ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಜೆಡಿಎಸ್‌ಗೆ ಕುಟುಂಬವೇ ‘ಭಾರ’?

Last Updated 7 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಒಳ್ಳೆಯ ಸಂಗತಿಗಳೆಲ್ಲ ಒಂದು ದಿನ ಕೊನೆಯಾಗುತ್ತವೆ ಎಂಬ ಮಾತಿದೆ. ಇದು ಜೆಡಿಎಸ್‌ಗೆ ಹೆಚ್ಚು ಸೂಕ್ತವಾಗುವಂತೆ ಕಾಣುತ್ತಿದೆ. 24 ವರ್ಷಗಳ ಏರಿಳಿತಗಳ ಪಯಣದ ನಂತರ ಜೆಡಿಎಸ್‌ ದುರ್ಬಲವಾದಂತೆ ಕಾಣುತ್ತಿದೆ. 2023ರ ಚುನಾವಣೆಯು ಅದರ ಭವಿಷ್ಯವನ್ನು ತೀರ್ಮಾನಿಸಬಹುದು. ಇದು ಸಿನಿಕ ಮನಸ್ಸಿನಿಂದ ಹೇಳುತ್ತಿರುವ ಮಾತಲ್ಲ.

ನೆರೆಯ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬೆಳವಣಿಗೆ ಕಂಡಿರುವ ಹೊತ್ತಿನಲ್ಲಿ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷದ ಪ್ರಯೋಗವು ಸಂಪೂರ್ಣವಾಗಿ ಹಾದಿತಪ್ಪಿರುವುದು ಹಾಗೂ ರಾಜ್ಯದ ಜನ ಭ್ರಮನಿರಸನಕ್ಕೆ ಒಳಗಾಗಿರುವುದು ಖೇದಕರ. ಬೇರೆ ಬೇರೆ ಸಮುದಾಯಗಳಿಗೆ ಸೇರಿದ ಪ್ರಭಾವಿ ಮುಖಂಡರನ್ನು ಜೆಡಿಎಸ್ ಕಳೆದುಕೊಂಡಿದೆ, ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಅದು ಮತ್ತಷ್ಟು ಹೆಚ್ಚು ಕುಟುಂಬ ನಿಯಂತ್ರಿತ ಪಕ್ಷವಾಗುತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರಿಗೆ ಈಗ 91 ವರ್ಷ ವಯಸ್ಸು. ಅವರಿಗೆ ಪಕ್ಷದ ಸಮಸ್ಯೆಗಳಿಗೆ ಮೊದಲಿನಷ್ಟು ಸಮಯ ಕೊಡಲು ಆಗದು.

ಎಚ್.ಡಿ. ಕುಮಾರಸ್ವಾಮಿ ಅವರು ಅಪಾರ ಒತ್ತಡಕ್ಕೆ ಸಿಲುಕಿದ್ದಾರೆ. ಅವರಿಗೆ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯಲು, ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಬೇಕಿರುವ ಸಾಮರ್ಥ್ಯ, ಅನುಭವ ಹಾಗೂ ವ್ಯಕ್ತಿತ್ವ ತಮ್ಮ ತಂದೆಯವರಿಗೆ ಇರುವಷ್ಟು ಇಲ್ಲ. ಕುಮಾರಸ್ವಾಮಿ ಅವರು 2018ರಲ್ಲಿ ಎರಡನೆಯ ಬಾರಿಗೆ ಮುಖ್ಯಮಂತ್ರಿ ಆದಾಗ, ಒಳ್ಳೆಯ ಹಾಗೂ ಪಾರದರ್ಶಕ ಆಡಳಿತದ ಮೂಲಕ ತಮ್ಮ ಹೆಸರನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಅವಕಾಶವಿತ್ತು. ಆದರೆ ಅವರು ಆಗ ತಮ್ಮ ‘ಕಚೇರಿ’ಯನ್ನು ವಿಧಾನಸೌಧದಿಂದ ಪಂಚತಾರಾ ಹೋಟೆಲ್‌ಗೆ ವರ್ಗಾಯಿಸಿಕೊಂಡರು. ಜನಸಾಮಾನ್ಯರಿಗಿಂತಲೂ, ಉದ್ಯಮಿಗಳು ಹಾಗೂ ರಿಯಲ್ ಎಸ್ಟೇಟ್‌ ಕುಳಗಳಿಗೆ ‘ಕುಮಾರಣ್ಣ’ನನ್ನು ಭೇಟಿ ಮಾಡುವುದು ಸುಲಭವಾಗಿತ್ತು.

ಕುಮಾರಸ್ವಾಮಿ ಅವರಿಗೆ ಪಕ್ಷದ ಹಿರಿಯ ಮುಖಂಡರ ಜೊತೆ ಅಧಿಕಾರ ಹಂಚಿಕೊಳ್ಳಲು ಮನಸ್ಸಿರಲಿಲ್ಲ. ಸರಿಸುಮಾರು ಒಂದು ಡಜನ್ ಖಾತೆಗಳನ್ನು ತಮ್ಮಲ್ಲಿಯೇ ಇರಿಸಿಕೊಂಡರು. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪಾಲಿಗೆ ಬಂದ ನಿಗಮ, ಮಂಡಳಿಗಳಿಗೆ ಪಕ್ಷನಿಷ್ಠರನ್ನು ನೇಮಕ ಮಾಡಿತು. ಆದರೆ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಬೆಂಬಲಿಗರನ್ನು ನೇಮಕ ಮಾಡಲಿಲ್ಲ. ಇವೆಲ್ಲವುಗಳಿಂದಾಗಿ ಜೆಡಿಎಸ್‌ನ ಹಲವು ಮುಖಂಡರು ಪಕ್ಷ ತೊರೆದು, ಬಿಜೆಪಿ ಅಥವಾ ಕಾಂಗ್ರೆಸ್ ಸೇರಿದ್ದಾರೆ. ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಿನಲ್ಲಿ ಹಳೆ ಮೈಸೂರು ಭಾಗದಲ್ಲಿಯೂ ಗೆಲ್ಲುವ ಅಭ್ಯರ್ಥಿಯನ್ನು ಹುಡುಕುವುದು ಜೆಡಿಎಸ್‌ಗೆ ಕಷ್ಟವಾಗುತ್ತಿದೆ.

2018ರಲ್ಲಿ ಜೆಡಿಎಸ್‌, ತಾನು ಪಡೆದ 37 ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಹಳೆ ಮೈಸೂರು ಪ್ರದೇಶದಲ್ಲಿಯೇ ಗೆದ್ದುಕೊಂಡಿತ್ತು. ಇದಕ್ಕೆ ಮುಖ್ಯ ಕಾರಣ, ಪಕ್ಷದ ಸಾಂಪ್ರದಾಯಿಕ ಮತ ಬ್ಯಾಂಕ್ ಆಗಿರುವ ಒಕ್ಕಲಿಗರು ಪಕ್ಷದ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದು. ಆದರೆ ಈ ಬಾರಿ, ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮುನ್ನೆಲೆಗೆ ಬಂದಿರುವ ಕಾರಣ ಒಕ್ಕಲಿಗರ ಮತಗಳಲ್ಲಿ ದೊಡ್ಡ ಪಾಲು ಕಾಂಗ್ರೆಸ್‌ನತ್ತ ಹೋಗುವ ಸಾಧ್ಯತೆ ಇದೆ. ಇದು ಪೆಟ್ಟು ಕೊಡುವುದು ಜೆಡಿಎಸ್‌ ಪಕ್ಷಕ್ಕೆ. ಕೆ.ಆರ್. ಪೇಟೆ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಗೆಲವು, ಆ ಪಕ್ಷ ಕೂಡ ಹಳೆ ಮೈಸೂರು ಪ್ರದೇಶದಲ್ಲಿ ನೆಲೆ ವಿಸ್ತರಿಸಿಕೊಳ್ಳುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ.

ಒಕ್ಕಲಿಗರು ಮಾತ್ರವಲ್ಲದೆ, ಜೆಡಿಎಸ್‌ ಅಭ್ಯರ್ಥಿ ಬಲಿಷ್ಠವಾಗಿದ್ದಾಗ ಮುಸ್ಲಿಂ ಸಮುದಾಯ ಕೂಡ ಅವರನ್ನು ಬೆಂಬಲಿಸಿಕೊಂಡು ಬಂದಿದೆ. ಆದರೆ, ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾದ ಜಮೀರ್ ಅಹಮದ್ ಖಾನ್, ಇಕ್ಬಾಲ್ ಅನ್ಸಾರಿ, ಅಬ್ದುಲ್ ಅಜೀಂ ಹಾಗೂ ಇತರರು ಪಕ್ಷವನ್ನು ತೊರೆದಿರುವ ಕಾರಣ, ಮುಸ್ಲಿಮರ ನಡುವೆ ಜೆಡಿಎಸ್ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದುಕೊಂಡಿದೆ. ಮುಸ್ಲಿಮರು ಕಾಂಗ್ರೆಸ್‌ ಜೊತೆ ಸಾಗಲು ಹೆಚ್ಚು ಒಲವು ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್, ಸಬ್‌ ಕಾ ವಿಶ್ವಾಸ್’ ನಿಲುವಿನ ಕಾರಣದಿಂದಾಗಿ ಮುಸ್ಲಿಮರಲ್ಲಿ ಒಂದು ವರ್ಗವು ಬಿಜೆಪಿ ಜೊತೆಗಿದೆ.

ದೇವೇಗೌಡರ ಕುಟುಂಬದೊಳಗಿನ ತಿಕ್ಕಾಟ ಕೂಡ ಜೆಡಿಎಸ್‌ನ ಸಮಸ್ಯೆಗಳಿಗೆ ತುಪ್ಪ ಸುರಿದಿದೆ. ಹಾಸನದಿಂದ ತಾವು ಸ್ಪರ್ಧಿಸುವುದಾಗಿ ಭವಾನಿ ರೇವಣ್ಣ ಘೋಷಿಸಿದಾಗ, ಕುಮಾರಸ್ವಾಮಿ ಅವರು ಅಲ್ಲಿ ಬೇರೆಯವರನ್ನು ಪಕ್ಷ ಗುರುತಿಸಿದೆ ಎಂದರು. ಕುಟುಂಬದ ಕನಿಷ್ಠ ಐವರು ಸದಸ್ಯರು ಒಂದಲ್ಲ ಒಂದು ಸ್ಥಾನ ಹೊಂದಿರುವಾಗ, ಕುಮಾರಸ್ವಾಮಿ ಅವರಿಗೆ ಭವಾನಿ ಅವರ ಸ್ಪರ್ಧೆಯ ಇಂಗಿತವು ಪೇಚಿನ ಪರಿಸ್ಥಿತಿ ಸೃಷ್ಟಿಸಿರಬಹುದು. ಅಲ್ಲದೆ, ಅವರಿಗೆ ಮಗ ನಿಖಿಲ್ ಅವರನ್ನು ವಿಧಾನಸಭೆಗೆ ಕರೆತರಬೇಕಿದೆ. ಹೀಗಾಗಿಯೇ ಅವರು ಭವಾನಿ ಅವರ ವಿಧಾನಸಭಾ ಪ್ರವೇಶವನ್ನು ವಿರೋಧಿಸಿರಬಹುದು. ಭಾರ ಹೆಚ್ಚಾದ ದೋಣಿ ಅಪಾಯಕ್ಕೆ ಸಿಲುಕಬಹುದು ಎಂದು ಕುಮಾರಸ್ವಾಮಿ ಭಾವಿಸಿರಬಹುದು.

ಲೇಖಕ: ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT