ಕುರುಬ ಸಮುದಾಯಕ್ಕೆ ಸಾಲು ಸಾಲು ಕೊಡುಗೆಗಳನ್ನು ನೀಡಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆ ಕೊಡುಗೆಗಳಲ್ಲಿ ಕುರುಬ ಸಮಾಜದ ಸಂಘಟನೆ, ಕಾಗಿನೆಲೆ ಪೀಠದ ಸ್ಥಾಪನೆ ಹಾಗೂ ಅಭಿವೃದ್ಧಿ ಸೇರಿವೆ.

ಬೆಂಗಳೂರು ಕುರುಬರ ಸಂಘದ ಕಟ್ಟಡಕ್ಕಾಗಿ ₹36 ಕೋಟಿ, ಕಾಗಿನೆಲೆ ಅಭಿವೃದ್ಧಿಗೆ ₹34 ಕೋಟಿ ನೀಡಲಾಗಿದೆ. 600 ಕುರುಬ ಸಮುದಾಯ ಭವನಗಳನ್ನು ರಾಜ್ಯದಲ್ಲಿ ಕಟ್ಟಲು ಸರ್ಕಾರ ಮುಂದಾಗಿದೆ. ವಿದ್ಯಾರ್ಥಿನಿಲಯಗಳ ಸ್ಥಾಪನೆ, ರಾಜ್ಯದ ಹಲವು ಕಡೆಗಳಲ್ಲಿ ಕುರುಬ ಸಮುದಾಯಕ್ಕೆ ನಿವೇಶನ ಹಾಗೂ ಕಟ್ಟಡಗಳ ಸವಲತ್ತು ಸಿದ್ದರಾಮಯ್ಯನವರು ನೀಡಿರುವ ಕೊಡುಗೆಗಳಲ್ಲಿ ಸೇರಿವೆ. ಇದೆಲ್ಲವೂ ಸಂತೋಷಪಡುವ ವಿಚಾರವೇ ಹೌದು. ಆದರೆ, ಇದೇ ಸಂದರ್ಭದಲ್ಲಿ ಅತೀ ಹಿಂದುಳಿದ ಮಡಿವಾಳ, ವಿಶ್ವಕರ್ಮ, ಕುಂಬಾರ, ಗಾಣಿಗ, ಗೊಲ್ಲ, ಕಾಡುಗೊಲ್ಲ, ಕೋಳಿ, ಬೆಸ್ತ, ಉಪ್ಪಾರ, ಸಿಂಪಿಗ, ನೇಕಾರ, ಸವಿತಾ, ಹಡಪದ, ಮೊದಲಾದ ಕಸುಬು ಆಧಾರಿತ ಕಾಯಕ ಸಮುದಾಯಗಳು ಹಾಗೂ ಅತೀ ಹಿಂದುಳಿದ ಅಲೆಮಾರಿ ಸಮುದಾಯಗಳ ಏಳಿಗೆಗೆ ತಮ್ಮ ಅಧಿಕಾರಾವಧಿಯಲ್ಲಿ ಏನೇನು ಕೊಡುಗೆ ನೀಡಿದ್ದೇನೆ ಎನ್ನುವುದನ್ನು ಅವರು ತಿಳಿಸಿಕೊಟ್ಟರೆ ಈ ಸಮುದಾಯಗಳು ಧನ್ಯತಾಭಾವ ಹೊಂದಬಹುದು.

ಇಂದಿಗೂ ಸಮಾಜದ ಮುಖ್ಯವಾಹಿನಿಯಲ್ಲಿ ಪ್ರಾತಿನಿಧ್ಯ ಹೊಂದಲು ಅಶಕ್ತವಾಗಿರುವ ಈ ಸಮಾಜಗಳು ತಮಗಾಗುವ ಅನ್ಯಾಯ, ಶೋಷಣೆ, ದೌರ್ಜನ್ಯಗಳ ವಿರುದ್ಧ ದನಿ ಎತ್ತಲಾಗದ ದಯನೀಯ ಸ್ಥಿತಿಯಲ್ಲಿವೆ. ‘ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮ’ದಿಂದ ಈ ಸಮುದಾಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ, ಜಾತಿಗಳ ಹೆಸರಿನ ನಿಗಮಗಳನ್ನು ಅಸ್ತಿತ್ವಕ್ಕೆ ತರಲಾಯಿತು. ಈ ನಿಗಮಗಳಿಗೆ ಸಿದ್ದರಾಮಯ್ಯನವರು ಬಿಡುಗಡೆ ಮಾಡಿರುವ ಅನುದಾನದ ಪಟ್ಟಿಯನ್ನು ಬಿಡುಗಡೆ ಮಾಡಲು ಸಾಧ್ಯವೇ? ಸಾಧ್ಯವೇ ಇಲ್ಲ. ಏಕೆಂದರೆ, ಈ ನಿಗಮಗಳಿಗೆ ಅವರು ಬಿಡುಗಡೆ ಮಾಡಿರುವ ಅನುದಾನ ‘ಮೂಗಿಗೆ ತುಪ್ಪ ಸವರಿದಂತೆ’ ಇದೆಯಷ್ಟೇ. ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಅತೀ ಹಿಂದುಳಿದ ಜಾತಿಗಳನ್ನು ‘ಅಹಿಂದ’ ಹೆಸರಿನಲ್ಲಿ ಗುರುತೂ ಸಿಗಲಾರದಂತೆ ಖರಾಬು ಭೂಮಿ ರೀತಿಯಲ್ಲಿ ಒತ್ತರಿಸಿಕೊಂಡು ಬಿಟ್ಟಿದ್ದಾರೆ. ಈ ಸಮುದಾಯಗಳು ಸಾಮಾಜಿಕ ನ್ಯಾಯದಿಂದ ವಂಚಿತವಾಗಿ, ಅನಾಥಪ್ರಜ್ಞೆ ಹಾಗೂ ಅಭದ್ರತೆಯಲ್ಲಿ ಬದುಕು ಕಟ್ಟಿಕೊಳ್ಳಲು ಅತ್ಯಂತ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿವೆ.

ಮೀಸಲಾತಿ ಈ ಸಮುದಾಯಗಳನ್ನು ಹೆಸರಿಗಷ್ಟೇ ಸ್ಪರ್ಶಿಸಿದೆಯೇ ಹೊರತು ಇವರ ತಟ್ಟೆಗೆ ಅದರ ಅಗುಳೂ ಬೀಳುವುದಿಲ್ಲ. ಇತ್ತೀಚಿನ ಒಳಮೀಸಲಾತಿ ಹಂಚಿಕೆಯಲ್ಲಿ ಸೂಕ್ಷ್ಮಾತಿಸೂಕ್ಷ್ಮ ಅಲೆಮಾರಿಗಳ ಪಾಲಿನ ಶೇ 1ರಷ್ಟು ಮೀಸಲಾತಿಯನ್ನು ನಿರ್ದಯವಾಗಿ ಕಿತ್ತುಕೊಂಡು ಅವರ ಭವಿಷ್ಯದ ಬೆಳಕು ಮಸುಕಾಗಿಸಿ ಕಠೋರತೆ ಮೆರೆಯಲಾಗಿದೆ.

ಕನಕದಾಸರ ‘ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ’ ಎಂಬ ಸಾಲಿನಂತೆ, ಸಂಘಟಿತ ಕುಲಗಳ ನಡುವೆ ನೆಲೆಯೇ ಕಾಣಲಾಗದ ಕುಲದಲ್ಲಿ ಜನಿಸಿರುವ ಈ ಅಮಾಯಕ ಕಾಯಕಜೀವಿಗಳ ಕಣ್ಣೀರು ಒರೆಸಲು ಕನಕದಾಸರೇ ಮತ್ತೆ ಹುಟ್ಟಿ ಬರಬೇಕಾಗಿದೆ ಅಥವಾ ‘ಸರ್ವರಿಗೂ ಸಮಪಾಲು–ಸರ್ವರಿಗೂ ಸಮಬಾಳು’ ಎಂದು ಹೇಳಿ, ಅದರಂತೆಯೇ ಸಾಮಾಜಿಕ ನ್ಯಾಯವನ್ನು ಹಂಚಿದ ಡಿ. ದೇವರಾಜ ಅರಸರು ಮತ್ತೆ ಜೀವಗೊಳ್ಳಬೇಕಾಗಿದೆ.

ಮಲ ಹೊರುವ ಪದ್ಧತಿಯನ್ನು ರದ್ದು ಮಾಡುವ ಮೂಲಕ ದೇವರಾಜ ಅರಸರು ಪರಿಶಿಷ್ಟರ ಆತ್ಮಗೌರವ ರಕ್ಷಿಸಿದರು. ಆದರೆ, ಇಂದಿಗೂ ಮಲಮಿಶ್ರಿತ ರೋಗರುಜಿನದ ಬಟ್ಟೆ ತೊಳೆಯುವ ಗುಲಾಮಿ ಪದ್ಧತಿಯನ್ನು ಸಂಕೇತಿಸುವ ನಡೆಮಡಿಯನ್ನು ಹಾಸುವ ಮಡಿವಾಳ ಸಮುದಾಯ ಆ ವರ್ತುಲದಿಂದ ಹೊರಬರಲಾಗಿಲ್ಲ, ಕನಿಷ್ಠ ಪಕ್ಷ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರ್ಪಡೆಯೂ ಆಗಲಿಲ್ಲ. ಮೊದಲ ಅವಧಿಯಲ್ಲಿ ಯಡಿಯೂರಪ್ಪನವರು ಕುಲಶಾಸ್ತ್ರ ಅಧ್ಯಯನ ನಡೆಸಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಬಹುದು ಎಂಬ ವರದಿ ತರಿಸಿಕೊಳ್ಳುವ ಮನಸ್ಸು ಮಾಡಿದರು. ಆ ವರದಿ ಇಂದಿಗೂ ದೂಳು ತಿನ್ನುತ್ತಿದೆ.

ಇಂದಿಗೂ ಅಸ್ಪೃಶ್ಯತೆಯ ಬಾಧೆ ಅನುಭವಿಸುತ್ತಿರುವ ಸವಿತಾ ಸಮಾಜದ ಬಂಧುಗಳು ತಮ್ಮ ವೃತ್ತಿ ಕೌಶಲವನ್ನು ಉನ್ನತೀಕರಿಸಿಕೊಳ್ಳಲಾಗದೆ, ಪರಿಶಿಷ್ಟರ ಜಾತಿಯ ಪಟ್ಟಿಗೆ ಸೇರಿ ಅನುಕೂಲವನ್ನೂ ಪಡೆಯಲಾಗದೆ, ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಕುಂಬಾರಿಕೆ ನಲುಗುತ್ತಿದೆ, ಎಣ್ಣೆಯ ಗಾಣಗಳು ಸ್ಥಗಿತಗೊಂಡಿವೆ, ನೇಕಾರಿಕೆಯಂತೂ ನಿರಂತರ ನಲುಗುತ್ತಿದೆ, ಜಾತ್ರೆಗಳ ಬೆನ್ನಿಗೆ ಬಿದ್ದು ಊರೂರು ಸುತ್ತಿ ವ್ಯಾಪಾರದಿಂದ ಬದುಕು ಮಾಡುತ್ತಿದ್ದ ಅಲೆಮಾರಿ ಸಮುದಾಯಗಳ ಸ್ಥಿತಿಯಂತೂ ಅಸಹನೀಯವಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಾದರೂ ಪಾಲು ಸಿಗುತ್ತದೆಯೇ ಎಂದು ಪ್ರಯತ್ನಿಸುವ ಶಕ್ತಿಯೂ (ಒಳಮೀಸಲಾತಿ) ಈ ಸಮುದಾಯಗಳಿಗೆ ಇಲ್ಲವಾಗಿದೆ.

ಕುರುಬ ಸಮುದಾಯವೂ ಸೇರಿದಂತೆ ಹಿಂದುಳಿದ, ಅಸಂಘಟಿತ, ಅತೀ ಹಿಂದುಳಿದ ಸಮುದಾಯಗಳಿಗೆಲ್ಲ ಸಮಾನ ನ್ಯಾಯ ಸಿಗಬೇಕಾಗಿದೆ. ತಮ್ಮ ಸುದೀರ್ಘ ಅಧಿಕಾರದ ಅವಧಿಯಲ್ಲಿ ಕುಲಕಸುಬು ನೆಚ್ಚಿದ ಸಮಾಜಗಳಿಗಾಗಿ ಹಾಗೂ ಅಲೆಮಾರಿಗಳಿಗಾಗಿ ಸಿದ್ದರಾಮಯ್ಯನವರು ಗುರುತರವಾದುದೇನನ್ನೂ ಮಾಡಿಲ್ಲ. ಆ ನೋವು ಈ ನತದೃಷ್ಟ ಸಮಾಜಗಳ ಹೃದಯದಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ ಎಂಬುದನ್ನು ಅವರು ಮರೆಯಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.