ಭಾನುವಾರ, ಜೂನ್ 7, 2020
28 °C
ಅಂತಃಪ್ರಜ್ಞೆ ಮತ್ತು ಧರ್ಮ ವಿಮರ್ಶೆ

ಧರ್ಮಾಂಧರಿಗೆ ಚಿಂತಕರ ಮಾತು ರುಚಿಸದು | ಮುಸ್ಲಿಂ ಚಿಂತಕರ ಚಾವಡಿಗೆ ಪ್ರತಿಕ್ರಿಯೆ

ವಾಚಕರವಾಣಿ Updated:

ಅಕ್ಷರ ಗಾತ್ರ : | |

Prajavani

ವಾಚಕರವಾಣಿಯಲ್ಲಿ ಏಪ್ರಿಲ್ 6ರಂದು ಪ್ರಕಟವಾಗಿದ್ದ 'ಮುಸ್ಲಿಂ ಚಿಂತಕರ ಚಾವಡಿ'ಯ ಪತ್ರ ಕನ್ನಡದ ಜಾಗೃತ ಮನಸ್ಸುಗಳಲ್ಲಿ ಸಂವಾದವನ್ನು ಹುಟ್ಟುಹಾಕಿದೆ. ಈ ಪತ್ರದ ಎರಡನೇ ಕಂತಿನ ಪ್ರತಿಕ್ರಿಯೆಗಳು ಇಲ್ಲಿವೆ.

ಮುಸ್ಲಿಂ ಚಿಂತಕರ ಚಾವಡಿಯ ಪತ್ರ: ಹುಂಬತನ ಬೇಡ; ಅಪಪ್ರಚಾರ ನಿಲ್ಲಲಿ 

ಮುಸ್ಲಿಂ ಚಿಂತಕರ ಚಾವಡಿ ಪತ್ರಕ್ಕೆ ಮೊದಲ ಪ್ರತಿಕ್ರಿಯೆ: ಕೋಮುವಾದೀಕರಣ ಸಲ್ಲದು

---

ಕಡಿಮೆಯಾಗಲಿ ಮತೀಯ ನೆಲೆಯ ಅಂತರ

ಮುಸ್ಲಿಂ ಚಿಂತಕರು ಬರೆದಿರುವ ಮನವಿ ಪತ್ರದಲ್ಲಿ (ವಾ.ವಾ., ಏ. 6) ‘ಮುಸ್ಲಿಂ ಚಿಂತಕರ ಚಾವಡಿ’ಯ ಸದಸ್ಯರು ಎಂದು ಅವರು ತಮ್ಮನ್ನು ಗುರುತಿಸಿಕೊಂಡಿರುವುದರ ಔಚಿತ್ಯವನ್ನು ಪ್ರಶ್ನಿಸಿರುವ ಚಂದ್ರಕಾಂತ ವಡ್ಡು ಅವರು (ಚರ್ಚೆ, ಏ. 7) ‘ಈ ಹೇಳಿಕೆ ನೀಡಿರುವ ಅನೇಕರು ನಾನು ಗಮನಿಸಿದಂತೆ ಧರ್ಮಾತೀತರು, ಪ್ರಗತಿಪರರು. ಇವರು ಹೇಗೆ ಒಂದು ಧರ್ಮದ ಚಿಂತಕರ ಚಾವಡಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

ವಡ್ಡು ಅವರು ಆ ಚಿಂತಕರ ‘ಸೈದ್ಧಾಂತಿಕ ಹಿನ್ನೆಲೆ’ಯನ್ನು ಶೋಧಿಸುವುದನ್ನು ಬಿಟ್ಟು, ತಮ್ಮ ಗಮನಿಕೆಯನ್ನೇ ಮರುಪರಿಶೀಲನೆ ಮಾಡಿಕೊಳ್ಳಬೇಕೆನಿಸುತ್ತದೆ. ನಾವು ಪದೇ ಪದೇ ಬಳಸುವ ಈ ಜಾತ್ಯತೀತತೆ, ಪ್ರಗತಿಪರತೆ ಇವೆಲ್ಲ ಇಂದು ಅರ್ಥಹೀನ ಖಾಲಿ ಶಬ್ದಗಳಾಗಿ ಪರಿಣಮಿಸಿವೆ. ಕೆಲವು ದಶಕಗಳಿಂದ ನಾವು ಯಾರಿಗೆಲ್ಲ ಈ ಹಣೆಪಟ್ಟಿಗಳನ್ನು ನೀಡುತ್ತಾ ಬಂದಿರುವೆವೋ ಅವರು ಹೊರಗೆ ಆ ಹಣೆಪಟ್ಟಿಗೆ ತಕ್ಕಂತೆ ನಡೆದುಕೊಂಡು ಬಂದಿದ್ದರೂ ತಮ್ಮ ಕುಟುಂಬ, ವಿವಾಹ, ಧರ್ಮಾಚರಣೆ ಮತ್ತು ಖಾಸಗಿ ಬದುಕಿನೊಳಗೆ ಸಂಪ್ರದಾಯದ ಕಟ್ಟು ಕಟ್ಟಲೆಗಳನ್ನು ಸಮಸ್ಯೆಯೇ ಇಲ್ಲದಂತೆ ಅನುಸರಿಸಿಕೊಂಡು ಬಂದವರಾಗಿದ್ದಾರೆ (ಕೆಲವು ಅಪವಾದಗಳಿರಬಹುದು).

ಯು.ಆರ್‌.ಅನಂತಮೂರ್ತಿಯವರು ತಮ್ಮನ್ನು ತಮ್ಮ ಜಾತಿಯ ‘ಕ್ರಿಟಿಕಲ್‌ ಇನ್‌ಸೈಡರ್‌’ ಎಂದು ಕರೆದುಕೊಂಡಿದ್ದರು. ಅಡಿಗರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ತಮ್ಮ ಒಂದು ಪದ್ಯಕ್ಕೆ ‘ನಾನು ಹಿಂದೂ, ನಾನು ಬ್ರಾಹ್ಮಣ’ ಎಂಬ ಶೀರ್ಷಿಕೆ ನೀಡಿದ್ದಾರೆ. ಇವರು ಹೀಗೆ ಆತ್ಮನಿರ್ವಚನ ಮಾಡಿಕೊಂಡುದರಿಂದ ಬ್ರಾಹ್ಮಣ್ಯದ ಒಳಗಿನ ಗುಣ-ದೋಷಗಳೆರಡನ್ನೂ ಹಿಂದೆಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿ, ಹೆಚ್ಚು ವಿಸ್ತಾರವಾಗಿ ನೋಡಲು ಸಾಧ್ಯವಾಯಿತು.

ಇಂದು ಜಾತಿ- ಧರ್ಮಗಳು ಜಾತ್ಯತೀತ, ಧರ್ಮಾತೀತ ಜೀವಿಗಳಿಗೆ ಜನ್ಮ ನೀಡುವ ಬದಲಾಗಿ, ಇಂತಹ ಅಂತಃಪ್ರಜ್ಞೆಗಳಿಗೆ ಜನ್ಮ ನೀಡಬೇಕಾದ ಅವಶ್ಯಕತೆ ಇದೆ. ಧರ್ಮಗಳನ್ನು ವಿಮರ್ಶಿಸುವ, ಅದರ ಮಿತಿಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವ ಚಿಂತಕರು ಆಯಾ ಧರ್ಮದ ಒಡಲೊಳಗಿನಿಂದಲೇ ಹುಟ್ಟಿಬರಬೇಕಾಗಿದೆ. ಈ ಪಾರುಪತ್ಯೆಯನ್ನು ಅನ್ಯಧರ್ಮಗಳ ಮೂಲಭೂತವಾದಿಗಳಿಗೆ ವಹಿಸಿಕೊಟ್ಟರೆ ಅನರ್ಥವಾಗುತ್ತದೆ. 

- ಟಿ.ಎನ್‌. ವಾಸುದೇವಮೂರ್ತಿ, ಬೆಂಗಳೂರು

***

ದೂಷಣೆ ಸರಿಯಲ್ಲ

ಇಸ್ಲಾಂ ಧರ್ಮಾನುಯಾಯಿಗಳಲ್ಲಿ ಚಿಂತಕರು, ಸಾಹಿತಿಗಳ ಮಾತಿಗಿಂತ ಮಸೀದಿ, ಮುಲ್ಲಾ, ಮೌಲ್ವಿಗಳ ಬೋಧನೆಗೆ ಹೆಚ್ಚಿನ ಪ್ರಭಾವ ಇದೆ. ಯಾವುದೇ ಧರ್ಮದ ಮೂಲಭೂತವಾದಿಗಳಿಗೂ ಚಿಂತಕರ ಮಾತು ರುಚಿಸುವುದಿಲ್ಲ. ದೇಶದಲ್ಲಿ ಚಿಂತಕರು, ಬುದ್ಧಿಜೀವಿಗಳ ಕುರಿತು ಬಹಳಷ್ಟು ಅವಹೇಳನ ನಡೆಯುವುದನ್ನು ನೋಡುತ್ತೇವೆ. ಅದರಲ್ಲೂ ಅವರು ಒಂದು ಕಡೆ ವಾಲಿಕೊಂಡವರಾಗಿ ಕಂಡರೆ, ಅದು ಇನ್ನೂ ಹೆಚ್ಚು.

ಪ್ರಸ್ತುತ ದೇಶ ಎದುರಿಸುತ್ತಿರುವ ಕ್ಲಿಷ್ಟಕರ ಸನ್ನಿವೇಶದಲ್ಲಿ ಧಾರ್ಮಿಕ ಮೂಲಭೂತವಾದದಿಂದ ಪ್ರಭಾವಿತಗೊಂಡಿರಬಹುದಾದ ಕೆಲವು ತಬ್ಲೀಗ್‌ಗಳನ್ನು ಕಾನೂನು ಕ್ರಮಗಳ ಮೂಲಕವೇ ಸರಿದಾರಿಗೆ ತರಬೇಕಾದ ಅಗತ್ಯ ಇದೆ. ಇಡೀ ಮುಸ್ಲಿಂ ಸಮುದಾಯದ ದೂಷಣೆ ಸರಿಯಲ್ಲ. ಎಲ್ಲಾ ಮೂಲಭೂತವಾದಿಗಳು ಸಮಾಜಕಂಟಕರು. ದೇವರು, ಧರ್ಮದ ಭಾರದಿಂದ ನಲುಗುತ್ತಿರುವ ಜನಸಾಮಾನ್ಯ ಮುಸ್ಲಿಮರನ್ನು ಅವುಗಳ ಭಾರದಿಂದ ಸ್ವಲ್ಪ ಹಗುರಗೊಳಿಸುವ ದಿಸೆಯಲ್ಲಿ ಎಲ್ಲ ಧರ್ಮದ ಚಿಂತಕರು ಗಮನಹರಿಸಬೇಕಾಗಿದೆ. ಎಷ್ಟು ಸಾರಿ ಪ್ರಾರ್ಥಿಸಿದರೂ ಕಾಣದ ದೇವರಿಗಿಂತ, ಕಾಣುವ ಬದುಕಿನ ದೈನಂದಿನ ಬವಣೆಗಳು ಸಮಾಜದಲ್ಲಿ ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ, ಸ್ಪಂದನೆಯನ್ನು ಹೆಚ್ಚಿಸಬೇಕು. ಮತೀಯ ಆಧಾರದ ಸಾಮಾಜಿಕ ಅಂತರ ಕಡಿಮೆ ಆಗಬೇಕು. ಹಾಗಾದಲ್ಲಿ ಯಾವುದೇ ಧರ್ಮದ ಮೂಲಭೂತವಾದಿಗಳಿಗೆ ಕ್ಯಾರೆ ಅನ್ನುವವರು ಯಾರೂ ಇರುವುದಿಲ್ಲ.

- ವೆಂಕಟೇಶ ಮಾಚಕನೂರ, ಧಾರವಾಡ

***

ವಿವೇಕ ಮೂಡಿಸಲಿ

‘ಹುಂಬತನ ಬೇಡ...’ ಎಂದು ಮುಸ್ಲಿಂ ಚಿಂತಕರು ಕೆಲವರು ಹೇಳಿರುವುದು ಸಕಾಲಿಕವಾಗಿದೆ; ಸಮಯೋಚಿತವೂ ಆಗಿದೆ. ಇದನ್ನು ಬರೆದಿರುವವರೆಲ್ಲರೂ ಲೇಖಕರು ಮತ್ತು ಲೋಕರೀತಿಯನ್ನು ಬಲ್ಲವರು. ಅವರು ಹೇಳುವಂತೆ, ಎಲ್ಲ ಧರ್ಮ, ಭಾಷೆ, ಪ್ರಾಂತಗಳಲ್ಲಿ ಮೂಲಭೂತವಾದಿಗಳು ಇರುವರಾದರೂ, ಅವರ‍್ಯಾರೂ ಈಗ ಎಲ್ಲರ ಗಮನಕ್ಕೂ ಬಂದಿರುವ ಒಂದು ಸಮುದಾಯದ ಒಂದು ಗುಂಪಿನ
ಕೆಲವರು ವರ್ತಿಸುವಂತೆ ವರ್ತಿಸುತ್ತಿಲ್ಲ ಎಂಬುದನ್ನು ಮನಗಾಣಬೇಕಾಗಿದೆ.

ಆರೋಗ್ಯ ತಪಾಸಣೆಗೆ ಬಂದ ವೈದ್ಯರು, ನರ್ಸ್‌ಗಳ ಮೇಲೆ ಹಲ್ಲೆ ಮಾಡುವುದು, ಕರ್ತವ್ಯನಿರತ ಪೊಲೀಸರಿಗೆ ಅಸಹಕಾರ ತೋರುತ್ತಿರುವುದು... ಇವೆಲ್ಲವನ್ನೂ ಮಾಧ್ಯಮಗಳು ಸೃಷ್ಟಿಸಿಕೊಂಡು ಬಿತ್ತರಿಸುತ್ತಿಲ್ಲ. ನಡೆದದ್ದನ್ನು ನಡೆದ ಹಾಗೇ ತೋರಿಸುತ್ತಿವೆ. ಮುಗ್ಧ ಜನರನ್ನು ಮೂಲಭೂತವಾದಿಗಳ ಮತ್ತು ಅಜ್ಞಾನಿಗಳ ಹಿಡಿತದಿಂದ ಬಿಡುಗಡೆ ಮಾಡಿಸುವ ಕೆಲಸವನ್ನು ಪ್ರಜ್ಞಾವಂತರು ತುರ್ತಾಗಿ ಮಾಡಬೇಕಾಗಿದೆ. ಅವರಿಗೆ ಸೂಕ್ತ ವಿವೇಕವನ್ನು ಹೇಳಿ, ಜಾಗೃತರನ್ನಾಗಿ ಮಾಡಬೇಕಾಗಿದೆ. ತಮ್ಮ ಸಮುದಾಯದ ಇಂತಹ ಕೆಲವು ಜನರನ್ನು ನಾಗರಿಕರನ್ನಾಗಿಸಲು ಚಿಂತಿಸಬೇಕಾಗಿದೆ. ಚಿಂತಕರ ಚಾವಡಿಯವರು ತಮ್ಮ ಸಮುದಾಯದ ಧಾರ್ಮಿಕ ಕೇಂದ್ರಗಳಿಗೆ ಹೋಗಿ ‘ನಿಮ್ಮಂಥ ಕೆಲವರ ವರ್ತನೆಗಳಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ, ಹೀಗೆ ಮಾಡಬೇಡಿ’ ಎಂದು ತಿಳಿವಳಿಕೆ ಹೇಳಿ, ಹುಂಬತನ ನಿವಾರಿಸುವ ಕೆಲಸವನ್ನು ಮಾಡಬೇಕಾಗಿದೆ.

- ಡಾ. ಎಚ್.ಚಂದ್ರಶೇಖರ, ಚಿತ್ರದುರ್ಗ

(ನೀವೂ ಪ್ರತಿಕ್ರಿಯಿಸಿ: editpage@prajavani.co.in)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.