ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮಾನವ ಸಂಪನ್ಮೂಲ ಮತ್ತು ಸ್ತ್ರೀ ಸೌಖ್ಯ

ಸಮಾಜವು ಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರನ್ನು ಕಡೆಗಣಿಸಿದರೆ, ದೇಶದ ಒಟ್ಟಾರೆ ಪ್ರಗತಿ ಸಾಧ್ಯವೇ?
Last Updated 10 ಜುಲೈ 2020, 19:42 IST
ಅಕ್ಷರ ಗಾತ್ರ

ಎಲ್ಲ ಕಾಲಕ್ಕೂ ಜಗತ್ತಿನ ಅತ್ಯಂತ ಶಕ್ತಿಯುತ ಮತ್ತು ಸತ್ವಯುತ ಸಂಪನ್ಮೂಲವೆಂದರೆ ಮಾನವ ಸಂಪನ್ಮೂಲ. ಸದ್ಬಳಕೆಯಾದರಷ್ಟೇ ಅದಕ್ಕೆ ಸಾರ್ಥಕತೆ. ಗುಣಾತ್ಮಕ ಮತ್ತು ಪರಿಮಾಣಾತ್ಮಕ ಜನಸಂಖ್ಯೆಯು ಪ್ರದೇಶವೊಂದರ ಅಭಿವೃದ್ಧಿ, ಪರಿಸರ ರಕ್ಷಣೆ ಮತ್ತು ಭದ್ರತಾ ದೃಷ್ಟಿಯಲ್ಲಿ ಪೂರಕ ಅಂಶವಾಗಿ ನಿಲ್ಲಬಲ್ಲದು.

1987ರ ಜುಲೈ 11. ಜಾಗತಿಕ ಜನಸಂಖ್ಯೆ 500 ಕೋಟಿಯನ್ನು ದಾಟಿದ ದಿನವದು. ಅದೇ ನೆಪದಲ್ಲಿ, ಜಗತ್ತಿನಾದ್ಯಂತ ಅನಿಯಂತ್ರಿತವಾಗಿ ಏರುಗತಿಯಲ್ಲಿದ್ದ ಜನಸಂಖ್ಯೆಯ ಬಗೆಗೆ ಜನಜಾಗೃತಿ ಮೂಡಿಸಬೇಕಾದ ಅನಿವಾರ್ಯ ಮತ್ತು ತುರ್ತಿನೊಂದಿಗೆ ಶುರುವಾಗಿದ್ದೇ ‘ವಿಶ್ವ ಜನಸಂಖ್ಯಾ ದಿನಾಚರಣೆ’.

ಪ್ರತಿಬಾರಿಯೂ ಒಂದೊಂದು ಧ್ಯೇಯದೊಂದಿಗೆ ಜನಸಂಖ್ಯಾ ನಿಯಂತ್ರಣ ಮತ್ತು ಜನಕಲ್ಯಾಣದ ಆಶಯದೊಂದಿಗೆ ಎದುರುಗೊಳ್ಳುತ್ತದೆ ಜುಲೈ 11. ಈ ಬಾರಿ, ಸ್ತ್ರೀಯರ ಜನನಾಂಗದ ಶುಚಿತ್ವ ಮತ್ತು ಸ್ವಾಸ್ಥ್ಯದ ಕುರಿತು ಅರಿವು ಮೂಡಿಸುವ ಮಹತ್ವದ ಜವಾಬ್ದಾರಿಯನ್ನು ಹೊಂದಲಾಗಿದೆ. ‘ಒಂದು ದೇಶದ ಅಭ್ಯುದಯವು ಆ ದೇಶವು ಮಹಿಳೆಯರನ್ನು ಹೇಗೆ ನಡೆಸಿಕೊಂಡಿದೆ ಅನ್ನುವ ಅಂಶದ ಮೇಲೆ ನಿರ್ಧರಿತವಾಗುತ್ತದೆ...’ ಎಂದ ಅಂಬೇಡ್ಕರ್‌ ಅವರ ಮಾರ್ಮಿಕವಾದ ಮಾತನ್ನು ವರ್ತಮಾನದ ಬೆಳಕಿನಲ್ಲಿ ಅವಲೋಕಿಸಬೇಕಾದ ಹೊತ್ತಿದು.

ಮಾನವ ಸಂಘಜೀವಿ. ಹಾಗಿದ್ದೂ ಸಂಸಾರದಲ್ಲಿ ವಿವಿಧ ಬಗೆಯಲ್ಲಿ ಅವತರಿಸುವ ಅಪತ್ಬಾಂಧವಳಾದ ಹೆಣ್ಣಿನ ಬಗೆಗೆ ಅಸಡ್ಡೆ ಮುಗಿದಿಲ್ಲ. ಎರಡನೇ ದರ್ಜೆಯ ಪ್ರಜೆಯಾಗಿ ಬದುಕುತ್ತಿರುವ ಹಲವರ ಪಾಲಿಗೆ ಮೊನ್ನಿನ ಲಾಕ್‍ಡೌನ್ ಕಾಲವು ‘ಮನೆಯೇ ನರಕಾಲಯ’ಗಳಂತೆನಿಸಿದ ಉದಾಹರಣೆಗಳೂ ವರದಿಯಾಗಿವೆ. ಹೆಣ್ಣೆಂದರೆ ಪ್ರೀತಿ, ಮಮತೆ, ಸಹನೆ, ಕರುಣೆ, ಕಾಮನೆಗಳ ಪ್ರತಿರೂಪವಷ್ಟೇ ಎಂದು ಭಾವಿಸುವ ಪುರುಷ ಜಗತ್ತು ಅವಳ ಧ್ವನಿಯನ್ನು ತಣ್ಣಗೆ ನಿರಾಕರಿಸಿ ಮುನ್ನಡೆಯುತ್ತದೆ. ಹೊರಗಡೆ ದುಡಿಯುವ ಮಹಿಳೆಯದ್ದು ಹಗ್ಗದ ಮೇಲಿನ ನಡಿಗೆ. ಸ್ವಂತದ ಆರೋಗ್ಯ, ಆರೈಕೆಗಳನ್ನೇ ಕಡೆಗಣಿಸುತ್ತಿರುವ ಕಾರಣಕ್ಕೆ ಆಕೆಯ ಆರೋಗ್ಯ ಕಾಳಜಿ ಮತ್ತು ವೈಯಕ್ತಿಕ ಸ್ವಚ್ಛತೆಗಳು ಹದಗೆಡುತ್ತಿವೆ. ‘ಬಯಲು ಶೌಚಮುಕ್ತ ಗ್ರಾಮ’ಗಳೆಂದು ಘೋಷಿಸಿಕೊಂಡ ಅದೆಷ್ಟೋ ಹಳ್ಳಿಗಳಲ್ಲಿನ ಹೆಂಗಳೆಯರು ಈಗಲೂ ಹೊತ್ತು ಮೂಡುವ ಮೊದಲೇ ಎದ್ದು ಬಹಿರ್ದೆಸೆಗಾಗಿ ಬಯಲಿಗೆ ಹೋಗಿ ಬರುತ್ತಿರುವುದು ನಿಂತಿಲ್ಲ! ಇನ್ನು ಜನನಾಂಗದ ಆರೋಗ್ಯಕ್ಕೆಲ್ಲಿಯ ಆದ್ಯತೆ?

ಅವಳ ಬೇಕು-ಬೇಡಗಳ ನಡುವೆ ಅವಳಷ್ಟೇ ಅನುಭವಿಸಬಲ್ಲ ಯಾತನೆಯನ್ನು ಸಂವೇದನೆಯಿಂದ ಗ್ರಹಿಸಿ, ಆಕೆ ಬದುಕನ್ನು ಸಹ್ಯಗೊಳಿಸಿಕೊಳ್ಳುವಲ್ಲಿ ಮನೆ ಮತ್ತು ಮನೆಯಾಚೆಯ ಅವಳ ಪರಿಸರ ಸಹಕರಿಸಬೇಕಿದೆ. ಪರಸ್ಪರ ನಂಬುಗೆ, ಸಂಯಮದ ತಳಹದಿಯ ಮೇಲೆ ಜೀವನ ಸಾಗಿಸಬೇಕಾದದ್ದು ಎಲ್ಲರ ಜವಾಬ್ದಾರಿ.

ಭೌಗೋಳಿಕವಾಗಿ ನಮಗಿಂತ ದೊಡ್ಡ ದೇಶವಾಗಿರುವ ಚೀನಾವನ್ನು 2027ರ ಹೊತ್ತಿಗೆ ನಾವು ಜನಸಂಖ್ಯೆಯಲ್ಲಿ ಹಿಂದಿಕ್ಕಿ ನಂಬರ್‌ ಒನ್ ಪಟ್ಟಕ್ಕೇರುವ ಅಂದಾಜಿದೆ. ನಮ್ಮ ಪ್ರಸ್ತುತ ಜನಸಂಖ್ಯಾ ದರ 1.2 ಇದ್ದು, ಪ್ರತಿವರ್ಷ ದೇಶಕ್ಕೆ 2 ಕೋಟಿ ಹೊಸ ಜನರ ಸೇರ್ಪಡೆಯಾಗುತ್ತಿದೆ. ಅದರರ್ಥ, ಭಾರತ ಪ್ರತಿವರ್ಷವೂ ಸರಿಸುಮಾರು ಒಂದೊಂದು ಆಸ್ಟ್ರೇಲಿಯಾವನ್ನು ಸೃಷ್ಟಿಸುತ್ತಿದೆ, ಜನಸಂಖ್ಯೆಯಲ್ಲಿ!

ಈಗ ಕೊರೊನಾದ ಆರ್ಭಟದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಡವರು ಕಡುಬಡವರಾಗಿ, ಮಧ್ಯಮ ವರ್ಗದವರು ಬಡವರಾಗಿ ಪರಿವರ್ತನೆಗೊಳ್ಳುತ್ತಿರುವ ಸಂದರ್ಭವಿದು. ದಿನದಿನವೂ ವಿಸ್ತೀರ್ಣದಲ್ಲಿ ಕುಗ್ಗುತ್ತಿರುವ ಕೃಷಿಭೂಮಿಯಲ್ಲಿಯೇ ಏರುಗತಿಯ ಜನಸಂಖ್ಯೆಗೆ ಅನ್ನ ನೀಡಬೇಕಾದ ಅನಿವಾರ್ಯದಲ್ಲಿ, 60ರ ದಶಕದಲ್ಲಿ ಆದಂತೆ ಮತ್ತೊಂದು ಹಸಿರುಕ್ರಾಂತಿಯ ನಿರೀಕ್ಷೆಯಲ್ಲಿದೆ ಬಡ ಭಾರತ. ಜೊತೆಗೆ, ನಮ್ಮದು ‘ಯುವಭಾರತ’. ಸುಮಾರು ಅರ್ಧದಷ್ಟು ಜನರೀಗ 25 ವಯಸ್ಸಿಗಿಂತ ಕಡಿಮೆಯವರು. ಯುವಜನರ ಒತ್ತಡದ ಬದುಕು, ಅದಕ್ಕನುಗುಣವಾಗಿ ಮೇಲೇಳುವ ನಿರೀಕ್ಷೆ-ಬೇಡಿಕೆಗೆ ಪೂರಕವಾಗಿ ಸಂಪನ್ಮೂಲಗಳನ್ನು ಒದಗಿಸುವುದು ಮತ್ತು ಉದ್ಯೋಗ ಸೃಷ್ಟಿಸಬೇಕಾದ ಸವಾಲು ಕೂಡ ದೇಶದ ಮುಂದಿದೆ.

ನಮ್ಮದು ಜಗತ್ತಿನಲ್ಲೇ ವೇಗವಾಗಿ ಪ್ರಗತಿ ಹೊಂದುತ್ತಿರುವ ದೇಶವೆಂದು ಭಾವಿಸುತ್ತಿರುವ ಹೊತ್ತಿನಲ್ಲಿ ಆಹಾರ ಭದ್ರತೆ, ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ, ಪ್ರಜಾಪ್ರಭುತ್ವದ ಆಶಯಗಳ ಪಾಲನೆ ಮತ್ತು ಪರಿಸರ ಸಂರಕ್ಷಣೆಯ ಸೂಚ್ಯಂಕಗಳು ಕೆಳಮುಖವಾಗಿ ಸಾಗುತ್ತಿರುವ ಬಗ್ಗೆ ವಿಶ್ವ ಸಂಘಟನೆಗಳು ನೀಡಿದ ಎಚ್ಚರಿಕೆಯು ವಿಷಾದ ಹುಟ್ಟಿಸುತ್ತದೆ. ವಿಶ್ವಸಂಸ್ಥೆಯ ವರದಿಯಲ್ಲಿಯೂ ದಾಖಲಾಗಿರುವಂತೆ, ಸ್ತ್ರೀಶೋಷಣೆಯ ಏರಿಕೆಯು ತುದಿಯನ್ನು ತಲುಪಿದೆ. ಹಾಗಾಗಿ, ಮಾನವೀಯ ನೆಲೆಗಳು ಬಲಗೊಳ್ಳಬೇಕಿದೆ. ಅಸಮಾನತೆ ತೊಲಗಬೇಕಿದೆ.

ಮುಂದಾದರೂ ಮನೆಯ ಒಳಹೊರಗೆ ಹೆಣ್ಣುಜೀವವಿನ್ನು ಅಸಮಾನತೆ, ಅಸಹನೆ, ಅಪನಂಬಿಕೆ, ಲಿಂಗತಾರತಮ್ಯ, ದೌರ್ಜನ್ಯ, ಅತ್ಯಾಚಾರದಲ್ಲಿ ನಲುಗದಿರಲಿ. ಗಂಡು–ಹೆಣ್ಣು ಇಬ್ಬರೂ ಬಾಳ್ವೆಯೆಂಬ ಅನಂತ ದಿಗಂತಯಾನದಲ್ಲಿ ಹಕ್ಕಿಗಿರುವ ಎರಡು ರೆಕ್ಕೆಗಳ ಹಾಗಿರಲಿ. ಹಾಗಾದಾಗ ಮೇಲು–ಕೀಳಿಗೆ ಆಸ್ಪದವೆಲ್ಲಿ? ಅಲ್ಲಮನ ಆಶಯದಂತೆ, ಸಮತೆ ಮತ್ತು ಮಮತೆಯೇ ಜೀವದ್ರವ್ಯವಾಗಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT