ಬುಧವಾರ, ಆಗಸ್ಟ್ 4, 2021
25 °C
ಪ್ರಕ್ಷುಬ್ಧಗೊಳ್ಳುತ್ತಿರುವ ಮಾನವೀಯ ಸಂಬಂಧಗಳ ವಿಷವನ್ನು ಹಿಂಡಿ ತೆಗೆದು, ಅಮೃತತ್ವದ ಬೆಸುಗೆ ಬಿಗಿಯಲು ಇದು ಸಕಾಲ

ಸಂಗತ: ಗೆಲ್ಲಬಲ್ಲೆವು, ಬದುಕಬಲ್ಲೆವು...

ಪ. ರಾಮಕೃಷ್ಣ ಶಾಸ್ತ್ರಿ Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿದವರ ಸಾವು-ನೋವುಗಳು ಹೆಚ್ಚು ಸದ್ದು ಮಾಡುತ್ತಿವೆ. ಆದರೆ ಸದ್ದಿಲ್ಲದೆ, ಸುದ್ದಿಯಾಗದೆ, ಗದ್ದಲವೆಬ್ಬಿಸದೆ ತಮ್ಮ ಪಾಡಿಗೆ ತಾವು ತೆರೆಯಮರೆಯಲ್ಲಿ ನಿಂತೇ ಶ್ರಮಿಸಿದ ಅವೆಷ್ಟೋ ಮಾನವೀಯ ಹೃದಯಗಳು ಮಾತ್ರ ಯಾವುದೇ ಸಮ್ಮಾನಕ್ಕೂ ಕೈಯೊಡ್ಡಲಿಲ್ಲ. ಎಲ್ಲರೂ ಸುದ್ದಿಯ ಬಲೆಗೆ ಸಿಗಲಿಲ್ಲ.

ಅವರು, ಬಳಲಿದ ಸಮಾಜದ ಬಡಪಾಯಿಗಳ ಬೆನ್ನಿಗೆ ನಿಂತವರು. ಲಾಕ್‍ಡೌನ್‌ನಿಂದ ತತ್ತರಿಸಿ ಹೋದ ಬಹುಸಂಖ್ಯಾತರ ಬದುಕಿನ ಭಾರಕ್ಕೆ ಎಲ್ಲೋ ಒಂದು ಕಡೆ ಹೆಗಲು ಕೊಟ್ಟವರು. ಅಮಾನವೀಯ ನಡೆಯ, ರೋಸಿ ಹೋಗುವ ಸುದ್ದಿಗಳ ನಡುವೆಯೂ ಮಾನವೀಯತೆಯ ಸೆಲೆ ಜೀವಂತವಾಗಿಯೇ ಇದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾದವರು.

ವೈದ್ಯರಿಗೆ, ದಾದಿಯರಿಗೆ, ಪೊಲೀಸರಿಗೆ ತಮ್ಮ ಜವಾಬ್ದಾರಿ ಮೆರೆದಾಗ ವೇತನವಾದರೂ ಸಿಗುತ್ತದೆಂಬ ಭಾವ ಇರಬಹುದು. ಆದರೆ, ಈ ಹೃದಯವಂತರಿಗೆ ಮಾನಸಿಕ ಸಂತೋಷವೇ ಬಹು ದೊಡ್ಡ ವೇತನ ಎಂದೆನಿಸಿಬಿಟ್ಟಿತು.

ಕೊರೊನಾ ಸೋಂಕಿಗೆ ತುತ್ತಾಗದೆ ಪಾರಾದರೂ ಗಳಿಕೆಯ ಬಾಗಿಲು ಮುಚ್ಚಿಹೋದವರಿಗೆ ಅನ್ನದ ಪಾತ್ರೆ ಬರಿದಾಗಿ ಹೋಗಿತ್ತು. ಎಲ್ಲ ಕಡೆ ಒಂದಷ್ಟು ಯುವಕರ ತಂಡಗಳು ಅಂಥವರನ್ನು ಹುಡುಕಿಕೊಂಡು ಹೋಗಿ ಆಹಾರದ ಪೊಟ್ಟಣಗಳನ್ನು ನೀಡಿ ಹಸಿವು ನೀಗಿಸಿದವು. ಬೀದಿ ನಾಯಿಗಳಿಗೆ ಕೂಳೇ ಇರಲಿಲ್ಲ. ಮನುಷ್ಯ ಕೊಡುವ ಆಹಾರವನ್ನೇ ನಂಬಿ ಅಂಗಡಿಗಳ ಬಾಗಿಲು ಕಾಯುವ ಅವುಗಳ ಪರಿಸ್ಥಿತಿಯನ್ನು ಅರ್ಥೈಸಿ ಕೊಂಡ ಸಹೃದಯರೊಬ್ಬರು ಅಕ್ಕಿಯ ಜೊತೆಗೆ ಕೋಳಿಮಾಂಸದ ಅಂಗಡಿಯಿಂದ ತಂದ ತ್ಯಾಜ್ಯಗಳನ್ನೂ ಬೇಯಿಸಿ ದಿನವೂ ರಾಜಾತಿಥ್ಯ ನೀಡಿದರು. ಔಷಧಗಳನ್ನು ತರಲಾಗದೆ ಪರಿತಪಿಸಿದವರ ಮನೆ ಬಾಗಿಲಿಗೆ ಅದನ್ನೂ ತಲುಪಿಸಲು ಶ್ರಮಿಸಿದ ಕರುಣವಂತರೂ ಕಂಡುಬಂದರು.

ಬೆಳೆದ ತರಕಾರಿಗಳಿಗೆ ಮಾರುಕಟ್ಟೆ ಇಲ್ಲವೆಂದು ಬೀದಿಗೆ ತಂದು ಎಸೆಯುತ್ತಿದ್ದ ರೈತರ ಹತಾಶೆಯನ್ನು ಗಮನಿಸಿ, ಅದನ್ನೆಲ್ಲ ಖರೀದಿಸಿ, ಹಸಿದ ಮಂದಿಯನ್ನು ಕರೆದು ಹಂಚಿದವರೂ ದೇವರಂತೆ ಎನಿಸಿಕೊಂಡರು.

ಬಂಧುಗಳೇ ಶವದ ಬಳಿಗೆ ಸುಳಿಯದ ಪ್ರಸಂಗ ಗಳು ನಡೆದವು. ದಾಸರು ಹೇಳಿದ ಹಾಗೆ, ‘ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು, ಸಂಚಿತಾರ್ಥದ ದ್ರವ್ಯ ಬಾರದು ಮುಂಚೆ ಮಾಡಿರೋ ಧರ್ಮವ, ಅರ್ಥವ್ಯಾರಿಗೆ ಪುತ್ರರ‍್ಯಾರಿಗೆ ಮಿತ್ರ ಬಾಂಧವರ‍್ಯಾರಿಗೆ? ಕರ್ತೃ ಯಮನವರೆಳೆದು ಒಯ್ವಾಗ ಅರ್ಥ ಪುತ್ರರು ಕಾಯ್ವರೆ?’ ಎಂಬ ಪ್ರಶ್ನೆ ನೆನಪಾಯಿತು. ಯಾರಿಗೂ ಬೇಡವಾದ ಶವಗಳಿಗೆ ಯಾರೋ ಯಾವ ಜಾತಿಯವರೋ ಸಂಸ್ಕಾರ ಮಾಡಿದರು. ಇಲ್ಲಿ ಕೋಮು ಭೇದಗಳು, ಧಾರ್ಮಿಕ ಮೇಲುಕೀಳುಗಳು ಒಂದೂ ಪರಿಗಣನೆಯಾಗದೆ ಸ್ಪಷ್ಟವಾಗಿ ಮೆರೆದದ್ದು ಒಂದೇ, ಅದು ಮಾನವೀಯತೆ.

ಕೋವಿಡ್‌ ಸಾಂಕ್ರಾಮಿಕವು ಹಲವು ಕುಟುಂಬಗಳಲ್ಲಿ ಬೆಳಗುವ ದೀಪಗಳನ್ನು ನಂದಿಸಿಬಿಟ್ಟಿದ್ದರೂ ಬುದ್ಧಿಜೀವಿ ಎನಿಸಿಕೊಂಡ ಮನುಷ್ಯ ಕಲಿಯಲೇಬೇಕಾದ ಹಲವು ಪಾಠಗಳನ್ನೂ ಕಲಿಸಿದೆ. ತಿರುಗಾಟದಲ್ಲಿ ಸಂಯಮ, ಸಂಪರ್ಕದಲ್ಲಿ ಪರಿಮಿತಿ, ಶುಚಿತ್ವದ ಪ್ರಜ್ಞೆ ಸದಾಕಾಲವೂ ಪರಿಪಾಲನೆಗೆ ಯೋಗ್ಯ ವಾದುವೆಂಬ ಮಂತ್ರವನ್ನು ಉಚ್ಚರಿಸಿದೆ. ಹೊಡೆದಾಟ, ದ್ವೇಷ, ತೋಳ್ಬಲಗಳಿಗಿಂತ ಸಹಬಾಳ್ವೆ, ಸಹಕಾರಗಳಿದ್ದರೆ ಯಾವುದೇ ಸಂಕಷ್ಟವನ್ನೂ ಎದುರಿಸ
ಬಹುದೆಂಬುದನ್ನು ಸ್ಪಷ್ಟಪಡಿಸಿದೆ.

ಗುರುತಿಸುವ ಸಾಮರ್ಥ್ಯವಿದ್ದರೆ ಬೇರೆಯವರ ಎಲ್ಲ ಅವಗುಣಗಳನ್ನೂ ಕ್ಷಮಿಸಿ, ಅವರಲ್ಲಿದ್ದ ಅಗಾಧ ಕೆಟ್ಟಗುಣದ ರಾಶಿಯಲ್ಲೂ ಒಂದೇ ಹನಿಯಷ್ಟು ದೊಡ್ಡ ಮಾನವೀಯತೆಯನ್ನು ಹೆಕ್ಕಿ ತೆಗೆಯಬಹುದು. ಪ್ರಕ್ಷುಬ್ಧಗೊಳ್ಳುತ್ತಿರುವ ಮಾನವೀಯ ಸಂಬಂಧಗಳ ವಿಷವನ್ನು ಹಿಂಡಿ ತೆಗೆದು ಅಮೃತತ್ವದ ಬೆಸುಗೆ ಬಿಗಿಯಲು ಇದೀಗ ಸಕಾಲವೆನಿಸಿದೆ.

ಮನುಷ್ಯ ಬೇರೊಬ್ಬ ಮನುಷ್ಯನನ್ನು ಪ್ರೀತಿಸಲು, ಹೆಗಲೆಣೆಯಾಗಲು ಸಾಂಕ್ರಾಮಿಕವು ಅವಕಾಶ ಒದಗಿಸಿತು. ಕಾಗೆ ಒಂದಗುಳ ಕಂಡರೆ ತನ್ನ ಬಳಗವ ಕೂಗಿ ಕರೆಯುತ್ತದೆ, ಮನುಷ್ಯನಿಗೆ ಈ ಬುದ್ಧಿಯಿಲ್ಲ ಎಂದು ಹಾಡು ಕಟ್ಟಿದವರಿಗೆ ಉತ್ತರ ಹೇಳಲು ಬಹುಮಂದಿ ಸದ್ಗುಣಿಗಳ ಕಾಯಕಪ್ರಜ್ಞೆಯಿಂದ ಸಾಧ್ಯವಾಯಿತು. ಬೇರೊಬ್ಬರ ಒಳಿತಿಗಾಗಿ ತಮ್ಮ ಸಮಯವನ್ನು ಮೆರೆದವರು ಯಾರೆಂಬುದೇ ನಾಳೆಯ ದಿನಗಳಲ್ಲಿ ತಿಳಿಯದೇ ಹೋಗಬಹುದು. ಯಾಕೆಂದರೆ, ನಾಯಿ ಒಂದು ಹಿಡಿ ಅನ್ನ ಕೊಟ್ಟವನನ್ನು ಬದುಕಿದಷ್ಟು ದಿನವೂ ಮರೆಯುವುದಿಲ್ಲ. ಮನುಷ್ಯನ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿದುದೆಲ್ಲ ಅಳಿಸಿಹೋಗುವುದು ಬೇಗನೆ. ಆದರೆ ಅಂಥವರು ನೆಲದ ಮಣ್ಣಿನಲ್ಲಿ ಒತ್ತಿದ ಒಳಿತಿನ ಮಾದರಿಯ ಹೆಜ್ಜೆಗಳು ಮಾತ್ರ ಯಾರೋ ಒಂದಿಬ್ಬರ ಹೃದಯದಲ್ಲಾದರೂ ಅಳಿಯದೇ ಉಳಿಯುತ್ತವೆ ಎಂಬುದರಲ್ಲಿ ಅನುಮಾನವೇ ಇರದು.

ಸ್ವಾರ್ಥವನ್ನು ಮರೆತು ಅದೆಷ್ಟೋ ಮಂದಿ ಸ್ವಂತ ಹಣ ಉಪಯೋಗಿಸಿದರು, ಇದ್ದವರಲ್ಲಿ ಕೇಳಿ ತಂದರು. ಕೆಲವು ಯುವಕರಂತೂ ಬೇರೆಯವರಿಗೆ ನೆರ ವಾಗುವುದೇ ಭಗವಂತನ ಸೇವೆ ಎಂಬ ಭಾವದಿಂದ ಟೊಂಕಕಟ್ಟಿ ನಿಂತರು.

ವಿಶ್ವವನ್ನೇ ಕಾಡಿದ ಇಂತಹ ಇನ್ನೊಂದು ಮಾರಿ ಅಪ್ಪಳಿಸಿದರೂ ಮಾನವೀಯತೆಯ ಹೃದಯ ಮಿಡಿಯುವ ಜನರ ಒರತೆ ಹರಿಯುತ್ತಲೇ ಇದ್ದರೆ ಹತಾಶೆಯ ಅಗತ್ಯವಿಲ್ಲ. ಗೆಲ್ಲಬಲ್ಲೆವು, ಬದುಕಬಲ್ಲೆವು ಎನ್ನುವ ಆತ್ಮವಿಶ್ವಾಸವು ಉಪಕೃತ ವ್ಯಕ್ತಿಯಲ್ಲಿಯೂ ಮೂಲಭೂತ ಕೆಟ್ಟ ಗುಣಗಳಿದ್ದರೆ ಪರಿವರ್ತನೆಗೆ ಕಾರಣವಾಗಬಹುದು. ಸಂತರು ಹೇಳಿದ್ದು ಇದಕ್ಕೇ ಅಲ್ಲವೆ, ‘ಒಳಿತು ಮಾಡು ಮನುಷಾ, ನೀ ಇರೋದು ಮೂರು ದಿವಸಾ...’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.