ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ‘ಹೊಸ ಬರಹ’ ಎಂಬ ನಡುಗಡ್ಡೆ!

ಕನ್ನಡ ವರ್ಣಮಾಲೆಗೆ ಸಂಬಂಧಿಸಿದಂತೆ ಈಗಿನ ಮತ್ತು ಮುಂದಿನ ತಲೆಮಾರಿನಲ್ಲಿ ಗೊಂದಲ ಮೂಡಿಸುವ ಅಗತ್ಯ ಇದೆಯೇ?
Last Updated 11 ಜನವರಿ 2022, 1:20 IST
ಅಕ್ಷರ ಗಾತ್ರ

‘ಹೊಸ ಬರಹ’ ದ ಹೆಸರಿನಲ್ಲಿ ಕನ್ನಡ ವರ್ಣಮಾಲೆಗೆ ಕತ್ತರಿ ಪ್ರಯೋಗಕ್ಕೆ ಹೊರಟಿರುವುದನ್ನು ಪ್ರತಿಭಾ ನಂದಕುಮಾರ್ ಅವರು ವಿರೋಧಿಸಿರುವುದು (ಚರ್ಚೆ, ಜ. ) ಅತ್ಯಂತ ಸರಿಯಾಗಿಯೇ ಇದೆ. ಯಾವುದೇ ಕಾಲದಲ್ಲೂ ಕನ್ನಡದಲ್ಲಿ ಆಡುನುಡಿ ಮತ್ತು ಬರವಣಿಗೆಯ ಭಾಷೆ ಒಂದೇ ಆಗಿರಲಿಲ್ಲ. ಹಳಗನ್ನಡದ ಕೃತಿಗಳಲ್ಲಿ ಬಳಕೆಯಾಗಿರುವ ಭಾಷೆ, ಸಾಹಿತ್ಯ ರಚನೆಗೋಸ್ಕರ ಬರಹಗಾರರು ರೂಪಿಸಿಕೊಂಡದ್ದೇ ಹೊರತು ಆ ಕಾಲದ ಜನರ ಕನ್ನಡವೇನಾಗಿರಲಿಲ್ಲ.

ನಡುಗನ್ನಡದ ಕಾಲದಲ್ಲಾದರೂ ಆಗಿನ ಗದ್ಯ, ಕಾವ್ಯ ಕೃತಿಗಳಲ್ಲಿ, ವಚನಗಳಲ್ಲಿ ಬಳಕೆಯಾಗಿರುವ ಭಾಷೆ ಕೂಡ ಜನರ ಆಡುನುಡಿಗೆ ಹತ್ತಿರವಾದ ಭಾಷೆಯಾಗಿದೆಯೇ ವಿನಾ ಆಡುನುಡಿಯ ತದ್ವತ್ ಅಲ್ಲ. ಅಲ್ಲೂ ಮಹಾ ಪ್ರಾಣಾಕ್ಷರಗಳಿವೆ. ಈಗಲಾದರೂ ಪ್ರಮಾಣಭಾಷೆಯಾಗಿ ಕರ್ನಾಟಕದಲ್ಲೆಲ್ಲಾ ಒಂದೇ ಭಾಷೆಯನ್ನು ಬಳಸುತ್ತಿದ್ದೇವೆ. ಅದರಲ್ಲಿ ಎಲ್ಲರಿಗೂ ಒಪ್ಪಿತವಾದ ಮಹಾಪ್ರಾಣಾಕ್ಷರಗಳು ಇರುವ ಭಾಷೆಯೇ ರೂಢಿಯಲ್ಲಿದೆ ಮತ್ತು ನಾವು ಆಡುವ ಕನ್ನಡಕ್ಕೂ ಅದಕ್ಕೂ ವ್ಯತ್ಯಾಸವಿದ್ದೇ ಇದೆ.

ಒಂದು ಭಾಷೆಗೆ ಸಾಧ್ಯವಾದಷ್ಟೂ ಜಗತ್ತಿನ ಯಾವುದೇ ಭಾಷೆಯ ಎಲ್ಲ ಬಗೆಯ ಉಚ್ಚಾರಗಳನ್ನೂ ಮಾಡಲು ಸಾಧ್ಯವಿರುವಂಥ ವರ್ಣಮಾಲೆಯಿದ್ದರೆ ಅದೊಂದು ಅನುಕೂಲವೇ ವಿನಾ ದೋಷ ಖಂಡಿತಾ ಅಲ್ಲ. ಕನ್ನಡ ವರ್ಣಮಾಲೆಯಲ್ಲಿ ಈಗಿರುವ ಅಕ್ಷರಗಳಿಂದ ಇಂದು ಅದು ಬಹುಮಟ್ಟಿಗೆ ಸಾಧ್ಯವಾಗುತ್ತಿರುವುದು ಎಲ್ಲರ ಅನುಭವಕ್ಕೆ ಬಂದಿರುವಂಥದ್ದೇ. ತಮಿಳಿನ ಮಿತ ಸಂಖ್ಯೆಯ ವರ್ಣಗಳಿಂದ ಅದು ಸಾಧ್ಯವಿಲ್ಲವೆನ್ನುವುದು ಗೊತ್ತಿರುವಂಥದ್ದೇ. ಇಷ್ಟಾಗ್ಯೂ ಇಂಗ್ಲಿಷಿನ ‘F’ ಮತ್ತು ‘Z’ ಉಚ್ಚಾರ ಮಾಡಲು ನಾವು ನಮ್ಮ ವರ್ಣಮಾಲೆ ಅಪರ್ಯಾಪ್ತವೆನಿಸಿ ‘ಫ’ದ ಕೆಳಗೆ ಮತ್ತು ‘ಜ’ದ ಕೆಳಗೆ ಎರಡು ಚುಕ್ಕೆಗಳನ್ನು ಹಾಕುವ ಮೂಲಕ ಸರಿದೂಗಿಸಿಕೊಳ್ಳುತ್ತಿದ್ದೇವೆ.

ಈಗ ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಇರುವ ಕೃತಿಗಳ ಭಾಷೆಯನ್ನು ಬರೆಯಲು ಅಥವಾ ಓದಿಕೊಳ್ಳಲು ಈ ಹೊಸ ಬರಹಕ್ಕೆ ಪರಿವರ್ತಿಸಬೇಕೇ? ಹಾಗಿಲ್ಲದಿದ್ದರೆ ಈಗಿನ ಅಥವಾ ಇನ್ನು ಮುಂದಿನ ತಲೆಮಾರಿನವರಿಗೆ ಅವನ್ನು ಓದಲು ಈಗ ರೂಢಿಯಲ್ಲಿರುವ ಪ್ರಮಾಣ ಕನ್ನಡದ ವರ್ಣಮಾಲೆಯ ಜೊತೆಗೆ ಹೊಸ ಬರಹದ ವರ್ಣಮಾಲೆಯನ್ನೂ ಕಲಿಯಬೇಕಾಗುತ್ತದೆಯೇ? ಇಲ್ಲ ಗೊಂದಲಕ್ಕೆ ಬೀಳುವುದೇ ಅವರ ಹಣೆಯ ಬರಹವಾಗಬೇಕೇ?

ಕನ್ನಡದ ಮೇಲಿನ ಅತ್ಯುಗ್ರ ಅಭಿಮಾನದಿಂದ ಆಂಡಯ್ಯನು ಸಂಸ್ಕೃತ ಬಳಸುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಬರೀ ತದ್ಭವಗಳಿಂದ ಮತ್ತು ಕನ್ನಡ ಶಬ್ದಗಳಿಂದ ಕೃತಿ ರಚಿಸಿದ ಪ್ರಯೋಗ ಒಂದು ನಡುಗಡ್ಡೆಯಾಗಿಯೇ ಉಳಿದಿದೆ. ಈ ಹೊಸ ಬರಹ ಕೂಡ ಒಂದು ನಡುಗಡ್ಡೆಯಾಗಿಯೇ ಉಳಿಯುತ್ತದೆ ಅಷ್ಟೆ.

- ಡಾ. ಆರ್.ಲಕ್ಷ್ಮೀನಾರಾಯಣ, ಬೆಂಗಳೂರು

ಎಲ್ಲರ ಕನ್ನಡ ಎಂದರೆ…

ಡಿ.ಎನ್.ಶಂಕರ ಬಟ್ ಅವರು ಮೂವತ್ತು ವರ್ಷಗಳಿಂದ ಪ್ರತಿಪಾದಿಸುತ್ತಿರುವ ‘ಎಲ್ಲರ ಕನ್ನಡ’ ಎಂಬ ಸಂಗತಿಯು ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಗಳನ್ನು ಸಂಪೂರ್ಣವಾಗಿ ಬಿಟ್ಟುಬಿಡ
ಬೇಕೆಂಬ ಉದ್ದೇಶವನ್ನು ಹೊಂದಿಲ್ಲ. ಅವರು ಹೇಳುತ್ತಿರುವುದು ಅತ್ಯಂತ ಸರಳವಾಗಿದೆ. ‘ಕನ್ನಡ ಬರಹದಲ್ಲಿ ಮಹಾಪ್ರಾಣದಿಂದ ಕೂಡಿದ ಪದಗಳನ್ನು ಬರೆಯುವಾಗ, ಮಹಾಪ್ರಾಣದ ಜಾಗದಲ್ಲಿ ಅಲ್ಪಪ್ರಾಣವನ್ನು ಬರೆದರೆ, ಅದನ್ನು ತಪ್ಪು ಎಂದು ಪರಿಗಣಿಸಬೇಡಿ’. ಉದಾಹರಣೆಗೆ: 1. ಭರತ ಖಂಡದ ಆರ್ಥಿಕ ಪರಿಸ್ಥಿತಿಯು ಈಗ ಸುಧಾರಿಸುತ್ತಿದೆ. 2. ಬರತ ಕಂಡದ ಆರ್ತಿಕ ಪರಿಸ್ತಿತಿಯು ಈಗ ಸುದಾರಿಸುತ್ತಿದೆ.

ಮೇಲ್ಕಂಡ ವಾಕ್ಯಗಳನ್ನು ಯಾವುದೇ ಕನ್ನಡಿಗ ಧ್ವನಿರೂಪದಲ್ಲಿ ಉಚ್ಚರಿಸಿದಾಗ ಒಂದೇ ಬಗೆಯಲ್ಲಿ ಇರುತ್ತದೆ. ಕಾರಣವೇನೆಂದರೆ, ಮಹಾಪ್ರಾಣಯುಕ್ತವಾದ ಪದಗಳನ್ನು ಕನ್ನಡಿಗರು ಉಚ್ಚರಿಸುವಾಗ ಅಲ್ಪಪ್ರಾಣಗಳಾಗಿಯೇ ಉಚ್ಚರಿಸುತ್ತಾರೆ.

ಕನ್ನಡಿಗರು ತಮ್ಮ ಬರಹದಲ್ಲಿ ಪ್ರಾಕೃತ, ಸಂಸ್ಕೃತ, ಅರೇಬಿಕ್, ಪರ್ಶಿಯನ್, ಮರಾಠಿ ಮತ್ತು ಇಂಗ್ಲಿಷ್‌ ಭಾಷೆಗಳಿಂದ ಸಾವಿರಾರು ಪದಗಳನ್ನು ಪಡೆದುಕೊಂಡು ಬಳಸುತ್ತಿದ್ದಾರೆ. ಇವುಗಳಲ್ಲಿ ಸಂಸ್ಕೃತದಿಂದ ತೆಗೆದುಕೊಂಡಿರುವ ಪದಗಳನ್ನು ಹೊರತುಪಡಿಸಿ ಇನ್ನುಳಿದ ಅನ್ಯಭಾಷೆಯ ಪದಗಳನ್ನು ಕನ್ನಡ ಧ್ವನಿಮಾಗಳ ಉಚ್ಚಾರಣೆಗೆ ತಕ್ಕಂತೆಯೇ ಬರೆಯು
ತ್ತಿದ್ದಾರೆ. ಉದಾಹರಣೆ: ‘ರಈಯತ್’ ಎಂಬ ಅರೇಬಿಕ್ ಭಾಷೆಯ ಪದ ಕನ್ನಡಿಗರಲ್ಲಿ ‘ರೈತ ’ ಎಂದು ಉಚ್ಚಾರಣೆಗೊಳ್ಳುತ್ತಿದೆ.

ಅನ್ಯ ಭಾಷೆಗಳಿಂದ ಸ್ವೀಕರಿಸಿದ ಪದಗಳನ್ನು ಕನ್ನಡಿಗರು ಹೇಗೆ ಉಚ್ಚರಿಸುತ್ತಿದ್ದಾರೆಯೋ ಹಾಗೆಯೇ ಬರಹದಲ್ಲಿ ಬರೆದಾಗ ಅವನ್ನು ಒಪ್ಪಿಕೊಂಡಿರು
ವಂತೆಯೇ ಮಹಾಪ್ರಾಣಯುಕ್ತವಾದ ಸಂಸ್ಕೃತ ಪದಗಳನ್ನು ಅಲ್ಪಪ್ರಾಣಯುಕ್ತವಾಗಿ ಬರೆಯುವುದನ್ನು ಕನ್ನಡ ಬರಹ ಲೋಕ ಒಪ್ಪಿಕೊಳ್ಳಬೇಕು ಎಂಬುದು ಶಂಕರ ಬಟ್‌ ಅವರ ನಿಲುವು.

ಇಂತಹ ನಿಲುವಿಗೆ ಕಾರಣವೇನೆಂದರೆ, ಕನ್ನಡಿಗರಲ್ಲಿ ಬಹುತೇಕರು ‘ಎಲ್ಲಿ ಮಹಾಪ್ರಾಣದ ಜಾಗದಲ್ಲಿ ಅಲ್ಪಪ್ರಾಣವನ್ನು ಬರೆದರೆ ಓದಿದವರು ನಮ್ಮನ್ನು ಅಪಹಾಸ್ಯಕ್ಕೆ ಗುರಿಮಾಡುತ್ತಾರೆಯೋ’ ಎಂಬ ಹೆದರಿಕೆಯಿಂದ ಕನ್ನಡ ಬರಹದಲ್ಲಿ ತೊಡಗಲು ಹಿಂಜರಿಯುತ್ತಾರೆ. ಆದ್ದರಿಂದ ಕನ್ನಡ ಬರಹದಲ್ಲಿ ಅಲ್ಪಪ್ರಾಣ/ ಮಹಾಪ್ರಾಣಗಳನ್ನು ಸಮಾನವಾಗಿ ಪರಿಗಣಿಸಿದರೆ, ಆಗ ಕನ್ನಡ ಬರಹವನ್ನು ಯಾವುದೇ ಹಿಂಜರಿಕೆಯಿಲ್ಲದೆಕನ್ನಡಿಗರೆಲ್ಲರೂ ಮಾಡಬಹುದು. ‘ಎಲ್ಲರ ಕನ್ನಡ’ ಎಂಬುದು ಕನ್ನಡ ಬರಹಕ್ಕೆ ಸಂಬಂಧಪಟ್ಟ ಸಂಗತಿಯಾಗಿದೆ.

- ಸಿ.ಪಿ.ನಾಗರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT