ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವೈದ್ಯರ ಅನಾರೋಗ್ಯಕ್ಕೆ ಮದ್ದು ಕೊಡಿ

ಸಾರ್ವಜನಿಕರು ಹಾಗೂ ಆಡಳಿತ ವ್ಯವಸ್ಥೆಯ ಮಧ್ಯೆ ನಲುಗುತ್ತಿರುವ ವೈದ್ಯರನ್ನು ಅಧಿಕಾರಿಗಳು ಸರಿಯಾಗಿ ಮಾತನಾಡಿಸುವ ಸೌಜನ್ಯ ತೋರಿಸಬೇಕಿದೆ
Last Updated 23 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ಮೈಸೂರು ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಸುದ್ದಿ ಇಡೀ ವೈದ್ಯಕೀಯ ಜಗತ್ತನ್ನು ಬೆಚ್ಚಿಬೀಳಿಸಿದೆ. ವೈದ್ಯರು ಒತ್ತಡಕ್ಕೆ ಶರಣಾಗದೆ, ಮೇಲಧಿಕಾರಿಗಳ ಜೊತೆ ಚರ್ಚೆ ನಡೆಸಲು, ಪರಿಹಾರ ಪಡೆಯಲು ಆಡಳಿತ ವ್ಯವಸ್ಥೆಯು ಸರಣಿ ‘ಟ್ವೀಟ್’ಗಳ ಮೂಲಕ ಮನವಿ ಮಾಡಿದೆ. ಕೊರೋನಾ ಸೋಂಕಿನ ಪರೀಕ್ಷೆಗಳ ಟಾರ್ಗೆಟ್ ತಲುಪ ದಿರುವ ಒತ್ತಡವೂ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ಆತ್ಮಹತ್ಯೆಗಳ ಬಗ್ಗೆ ಅಧ್ಯಯನ ಮಾಡುವಾಗ ‘ಸೈಕಲಾಜಿಕಲ್‌ ಅಟಾಪ್ಸಿ’ ಎನ್ನುವ ವಿಧಾನವನ್ನು ಅನುಸರಿಸಲಾಗುತ್ತದೆ. ಹಲವು ತಿಂಗಳು-ವರ್ಷಗಳಿಂದ ಕ್ರಮೇಣ ರೂಪುಗೊಳ್ಳುವ ಒತ್ತಡ- ಖಿನ್ನ ಮನಃಸ್ಥಿತಿ, ಕುಟುಂಬದ ಬೆಂಬಲ ಆ ಸಮಯದಲ್ಲಿ ಲಭ್ಯವಿರದಿರುವುದು, ಯಾವುದೋ ಒಂದು ಪ್ರಚೋದಕ ಅಂಶವು ಅಂತಿಮವಾಗಿ ಆತ್ಮಹತ್ಯೆಗೆ ಕಾರಣವಾಗಬಲ್ಲದು. ‌

ಒಂದೆಡೆ, ಆತ್ಮಹತ್ಯೆಗೆ ಒಳಗಾದ ವೈದ್ಯರ ಜೀವ ಹಾನಿ, ಅವರ ಕುಟುಂಬದವರ ನೋವು ನಮ್ಮ ಮನಕಲಕುತ್ತದೆ. ಇನ್ನೊಂದೆಡೆ, ಈ ಸಂದರ್ಭದಲ್ಲಿ ವೈದ್ಯರ ಮೇಲೆ ಹೆಚ್ಚಾಗುತ್ತಿರುವ ವಿವಿಧ ಒತ್ತಡಗಳತ್ತ ನಾವು ಯೋಚಿಸಲೇಬೇಕಾದ, ಸೂಕ್ತ ಕ್ರಮ ಕೈಗೊಳ್ಳಲೇಬೇಕಾದ ತುರ್ತನ್ನು ಸೂಚಿಸುತ್ತದೆ. ವೈದ್ಯರ ಒತ್ತಡಗಳು ಕೊರೊನಾದಿಂದ ಸಹಜವಾಗಿಯೇ ಹೆಚ್ಚಾಗಿವೆ. ತಾವು ನೋಡುವ ರೋಗಿಗಳ ಸಮಸ್ಯೆಗಳು ಕೊರೊನಾದಿಂದ ಬಂದಿರಬಹುದೇ ಎಂಬುದನ್ನು ಪ್ರತೀ ವೈದ್ಯ ಈಗ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಏಕೆಂದರೆ ಕೊರೊನಾದ ಹೊಸ ಹೊಸ ರೂಪಗಳು ಈ ಎರಡು–ಮೂರು ತಿಂಗಳಲ್ಲಿ ನಮಗೆ ಗೊತ್ತಾಗುತ್ತಿವೆ.

30 ವರ್ಷದ ಯುವಕ ಇದ್ದಕ್ಕಿದ್ದಂತೆ ಪಾರ್ಶ್ವ ವಾಯು ಪೀಡಿತನಾಗಿ ಬಂದರೂ ಸುಮ್ಮನೇ ಸುಸ್ತು ಎಂದು ರೋಗಿ ಬಂದರೂ ತಲೆನೋವು ಎಂದರೂ ಅವೆಲ್ಲವೂ ಕೊರೊನಾ ಸೋಂಕಿನ ಪ್ರಕರಣ ಆಗಿರುವ ಅಥವಾ ಆಗದಿರುವ ಸಂದರ್ಭಗಳಾಗಬಹುದು. ಇಂತಹ ಸಮಯದಲ್ಲಿ, ಈ ಮೊದಲು ಭರವಸೆ ನೀಡ ಬಹುದಾಗಿದ್ದ ‘ಹೀಗಿದೆ ಎಂಬ ರಿಸಲ್ಟ್ ಬಂದರೆ ಹೆದರುವಂಥದ್ದೇನಿಲ್ಲ, ಅದಕ್ಕೆ ಔಷಧಿಯಿದೆ’ ಎಂದು ಧೈರ್ಯ ನೀಡುವ ಪರಿಸ್ಥಿತಿ ಇದಲ್ಲ. ರೋಗಿಯ ಮನೆಯವರಿಗೆ ಎಲ್ಲವನ್ನೂ ವಿವರಿಸಿ, ಅವರನ್ನು ಪರೀಕ್ಷೆಗೆ ಒಪ್ಪಿಸುವುದು, ನಂತರ ಚಿಕಿತ್ಸೆಯಿರುವಲ್ಲಿಗೆ ಸಾಗಿಸುವುದು ಸುಲಭವಾಗಿ ಉಳಿದಿಲ್ಲ. ಅದರೊಂದಿಗೇ ವೈದ್ಯರನ್ನು ತಮ್ಮ ಜೀವಭಯ, ಮನೆ ಯಲ್ಲಿರುವ ಹಿರಿಯರು, ಮಕ್ಕಳಿಗೆ ತಾವು ಸೋಂಕು ತಗುಲಿಸುವ ಭಯ ಕಾಡುತ್ತವೆ.

ನಮ್ಮ ಆಡಳಿತ ವ್ಯವಸ್ಥೆಯೂ ಕೊರೊನಾದಿಂದ ಗೊಂದಲಕ್ಕೆ, ಸಂಕಷ್ಟಕ್ಕೆ ಈಡಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಸರ್ಕಾರದ ವ್ಯವಸ್ಥೆ ಹಲವರ ಹೊಂದಾ ಣಿಕೆಯಿಂದ ನಡೆಯಬೇಕಷ್ಟೆ. ನೂರಾರು ವರ್ಷಗಳಿಂದ ಆಡಳಿತ ವ್ಯವಸ್ಥೆಯಲ್ಲಿ ಬೇರೂರಿರುವ ಭ್ರಷ್ಟಾಚಾರ, ಲಂಚ, ಅಪ್ರಾಮಾಣಿಕತೆ, ಬೇಜವಾಬ್ದಾರಿತನವನ್ನು ಕೊರೊನಾದಂತಹ ವೈರಸ್ ಹೇಗೆ ಕಿತ್ತುಹಾಕೀತು?! ಅದಲ್ಲದೆ ಪ್ರತೀ ಕಾರ್ಯಕರ್ತ ಅಥವಾ ಅಧಿಕಾರಿಗೂ ಮೇಲಧಿಕಾರಿಯ ಭಯವೇ ವಿನಾ ಕೊರೊನಾಸೋಂಕಿತರ ಸಂಖ್ಯೆ ಹೆಚ್ಚಾದೀತು ಎಂಬ ಭಯವಲ್ಲ! ಪರಿಣಾಮವಾಗಿ ಕ್ವಾರಂಟೈನ್, ಐಸೊಲೇಷನ್‍ಗಳು ಜನರಲ್ಲಿ ಕೊರೊನಾ ಸೋಂಕು ತಗ್ಗಿಸಲು ಯಶಸ್ವಿಯಾಗಿಲ್ಲ, ಬದಲು ಸಾಮಾಜಿಕ ಕಳಂಕ ಮೂಡಿಸಿಬಿಟ್ಟಿವೆ.

ಒಂದು ಬೀದಿಯಲ್ಲಿ ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿದೆ ಎಂದು ತಿಳಿದರೆ, ಇಡೀ ಬೀದಿಯ ಜನ ರಾತ್ರೋರಾತ್ರಿ ನೆಂಟರ ಮನೆಗೆ ಓಡಿ ಹೋಗುವ ಪ್ರಸಂಗಗಳು ನಡೆದಿವೆ. ಇಂತಿಷ್ಟು ಪರೀಕ್ಷೆಗಳನ್ನು ನಡೆಸಿ, ‘ಟಾರ್ಗೆಟ್’ ತಲುಪಬೇಕು ಎಂಬುದು ಸರ್ಕಾರಿ ವೈದ್ಯರಿಗಿರುವ ಹೊಸ ಒತ್ತಡ. ಜನರಲ್ಲಿ ಈ ಬಗೆಯ ಭಯ-ಕಳಂಕದ ಭಾವ ಮೂಡಿಸಿ, ಜನ ಪರೀಕ್ಷೆಗೆ ಮುಂದಾಗುವಂತೆ ಮಾಡಲು ಸಾಧ್ಯವೇ? ಅಂಕಿ-ಅಂಶಗಳಿಗಾಗಿ ಮಾತ್ರ ಪರೀಕ್ಷೆ ನಡೆಸಿ ಉಪಯೋಗವಾದರೂ ಏನು?

ಅತ್ತ ವೈದ್ಯರ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳದ ಜನ, ಇತ್ತ ಗೊಂದಲಮಯ- ಅವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವ ಆಡಳಿತ ವ್ಯವಸ್ಥೆಯ ಮಧ್ಯೆ ನಲುಗುತ್ತಿರುವ ವೈದ್ಯರನ್ನು ಅಧಿಕಾರಿಗಳು ಕೊನೇಪಕ್ಷ ಸರಿಯಾಗಿ ಮಾತನಾಡಿಸುವ ಸೌಜನ್ಯವನ್ನು ತೋರಿಸಬೇಕಿದೆ. ಆರೋಗ್ಯ ಕ್ರಮಗಳಿಗೆ ಸಂಬಂಧಿಸಿದಂತೆ ಆಡಳಿತ ವ್ಯವಸ್ಥೆಯು ನಿರ್ಧಾರ ಕೈಗೊಳ್ಳುವ ಮುನ್ನ, ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯರ ಅನುಭವವನ್ನೂ ಪರಿಗಣಿಸಬೇಕಾಗಿದೆ.

ಪುದುಚೇರಿಯ ಜಿಪ್‍ಮರ್ ವೈದ್ಯಕೀಯ ಸಂಸ್ಥೆಯು ವೈದ್ಯರ ಕೊರತೆಯಿಂದ ಇತ್ತೀಚೆಗೆ ತನ್ನ ಹೊರರೋಗಿಗಳ ವಿಭಾಗವನ್ನೇ ಮುಚ್ಚಿದೆ. ಇದು ಮುಂದೆ ನಮಗೆ ಎದುರಾಗಬಹುದಾದ ಅಪಾಯದ ಮುನ್ಸೂಚನೆಯನ್ನು ನೀಡಬೇಕು. ವೈದ್ಯರ ಆರೋಗ್ಯ- ಜೀವಗಳು ಸಮಾಜಕ್ಕೂ ಅಮೂಲ್ಯ ಎಂಬುದನ್ನು ನಾವು ಮನಗಾಣಬೇಕಾಗಿದೆ.

ವೈದ್ಯಕೀಯ ಜಗತ್ತು ಒತ್ತಡ ಎದುರಿಸುವುದರಲ್ಲಿ ಯಾವಾಗಲೂ ಮುಂದೆಯೇ ಎಂಬ ವಿಷಯ ಬಹುಜನರಿಗೆ ಗೊತ್ತಿಲ್ಲ. ಕೊರೊನಾದಂತಹ ಸಂದರ್ಭವಂತೂ ಆರ್ಥಿಕ-ಸಾಮಾಜಿಕ-ಕೌಟುಂಬಿಕ ಒತ್ತಡಗಳ ಸರಮಾಲೆಯನ್ನೇ ವೈದ್ಯರ ಮುಂದಿಟ್ಟಿದೆ. ಅಂಥ ಒತ್ತಡಗಳ ಮಧ್ಯೆಯೇ ಕೆಲಸ ಮಾಡುತ್ತಿರುವ ವೈದ್ಯರಿಗೆ ಗೌರವ ನೀಡುವ, ಮತ್ತಷ್ಟು ಒತ್ತಡ ಹೇರದಿರುವ ಕೆಲಸವನ್ನು ಆಡಳಿತ ವ್ಯವಸ್ಥೆ ಹಾಗೂ ಸಮಾಜ ಎರಡೂ ಮಾಡಬೇಕಿದೆ.

ಲೇಖಕಿ: ಮನೋವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT