ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಘನಮೌಲ್ಯಕ್ಕೆ ಬೇಕಾಗಿದೆ ಮನೆಮದ್ದು

ಜೀವ ಬೆಸೆಯುವ ಪ್ರೀತಿಯೊಂದಿಗೆ ವೈಚಾರಿಕ ಬೆಳಕನ್ನು ಎದೆ ತುಂಬಿಕೊಳ್ಳಬೇಕಾದ ತುರ್ತಿನಲ್ಲಿದೆ ವರ್ತಮಾನ
Last Updated 24 ಫೆಬ್ರುವರಿ 2021, 19:45 IST
ಅಕ್ಷರ ಗಾತ್ರ

ಕುಲಕಸುಬಿನಿಂದ ಅರಳಿದ ಜಾತಿಯು ಕೊನೆಗೆ ತಾರತಮ್ಯದ, ಶೋಷಣೆಯ ದಾಳವಾಗಿ ಉರುಳು ವಂತಾಗಿದ್ದು ಮನುಷ್ಯಜನ್ಮದ ಮಹಾದುರಂತಗಳಲ್ಲೊಂದು. ಪರಂಪರೆಯ ತೋರುಗಂಬಗಳಾಗಿ ಜನಾಂಗಗಳನ್ನು ಬೆಸೆಯುವ, ಎಲ್ಲರನ್ನೂ ಒಳಗೊಳ್ಳುವ ಹಂಬಲದಲ್ಲಿ ಹುಟ್ಟಿಕೊಂಡ ಧರ್ಮಗಳು ಮನುಕುಲದ ವಿಭಜಕಗಳಂತೆ ಅಪಾರ್ಥಗೊಳ್ಳುತ್ತಿರುವ ಚಿತ್ರ ನಮ್ಮ ಕಣ್ಣೆದುರಿದೆ.

‘ಜಗತ್ತಿನ ಎಲ್ಲ ಧರ್ಮಗಳೂ ಮನುಷ್ಯ ಧರ್ಮವೇ ಶ್ರೇಷ್ಠ ಎಂದಿದ್ದರೆ, ಅದನ್ನು ಅರ್ಥೈಸಿಕೊಳ್ಳುವುದರಲ್ಲಿ ಸೋತವರು ಮಾತ್ರ ಅವರವರ ಧರ್ಮಗಳೇ ಶ್ರೇಷ್ಠವೆಂದು ಬಡಿದಾಡಿಕೊಳ್ಳುತ್ತಾರೆ...’ ಎಂದಿದ್ದರು ಕುವೆಂಪು. ‘ಕುಂಬಾರಗೆ ವರುಷ ದೊಣ್ಣೆಗೆ ನಿಮಿಷ...’ ಎಂಬಂತೆ, ಕಾಲಾಂತರದಿಂದ ಒಡಮೂಡಿದ ಅನ್ಯೋನ್ಯತೆಯು ಜಾತಿ-ಧರ್ಮದ ಕ್ಷುಲ್ಲಕ ಕಾರಣಕ್ಕೆ ಛಿದ್ರಗೊಳ್ಳುತ್ತಿರುವ ನಿತ್ಯ ಆತಂಕವೂ ನಮ್ಮ ವರ್ತಮಾನವನ್ನು ಕಾಡುತ್ತಿದೆ.

‘ಈ ಭೂಮಿಯ ಮೇಲೆ ನಾನಾ ವಿಧದ ಜನರಿದ್ದಾರೆ. ಅವರನ್ನು ಭೂಮಿ, ನೀರು, ಜಾತಿ, ಮತ, ಆಚಾರಾಭ್ಯಾಸಗಳು ಬೇರ್ಪಡಿಸಿವೆ. ಆದರೆ ಎಲ್ಲರ ಹೃದಯ, ಬುದ್ಧಿಗಳು ಒಂದೇ ತೆರನಾಗಿವೆ. ಆಕಸ್ಮಿಕವಾಗಿ ಬರುವ ಒತ್ತಡಗಳು ಒಂದೋ ಅವರ ಮೂಲಭೂತ ಭಾವನೆಗಳನ್ನು ಅರಳಿಸುತ್ತವೆ ಅಥವಾ ಕೆರಳಿಸುತ್ತವೆ. ಅರಳಿದರೆ ಅದು ಸಾಹಿತ್ಯವಾಗಿ, ಸಂಗೀತವಾಗಿ ಅಧ್ಯಾತ್ಮವಾಗುತ್ತದೆ. ಮುದುಡಿದಾಗ ಹೊಡೆದಾಟ, ದೊಂಬಿ, ರಕ್ತಪಾತದಲ್ಲಿ ಕೊನೆಯಾಗುತ್ತದೆ. ಅದರ ಫಲವಾಗಿ ಅವರ ಪರಿಸರ, ಪ್ರಪಂಚವು ಭಾವನೆಗಳ ತೀವ್ರತೆಯಿಂದ ಕಂಪಿಸುತ್ತದೆ...’ ಎಂದವರು ಗಾಂಧಿ.

ಬಾವಿಯಲ್ಲಿ ಒರತೆಗಳು ಪಸೆಯನ್ನೊಸರುತ್ತಲೇ ಇರುತ್ತವಾದರೂ ಕೆಲವೊಮ್ಮೆ ಹೂಳು ತುಂಬಿ ಕೊಂಡು ಜಲದ ಕಣ್ಣುಗಳು ಕಟ್ಟಿಕೊಳ್ಳುವುದು ಸಹಜ. ಸಮಾಜವೆಂಬ ಬಾವಿಯಲ್ಲಿನ ಹೂಳು ತೆಗೆದು ಮಾನವೀಯತೆಯ ಒರತೆಗಳು ತೆರೆಯುವಂತೆ ಕಾಯ ಬೇಕಿರುವುದು ಸಾಹಿತ್ಯ ಮತ್ತು ಸಮಾಜಮುಖಿ ಚಿಂತನೆಗಳ ಆದ್ಯ ಕರ್ತವ್ಯ.

ಈ ನಾಡಿನಲ್ಲಿ ಜಾತಿಪದ್ಧತಿಯನ್ನು ಮೀರಲು ನಡೆದ ಬಹುದೊಡ್ಡ ಸಾಮಾಜಿಕ ಚಳವಳಿಯೆಂದರೆ ಅದು ವಚನಕ್ರಾಂತಿ. ಶ್ರಮಸಂಸ್ಕೃತಿಯನ್ನು ಬಿತ್ತಿ, ಸಮಸಮಾಜವನ್ನು ಕನಸಿದವರು ಶರಣರು. ಆದರೆ, ಅನುಸರಣೆ ಮತ್ತು ಅರ್ಥೈಸುವಿಕೆಯಲ್ಲಾದ ತಪ್ಪಿನಿಂದಾಗಿ ಬಸವಣ್ಣನನ್ನೂ ಸಮುದಾಯವೊಂದಕ್ಕೆ ಸೀಮಿತಗೊಳಿಸಲಾಗುತ್ತಿದೆ. ದಾಸ ಪರಂಪರೆ, ಶಿಶುನಾಳ ಷರೀಫ, ವಾಲ್ಮೀಕಿ, ನಾರಾಯಣ ಗುರು, ಸೇವಾಲಾಲ್ ಮೊದಲಾದವರ ವಿಷಯದಲ್ಲೂ ಅದೇ ಕಥೆ. ಕತ್ತಲ ಜಗತ್ತಿಗೆ ಸಂತರು, ಧರ್ಮಸಂಸ್ಥಾಪಕರು ತೋರಿದ ಬೆಳಕಿನ ದಾರಿಯಲ್ಲೀಗ ಮಬ್ಬು ಕವಿದಿದೆ.

ಜಗತ್ತಿನಾದ್ಯಂತ ಏಳುನೂರು ಕೋಟಿಮನುಷ್ಯರಿದ್ದರೂ ಮನುಷ್ಯತ್ವಕ್ಕಾಗಿ ಹುಡುಕುವ ಪರಿಸ್ಥಿತಿ ಇದೆ! ಎಲ್ಲರೂ ದೇವರು-ಧರ್ಮದ ಮಾತಾಡುತ್ತಾರಾದರೂ ದಯೆ, ಕರುಣೆಗಳಿಗಾಗಿ ಬೇಡುವುದು ಮಾತ್ರ ಇನ್ನೂ ನಿಂತಿಲ್ಲ. ಕೇವಲ ಒಬ್ಬ ಮನುಷ್ಯನಾಗುವುದು ಅಷ್ಟೊಂದು ಕಷ್ಟವೇ ಈ ಭೂಮಿಯಲ್ಲಿ?

ದ್ವೇಷಬಿತ್ತನೆಯಲ್ಲಿ ಭವಿಷ್ಯದ ಪೀಳಿಗೆಗೆ ರೋಗಗ್ರಸ್ತ ನಾಳೆಗಳನ್ನು ಕರುಣಿಸುತ್ತಿರುವ ವಿದ್ಯಮಾನಗಳು ತಲೆಮಾರುಗಳನ್ನು ಅನಿಶ್ಚಿತತೆಯ ಪೆಡಂಭೂತವಾಗಿ ಕಾಡುವುದು ಸತ್ಯ. ಋಷಿಸಂತರ ಆದರ್ಶಗಳನ್ನು ವಿಚಾರವಾಗಿ ಆರಾಧಿಸುವ, ಪಾಲಿಸುವ, ಎದೆಯಲ್ಲಿ ಟ್ಟುಕೊಳ್ಳುವ ಬದಲು ಅವರನ್ನು ಗುಡಿ ಕಟ್ಟಿ ಕೂಡಿ ಹಾಕಿದ್ದೇವೆ. ಜೀವಪರವಾಗಿ ಬದುಕು ಸವೆಸಿದ ದಾರ್ಶನಿಕರನ್ನೂ ಕಡೆಗೆ ದೇವರನ್ನೂ ಜಾತಿ-ಧರ್ಮಗಳಿಗೆ ಗಂಟುಹಾಕಿ, ಸಂಕುಚಿತತೆಯ ಸಂಕೋಲೆಯಲ್ಲಿ ಬಂಧಿಸಿಬಿಟ್ಟಿದ್ದೇವೆ. ದೇವರಿಗೂ ಇಲ್ಲಿ ಸ್ವಾತಂತ್ರ್ಯ ಕಳಕೊಂಡು ಗೋಳಾಡುವ ಪರಿಸ್ಥಿತಿ!

‘ಸರ್ವೇಜನಾಃ ಸುಖಿನೋ ಭವಂತು’ ಮಂತ್ರವನ್ನಾಗಿ ‘ವಸುದೈವ ಕುಟುಂಬಕಂ’ ತತ್ವವನ್ನಾಗಿ ಕಲಿಸಿದ ಹಿಂದೂ ಧರ್ಮಕ್ಕೆ ಮತ್ತೊಬ್ಬರ ಶಾಂತಿಯನ್ನು ಕಬಳಿಸುವುದು ಸಾಧ್ಯವೇ?, ‘ನಿನ್ನಂತೆಯೇ ನೆರೆ ಯವರನ್ನೂ ಪ್ರೀತಿಸು...’ ಅಂತ ಬೋಧಿಸಿದ ಯೇಸುವಿನ ಆರಾಧಕನಾದ ನೈಜ ಕ್ರೈಸ್ತನೊಬ್ಬನಿಗೆ ಕೋಮುವಾದಿಯಾಗಲು ಸಾಧ್ಯವೇ?, ‘ಒಬ್ಬ ಮನುಷ್ಯನು ಸಂಕಟಪಟ್ಟರೆ ಸಕಲ ಮನುಕುಲವೇ ಸಂಕಟಪಟ್ಟಂತೆ...’ ಎಂದು ಅರುಹಿದ ಕುರಾನ್‍ನ ನೈಜ ಅನುಯಾಯಿಗಳಿಗೆ ನಿರಪರಾಧಿಗಳನ್ನು ಹಿಂಸಿಸಲು ಸಾಧ್ಯವಾಗುವುದೇ? ಅಸಾಧ್ಯ. ಹಾಗಿದ್ದಾಗ ಧರ್ಮದ ಹೆಸರಲ್ಲಿ ನಡೆಯುವ ಗಲಭೆಗಳಿಗೂ ಧರ್ಮಕ್ಕೂ ಸಂಬಂಧವಿಲ್ಲ ಎನ್ನುವುದು ಸ್ಪಷ್ಟ.

ಕ್ರೌರ್ಯವನ್ನು ಬಿತ್ತುವವರು ಯಾರಿದ್ದರೂ ಅವರೆಲ್ಲಾ ಧರ್ಮವಿರೋಧಿಗಳೇ ಆಗಿರುತ್ತಾರೆ! ‘ಕುಲದ ನೆಲೆಯನೇನಾದರು ಬಲ್ಲಿರಾ...?’ ಎಂದು ಗದರುತ್ತಲೇ ‘ಮಾನವಧರ್ಮ ಬಲುದೊಡ್ಡದು...’ ಅಂತ ಸಾರಿದೆ ದಾಸವಾಣಿ. ಜೀವ ಬೆಸೆಯುವ ಪ್ರೀತಿಯೊಂದಿಗೆ ವೈಚಾರಿಕ ಬೆಳಕನ್ನು ಎದೆ ತುಂಬಿಕೊಳ್ಳಬೇಕಾದ ತುರ್ತಿನಲ್ಲಿದೆ ವರ್ತಮಾನ. ದೇಶ-ಭಾಷೆ, ಹಣ-ಅಂತಸ್ತು, ಜಾತಿ-ಧರ್ಮದ ಟ್ಯಾಗ್‍ಲೈನ್ ಕಳಚಿಟ್ಟು, ಕೇವಲ ಮನುಷ್ಯನಾಗಿ ಜೀವಜೀವಗಳಲ್ಲಿ ದೈವತ್ವವನ್ನು ಕಂಡು, ಎಲ್ಲರೊಂದಿಗೆ ಅಕ್ಕರೆಯಲ್ಲಿ ಒಡನಾಡಲು ಸಾಧ್ಯವಾದರೆ, ಇವತ್ತಿನ ಜಗತ್ತನ್ನು ಕಾಡುವ ಅರ್ಧದಷ್ಟು ಗಂಭೀರವ್ಯಾಧಿಗಳು ಅವಾಗಿಯೇ ಬಗೆಹರಿಯುತ್ತವೆ.

ಜಾಗತಿಕ ಸಮಸ್ಯೆಯಾಗಿ ಬದಲಾಗಿರುವ ತೀವ್ರಗತಿಯ ಅಸಹನೆ, ಕ್ರೌರ್ಯಗಳೆಂಬ ಕ್ಯಾನ್ಸರ್‌ಗೆ ಈಗ ಮನೆಮದ್ದು ಅರೆಯಬೇಕಿದೆ. ಪ್ರೀತಿ, ಸಹನೆ, ಸಹಬಾಳ್ವೆಯ ಘನಮೌಲ್ಯಗಳೊಂದಿಗೆ ಸರಳ, ಸಂಸ್ಕಾರಯುತ ಬದುಕಿಗೆ ಜನ ಹೊರಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT