ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕಷ್ಟಕಾಲದ ಕಾನೂನು ಭಂಜಕರು

ಸೋಂಕು ಹರಡದಂತೆ ತಡೆಯಲು ರೂಪಿಸಿರುವ ನಿಯಮಗಳು ಸಮರ್ಪಕವಾಗಿ ಜಾರಿಯಾಗದಿದ್ದರೆ, ಅವುಗಳನ್ನು ರೂಪಿಸುವುದಾದರೂ ಏಕೆ?
Last Updated 6 ಜುಲೈ 2020, 1:20 IST
ಅಕ್ಷರ ಗಾತ್ರ

ಬಿಹಾರದ ಪಟ್ನಾ ಜಿಲ್ಲೆಯಲ್ಲಿ ಮದುಮಗನೊಬ್ಬ ಮದುವೆಯಾದ ಎರಡನೆಯ ದಿನವೇ ಕೋವಿಡ್‌ ನಿಂದ ಮೃತಪಟ್ಟಿದ್ದಾನೆ. ಮದುವೆಯ ಸಂದರ್ಭದಲ್ಲೇ ಆರೋಗ್ಯ ಸಮಸ್ಯೆ ಇದ್ದರೂ ಈ ಎಂಜಿನಿಯರ್‌ ಯುವಕ, ಕುಟುಂಬದವರ ಒತ್ತಡಕ್ಕೆ ಮಣಿದು ಮದುವೆ ಕಾರ್ಯ ಪೂರೈಸಿದ್ದ. ಮದುವೆಗೆ ಬಂದಿದ್ದ ನಾನೂರಕ್ಕೂ ಹೆಚ್ಚು ಜನರನ್ನು ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆಗೆ ಒಳಪಡಿಸಲಾಯಿತು. ಇವರ ಪೈಕಿ 86 ಜನರಿಗೆ ಸೋಂಕು ದೃಢಪಟ್ಟಿದೆ. ಮೇ ತಿಂಗಳಲ್ಲಿ ಹೈದರಾಬಾದ್‍ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭವೊಂದರಲ್ಲೂ ಇದೇ ರೀತಿ 15 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

ಇವು, ಎರಡು ಸಂಗತಿಗಳನ್ನು ಸ್ಪಷ್ಟಪಡಿಸುತ್ತವೆ. ಮೊದಲನೆಯದು, ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಮದುವೆ ಮತ್ತಿತರ ಸಮಾರಂಭಗಳಲ್ಲಿ 50ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ನಿಯಮ ರೂಪಿಸಲಾಗಿದ್ದರೂ ಅದು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ? ಸೋಂಕು ಹರಡುವ ಸಂಭವ ಇಂತಹ ಸಂದರ್ಭಗಳಲ್ಲಿ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಆಡಳಿತ ವ್ಯವಸ್ಥೆ ಮತ್ತುಕೋವಿಡ್‌– 19 ಪಡೆಗಳು ಈ ನಿಯಮ ಉಲ್ಲಂಘಿಸುವವರನ್ನು ಎಷ್ಟು ರಾಜ್ಯಗಳಲ್ಲಿ ಪತ್ತೆ ಹಚ್ಚಿವೆ?

ಕೇಂದ್ರ ಸರ್ಕಾರದ ಆದೇಶದಂತೆ, ಈ ಸಮಾರಂಭ ಗಳಿಗೆ 65 ವರ್ಷ ಮೇಲ್ಪಟ್ಟವರು, 10 ವರ್ಷದೊಳಗಿನ ಮಕ್ಕಳು, ಹೃದ್ರೋಗಿಗಳು, ಮಧುಮೇಹಿಗಳು ಮತ್ತು ಗಂಭೀರ ಕಾಯಿಲೆ ಇರುವವರು ಬರುವಂತಿಲ್ಲ. ಹಾಜರಿರುವ ಎಲ್ಲರ ಹೆಸರು, ವಿಳಾಸ, ಪ್ರಯಾಣದ ವಿವರ, ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ಮೇಲಿನ ಘಟನೆಗಳಲ್ಲಿ ಈ ನಿಯಮ ಉಲ್ಲಂಘನೆಯಾಗಿರುವುದು ಸ್ಪಷ್ಟ.

ನಮ್ಮ ಕಣ್ಣೆದುರಿಗೇ ಇಂತಹ ಮದುವೆ, ನಿಶ್ಚಿತಾರ್ಥ ಗಳು ನಡೆಯುತ್ತಿವೆ. ಜಿಲ್ಲಾಧಿಕಾರಿ ಕಚೇರಿಗೆ ದೂರ ವಾಣಿ ಮೂಲಕ ದೂರು ನೀಡಿದರೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಹೇಳಲಾಗುತ್ತದೆ. ಆದರೆ ಎಷ್ಟು ಸಮಾರಂಭಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯೇ ಲಭ್ಯವಿಲ್ಲ.

ನಿಯಮ ಪಾಲನೆ ಪ್ರಮುಖವಾಗಿ ಜನರ ಹೊಣೆ, ಕೊರೊನಾದಿಂದ ಪಾರಾಗುವುದೂ ಜನರ ಜವಾಬ್ದಾರಿ. ಯಾವುದೇ ರೀತಿಯ ಕಾನೂನು ಭಂಜಕ ರಲ್ಲಿ ಸುಶಿಕ್ಷಿತರೇ ಹೆಚ್ಚಾಗಿರುತ್ತಾರೆ. ತಮ್ಮ ಮನೆಯ ಸಮಾರಂಭ ನಡೆಸಲೇಬೇಕೆಂದರೆ ಪೊಲೀಸ್ ಅಧಿ ಕಾರಿಯ ಶಿಫಾರಸು ಬಳಸಲಾಗುತ್ತದೆ. ಇಲ್ಲವಾದರೆ ಜಿಲ್ಲಾಧಿಕಾರಿ ಅಥವಾ ಸ್ಥಳೀಯ ಶಾಸಕರು, ನಂತರ ಸಂಸದರು, ಉಸ್ತುವಾರಿ ಸಚಿವರು ಕೊನೆಗೆ ಮುಖ್ಯಮಂತ್ರಿಯವರೆಗೂ ಹೋಗುತ್ತಾರೆ. ಹೇಗಾದರೂ ಅನುಮತಿ ಪಡೆದು, ಬಳಿಕ ನಿಯಮ ಉಲ್ಲಂಘಿಸುವ ಅನಿಷ್ಟವು ಕೋವಿಡ್‌ ಸಂದರ್ಭದಲ್ಲಾದರೂ ಕೊನೆಗೊಳ್ಳಬೇಕಿತ್ತು.

ಒಂದು ಛತ್ರದಲ್ಲಿ ಸಮಾರಂಭ ನಡೆಯುತ್ತಿದ್ದರೆ ಹೊರಗೆ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್‌ ಇರಬೇಕಿತ್ತಲ್ಲವೇ? ಆದರೆ ಇಂತಹ ನಿಯೋಜನೆ ಎಲ್ಲಿಯೂ ಕಾಣುತ್ತಿಲ್ಲ. ‘ರೀ ನಾವು ನೂರೇ ಜನ ಇದ್ದೇವೆ. ಅಲ್ಹೋಗಿ ನೋಡಿ ಮುನ್ನೂರು ಜನ ಇದ್ದಾರೆ’ ಎಂದು ರಾಜಕಾರಣಿಗಳು ಮತ್ತೊಬ್ಬರತ್ತ ಬೆಟ್ಟು ಮಾಡುತ್ತಾರೆ.

ಒಂದು ದುರ್ಘಟನೆ ನಡೆದ ನಂತರ ಎಲ್ಲರಲ್ಲೂ ಜಾಗೃತಿ ಮೂಡುತ್ತದೆ. ಆದರೆ ಅದನ್ನು ತಮಗೆ ಅನ್ವಯಿಸಿಕೊಳ್ಳಬೇಕು ಎನ್ನುವ ವಿವೇಕ, ವ್ಯವಧಾನ, ವಿವೇಚನೆ ಸುಶಿಕ್ಷಿತ ಮಧ್ಯಮ ವರ್ಗದಲ್ಲಿ ಇರುವುದು ಕಡಿಮೆ. ಇದಕ್ಕೆ ಅಪವಾದ ಎನ್ನುವಂತೆ ನೂರಾರು ಮದುವೆಗಳು ನಿಯಮಾನುಸಾರ ನಡೆದಿರುವುದನ್ನೂ ಕಂಡಿದ್ದೇವೆ. ಆದರೆ ಅಂತಹ ನಿದರ್ಶನಗಳು ಆದರ್ಶಪ್ರಾಯವಾಗುವುದಕ್ಕಿಂತಲೂ ಅಪಹಾಸ್ಯಕ್ಕೀಡಾಗುವುದೇ ಹೆಚ್ಚು. ಇಂತಹ ವ್ಯಕ್ತಿಪ್ರತಿಷ್ಠೆಯೇ ಪಟ್ನಾ ಮತ್ತು ಹೈದರಾಬಾದ್ ದುರಂತಗಳಿಗೆ ಕಾರಣವಾಗುತ್ತದೆ.

ಹಣಬಲ, ಶಿಫಾರಸು ಮತ್ತು ರಾಜಕೀಯ ಪ್ರಾಬಲ್ಯ ದಿಂದ, ತಾವು ಕಾನೂನು ಉಲ್ಲಂಘಿಸಿದರೆ ಏನೂ ಆಗು ವುದಿಲ್ಲ ಎಂಬ ಅಹಮಿಕೆಯಿಂದ ಬೀಗುವ ಸುಶಿಕ್ಷಿತರು ಇದನ್ನೆಲ್ಲ ಅರ್ಥಮಾಡಿಕೊಳ್ಳಬೇಕು. ‘ಏಕೆ ಸ್ವಾಮಿ ಮಾಸ್ಕ್ ಹಾಕ್ಕೋಬಾರದೇ’ ಎಂದು ಕೇಳಿದರೆ, ‘ನಮಗೆ ಅದೆಲ್ಲಾ (ಕೋವಿಡ್‌) ಬರೋದಿಲ್ಲ ಬಿಡ್ರೀ’ ಎಂದು ಹೇಳುವ ಬಹಳಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ಈಗ ಕೊರೊನಾ ಕಾಳ್ಗಿಚ್ಚಿನಂತೆ ವ್ಯಾಪಿಸುತ್ತಿದೆ. ಆದರೂ ನಿಯಮಗಳ ಉಲ್ಲಂಘನೆ ನಿಂತಿಲ್ಲ. ರಾಜ್ಯದ ಆರೋಗ್ಯ ಸಚಿವರೇ ಇದರ ಮುಂಚೂಣಿ ನಾಯಕತ್ವ ವಹಿಸಿದ್ದರಲ್ಲವೇ? ಈಗ ಕೆಪಿಸಿಸಿ ಅಧ್ಯಕ್ಷರೂ ತಮ್ಮ ಪದಗ್ರಹಣದ ಸಂದರ್ಭದಲ್ಲಿ ಇದನ್ನೇ ಅನುಸರಿಸಿದ್ದರು. ಮಾಜಿ ಮುಖ್ಯಮಂತ್ರಿಯೊಬ್ಬರು ಈ ನಿಯಮೋಲ್ಲಂಘನಾ ಯೋಜನೆಗೆ ಶಂಕುಸ್ಥಾಪನೆ ಮಾಡಿ ಮಗನ ಮದುವೆ ಪೂರೈಸಿದ್ದರು.

ಈ ಉಲ್ಲಂಘನೆಗಳಿಗೆ ಶಿಕ್ಷೆಯಾಗುವುದೋ ಇಲ್ಲವೋ ಅದು ಮುಖ್ಯವಲ್ಲ. ಆದರೆ ಇಂತಹ ಅಜಾಗರೂಕತೆಯಿಂದ ಜೀವಹಾನಿಯಾದರೆ ಯಾರು ಹೊಣೆ? ಈ ಪ್ರಶ್ನೆ ಸಾರ್ವಜನಿಕರನ್ನು ಕಾಡುವಷ್ಟೇ ಗಂಭೀರವಾಗಿ ಆಡಳಿತ ವ್ಯವಸ್ಥೆಯನ್ನೂ ಕಾಡಬೇಕಲ್ಲವೇ? ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾಧ್ಯವಾಗದಿದ್ದರೆ ಅವುಗಳನ್ನು ರೂಪಿಸುವುದಾದರೂ ಏಕೆ? ನಮ್ಮ ನಡುವೆ ಮನುಷ್ಯ ಜೀವ ನಿಕೃಷ್ಟವಾಗಿರುವುದನ್ನು ಬಳ್ಳಾರಿಯ ಕೋವಿಡ್‌ ಸಂತ್ರಸ್ತರ ಅಂತ್ಯಸಂಸ್ಕಾರದ ವಿದ್ಯಮಾನ ನಿರೂಪಿಸಿದೆ. ಕೊರೊನಾ ನಮಗೆ ಜೀವದ ಬೆಲೆಯನ್ನು ತಿಳಿಸಿಕೊಡಬೇಕಿತ್ತು. ಅದು ಆ ಕಾರ್ಯದಲ್ಲಿ ವಿಫಲವಾಗಿದೆ. ಅದು ಸೋಂಕನ್ನು ಹರಡುತ್ತಲೇ ಹೋಗುತ್ತದೆ. ಅದಕ್ಕೆ ಬುದ್ಧಿಶಕ್ತಿ ಇಲ್ಲ. ಆದರೆ ನಮಗೆ ಇದೆ ಅಲ್ಲವೇ? ಬಳಸೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT