ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬಂದರೂ ಕಾಲೇಜಿಗೆ ಬಾರದು ಕಾಗುಣಿತ

ಮಕ್ಕಳಲ್ಲಿನ ಕಾಗುಣಿತ ದೋಷದ ಮೂಲ ಯಾವುದು, ಪರಿಹಾರ ಏನು ಎಂಬುದರ ಬಗ್ಗೆ ಚರ್ಚೆಗಳೇ ನಡೆಯದಿರುವುದು ಏಕೆ?
Last Updated 16 ಡಿಸೆಂಬರ್ 2021, 19:35 IST
ಅಕ್ಷರ ಗಾತ್ರ

ಇದು ‘ಅ’ಕಾರ ‘ಹ’ಕಾರ ವಿವಾದದ ಕುರಿತು ಅಲ್ಲ; ಅಲ್ಪಪ್ರಾಣ, ಮಹಾಪ್ರಾಣಗಳಿಗೆ ಸಂಬಂಧಿಸಿದ ಸಂಗತಿಯೂ ಅಲ್ಲ. ಅದಕ್ಕಿಂತಲೂ ಪ್ರಾಥಮಿಕವಾದ ವಿಷಯವೊಂದಕ್ಕೆ ಸಂಬಂಧಿಸಿದ್ದು. ಬರವಣಿಗೆಯಲ್ಲಿಕಾಗುಣಿತ ದೋಷ ಇರಬಾರದು ಎಂಬ ಬಗ್ಗೆ ಬಹುಮಂದಿಯ ಆಕ್ಷೇಪ ಇರಲಾರದೇನೋ?

ಕಾಲೇಜು ಅಥವಾ ವಿಶ್ವವಿದ್ಯಾಲಯ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ತರಗತಿ ಟಿಪ್ಪಣಿಯನ್ನೋ ಬೇರೆ ಯಾವುದಾದರೂ ಬರಹವನ್ನೋ ಗಮನಿಸಿ. ಬಹುಪಾಲು ವಿದ್ಯಾರ್ಥಿಗಳಲ್ಲಿ ಒಂದು ಸಾಲಿಗೆ ನಾಲ್ಕು ಕಾಗುಣಿತ ತಪ್ಪು ಎದ್ದು ಕಾಣುತ್ತದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪಕರ ಪರಿಸ್ಥಿತಿಯನ್ನಂತೂ ಕೇಳುವುದೇ ಬೇಡ. ಅದು ಅವರಿಗೇ ಒಂದು ದೊಡ್ಡ ಪರೀಕ್ಷೆ.

ಪದವಿ ಅಥವಾ ಸ್ನಾತಕೋತ್ತರ ಹಂತಕ್ಕೆ ಬಂದರೂ ಈ ವಿದ್ಯಾರ್ಥಿಗಳ ಭಾಷೆ ಏಕೆ ತಿದ್ದಿಲ್ಲ? ಪ್ರೌಢ ಬರಹಗಳನ್ನು ಬರೆಯುವ ವಿಷಯ ಹಾಗಿರಲಿ, ಕಾಗುಣಿತ ದೋಷವಿಲ್ಲದ, ಅರ್ಥಪೂರ್ಣ ವಾಕ್ಯವೊಂದನ್ನು ರಚಿಸುವ ಶಕ್ತಿಯೂ ಈ ಮಕ್ಕಳಲ್ಲಿ ಏಕೆ ಬೆಳೆದಿಲ್ಲ? ಇದು ಯಾವುದೋ ಪ್ರದೇಶಕ್ಕೋ ಜಾತಿಗೋ ಪಂಗಡಕ್ಕೋ ಸಂಬಂಧಿಸಿದ ಸಮಸ್ಯೆ ಅಲ್ಲ. ಎಲ್ಲಾ ಕಡೆ, ಎಲ್ಲರಲ್ಲೂ ಇದೆ.

ಮಕ್ಕಳಲ್ಲಿ ಕಾಗುಣಿತ ದೋಷ ತಿದ್ದದಿರುವುದು ಹೊಸ ಚರ್ಚೆಯೇನೂ ಅಲ್ಲ. ವಿಶ್ವವಿದ್ಯಾಲಯದವರು ಕಾಲೇಜಿನವರತ್ತ ಬೆರಳು ತೋರಿಸುವುದು, ಕಾಲೇಜು ಅಧ್ಯಾಪಕರು ಪ್ರೌಢಶಾಲಾ ಶಿಕ್ಷಕರತ್ತ ಬೊಟ್ಟು ಮಾಡುವುದು, ಪ್ರೌಢಶಾಲೆಯಲ್ಲಿರುವವರು ಪ್ರಾಥಮಿಕ ಶಾಲೆಯ ಅಧ್ಯಾಪಕರನ್ನು ದೂರುವುದು ಹಿಂದಿನಿಂದಲೂ ನಡೆದುಬಂದಿದೆ. ಅವರಿವರನ್ನು ಜವಾಬ್ದಾರರನ್ನಾಗಿಸುವುದು ಹಾಗಿರಲಿ, ಈ ಸಮಸ್ಯೆಯ ಮೂಲ ಯಾವುದು, ಪರಿಹಾರ ಏನು ಎಂಬುದಾದರೂ ಚರ್ಚೆಯಾಗಬೇಕಲ್ಲ?

ಈ ವಿಚಾರದ ಬೆನ್ನು ಹಿಡಿದು ಹೊರಟರೆ ಮೂಲದಲ್ಲಿ ಪ್ರಾಥಮಿಕ ಶಾಲೆಯೇ ಕಾಣುತ್ತದೆ. ಆದರೆ ಅದೊಂದೇ ಕಾರಣವಲ್ಲ ಎಂಬುದೂ ಗೊತ್ತಾಗುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಕಾಗುಣಿತ- ವ್ಯಾಕರಣಗಳಿಗೆ ಹೆಚ್ಚಿನ ಒತ್ತು ನೀಡಬೇಡಿ, ಮಕ್ಕಳಿಗೆ ‘ಸೌಂಡ್’ (ಧ್ವನಿ) ಅನ್ನು ಕಲಿಸಿಕೊಡಿ, ಮುಂದೆ ಭಾಷೆ ತಾನಾಗಿಯೇ ಬೆಳೆಯುತ್ತದೆ ಎಂಬ ಅಭಿಪ್ರಾಯವೊಂದಿದೆ. ಆದರೆ ಈ ವಿದ್ಯಾರ್ಥಿಗಳಿಗೆ ‘ಸೌಂಡ್’ನ ಅರಿವು ಚೆನ್ನಾಗಿಯೇ ಇದೆ. ‘ಮಾಡುತ್ತೇನೆ’ ಎಂಬ ಪದವನ್ನು ಹಾಗೆಯೇ ಓದುತ್ತಾರೆ, ಬರೆಯುವಾಗ ಮಾತ್ರ ಅದು ‘ಮಾಡುತೆನೆ’ಯೋ ‘ಮಡುತ್ತೆನೆ’ಯೋ ಆಗುತ್ತದೆ.

ಆರಂಭದಿಂದಲೂ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದವರಿಗೆ ಈ ಸಮಸ್ಯೆಯೋ ಎಂದು ಗಮನಿಸಿದರೆ, ಹಾಗಿಲ್ಲ. ಇವರು ಪೂರ್ತಿಯಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರೇ. ಅಂದರೆ ಕಲಿಕೆಯಲ್ಲೇ ಸಮಸ್ಯೆ ಇದೆ ಎಂದಾಯಿತು. ಶಿಕ್ಷಣದ ವಿವಿಧ ಹಂತಗಳಲ್ಲಿರುವ ಅಧ್ಯಾಪಕರಲ್ಲಿ ಕಾಗುಣಿತವನ್ನು ತಪ್ಪಿಲ್ಲದೆ ಬರೆಯಬಲ್ಲವರು ಎಷ್ಟು ಪ್ರಮಾಣದಲ್ಲಿ ಇದ್ದಾರೆ ಎಂಬುದೂ ಒಂದು ಪ್ರಶ್ನೆ. ಹೀಗೆ ಕೇಳಿದರೆ ಅನೇಕ ಅಧ್ಯಾಪಕರಿಗೆ ಮುಜುಗರ ಅನ್ನಿಸೀತು. ಆರಂಭದಲ್ಲಿ ಪ್ರಸ್ತಾಪಿಸಿದ ರೀತಿಯ ವಿದ್ಯಾರ್ಥಿಗಳೇ ಅಧ್ಯಾಪಕರಾಗುತ್ತಾ ಹೋದರೆ ಅವರು ಅದನ್ನೇ ತಮ್ಮ ವಿದ್ಯಾರ್ಥಿಗಳಿಗೂ ಕಲಿಸುವುದು ಸಹಜ.

ಎಂಟನೇ ತರಗತಿ ಕಳೆದ ಮೇಲಂತೂ ಈಗಿನ ವಿದ್ಯಾರ್ಥಿಗಳು ಯಂತ್ರಗಳೇ ಆಗಿಬಿಡುತ್ತಾರೆ. ಅವರಿಗೆ ಆಗಲೇ ಪಿಯುವಿನಲ್ಲಿ ವಿಜ್ಞಾನ ಓದಿ ಎಂಜಿನಿಯರಿಂಗ್, ಮೆಡಿಕಲ್ ಸೀಟು ಹಿಡಿಯುವ ಗುಂಗು. ದಿನಬೆಳಗಾದರೆ ಟ್ಯೂಶನ್, ಕೋಚಿಂಗ್. ಇನ್ನು ಹತ್ತನೇ ತರಗತಿ ಮುಗಿಯುವ ಮೊದಲೇ ನೀಟು, ಜೆಇಇ ತರಬೇತಿ. ಖಾಸಗಿ ಪದವಿಪೂರ್ವ ಕಾಲೇಜುಗಳಲ್ಲಿ ಪರ್ಸೆಂಟೇಜು ಹೆಚ್ಚಿಸುವ ಪ್ರಯೋಗಗಳ ನಡುವೆ ಭಾಷೆ ತಬ್ಬಲಿ.

ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಪಿಯು ಓದುವವರಿಗೆ ಭಾಷೆ ಯಾಕೆ, ಅದರಿಂದ ಪರ್ಸೆಂಟೇಜಿಗೆ ಏನೂ ಪ್ರಯೋಜನ ಇಲ್ಲ ಎಂಬಷ್ಟು ಉಡಾಫೆ. ಭಾಷಾ ಶಿಕ್ಷಕರು ಅನೇಕ ಸಲ ಪೆವಿಲಿಯನ್‍ಗೆ ಮಾತ್ರ ಉಳಿಯುವ ಹೆಚ್ಚುವರಿ ಆಟಗಾರರು. ಇನ್ನು ಕಲಾ ವಿಭಾಗವನ್ನು ಕೇಳುವವರೇ ಇಲ್ಲ.

ಕಲೆ-ವಾಣಿಜ್ಯ ವಿಭಾಗದವರು, ತಾಂತ್ರಿಕ ಶಿಕ್ಷಣಕ್ಕೆ ಹೋಗದ ವಿಜ್ಞಾನ ವಿಭಾಗದವರು ಕಾಲೇಜಿಗೆ ಬರುತ್ತಾರೆ. ಅಷ್ಟು ಹೊತ್ತಿಗೆ ಅವರ ಭಾಷೆಯ ತೊಡಕುಗಳು ಅಲುಗಾಡಿಸಲೂ ಆಗದಷ್ಟು ಭದ್ರವಾಗಿ ಬೇರೂರಿರುತ್ತವೆ. ಎದುರಿಗೆ ಒಂದು ಪುಟ ಇಟ್ಟು ಅದನ್ನೇ ನಕಲು ಮಾಡಿ ಎಂದರೂ ಅವರು ತಪ್ಪೇ ಬರೆಯುತ್ತಾರೆ. ಅವರ ಕಣ್ಣೆದುರೇ ತಪ್ಪನ್ನು ತಿದ್ದಿದರೂ ಮರುದಿನ ಅದೇ ತಪ್ಪು ಬರೆಯುತ್ತಾರೆ. ಹೇಗೋ ತೇರ್ಗಡೆ ಆಗಿ ಎಂ.ಎಗೆ ಪ್ರವೇಶ ಪಡೆಯುತ್ತಾರೆ. ಅಲ್ಲಿಯೂ ಇದೇ ಪ್ರಹಸನ ಮುಂದುವರಿಯುತ್ತದೆ. ‘ನೀನು ತಪ್ಪು ಬರೆಯುತ್ತಾ ಇದ್ದೀ’ ಎಂದರೆ ಈ ಹಂತಕ್ಕೆ ಬಂದ ವಿದ್ಯಾರ್ಥಿಗೆ ಅವಮಾನ. ಕಾಗುಣಿತ ತಿದ್ದಿಕೊಂಡು ಕೂರಲು ಅಧ್ಯಾಪಕರಿಗೆ ಸಮಯ, ವ್ಯವಧಾನ ಎರಡೂ ಇಲ್ಲ.

ಇಲ್ಲೊಂದು ಸಾಮಾಜಿಕ- ಆರ್ಥಿಕ ವಿಚಾರವೂ ಇದೆ. ಅದೇನೆಂದರೆ, ಸರ್ಕಾರಿ ಶಾಲೆಗಳಲ್ಲಿ ಓದುವ ಅನೇಕ ಮಕ್ಕಳು ವಿವಿಧ ಕಾರಣಗಳಿಗಾಗಿ ತರಗತಿಗೆ ಸರಿಯಾಗಿ ಹಾಜರಾಗುವುದೇ ಇಲ್ಲ. ಇವರು ಆರಂಭದಿಂದಲೇ ಭಾಷಾ ತರಬೇತಿಯಿಂದ ವಂಚಿತರು. ಅಂತೂ ಇದೊಂದು ವಿಷವರ್ತುಲ. ಕೇವಲ ಭಾಷಾಶಾಸ್ತ್ರಜ್ಞರೋ ಶಿಕ್ಷಣ ಶಾಸ್ತ್ರಜ್ಞರೋ ಪರಿಹಾರ ಸೂಚಿಸಬಹುದಾದ ಸಮಸ್ಯೆ ಅಲ್ಲ. ಸುಧಾರಣೆಯ ದಾರಿ ಬಗ್ಗೆ ಪೂರ್ವಗ್ರಹರಹಿತ ಚರ್ಚೆಯಾದರೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT