ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಜೋಕೆ, ಮನೆಯ ಭಾಷೆ ಕಳೆದೀತು...

ಪೋಷಕರು ಮಕ್ಕಳೊಂದಿಗೆ ಮಾತೃಭಾಷೆಯಲ್ಲೇ ಮಾತನಾಡುವ, ಕಥೆ ಹೇಳುವ, ಪದ್ಯ ಕಲಿಸುವ ವ್ಯವಧಾನವನ್ನು ಕಲ್ಪಿಸಿಕೊಳ್ಳಬೇಕು
Last Updated 20 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

ಮಾತೃಭಾಷೆ, ಮಗು ಕಲಿಯುವ ಮೊದಲ ಭಾಷೆ. ಭಾಷೆ ಎನ್ನುವುದು ಪ್ರತಿಯೊಂದು ಸಂಸ್ಕೃತಿಯ ಅಸ್ತಿಭಾರ. ಜಾಗತೀಕರಣ ತ್ವರಿತವಾಗಿ ಆವರಿಸುತ್ತಿದೆ. ಎಲ್ಲೆಲ್ಲೂ ನಿರರ್ಗಳ ಇಂಗ್ಲಿಷಿನ ಬೆನ್ನೇರುವ ಧಾವಂತ. ಮಾತೃಭಾಷೆ ಅಥವಾ ಮನೆಭಾಷೆಯು ಹುಟ್ಟಿನಿಂದ ಮಗು ತನ್ನದಾಗಿಸಿಕೊಳ್ಳುವ ಭಾಷೆ. ಮಕ್ಕಳು ಆಡುತ್ತಾ, ನೋಡುತ್ತಾ , ಒಡನಾಡುತ್ತಾ ಮೈಗೂಡಿಸಿಕೊಳ್ಳುವ ಸಂವಹನದ ಬುನಾದಿ ಅದು.

ಸಂಸ್ಕೃತಿಯೊಂದಿಗೆ ಬೆರೆತಿರುವ ಮಾತೃಭಾಷೆಯು ಶಾಲೆಯಲ್ಲಿ ಕಲಿಕೆಯ ಭಾಷೆಯೂ ಆದರೆ ಬಹುಮುಖ ಅನುಕೂಲಗಳಿವೆ. ಮಕ್ಕಳಲ್ಲಿ ಚಿಂತನಾ ಸಾಮರ್ಥ್ಯ, ಸಂವೇದನಾಶೀಲತೆ ವರ್ಧಿಸುತ್ತದೆ, ಇತರ ಭಾಷೆಗಳನ್ನೂ ಕಲಿತಾಡಲು ಅವರಿಗೆ ಆಸರೆ ಲಭಿಸುತ್ತದೆ. ಮಕ್ಕಳಲ್ಲಿ ಶಾಲೆಯ ಬಗ್ಗೆ ಹೆಚ್ಚಿನ ಸಕಾರಾತ್ಮಕ ಮನೋಭಾವ ರೂಪುಗೊಳ್ಳುವುದು. ಶಾಲೆಯನ್ನು ಪ್ರೀತಿಸುತ್ತಾರೆ, ಆನಂದಿಸುತ್ತಾರೆ. ಅಧ್ಯಾಪಕರಿಗೂ ಬೋಧಿಸುವುದು ಸರಾಗವಾಗುವುದು.

ಮಾತೃಭಾಷೆಯಲ್ಲಿ ರೂಢಿಸಿಕೊಂಡ ಕೌಶಲಗಳು ಮಕ್ಕಳಿಗೆ ಮರೆಯದಂತೆ ನಾಟಿರುತ್ತವೆ. ನೆಲ್ಸನ್ ಮಂಡೇಲಾ ‘ಒಬ್ಬಾತನಿಗೆ ಅರ್ಥವಾಗುವ ಭಾಷೆಯಲ್ಲಿ ಮಾತನಾಡಿದರೆ ಅವನ ತಲೆಗೆ ಸಲ್ಲುವುದು, ಅದೇ ಅವನ ಭಾಷೆಯಲ್ಲಿ ಮಾತನಾಡಿದರೆ ಆತನ ಹೃದಯಕ್ಕೆ ಸಲ್ಲುತ್ತದೆ’ ಎಂದರು. ಒಂದು ಅಂಶವಂತೂ ವಿಪರೀತ ಚಕಿತಗೊಳಿಸುತ್ತದೆ. ಜಾಗತಿಕ ಮಟ್ಟದಲ್ಲಿ ಶೇಕಡ 40ರಷ್ಟು ಮಂದಿಗೆ ಅವರು ಮಾತನಾಡದ ಅಥವಾ ಅರ್ಥವಾಗದ ಭಾಷೆಯಲ್ಲಿ ಶಿಕ್ಷಣ ದೊರೆಯುತ್ತಿದೆ! ಮಾತೃಭಾಷೆಯು ಆತ್ಮವಿಶ್ವಾಸದ ಪ್ರತೀಕ.

ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸುವಲ್ಲಿ ಮಾತೃಭಾಷೆಗೆ ಪರ್ಯಾಯವಿಲ್ಲ ಎಂಬುದನ್ನು ಮನಗಂಡ ಯುನೆಸ್ಕೊ, ಮಾತೃಭಾಷಾ ಮಾಧ್ಯಮವನ್ನು ಎತ್ತಿ ಹಿಡಿದಿದೆ. ಹಾಗಾಗಿಯೇ ಅದು ಫೆಬ್ರುವರಿ 21ನೇ ತೇದಿಯನ್ನು ‘ಅಂತರ
ರಾಷ್ಟ್ರೀಯ ಮಾತೃಭಾಷೆ ದಿನ’ ಎಂದು ಘೋಷಿಸಿದೆ. ಜಗತ್ತಿನ ಭಾಷಾ ವೈವಿಧ್ಯದ ಪರಂಪರೆಗೆ ಚ್ಯುತಿಯಾಗದಂತೆ ಅವರವರ ತಾಯಿನುಡಿಯ ಹಿರಿಮೆ ಮನಗಾಣಬೇಕೆಂಬ ಯುನೆಸ್ಕೊ ಮಾರ್ಗದರ್ಶನವು ವಿಶ್ವದಾದ್ಯಂತ ಮನ್ನಣೆಗೆ ಪಾತ್ರವಾಗಿದೆ.

ಕನ್ನಡದ ಸಂದರ್ಭದಲ್ಲಿ ಸಂಭಾವ್ಯ ಎಡವಟ್ಟೊಂದು ಜನಪ್ರಿಯವಾಗಿದೆ. ಆ ಬಾಲಕನ ಮಾತೃಭಾಷೆ ಕನ್ನಡ, ಶಾಲೆಯ ಭಾಷೆ ಇಂಗ್ಲಿಷ್. ಒಮ್ಮೆ ಪ್ರಬಂಧ ರಚಿಸುವಾಗ ಗುಬ್ಬಿಯ ಮಲಕ್ಕೆ ಇಂಗ್ಲಿಷಿನಲ್ಲಿ ಸಂವಾದಿ ಪದಕ್ಕಾಗಿ ಗಲಿಬಿಲಿಗೊಂಡ. ಕಡೆಗೆ ‘ಕೌ ಡಂಗ್ ಆಫ್ ದಿ ಸ್ಪ್ಯಾರೊ’ ಪ್ರಯೋಗ ಅನಿವಾರ್ಯವಾಯಿತು! ಮನೆ ಮತ್ತು ಶಾಲೆಯ ಭಾಷೆ ಬೇರೆಯಾದುದರ ಫಲವಿದು.

ಜರ್ಮನಿಯ ರಾಜನೀತಿ ತಜ್ಞರಾಗಿದ್ದ ಜಿ.ಸ್ಟ್ರೇಸಿಮನ್‍ ಅವರ ‘ಮಾತೃಭಾಷೆ ಆತ್ಮದ ಅಂತರಂಗದ ಅಭಯಧಾಮ’ ಎಂಬ ನುಡಿ ಹೃದಯಸ್ಪರ್ಶಿ. ಮಗು ಬೆಳೆಯುವುದು ತಾಯಿಯ ಮಡಿಲಿನಲ್ಲೇ. ಹಾಗಾಗಿಯೇ ಆಕೆ ಅನ್ಯೋನ್ಯವಾಗಿಸುವ ಮಾತನ್ನು ಮಾತೃಭಾಷೆ ಎನ್ನುವುದು. ಮಾತೃಭಾಷೆಯು ಪೋಷಕರ ಮೂಲ ಭಾಷೆ. ಕನ್ನಡದಲ್ಲಿ ಆಲೋಚಿಸಿ, ಕನ್ನಡದಲ್ಲಿ ರಚಿಸಿದ ಗುಣಮಟ್ಟದ ಪಠ್ಯಪುಸ್ತಕಗಳು ಬೇಕು. ಇದಕ್ಕೂ ಮುಖ್ಯವಾಗಿ ಅವನ್ನು ಸಮರ್ಥವಾಗಿ ಬೋಧಿಸಬಲ್ಲ ಶಿಕ್ಷಕ ಪಡೆಯೂ ಅಗತ್ಯ. ನಮ್ಮದಲ್ಲದ ಭಾಷೆಯಲ್ಲಿ ಓದಿದರೆ ಅರ್ಥವಾಗದು. ಅರ್ಥವಾಗದಿದ್ದನ್ನು ಕಲಿಯಲಾಗದು. ಹಾಗಾಗಿ ಸ್ವಯಂ ಸ್ಫೂರ್ತಿಯಿಂದ ಮಾತೃಭಾಷೆಯ ಮೂಲಕವೇ ಓದುವುದನ್ನು ಗ್ರಹಿಸಿ ನಮ್ಮದಾಗಿಸಿಕೊಳ್ಳಬೇಕು.

ಸ್ವದೇಶಿ ಭಾಷೆಗಳ ಸಂರಕ್ಷಣೆ ಎಲ್ಲರ ಹೊಣೆ. ವಿಶ್ವದ ಒಟ್ಟು 7,000 ಭಾಷೆಗಳ ಪೈಕಿ 3,000 ಭಾಷೆಗಳು ಈ ಶತಮಾನದ ಕೊನೆಗೆ ನಶಿಸುವ ಆತಂಕವಿದೆ. ಭಾರತದಲ್ಲಿ ಅರುಣಾಚಲ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿನ ‘ಕೋರೋ’ ಎಂಬ ಭಾಷೆ ಅಳಿಯುತ್ತಿದೆ. ‘ಮಾಸಿ’ ಸಿಕ್ಕಿಂ ರಾಜ್ಯದ ಒಂದು ಸ್ಥಳೀಯ ಭಾಷೆ. ಅದನ್ನಾಡುವವರ ಸಂಖ್ಯೆ ಕೇವಲ ನಾಲ್ಕು. ಅವರಾದರೋ ಗ್ಯಾಂಗ್ಟಕ್‍ನಲ್ಲಿರುವ ಒಂದೇ ಕುಟುಂಬದವರು. ಇಂಡೊನೇಷ್ಯಾದಲ್ಲಿ 136 ಭಾಷೆಗಳಿದ್ದು ಶೇಕಡ 80ರಷ್ಟು ಭಾಷೆಗಳು ಆಡುವವರಿಲ್ಲದೆ ಮರೆಯಾಗುತ್ತಿವೆ. ಮಲೇಷಿಯಾದಲ್ಲಿ 707 ಭಾಷೆಗಳಿವೆ. ಆದರೆ, ಅದರ ಅರ್ಧದಷ್ಟು ಅಳಿವಿನ ಅಂಚಿನಲ್ಲಿವೆ.

ವಿಶ್ವದಾದ್ಯಂತ ಹಲವಾರು ಮಾತೃಭಾಷೆಗಳು ಅವಸಾನದ ಅಂಚು ತಲುಪಿವೆ. ಹದಿನೈದು ದಿನಗಳಿಗೊಂದು ಸ್ವದೇಶಿ ಭಾಷೆ ನಶಿಸುತ್ತಿದೆ. ಸ್ವದೇಶಿ ಭಾಷೆಗಳ ಅವಸಾನವಾದರೆ ಒದಗುವ ನಷ್ಟ ಅಪಾರ. ಜ್ಞಾನ, ಅನುಭವ, ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳ ಮಾಹಿತಿ, ಗಿರಿಕಂದರಗಳ ವಿವರ, ಸಮುದಾಯ ಪ್ರಜ್ಞೆ, ಅನನ್ಯ ಪ್ರಾಪಂಚಿಕ ದೃಷ್ಟಿ ಎಲ್ಲವೂ ಕಳೆದುಹೋಗುತ್ತವೆ. ಇನ್ನು ಭಾವಿ ಪೀಳಿಗೆಗಳಿಗೆ ರವಾನೆಯಾಗುವ ಅರಿವೇನು? ಸಾಹಿತ್ಯವೇನು? ಹಾಡು ಹಸೆ ಏನು?

ಅಂತರ್ಜಾತಿ ವಿವಾಹದ ಕಾರಣದಿಂದಾಗಿ ತಂದೆ, ತಾಯಿಯ ಭಾಷೆಗಳು ಭಿನ್ನವೇ ಇರಲಿ. ಮಕ್ಕಳ ಹಿತದೃಷ್ಟಿಯಿಂದ ಯಾವುದಾದರೂ ಒಂದು ಭಾಷೆ ಮಾತೃಭಾಷೆಯಾಗಬಹುದಲ್ಲ. ಪೋಷಕರು ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಮಾತೃಭಾಷೆಯಲ್ಲೇ ಮಾತನಾಡುವ, ಕಥೆ ಹೇಳುವ, ಪ್ರಾಸಬದ್ಧ ಪದ್ಯ ಕಲಿಸುವ ವ್ಯವಧಾನವನ್ನು ಕಲ್ಪಿಸಿಕೊಳ್ಳಬೇಕು. ಇದರಿಂದ ಭಾಷೆಗಳ ಅಳಿವಿಗೆ ಬಹುಮಟ್ಟಿಗೆ ಲಗಾಮು ಬೀಳುವುದು. ಎಷ್ಟಾದರೂ ಮನೆಯಂಗಳದಿಂದಲೇ ಅಲ್ಲವೆ ಜಾಗತಿಕ ಸವಾಲಿಗೆ
ಪರಿಹಾರದ ನಾಂದಿ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT