ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿಗೆ ಬೇಕಿದೆ ಬಿಡುಗಡೆ

ನೇಕಾರರು, ನೂಲುಗಾರರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಖಾದಿ ಉತ್ಪಾದನೆ ಮಾತ್ರ ಹೆಚ್ಚುತ್ತಿರುವ ಚೋದ್ಯದ ಹಿಂದಿನ ರಹಸ್ಯವೇನು?
Last Updated 17 ಮಾರ್ಚ್ 2019, 20:01 IST
ಅಕ್ಷರ ಗಾತ್ರ

ಖಾದಿ ಉದ್ಯಮದಲ್ಲಿ ಕಳೆದ ಎರಡು ವರ್ಷಗಳಲ್ಲಿ ಏಳು ಲಕ್ಷ ಉದ್ಯೋಗಗಳು ಕಡಿತಗೊಂಡಿವೆ. ಈ ಅಂಕಿ-ಅಂಶ ಗ್ರಾಮೀಣ ಆರ್ಥಿಕತೆ ಕುರಿತು ಕಾಳಜಿ ಇರುವ ಎಲ್ಲರಲ್ಲೂ ಆತಂಕ ಹುಟ್ಟಿಸುತ್ತದೆ. ಆದರೆ ಸಂಖ್ಯೆಯಲ್ಲಿ ಕಾಣುವುದಷ್ಟೆ ನಿಜವೇ? ಉದ್ಯೋಗ ಕಡಿತವಾದರೂ ಖಾದಿಯ ಉತ್ಪಾದನೆ ಹೆಚ್ಚಾಗಿರುವ ಒಂದು ಚೋದ್ಯವೂ ನಮ್ಮ ಮುಂದಿದೆಯಲ್ಲವೇ?ವರ್ತಮಾನದ ಖಾದಿ ಕ್ಷೇತ್ರದ ಬೆಳವಣಿಗೆಗಳನ್ನು ಸಮಗ್ರವಾಗಿ ಗ್ರಹಿಸಿದರೆ ಈ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ.

ಸ್ವಾತಂತ್ರ್ಯಪೂರ್ವದಲ್ಲಿದ್ದ ಅಖಿಲ ಭಾರತ ನೂಲುಗಾರರ ಸಂಘ ಮತ್ತು ಅಖಿಲ ಭಾರತ ಗ್ರಾಮೋದ್ಯೋಗ ಸಂಘಗಳು ಸ್ವಾತಂತ್ರ್ಯಾನಂತರ ಕೇಂದ್ರ ಸರ್ಕಾರದ ತೆಕ್ಕೆಗೆ ಬಿದ್ದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವಾಯಿತು. ರಾಜ್ಯ ಸರ್ಕಾರಗಳು ಖಾದಿ ಮಂಡಳಿಗಳನ್ನು ಸ್ಥಾಪಿಸಿದವು. ಈ ಎರಡೂ ಸಂಸ್ಥೆಗಳು ಖಾದಿ ಸಂಸ್ಥೆಗಳಿಗೆ ಸಾಲ,ಅನುದಾನ,ಅವುಗಳ ಉತ್ಪನ್ನಗಳಿಗೆ ಮಾರಾಟದ ಮೇಲೆ ರಿಯಾಯಿತಿ,ಖಾದಿ ಪ್ರಮಾಣಪತ್ರ ನೀಡುವುದು ಮುಂತಾದ ಚಟುವಟಿಕೆಗಳನ್ನು ಮಾಡತೊಡಗಿದವು.

ಗಾಂಧಿ ಜಯಂತಿ ಮತ್ತು ಗಣರಾಜ್ಯೋತ್ಸವದ ಸಂದರ್ಭಗಳಲ್ಲಿ ಒಟ್ಟು 90 ದಿನಗಳ ಅವಧಿಯಲ್ಲಿ ವಿಶೇಷ ರಿಯಾಯಿತಿ ನೀಡುವ ಪರಿಪಾಟವೊಂದು ಆರಂಭವಾಯಿತು. ವರ್ಷಪೂರ್ತಿ ಶೇ 15 ಮತ್ತು ವಿಶೇಷ ದಿನಗಳಲ್ಲಿ ಶೇ 40ರ ರಿಯಾಯಿತಿ ದರದಲ್ಲಿ ಮಾರಾಟ ನಡೆಯತೊಡಗಿತು. ಅಂದರೆ, 100 ರೂಪಾಯಿಯ ಬಟ್ಟೆಗೆ ಗ್ರಾಹಕನಿಂದ ₹60, ಉಳಿದದ್ದನ್ನು ಖಾದಿ ಆಯೋಗ ಮತ್ತು ಖಾದಿ ಮಂಡಳಿಯಿಂದ ತಲಾ ₹ 20ರಂತೆ ಪಡೆಯುವ ವ್ಯವಸ್ಥೆ ಇದು.

ಇದನ್ನು ಖಾದಿ ಸಂಸ್ಥೆಗಳು ದುರುಪಯೋಗ ಪಡಿಸಿಕೊಂಡವು. ಬಟ್ಟೆಯನ್ನು ಮಾರದೆಯೇ ಸುಳ್ಳು ರಸೀದಿಗಳನ್ನು ಹರಿದು ಖಾದಿ ಆಯೋಗ ಮತ್ತು ಮಂಡಳಿಗಳಿಂದ ‘ರಿಯಾಯಿತಿ’ ಮೊತ್ತವನ್ನು ಪಡೆದುಕೊಂಡವು. ಇದು ಕೋಟ್ಯಂತರ ರೂಪಾಯಿಯ ದಂಧೆಯಾದಾಗ ಆಯೋಗವು ವ್ಯಾಪಾರದ ಹಂತದಲ್ಲಿ ರಿಯಾಯಿತಿ ನೀಡುವುದನ್ನು ತಪ್ಪಿಸಿ, ಸಂಸ್ಥೆಯ ಉತ್ಪಾದನಾ ಹಂತದಲ್ಲಿ ನೆರವು ನೀಡುವ ಯೋಜನೆಯನ್ನು ಜಾರಿಗೆ ತಂದು ಅದನ್ನು ಎಂ.ಡಿ.ಎ. (Marketing Development Assistance)ಎಂಬ ಹೆಸರಿನಲ್ಲಿ ನೀಡತೊಡಗಿತು.ನಿರ್ದಿಷ್ಟಸಂಸ್ಥೆಯ ಒಟ್ಟು ಉತ್ಪಾದನೆಯನ್ನು ಲೆಕ್ಕಹಾಕಿ ಅದರ ಶೇ 35ರಷ್ಟು ಹಣವನ್ನು ಆಯೋಗ ಪಾವತಿಸುತ್ತಿತ್ತು. ಇದರಲ್ಲಿ ಶೇ 15ರಷ್ಟನ್ನು ಕುಶಲಕರ್ಮಿಗಳಿಗೆ, ಶೇ 20ರಷ್ಟನ್ನು ಮಾರಾಟಕ್ಕೆ ನೀಡುವ ವ್ಯವಸ್ಥೆ ರೂಪಿಸಲಾಯಿತು.

ಮೊದಲು ಪೂರ್ಣ ಹಣವನ್ನು ಸಂಸ್ಥೆಯೇ ಪಡೆದು ಬಳಿಕ ಕುಶಲಕರ್ಮಿಗಳಿಗೆ ನೀಡುತ್ತಿತ್ತು. ಮುಂದೆ ಆಯೋಗವೇ ನೇರವಾಗಿ ಕುಶಲಕರ್ಮಿಗಳಿಗೆ ನೀಡುವ ವ್ಯವಸ್ಥೆಯನ್ನು ತಂದಾಗ ನೇಕಾರರೇ ಇಲ್ಲದೆ, ನೂಲುಗಾರರೇ ಇಲ್ಲದೆ ಎಂ.ಡಿ.ಎ. ಪಡೆಯುತ್ತಿದ್ದ ಸಂಸ್ಥೆಗಳಿಗೆ ತೊಂದರೆಯಾಗತೊಡಗಿತು. ಕುಶಲಕರ್ಮಿಗಳ ವಿವರಗಳು ಕಂಪ್ಯೂಟರೀಕರಣಗೊಂಡವು. ನೇಕಾರರ ಆಧಾರ್ ಮತ್ತು ಇತರ ದಾಖಲೆಗಳೊಂದಿಗೆ ತಾಳೆ ಹಾಕುವ ಕೆಲಸ ಪ್ರಾರಂಭವಾದ ಮೇಲೆ, ಸಂಸ್ಥೆಯ ಪುಸ್ತಕದಲ್ಲಿ ಮಾತ್ರ ಇದ್ದ ನೇಕಾರರು ಕಳಚಿಬಿದ್ದರು. ಕೆಲಸ ಕಳೆದುಕೊಂಡ ಏಳು ಲಕ್ಷ ಮಂದಿಯಲ್ಲಿ ಪುಸ್ತಕದಲ್ಲಷ್ಟೇ ಇದ್ದ ನೇಕಾರರೂ ಇದ್ದಾರೆ. ಇವರ ಸಂಖ್ಯೆಯೇ ಶೇ 50ಕ್ಕಿಂತ ಹೆಚ್ಚು ಎಂದು ಖಾದಿ ಸಂಸ್ಥೆಯ ಹಿರಿಯರೊಬ್ಬರು ತಮ್ಮ ಅನುಭವದಿಂದ ಹೇಳುತ್ತಾರೆ.

ಇನ್ನು ಹೆಚ್ಚುತ್ತಿರುವ ಖಾದಿ ಉತ್ಪಾದನೆ. ಸರ್ಕಾರ ಭ್ರಷ್ಟ ವ್ಯವಸ್ಥೆಯನ್ನು ಎಲ್ಲಿಯವರೆಗೆ ಪೋಷಿಸುತ್ತಿರುತ್ತದೋ ಅಲ್ಲಿಯವರೆಗೆ ಅದು ಹೆಚ್ಚುತ್ತಲೇ ಇರುತ್ತದೆ. ಇಂದು ಹೆಚ್ಚಿನ ಸಂಸ್ಥೆಗಳು ಬಟ್ಟೆಯನ್ನು ಉತ್ಪಾದಿಸಿ ಮಾರುವ ಸಾಮರ್ಥ್ಯವನ್ನು ಕಳೆದುಕೊಂಡಿವೆ. ಹಾಗಾಗಿ ಅವು ತಮಿಳುನಾಡಿನ ‘ಪ್ರಸಿದ್ಧ’ ಖಾದಿ ಸಂಸ್ಥೆಗಳಿಗೆ ಹೋಗಿ ಬಟ್ಟೆಯನ್ನು ತರುತ್ತವೆ. ಅಲ್ಲಿ ಬಟ್ಟೆ ಹೇಗೆ ತಯಾರಾಗುತ್ತದೆ ಎಂಬುದನ್ನು ಆಸಕ್ತರು ಅಲ್ಲೇ ಹೋಗಿ (ಒಳಗೆ ಬಿಟ್ಟರೆ) ನೋಡಬೇಕು. ಹಾಗಾಗಿ ನೇಕಾರರ ಸಂಖ್ಯೆ ಕಡಿಮೆಯಾದರೂ ಉತ್ಪಾದನೆ ಜಾಸ್ತಿಯಾಗುತ್ತಿದೆ. ಅದು ಮಾರಾಟವೂ ಆಗುತ್ತಿದೆ,ಸರ್ಕಾರದ ಅನುದಾನಗಳೂ,ಸಾಲಗಳೂ ಯಶಸ್ವಿಯಾಗಿ ವಿತರಣೆಯಾಗುತ್ತಿವೆ ಎಂದರೆ ವ್ಯವಸ್ಥೆ ಹೇಗೆ ನಡೆಯುತ್ತಿದೆ ಎಂದು ಅರ್ಥವಾಗುತ್ತದೆ. ಲೆಕ್ಕ ಬರೆಯುವ ಚಾಣಾಕ್ಷತನ ಕಂಪ್ಯೂಟರೀಕರಣದ ನಂತರ ಹೆಚ್ಚಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ತಾವು ಅಭಿಮಾನದಿಂದ ಕೊಳ್ಳುವ ಖಾದಿ ಅರಿವೆಯು ನೇಕಾರರ ಹಸ್ತದ ಸ್ಪರ್ಶ ಪಡೆದಿದೆಯೇ ಎಂಬುದನ್ನು ಗ್ರಾಹಕರು ಅರಿಯಬೇಕಿದೆ.

ಅಸಲಿ ಖಾದಿಯು ಚಿನ್ನದಷ್ಟು ಅಮೂಲ್ಯವಾಗತೊಡಗಿದೆ. ನೇಕಾರರ ಕೌಶಲ ಮಾತ್ರವಲ್ಲ ಅವರ ಸಂಖ್ಯೆಯೂ ಕ್ಷೀಣಿಸತೊಡಗಿದೆ. ಆದರೆ ಅದು ಸರ್ಕಾರದ ಪುಸ್ತಕಗಳಲ್ಲಿ ಹೆಚ್ಚತೊಡಗಿದೆ. ಸ್ವಾತಂತ್ರ್ಯಾನಂತರ ಮೇಲೆ ಹೇಳಿದ ಸರ್ಕಾರಿ ಸಂಸ್ಥೆಗಳನ್ನು ಹುಟ್ಟು ಹಾಕಿದಾಗಲೇ ಅಸಲಿ ಖಾದಿ ನಮ್ಮಿಂದ ದೂರವಾಗಿದೆ. ಇಂದು ಸರ್ಕಾರಿ ಖಾದಿ ಮತ್ತು ಅಸರ್ಕಾರಿ ಖಾದಿ ಎಂಬ ಎರಡು ಖಾದಿಗಳಿವೆ. ಗಾಂಧಿ ಹುಟ್ಟುಹಾಕಿದ ಸರ್ವ ಸೇವಾ ಸಂಘ ಎಂಬ ರಾಷ್ಟ್ರ ಮಟ್ಟದ ಸಂಸ್ಥೆಯು ಸರ್ಕಾರದಿಂದ ಖಾದಿಯನ್ನು ಮುಕ್ತಗೊಳಿಸಲು ಅಸರ್ಕಾರಿ ಖಾದಿ ಚಳವಳಿಯನ್ನು ಕಟ್ಟಲು ಪ್ರಯತ್ನಿಸುತ್ತಿದೆ. ಅಂದಹಾಗೆ, ನಮ್ಮ ಪ್ರಧಾನಿ ಧರಿಸುವ ಖಾದಿ ಯಾವ ಸಂಸ್ಥೆಯಲ್ಲಿ ತಯಾರಾಗಿದ್ದು ಎಂಬ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಿದರೆ, ಅಸಲಿ ಮತ್ತು ನಕಲಿ ನಡುವಿನ ವ್ಯತ್ಯಾಸ ಗೊತ್ತಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT