ಶುಕ್ರವಾರ, ಜನವರಿ 27, 2023
27 °C
ಈ ಕೇಂದ್ರದ ಸ್ಥಾಪನೆಯ ಕನಸೇನೋ ಈಡೇರಿದೆ. ಆದರೆ, ಕೇಂದ್ರದ ಉದ್ದೇಶವು ವರ್ತಮಾನದ ಸವಾಲುಗಳಿಗೆ ಮುಖಾಮುಖಿಯಾಗಬೇಕಿದೆ

ರಂಗಕೇಂದ್ರ ಮತ್ತು ಬಹುಮುಖಿ ಸಂವೇದನೆ

ಮಲ್ಲಿಕಾರ್ಜುನ ಕಡಕೋಳ Updated:

ಅಕ್ಷರ ಗಾತ್ರ : | |

Prajavani

ಸರ್ಕಾರಕ್ಕೆ ವೃತ್ತಿರಂಗಭೂಮಿ ಕುರಿತು ಸಂಪ್ರೀತಿ ಮತ್ತು ಸದ್ಭಾವನೆ ಇರುವುದು ಸ್ವಾಗತಾರ್ಹ. ನನೆಗುದಿಗೆಬಿದ್ದಿದ್ದ ಎರಡು ವರ್ಷಗಳ ಕನಸು ಕಡೆಗೂ ಈಡೇರಿದೆ. ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ನಿರ್ಮಾಣಗೊಳ್ಳಲಿರುವ ವೃತ್ತಿರಂಗಭೂಮಿ ಕೇಂದ್ರಕ್ಕೆ ನಾಟಕ ಅಕಾಡೆಮಿ ಸದಸ್ಯ ಯಶವಂತ ಸರದೇಶಪಾಂಡೆ ಅವರನ್ನು ನಿರ್ದೇಶಕ ರನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ.

ಈ ಉದ್ದೇಶಿತ ಕೇಂದ್ರದ ಚಟುವಟಿಕೆಗಳೇನು? ಅದರ ಸ್ವರೂಪ ಹೇಗಿರಬೇಕು? ಅದೊಂದು ವೃತ್ತಿನಾಟಕ ಕಂಪನಿ ಕಲಾವಿದರ ರಂಗ ತರಬೇತಿ ಕೇಂದ್ರವೇ? ಏಕೆಂದರೆ, ಸರದೇಶಪಾಂಡೆ ಅವರಿಗೆ ಸರ್ಕಾರ ನೀಡಿರುವ ಆದೇಶದಲ್ಲಿ ‘ವೃತ್ತಿರಂಗಶಾಲೆ ನಿರ್ದೇಶಕ’ ಎಂತಲೂ ಈ ಹಿಂದೆ ಪಿ.ಗಂಗಾಧರ ಸ್ವಾಮಿ ಅವರಿಗೆ ನೀಡಿದ್ದ ಆದೇಶದಲ್ಲಿ ‘ವೃತ್ತಿರಂಗಭೂಮಿ ಕೇಂದ್ರದ ವಿಶೇಷಾಧಿಕಾರಿ’ ಎಂತಲೂ ನಮೂದಾಗಿದೆ. ಹೀಗಾಗಿ, ಕೇಂದ್ರದ ಹೆಸರಿನ ಬಗ್ಗೆಯೇ ಸರ್ಕಾರಕ್ಕೆ ಗೊಂದಲವಿದೆ ಎಂಬುದು ಗೊತ್ತಾಗುತ್ತದೆ. ಬಜೆಟ್‌ನಲ್ಲಿ ಅದು ‘ವೃತ್ತಿರಂಗಭೂಮಿ ಕೇಂದ್ರ’ ಎಂದೇ ಉಲ್ಲೇಖಗೊಂಡಿದೆ.

ಇತ್ತೀಚಿನ ಆದೇಶದಂತೆ ಅದು ತರಬೇತಿ ಶಾಲೆಯೇ ಆಗಿದ್ದಲ್ಲಿ ಪಠ್ಯಕ್ರಮ ಹೇಗಿರಬೇಕು? ಅಥವಾ ರೆಪರ್ಟರಿಯೇ ಆಗಿದ್ದಲ್ಲಿ, ನೇಮಕಗೊಂಡ ನಿರ್ದೇಶಕರ ಕರ್ತವ್ಯಗಳೇನು ಎಂಬಂತಹ ಪ್ರಶ್ನೆಗಳು ಬಹುಪಾಲು ರಂಗತಜ್ಞರು, ರಂಗಕರ್ಮಿಗಳು, ನಾಟಕ ಕಂಪನಿ ಮಾಲೀಕರು- ಕಲಾವಿದರು, ಗ್ರಾಮೀಣ ಹವ್ಯಾಸಿ ಕಲಾವಿದರನ್ನು ಮಾತ್ರವಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನೂ ಕಾಡುತ್ತಿವೆ.

ದಾವಣಗೆರೆಯು ಭೌಗೋಳಿಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ನಾಡಿನ ವೃತ್ತಿ ರಂಗಭೂಮಿಯ ನಡುಮನೆಯೇ ಆಗಿದೆ. ನೂರು ವರ್ಷಗಳಷ್ಟು ಹಿಂದೆಯೇ ‘ಸ್ತ್ರೀ’, ‘ಬಿ.ಎ‌.’, ‘ಭಾಪುರೇ ಕರ್ಣ’ದಂತಹ ಹತ್ತಾರು ಮಹತ್ತರ ವೃತ್ತಿನಾಟಕಗಳನ್ನು ರಚಿಸಿದ ಹೆಸರಾಂತ ನಾಟಕಕಾರ ಕೋಲಶಾಂತಪ್ಪ ದಾವಣಗೆರೆ ಯವರು. ನೂರು ವರ್ಷಗಳ ಹಿಂದೆ ಸ್ಥಾಪನೆಯಾದ ‘ಜಯಲಕ್ಷ್ಮಿ ನಾಟಕ ಕಂಪನಿ’,  ಮೈಸೂರು ಮಹಾರಾಜರಿಂದ ಚಿನ್ನದ ತೋಡೇವು ಪಡೆದ ‘ಕೆ.ಬಿ.ಆರ್. ಡ್ರಾಮಾ ಕಂಪನಿ’ ದಾವಣಗೆರೆಯವು. ನೂರಕ್ಕೂ ಹೆಚ್ಚು ನಾಟಕ ಕಂಪನಿಗಳು ಕ್ಯಾಂಪ್ ಮಾಡಿ ಯಶಸ್ಸು ಗಳಿಸಿದ ಊರು ಇದು.

1872ರ ಸುಮಾರಿಗೆ ಗದಗದ ಶಾಂತಕವಿಗಳು ಸ್ಥಾಪಿಸಿದ ‘ಕೃತಪುರ ನಾಟಕ ಮಂಡಳಿ’ಯೇ ಕನ್ನಡದ ಮೊದಲ ದೇಸಿ ನೆಲೆಯ ವೃತ್ತಿನಾಟಕ ಕಂಪನಿ. ಹೀಗೆ ಹುಟ್ಟಿಕೊಂಡ ರಂಗಪರಂಪರೆಯು ನಾಟಕ ಕಂಪನಿಗಳಿಗೆ ಸೀಮಿತವಾಗಿ ಉಳಿಯದೆ, ಜನಸಾಮಾನ್ಯರ ರಂಗಸಂಸ್ಕೃತಿಯಾಗಿ ಬೃಹತ್ತಾದ ರಂಗಬಾಹುಳ್ಯ ಗಳಿಸಿಕೊಂಡಿತು. ಸ್ವಾತಂತ್ರ್ಯ ಚಳವಳಿ, ಖಾದಿ ಚಳವಳಿ, ಅರಮನೆ-ಗುರುಮನೆಯ ಶಾಸ್ತ್ರೀಯ ನೃತ್ಯ– ಸಂಗೀತದ ಸಾಮಾಜೀಕರಣ, ಅವಿಭಜಿತ ಕುಟುಂಬ ಪ್ರೀತಿ, ದೇಶಭಕ್ತಿಯ ಬೀಜಮಂತ್ರ ಬಿತ್ತಿದ್ದು ವೃತ್ತಿರಂಗಭೂಮಿ. ಹೀಗೆ ಹತ್ತು ಹಲವು ಸದಾಶಯಗಳೊಂದಿಗೆ ಜನಪರ– ಜನಪ್ರಿಯ ರಂಗಸಂಸ್ಕೃತಿಯಾಗಿ ಭಾರತೀಯ ಮತ್ತು ಕನ್ನಡದ ಮನಸ್ಸುಗಳಲ್ಲಿ
ಜನಸಂಸ್ಕೃತಿಯಂತೆ ಅನೂಚಾನಗೊಂಡಿದೆ.

ಈ ಕಾಲಘಟ್ಟದಲ್ಲಿ ಮೊದಲಿನ ಶಾಸ್ತ್ರೀಯ ಶಿಸ್ತು ಹಾಗೂ ಕಲಾತ್ಮಕತೆಯು ರಂಗಪರಂಪರೆಯಿಂದ ಬಹುದೂರ ಸರಿದಿವೆ. ಸಮಕಾಲೀನ ನಾಟಕ ಕಂಪನಿಗಳಲ್ಲಿ ಸೃಜನಶೀಲ ವೃತ್ತಿರಂಗಪರಂಪರೆಯು ಪೂರ್ಣ ಕಣ್ಮರೆಯಾಗಿದೆ. ವ್ಯಾಪಾರಿ ಸ್ವರೂಪದ ಸಿನಿಮಾ ಹಾಗೂ ಕಿರುತೆರೆಯ ರಿಯಾಲಿಟಿ, ಕಾಮಿಡಿ ಷೋಗಳ ಸಿದ್ಧಮಾದರಿಗಳನ್ನು ವ್ಯಾಪಕವಾಗಿ ಅನುಕರಿಸಲಾಗುತ್ತಿದೆ. ವರ್ತಮಾನದ ಪ್ರತೀ ನಾಟಕ ಕಂಪನಿಯೂ ‘ಫುಲ್‌ಕಾಮಿಡಿ ನಾಟಕ’ ಎಂಬುದನ್ನೇ ಟ್ರಂಪ್‌ ಕಾರ್ಡನ್ನಾಗಿ ಮಾಡಿಕೊಂಡಿದ್ದು, ತನ್ನ ಷೋಕಾರ್ಡುಗಳಲ್ಲಿ ಹಾಗೆಯೇ ಪ್ರಚಾರ ಕೊಟ್ಟುಕೊಳ್ಳುತ್ತಿವೆ. ನಾಟಕಗಳ ಹೆಸರುಗಳಂತೂ ಕರ್ಣಕಠೋರ. ವೃತ್ತಿರಂಗಭೂಮಿಯ ಇಂತಹ ವಿಷಮ ವಾಸ್ತವಿಕ ಮಾಹಿತಿಗಳೆಲ್ಲವನ್ನೂ ಉದ್ದೇಶಿತ ಕೇಂದ್ರ ಪಡೆಯಲೇಬೇಕು. ಅವೆಲ್ಲವೂ ಅಧ್ಯಯನಶೀಲ, ಸಂಶೋಧನಾ ವಿಧಾನದ ಮೂಲಕ ಜರುಗುವಂತಾದರೆ ಅದರ ಮಹತ್ವ ಹೆಚ್ಚಾಗಬಲ್ಲದು. ಇದುವರೆಗಿನ ಬಹುಪಾಲು ಬರಹಗಳು, ಕಲಾವಿದರ ಜೀವನಚರಿತ್ರೆಗಳು ಹಾಗೂ ಕಂಪನಿಗಳ ಚರಿತ್ರೆಗಳು ವಿಶ್ಲೇಷಣಾತ್ಮಕ ನಿಕಷಕ್ಕೆ ಒಳಪಟ್ಟಿಲ್ಲ.

ಅಭಿನಯ, ರಂಗಸಂಗೀತ, ರಂಗಸಜ್ಜಿಕೆ, ಸಹೃದಯ ಪ್ರೇಕ್ಷಕ... ಹೀಗೆ ಹಲವು ಅಭಿಜಾತ ಪರಂಪರೆಗಳ ಅನನ್ಯತೆಗಳನ್ನು ಹೃದಯಸ್ಪರ್ಶಿಯಾಗಿಸಿಕೊಂಡ ಪ್ರಕಾರವಿದು. ಅದು ವೃತ್ತಿರಂಗಭೂಮಿಯ ಮನೋಧರ್ಮವೂ ಹೌದು. ಈ ಮನೋಧರ್ಮದ ಸಮಗ್ರ ಅಧ್ಯಯನ, ಅನುಸಂಧಾನ, ಸಂಶೋಧನೆ ಸೇರಿದಂತೆ ರಂಗಶಿಕ್ಷಣದ ಕೆಲಸಗಳನ್ನು ಕೇಂದ್ರವು ಕೈಗೆತ್ತಿಕೊಳ್ಳಬೇಕು. ಡಿಪ್ಲೊಮಾ ಕೋರ್ಸ್‌ಗಳನ್ನು ಒಳಗೊಂಡಂತೆ ವೃತ್ತಿನಿರತರಿಗೆ ಪುನಶ್ಚೇತನದ ಅಲ್ಪಾವಧಿಯ ಸರ್ಟಿಫಿಕೇಟ್ ಕೋರ್ಸ್‌ಗಳೂ ಇರಬೇಕು. ಈಗಿನ ಕಂಪನಿ ಕಲಾವಿದರಿಗೆ ಅಪರಿಚಿತವಾಗಿರುವ ವೃತ್ತ, ಕಂದ, ಸೀಸ ಪದ್ಯಗಳು ಮುನ್ನೆಲೆಗೆ ಬರುವಂತೆ ಆಗಬೇಕು.

ರೆಪರ್ಟರಿ, ರಂಗಶಿಕ್ಷಣ, ವಸ್ತುಸಂಗ್ರಹಾಲಯ, ಮೌಖಿಕ ಪರಂಪರೆಯ ಮಾದರಿಗಳನ್ನೊಳಗೊಂಡು, ಅವುಗಳನ್ನು ಮೀರಿಯೂ ವೃತ್ತಿರಂಗಭೂಮಿಯ ಸಮಗ್ರ ಬಹುಮುಖಿ ಸಂವೇದನೆಗಳೊಂದಿಗೆ ಉದ್ದೇಶಿತ ಕೇಂದ್ರವು ಅನುಸಂಧಾನಗೊಳ್ಳಲಿ. ಈಗ ಆಗಿರುವ ವಿಳಂಬವೇ ಹೆಚ್ಚಾಗಿದ್ದು, ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ಕೇಂದ್ರದ ಕಾರ್ಯಚಟುವಟಿಕೆಗಳಿಗೆ ನೂತನ ನಿರ್ದೇಶಕರು ಕೂಡಲೇ ನಾಂದಿ ಹಾಡಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು