ ಹಾಕಿಕೊಳ್ಳುವ ಕ್ಯಾಂಪ್‌ಫೈರ್ ಅನ್ನು ಸಮರ್ಪಕವಾಗಿ ನಂದಿಸದೇ ಜಾಗ ಖಾಲಿ ಮಾಡುವುದುಂಟು. ಇಂತಹ ಹತ್ತು ಹಲವು ಕಾರಣಗಳಿಂದ ಅರಣ್ಯದಲ್ಲಿ ಅಗ್ನಿ ಕಾಣಿಸಿಕೊಳ್ಳಬಹುದು.

ಇನ್ನೂ ಅಪರೂಪದ ಕೆಲವು ಸಂದರ್ಭಗಳಲ್ಲಿ ಏರಿದ ಉಷ್ಣತೆ, ವೇಗವಾಗಿ ಬೀಸುವ ಗಾಳಿಯಂತಹ ಕಾರಣಗಳಿಂದ, ಎತ್ತರಕ್ಕೆ ಬೆಳೆದುನಿಂತ ಬಿದಿರು ಬೊಂಬುಗಳು ಒಂದಕ್ಕೊಂದು ಘರ್ಷಣೆಗೆ ಒಳಗಾಗಿ ಬೆಂಕಿ ಹತ್ತಿಕೊಳ್ಳಬಹುದು. ಬೆಂಕಿ ಹೇಗಾದರೂ ಹತ್ತಲಿ ಆದರೆ ಅದರಿಂದಾಗುವ ನಷ್ಟ ಅಪಾರ. ಗಿಡ ಮರಗಳು, ಪ್ರಾಣಿ ಪಕ್ಷಿಗಳು, ಮುಖ್ಯವಾಗಿ ನಿಧಾನವಾಗಿ ಚಲಿಸುವ ಮತ್ತು ನೆಲದ ಮಟ್ಟದಲ್ಲಿಯೇ ವಾಸಿಸುವ ಮೊಲ, ಮುಂಗುಸಿ, ಹಾವು, ಉಡದಂತಹವು ಕ್ಷಣಮಾತ್ರದಲ್ಲಿ ಅಸುನೀಗುತ್ತವೆ.

ಕಾಳ್ಗಿಚ್ಚಿನಲ್ಲಿ ಹಲವು ಬಗೆ. ಮೊದಲನೆಯದು, ಹುಲ್ಲುಗಾವಲಿನ ಮೇಲ್ಮೈಯಲ್ಲಷ್ಟೇ ಬೆಂಕಿ ಉರಿದು, ಒಣಗಿದ ಎಲೆಗಳು ಮತ್ತು ಹುಲ್ಲು ನಾಶವಾಗಬಹುದು. ಎರಡನೆಯದು, ಎತ್ತರದ ಮರಗಳಲ್ಲಿ ಕಂಡುಬರುವ ಬೆಂಕಿ. ಇದು ಮರವನ್ನು ಸಂಪೂರ್ಣವಾಗಿ ಸುಡುತ್ತಾ, ಹರಡುತ್ತಾ ಸಾಗಬಹುದು. ಮೂರನೆಯ ಬಗೆಯದು, ನೆಲದ ಮಟ್ಟದಲ್ಲಿಯೇ ಉರಿಯುತ್ತಾ ಹೋಗುವಂತಹದ್ದು.

ಹೀಗೆ ಬೆಂಕಿ ಕಂಡಾಗ ನಂದಿಸಲು ಮುಂದಾಗುವ ಅರಣ್ಯ ಇಲಾಖೆ ಸಿಬ್ಬಂದಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಇದೆಯೇ ಎಂಬುದನ್ನು ಅಧಿಕಾರಿಗಳು ಖಾತರಿ ಮಾಡಿಕೊಳ್ಳಬೇಕು. ಪ್ರಸ್ತುತ, ಬೆಂಕಿಯನ್ನು ನಂದಿಸಲು ನೀರು ಸಿಂಪಡಿಸುವುದು, ಮಣ್ಣು ಎರಚುವುದು, ದೊಡ್ಡ ಬಡಿಗೆಯಿಂದ ಬಡಿಯುವಂತಹ ವಿಧಾನಗಳಿವೆ. ಆದರೆ ಇವೆಲ್ಲವೂ ಅವೈಜ್ಞಾನಿಕ ಮತ್ತು ಅಸುರಕ್ಷಿತವೇ ಸರಿ. ಒಬ್ಬರೋ ಇಬ್ಬರೋ ಸಿಬ್ಬಂದಿ ಬೆಂಕಿ ಆರಿಸಲು ತೆರಳುವುದು ಎಂದಿಗೂ ಅಪಾಯಕರ. ಏಳೆಂಟು ಜನರ ಗುಂಪು ಸಮರ್ಪಕ ಯೋಜನೆಯೊಂದಿಗೆ ಕಾರ್ಯೋನ್ಮುಖ ಆಗಬೇಕು. ಒಬ್ಬರು ನೀರು ಸಿಂಪಡಿಸುವುದು, ಇನ್ನೊಬ್ಬರು ಬಡಿಗೆಯಲ್ಲಿ ಬಡಿಯುವುದು, ಮಗದೊಬ್ಬರು ಬೆಂಕಿ ಯಾವ ದಿಕ್ಕಿನಲ್ಲಿ ಪಸರಿಸುತ್ತಿದೆ ಎಂಬ ಸೂಚನೆಯನ್ನು ಕೊಡುವುದು ಮತ್ತೂ ಕೆಲವರು, ಬೆಂಕಿಯ ಕಾವಿಗೆ ಬಲು ಬೇಗನೇ ನಿರ್ಜಲೀಕರಣಕ್ಕೊಳಗಾಗುವ ಸಿಬ್ಬಂದಿಗೆ ಕುಡಿಯಲು ನೀರು ಪೂರೈಸುವುದನ್ನು ಮಾಡಬೇಕು.

ಇಂತಹ ಅಪಾಯಕರ ವೃತ್ತಿಯಲ್ಲಿ ತೊಡಗಿರುವವರಿಗೆ ಸುಲಭವಾಗಿ ಬೆಂಕಿ ತಗುಲದಂತಹ ಬಟ್ಟೆ, ಕೈಗವಸು, ಮುಖಗವಸು, ಸುರಕ್ಷಿತ ಬೂಟುಗಳು, ಸೂಕ್ತ ರಕ್ಷಣಾ ಕವಚಗಳಂತಹ ಸಾಮಗ್ರಿಗಳನ್ನು ಒದಗಿಸಬೇಕು. ಆದರೆ, ಇವೆಲ್ಲವನ್ನು ಅಳವಡಿಸಿಕೊಂಡರೂ ಇದೊಂದು ಅಸುರಕ್ಷಿತ ವಿಧಾನವೇ ಸರಿ. ಸುರಕ್ಷಿತ ತಂತ್ರಜ್ಞಾನ ಮತ್ತು ಸಲಕರಣೆಗಳನ್ನು ಬಳಸುವ ಬಗ್ಗೆ ಸರ್ಕಾರ ವಿಚಾರ ಮಾಡಬೇಕು. ಸುಧಾರಿತ, ಅತ್ಯಾಧುನಿಕ ಕ್ರಮವಾದ ವೈಮಾನಿಕ ಅಗ್ನಿಶಾಮಕ ವಿಧಾನಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಗಮನಹರಿಸಬೇಕು. ಇದರಿಂದ ಅಗ್ನಿ ಅನಾಹುತಗಳ ಜೊತೆಯಲ್ಲಿ ಸಿಬ್ಬಂದಿಯ ಪ್ರಾಣಹಾನಿಯನ್ನೂ ತಪ್ಪಿಸಬಹುದು. ಇದಕ್ಕಾಗಿ ವಿನಿಯೋಗಿಸುವ ಹಣವು ಪರೋಕ್ಷವಾಗಿ ರಾಷ್ಟ್ರದ ಅಭಿವೃದ್ಧಿಗಾಗಿಯೇ ಎಂಬ ಸತ್ಯಾಂಶವನ್ನು ಮನವರಿಕೆ ಮಾಡಿಕೊಳ್ಳಬೇಕು.

‘ಯಾವುದೇ ಅವಘಡ ಬರದಂತೆ ತಡೆಯುವುದೇ ಮೇಲು’ ಎಂಬಂತೆ, ಕಾಳ್ಗಿಚ್ಚು ಹುಟ್ಟದಂತೆ ಎಲ್ಲಾ ರೀತಿಯ ಬಿಗಿ ಕ್ರಮಗಳನ್ನೂ ಇಲಾಖೆ ತೆಗೆದುಕೊಳ್ಳಬೇಕು. ಮುಖ್ಯವಾಗಿ ಬೇಸಿಗೆಯ ದಿನಗಳಲ್ಲಿ ಜನರು ಅರಣ್ಯದ ಸುತ್ತಮುತ್ತಲ ಪ್ರದೇಶಗಳನ್ನು ವೀಕ್ಷಿಸಲು ಬರುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಒಂದು ವೇಳೆ ಅನುಮತಿ ಪಡೆದು ಬಂದರೂ ಅಂತಹವರ ಮೇಲೆ ಸೂಕ್ಷ್ಮ ಕಣ್ಗಾವಲಿಡಬೇಕು. ಅಲ್ಲಿ ಕ್ಯಾಂಪ್‌ಫೈರ್‌ ನಂತಹ ಚಟುವಟಿಕೆಗಳಿಗೆ ಎಂದೂ ಅನುಮತಿ ಕೊಡಬಾರದು. ಇದೆಲ್ಲದರ ಜೊತೆಗೆ ನಾವೆಲ್ಲರೂ ನೆನಪಿಡಬೇಕಾದ ಸಂಗತಿಯೆಂದರೆ, ಕಾಳ್ಗಿಚ್ಚು ಸಂಭವಿ ಸದಂತೆ ತಡೆಯುವುದು ಬರೀ ಅರಣ್ಯ ಇಲಾಖೆಯ ಹೊಣೆಯಲ್ಲ, ಅದು ಪ್ರತಿಯೊಬ್ಬರ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT