ಮಂಗಳವಾರ, ಏಪ್ರಿಲ್ 7, 2020
19 °C
ಯಾವುದೇ ಭಾಷೆ ಸಮೃದ್ಧವಾಗಲು, ಹೊಸ ಜ್ಞಾನದ ಒಳಹರಿವು ನಿರಂತರವಾಗಿ ಆಗಬೇಕಾದುದು ಅಗತ್ಯ

ಸಂಗತ| ಮಾತೃಭಾಷೆ ಉಳಿಸಿಕೊಳ್ಳುವುದು ಹೇಗೆ?

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ನಮ್ಮ ದೇಶದಲ್ಲಿ ಹೆಚ್ಚೇನೂ ಪ್ರಚಲಿತದಲ್ಲಿ ಇಲ್ಲ. ಆದರೆ, ಈ ವರ್ಷ ಕೇಂದ್ರ ಸರ್ಕಾರ ಎಲ್ಲ ಶಾಲಾ–ಕಾಲೇಜುಗಳಲ್ಲಿ ಅದನ್ನು ಕಡ್ಡಾಯವಾಗಿ ಆಚರಿಸಿ ವರದಿ ಒಪ್ಪಿಸಬೇಕೆಂದು ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ, ಈ ದಿನಾಚರಣೆಯ ಪ್ರಸ್ತುತತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಒಂದಿಷ್ಟು ಚರ್ಚೆ ನಡೆಯಿತು.

ಮಾತೃಭಾಷಾ ದಿನಾಚರಣೆಯ ಇತಿಹಾಸ ಹೇಳುವ ಕಥೆಯೇನೆಂದರೆ, 1948ರಲ್ಲಿ ಬಾಂಗ್ಲಾದೇಶವು ಪಾಕಿಸ್ತಾನದ ಭಾಗವಾಗಿದ್ದ ಕಾಲದಲ್ಲಿ, ಬಂಗಾಳಿ ಮಾತೃಭಾಷೆಯಾಗಿದ್ದ ಬಾಂಗ್ಲಾದೇಶದ ಮೇಲೆ ಉರ್ದುವನ್ನು ಪಾಕಿಸ್ತಾನಿ ಸರ್ಕಾರ ಹೇರಿತು. ಈ ಕ್ರಮಕ್ಕೆ ಬಾಂಗ್ಲಾದೇಶದಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿ, 1952ರ ಫೆ. 21ರಂದು ಪೊಲೀಸರ ಗೋಲಿಬಾರಿಗೆ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದರು. ಅಂದಿನಿಂದ, ಬಾಂಗ್ಲಾದೇಶವು ಫೆ. 21 ಅನ್ನು ಮಾತೃಭಾಷಾ ದಿನವಾಗಿ ಆಚರಿಸುತ್ತಾ ಬಂದಿದೆ. ಮುಂದೆ ವಿಶ್ವಸಂಸ್ಥೆಯು ವಿಶ್ವದಾದ್ಯಂತ ಅಳಿವಿನ ಅಂಚಿನಲ್ಲಿರುವ ಭಾಷೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು, ಮಾತೃಭಾಷೆಗಳ ಬಳಕೆಯನ್ನು ಉತ್ತೇಜಿಸಲು, ಭಾಷಾ ವೈವಿಧ್ಯ ಪ್ರೋತ್ಸಾಹಿಸಲು, ಪ್ರಪಂಚದಾದ್ಯಂತ ವಿವಿಧ ಭಾಷೆ ಮತ್ತು ಸಂಸ್ಕೃತಿಗಳ ಅರಿವು ಮೂಡಿಸುವ ಸಲುವಾಗಿ ಫೆ. 21 ಅನ್ನು ಅಂತರರಾಷ್ಟ್ರೀಯ ಮಾತೃಭಾಷಾ ದಿನವಾಗಿ ಆಚರಿಸಲಾಗುವುದೆಂದು 1999ರಲ್ಲಿ ಘೋಷಿಸಿತು.

ಈ ಪ್ರಸ್ತುತತೆಯಲ್ಲಿ, ನಾವು ನಮ್ಮ ಮಾತೃಭಾಷೆ ಕನ್ನಡದ ಅನಂತತೆಗೆ ಏನು ಮಾಡಬೇಕೆಂದು ಪರಿಶೀಲಿಸಬೇಕಾದ ಅಗತ್ಯವಿದೆ. ಮೊದಲನೆಯದಾಗಿ, ಯಾವುದೇ ಭಾಷೆ ಸಮೃದ್ಧವಾಗಲು, ನಿರಂತರವಾಗಿ ಹೊಸ ಜ್ಞಾನದ ಒಳಹರಿವು ಅಗತ್ಯ. ಒಂದು ಸಮೃದ್ಧ
ವಾದ ಭಾಷೆಯು ಆ ಭಾಷೆ ಮಾತನಾಡುವವರನ್ನು ತನ್ನಲ್ಲಿರುವ ಜ್ಞಾನದ ಮೂಲಕ ಪ್ರಜ್ಞಾವಂತರನ್ನಾಗಿ ಮಾಡುತ್ತದೆ. ಇದು, ಭಾಷಾಂತರದ ಮೂಲಕ ಬೇರೆ ಭಾಷೆಗಳಲ್ಲಿರುವ ಜ್ಞಾನವನ್ನು ಮಾತೃಭಾಷೆಗೆ ಹರಿಯ
ಬಿಡುವುದರಿಂದ ಮಾತ್ರ ಸಾಧ್ಯ. ಕನ್ನಡದ ಮಟ್ಟಿಗೆ, ನಮ್ಮಲ್ಲಿ ಭಾಷಾಂತರ ಇನ್ನೂ ಬೆಳೆಯಬೇಕಾಗಿದೆ. ಇಲ್ಲವಾದರೆ, ಯಾವುದೇ ಭಾಷೆ ಸೊರಗುತ್ತದೆ.

ನಮ್ಮಲ್ಲಿ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯದಂತಹ ಜ್ಞಾನಶಿಸ್ತುಗಳ ಉತ್ತಮ ಪುಸ್ತಕಗಳು ಇನ್ನೂ ಲಭ್ಯವಿಲ್ಲ. ಜರ್ಮನಿ, ಫ್ರಾನ್ಸ್, ಜಪಾನ್, ಚೀನಾ ಮುಂತಾದ ರಾಷ್ಟ್ರಗಳಲ್ಲಿ ವಿಜ್ಞಾನವೂ ಒಳಗೊಂಡಂತೆ ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆಯುತ್ತಾರೆ. ವ್ಯತ್ಯಾಸವೆಂದರೆ, ಈ ರಾಷ್ಟ್ರಗಳಲ್ಲಿ ಪ್ರಪಂಚದ ಯಾವುದೇ ಮೂಲೆಯ ಜ್ಞಾನವು ಭಾಷಾಂತರದ ಮೂಲಕ ತ್ವರಿತವಾಗಿ ಹರಿದುಬರುತ್ತದೆ. ಆ ಭಾಷೆಗಳಲ್ಲಿ ಜ್ಞಾನದ ನವೀಕರಣ ಒಂದು ನಿರಂತರ ಪ್ರಕ್ರಿಯೆ. ಈ ನಿಟ್ಟಿನಲ್ಲಿ, ನಮ್ಮ ಕನ್ನಡ ಭಾಷೆ ಬಹಳ ದೂರ ಕ್ರಮಿಸಬೇಕಿದೆ.

ಎರಡನೆಯದಾಗಿ, ತುಕ್ಕು ಹಿಡಿದಿರುವ ಮಾತೃಭಾಷಾ ಶಿಕ್ಷಣ ಸಂಸ್ಥೆಗಳ ದುರಸ್ತಿಕಾರ್ಯ ಜರೂರಾಗಿ ಆಗಬೇಕಾಗಿದೆ. ನಾವು, ಮೂಲಭೂತ ಸೌಕರ್ಯವಿಲ್ಲದ ಕನ್ನಡ ಮಾಧ್ಯಮ ಶಾಲೆಗಳನ್ನು ಸುಸಜ್ಜಿತ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ವಿರುದ್ಧ ಸ್ಪರ್ಧೆಗೆ ಬಿಟ್ಟು, ಮಾತೃಭಾಷೆ ಶಿಕ್ಷಣ ವ್ಯವಸ್ಥಿತವಾಗಿ ಅವನತಿಗೆ ಒಳಗಾಗುವಂತೆ ನೋಡಿಕೊಳ್ಳುತ್ತಿದ್ದೇವೆ. ಸರ್ಕಾರಗಳು ಮಾತೃಭಾಷೆ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಉಚಿತ ಊಟ, ಪುಸ್ತಕ, ಸಮವಸ್ತ್ರ, ಸೈಕಲ್, ಲ್ಯಾಪ್‌ಟಾಪ್‌ಗಳನ್ನು ದಯಪಾಲಿಸಿ ತಾವೇನೋ ಮಹಾನ್ ಸಾಧನೆ ಮಾಡಿದಂತೆ ಭ್ರಮಿಸಬಹುದು. ಆದರೆ, ಕಾನೂನುಗಳನ್ನು ಮುರಿದು, ಸುಸಜ್ಜಿತ, ದುಬಾರಿ ಶುಲ್ಕದ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ತೆರೆದು ಮಕ್ಕಳನ್ನು, ಪೋಷಕರನ್ನು ಆಕರ್ಷಿಸುವವರೂ ಈ ಪ್ರಭಾವಿ ವ್ಯಕ್ತಿಗಳೇ. ಯಾಕೆಂದರೆ, ಹೆಚ್ಚಿನ ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ನಡೆಸುತ್ತಿರುವವರು ರಾಜಕಾರಣಿಗಳ, ಸರ್ಕಾರಿ ಅಧಿಕಾರಿಗಳ ಮತ್ತು ಉದ್ಯಮಿಗಳ ಕುಟುಂಬ ವರ್ಗದವರು.

ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲೊಂದು ಮಾದರಿ ಕನ್ನಡ ಶಾಲೆಯಿದೆ. ಅದು ಯಾವ ಇಂಗ್ಲಿಷ್‌ ಮಾಧ್ಯಮ ಶಾಲೆಗೂ ಕಡಿಮೆಯಿಲ್ಲ. ಹೀಗೆ ನಮ್ಮ ಕನ್ನಡ ಮಾಧ್ಯಮ ಶಾಲೆಗಳ ಗುಣಮಟ್ಟವನ್ನು ಸುಧಾರಿಸಿದರೆ, ನಮ್ಮ ಮಾತೃಭಾಷೆ ಮುಂದಿನ ಪೀಳಿಗೆಗಳಲ್ಲಿ ಉಳಿಯುತ್ತದೆ. ಈಗ, ಮಾತೃಭಾಷೆ ಶಿಕ್ಷಣ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಎನ್ನುವುದು ಬಡವರು ಮತ್ತು ಶ್ರೀಮಂತರೆಂಬ ಎರಡು ವರ್ಗಗಳ ಸಂಕೇತವಾಗಿದೆ. ಹಾಗಾಗಿ, ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಸೇರಿಸಬೇಕೆಂದು ಮಾತೃಭಾಷಾಪ್ರೇಮಿ ಹೆತ್ತವರೂ ಆಲೋಚಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಭ್ರಮೆಗಳಿಂದ ಬಿಡುಗಡೆ ಹೊಂದದ ಹೊರತು ಮಾತೃಭಾಷೆ ಶಿಕ್ಷಣಕ್ಕೆ ಉಳಿಗಾಲವಿಲ್ಲ.

ನಮ್ಮ ಕನ್ನಡ ಸಾಹಿತ್ಯ ಕೃತಿಗಳ ಬಗ್ಗೆ ಹೇಳುವುದಾದರೆ, ನಮ್ಮ ಹೆಚ್ಚಿನ ಶ್ರೇಷ್ಠ ಸಾಹಿತ್ಯಕೃತಿಗಳ ಪ್ರತಿಗಳೇ ಸಿಗುತ್ತಿಲ್ಲ. ನಮ್ಮ ಮಕ್ಕಳು ಸೊಗಸಾದ, ಮೌಲ್ಯಾಧಾರಿತ, ಉತ್ಕೃಷ್ಟ ಭಾಷಾ ಬಳಕೆಯ ಸಾಹಿತ್ಯವನ್ನು ಓದುವಂತೆ ಮಾಡಿ, ಕನ್ನಡ ಹೀಗೂ ರಸವತ್ತಾಗಿದೆ ಎನ್ನುವ ಹೆಮ್ಮೆ ಮೂಡಿಸುವ ಅಗತ್ಯವಿದೆ. ಇಂದಿನ ಪೀಳಿಗೆಗೆ ಪ್ರಸ್ತುತ ಸತ್ವಹೀನ ಕನ್ನಡವನ್ನು ನೋಡಿ, ಭಾಷೆ ಸಪ್ಪೆಯಾಗಿ ಕಾಣಿಸುವ ಅಪಾಯವಿದೆ. ಈ ನಿಟ್ಟಿನಲ್ಲಿ, ಶ್ರೇಷ್ಠ ಕನ್ನಡ ಗ್ರಂಥಗಳ ಮರುಮುದ್ರಣ ಮಾಡಿ, ನಮ್ಮ ಭಾಷೆಯ ಸೊಗಸನ್ನು ಇಂದಿನ ಪೀಳಿಗೆಗೆ ತಲುಪಿಸಬೇಕಾಗಿದೆ.

ಬರೀ, ನಾಮಕಾವಸ್ತೆ ಮಾತೃಭಾಷಾ ದಿನಾಚರಣೆ ಮಾಡಿ, ವರದಿಯೊಪ್ಪಿಸಿ ಕೈತೊಳೆದುಕೊಳ್ಳುವುದಕ್ಕಿಂತ, ಮಾತೃಭಾಷೆಯ ಉಳಿವಿಗೆ ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು