ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪ್ರಶ್ನಿಸುವುದ ಬಿಡಲೊಲ್ಲೆ, ಏಕೆಂದು ಕೇಳಿ

ವೈಜ್ಞಾನಿಕ ಮನೋವೃತ್ತಿಯು ಆಯ್ಕೆಯಲ್ಲ, ಅನಿವಾರ್ಯ
Last Updated 19 ಆಗಸ್ಟ್ 2020, 21:18 IST
ಅಕ್ಷರ ಗಾತ್ರ

ಸರ್ ಸಿ.ವಿ.ರಾಮನ್‍ ಅವರು ರಾಮನ್ ಇಫೆಕ್ಟ್‌ ಸಂಶೋಧನೆಯನ್ನು 1928ರಲ್ಲಿ ಪೂರ್ಣಗೊಳಿಸಿದ ದಿನದ ನೆನಪಿನಲ್ಲಿ, ಭಾರತದಲ್ಲಿ ಪ್ರತಿವರ್ಷ ಫೆ. 28ರಂದು ‘ರಾಷ್ಟ್ರೀಯ ವಿಜ್ಞಾನ ದಿನ’ವನ್ನು ಆಚರಿಸಲಾಗುತ್ತದೆ. ಇದಕ್ಕಿಂತ ಭಿನ್ನವಾಗಿ, 2018ರಿಂದ ದೇಶದಲ್ಲಿ ಆ. 20ರಂದು ‘ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನ’ವನ್ನು ಆಚರಿಸಲಾಗುತ್ತಿದೆ.

ವಿಜ್ಞಾನಕ್ಕೂ ವೈಜ್ಞಾನಿಕ ಮನೋವೃತ್ತಿಗೂ ಇರುವ ಮೂಲಭೂತ ವ್ಯತ್ಯಾಸವನ್ನು ಇದು ಗುರುತಿಸುತ್ತದೆ. ಇದು, ಮಹಾರಾಷ್ಟ್ರದ ಅಂಧಶ್ರದ್ಧಾ ನಿರ್ಮೂಲನ್ ಸಮಿತಿ ಮತ್ತು ಆಲ್ ಇಂಡಿಯಾ ಪೀಪಲ್ಸ್ ಸೈನ್ಸ್‌ ನೆಟ್‍ವರ್ಕ್ ಸಂಘಟನೆಗಳು ಹುಟ್ಟುಹಾಕಿರುವ ಸಾರ್ಥಕ ಪರಿಕಲ್ಪನೆ.

ಈ ದಿನದ ಮಹತ್ವವೆಂದರೆ, ಅದು ಮೌಢ್ಯನಿರ್ಮೂಲನೆಗಾಗಿ ಅವಿರತವಾಗಿ ಹೋರಾಡಿದ ವಿಚಾರವಾದಿ ಡಾ. ನರೇಂದ್ರ ದಾಭೋಲ್ಕರ್ ಅವರು ಮೂಲಭೂತವಾದಿಗಳಿಂದ ಹತ್ಯೆಯಾದ ದಿನ.

ಭಾರತ ಸಂವಿಧಾನವು ‘ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವ ಬೆಳೆಸುವುದನ್ನು’ ಪ್ರತಿಯೊಬ್ಬ ಭಾರತೀಯರ ಮೂಲಭೂತ ಕರ್ತವ್ಯ ಎಂದು ಹೇಳಿದೆ. ಸಾಕ್ಷರತೆ, ಶಿಕ್ಷಣದ ಮಟ್ಟ, ವಿಜ್ಞಾನ– ತಂತ್ರಜ್ಞಾನದ ಬೆಳವಣಿಗೆ ಹೆಚ್ಚಾದ ಹಾಗೆ, ಜೀವವಿರೋಧಿ, ಮಾನವವಿರೋಧಿ ಮೂಢನಂಬಿಕೆ ಮತ್ತು ಆಚರಣೆಗಳು ಕ್ರಮೇಣ ಕಡಿಮೆಯಾಗುವ ಬದಲು, ಮೌಢ್ಯ ಪ್ರಚಾರಕರು ಅತ್ಯಾಧುನಿಕ ತಂತ್ರಜ್ಞಾನವನ್ನೂ ಮಣಿಸಿ ಇನ್ನಷ್ಟು ಪರಿಣಾಮಕಾರಿಯಾಗಿ ಜನರ ಭಾವನೆಗಳನ್ನು ಶೋಷಿಸುತ್ತಿದ್ದಾರೆ.

ಕೋವಿಡ್–19 ಸಾಂಕ್ರಾಮಿಕವು ನಮ್ಮ ದೇಶವನ್ನೂ ಆಕ್ರಮಿಸಿಕೊಂಡಾಗ, ಪ್ರಧಾನಿ ನರೇಂದ್ರ ಮೋದಿಯವರು, ಸಾಂಕ್ರಾಮಿಕದ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವವರ ಕರ್ತವ್ಯಪರತೆಯನ್ನು ಪ್ರಶಂಸಿಸಲು ‘ನಿಮ್ಮ ಮನೆಯಲ್ಲೇ ನಿಂತು ಚಪ್ಪಾಳೆ ತಟ್ಟಿ’, ‘ದೀಪ ಹಚ್ಚಿ’ ಎಂದರೆ, ನಮ್ಮ ಜನ ಅದನ್ನೇ ಅತಿರೇಕ ಮಾಡಿ ಬೀದಿಗಿಳಿದು ಸಂಭ್ರಮಿಸಿದ್ದು ಪ್ರಧಾನಿಯವರ ಪ್ರಾಮಾಣಿಕ ಉದ್ದೇಶವನ್ನೇ ಹಾಳು ಮಾಡಿತ್ತು. ಕೊರೊನಾ ಎಂದರೆ ಸದ್ದಿಗೆ ಓಡಿಹೋಗುವ ಇಲಿ, ಹೆಗ್ಗಣವೇನೋ ಎನ್ನುವ ರೀತಿಯಲ್ಲಿ ಸಿಕ್ಕಿದ್ದನ್ನು ಬಾರಿಸುತ್ತಾ, ‘ಗೋ ಕೊರೊನಾ, ಗೋ’ ಎಂದು ಭಾವೋದ್ವೇಗದಿಂದ ಕೂಗಾಡಿದ್ದನ್ನು ನೋಡಿದಾಗ, ಶಿಕ್ಷಿತ, ನಗರವಾಸಿಗಳಲ್ಲೇ ಎಷ್ಟೊಂದು ಮೌಢ್ಯವಿದೆ ಎನ್ನುವುದು ಗೊತ್ತಾಗುತ್ತದೆ.

2019ರ ನವೆಂಬರ್‌ನಲ್ಲಿ ಕೋಲ್ಕತ್ತದಲ್ಲಿ ಇಂಡಿಯಾ ಇಂಟರ್‌ನ್ಯಾಷನಲ್ ಸೈನ್ಸ್ ಫೆಸ್ಟಿವಲ್‍ ಅನ್ನು ಪ್ರಧಾನಿ ಉದ್ಘಾಟಿಸುತ್ತಾ, ‘ದೇಶದ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಜನರಲ್ಲಿ ವೈಜ್ಞಾನಿಕ ಮನೋವೃತ್ತಿ ಬೆಳೆಸುವುದು ಅತ್ಯಗತ್ಯ. ವೈಜ್ಞಾನಿಕ ಮನೋವೃತ್ತಿಯು ಅಂಧಶ್ರದ್ಧೆಯನ್ನು ಕಡಿಮೆ ಮಾಡಿ ವೈಚಾರಿಕ ಮನೋವೃತ್ತಿಯನ್ನು ಉತ್ತೇಜಿಸುತ್ತದೆ’ ಎಂದರು. ಅವರೇ 2014ರ ಅಕ್ಟೋಬರ್‌ನಲ್ಲಿ ಮುಂಬೈನ ಕಾರ್ಯಕ್ರಮವೊಂದರಲ್ಲಿ ಗಣೇಶನ ಉದಾಹರಣೆ ಕೊಟ್ಟು, ಪ್ಲಾಸ್ಟಿಕ್ ಸರ್ಜರಿ ಪ್ರಾಚೀನ ಕಾಲದಲ್ಲಿಯೇ ಜಾರಿಯಲ್ಲಿತ್ತು ಎಂದಿದ್ದರು. ಇದನ್ನು ಅನುಸರಿಸಿ ವಿಶ್ವವಿದ್ಯಾಲಯಗಳ ಕುಲಪತಿಗಳು, ನಿವೃತ್ತ ನ್ಯಾಯಾಧೀಶರಂಥ ವಿದ್ವಾಂಸರೂ ಜೆನೆಟಿಕ್ ಎಂಜಿನಿಯರಿಂಗ್, ಸ್ಟೆಮ್ ಸೆಲ್ ತಂತ್ರಜ್ಞಾನ, ವಿಮಾನ ತಂತ್ರಜ್ಞಾನ, ಇಂಟರ್‌ನೆಟ್ ಎಲ್ಲವೂ ಆಗಲೇ ಇದ್ದವು ಎಂದು ಹೇಳಿಕೆಗಳನ್ನು ನೀಡತೊಡಗಿದರು. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಂತೂ ಈ ಹೊಣೆಗೇಡಿ ಅವೈಜ್ಞಾನಿಕತೆ ತಾರಕಕ್ಕೆ ಹೋಗಿದೆ.

ಸ್ವತಂತ್ರ ಭಾರತದಲ್ಲಿ 1958ರಲ್ಲಿಯೇ ರಾಷ್ಟ್ರೀಯ ವಿಜ್ಞಾನ– ತಂತ್ರಜ್ಞಾನ ನೀತಿಯನ್ನು ಜಾರಿಗೆ ತರಲಾಗಿದೆ. 1983, 2003 ಮತ್ತು 2013ರಲ್ಲಿ ಅದನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗಿದೆ. ವಿಶಿಷ್ಟವಾಗಿ ವಿಜ್ಞಾನ– ತಂತ್ರಜ್ಞಾನದ ಸಂವಹನಕ್ಕಾಗಿ 1971ರಲ್ಲಿಎನ್.ಸಿ.ಎಸ್.ಟಿ.ಸಿ. (National Council for Science and Technology Communication) ಎಂಬ ಬೃಹತ್ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇವೆಲ್ಲವೂ ವಿಜ್ಞಾನ, ತಂತ್ರಜ್ಞಾನದ ಪ್ರಸಾರಕ್ಕೆ ಒತ್ತು ಕೊಡುತ್ತವೆಯೇ ವಿನಾ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವುದರತ್ತ ಅಗತ್ಯವಾದಷ್ಟು ಗಮನ ಹರಿಸುವುದಿಲ್ಲ. ವೈಜ್ಞಾನಿಕ ಮನೋವೃತ್ತಿಯ ಹೊರತು ವಿಜ್ಞಾನ– ತಂತ್ರಜ್ಞಾನದ ಬೆಳವಣಿಗೆ ನಿರರ್ಥಕ, ಕೆಲವೊಮ್ಮೆ ಮಾರಕ ಎಂಬ ಪ್ರಜ್ಞೆ ಈ ನೀತಿಗಳಲ್ಲಿ ಇಲ್ಲ.

ಇದೀಗ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯೂ ‘ವಿಜ್ಞಾನ, ತಂತ್ರಜ್ಞಾನ ಸಂವಹನ ನೀತಿ– ಕರ್ನಾಟಕ’ವನ್ನು ರೂಪಿಸಲು ಹೊರಟಿದೆ. 2017ರಲ್ಲಿ ರಾಜ್ಯ ಸರ್ಕಾರವು ‘ಕರ್ನಾಟಕ ಅಮಾನವೀಯ, ದುಷ್ಟ ಮತ್ತು ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನ ಕಾಯ್ದೆ– 2017 ಅನ್ನು ಅಂಗೀಕರಿಸಿತ್ತು. ಆದರೆ ಅದು ಜಾರಿಗೆ ಬಂದಿರಲಿಲ್ಲ. ಈಗಿನ ಸರ್ಕಾರ, ಇದೇ ವರ್ಷದ ಜನವರಿಯಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಿ, ಮೇ ತಿಂಗಳಲ್ಲಿ ನಿಯಮಾವಳಿಯನ್ನೂ ಪ್ರಕಟಿಸಿದೆ. ವಿಪರ್ಯಾಸವೆಂದರೆ, ಇದರಲ್ಲಿ ‘ಮೂಢನಂಬಿಕೆ’ ಎಂಬ ಪದವನ್ನು ಕೈಬಿಡಲಾಗಿದೆ. ಈ ಕಾಯ್ದೆಯಲ್ಲಿ ನಿಷೇಧಿತವಾಗಿರುವ ‘ಅಮಾನವೀಯ, ದುಷ್ಟ ಪದ್ಧತಿ ಮತ್ತು ಮಾಟಮಂತ್ರ’ಕ್ಕೆ ಬಲಿಯಾಗುವವರಲ್ಲಿ ಮುಖ್ಯವಾಗಿ ಇರುವುದು ವೈಜ್ಞಾನಿಕ ಮನೋವೃತ್ತಿಯ ಕೊರತೆ ಎಂಬುದನ್ನು ನಾವು ಗುರುತಿಸದಿದ್ದರೆ ಈ ಕಾನೂನೂ ನಿರರ್ಥಕವಾಗುತ್ತದೆ.

‘ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳಬೇಡ’ ಎಂದುಡಾ. ಎಚ್.ನರಸಿಂಹಯ್ಯ ಹೇಳುತ್ತಿದ್ದರು. ‘ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನ’ದ ಲಾಂಛನವೇ ‘ಏಕೆಂದು ಕೇಳಿ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT