ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟನೆಗೆ ನೂರು; ಸಮಸ್ಯೆ ನೂರಾರು

Last Updated 30 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯು (ಐಎಲ್‌ಒ) ವಿಶ್ವಸಂಸ್ಥೆಯ ಅಂಗಸಂಸ್ಥೆ ಯಾಗಿದೆ. ಈ ಸಂಘಟನೆ 100 ವರ್ಷಗಳ ಹಿಂದೆ, 1919ರಲ್ಲಿ ಅಸ್ತಿತ್ವಕ್ಕೆ ಬಂದಿತು. ಕಾರ್ಮಿಕರ ಕಲ್ಯಾಣ, ಆರೋಗ್ಯ, ಸುರಕ್ಷೆ, ಕೆಲಸದ ಅವಧಿಯ ನಿಯಂತ್ರಣ, ವೇತನದ ವಿಚಾರ, ರಜೆ ಸೌಲಭ್ಯದಂತಹ ಹತ್ತು ಹಲವು ವಿಚಾರಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ, ಉತ್ತಮ ಗುರಿ ಹಾಗೂ ಉದ್ದೇಶಗಳನ್ನು ಐಎಲ್‌ಒ ರೂಪಿಸಿತ್ತು. ಅದರ ಅನ್ವಯ, ಕಾರ್ಮಿಕರ ಹಕ್ಕುಗಳ ಸಂರಕ್ಷಣೆಯ ವಿಚಾರದಲ್ಲಿ ಹಲವಾರು ಅಂತರರಾಷ್ಟ್ರೀಯ ಕರಾರುಗಳು, ಕಾನೂನುಗಳು, ಕಾರ್ಯಕ್ರಮಗಳು, ಯೋಜನೆಗಳು ರೂಪುಗೊಂಡಿದ್ದರೂ ಅವೆಲ್ಲವೂ ನಮ್ಮಲ್ಲಿ ಕೇವಲ ‘ಪೇಪರ್ ಹುಲಿ’ಯಂತೆ ಆಗಿರುವುದು ದುರದೃಷ್ಟಕರ.

ಭಾರತದಲ್ಲಿ ಕಾರ್ಮಿಕರ ಹಿತರಕ್ಷಣೆಗಾಗಿ ಸಂವಿಧಾನ ರಚನೆಯ ಪೂರ್ವ ಹಾಗೂ ನಂತರದಲ್ಲಿ ಹಲವು ಕಾಯ್ದೆಗಳನ್ನು ರೂಪಿಸಲಾಗಿದೆ. ಆದರೆ ಈ ಕಾನೂನುಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ. ಎಷ್ಟೋ ಕಡೆ ಐಎಲ್ಒ ಉದ್ದೇಶಗಳನ್ನೇ ತಿರುಚಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಸ್ಥಿತಿಗತಿ ಇಂದಿಗೂ ಉತ್ತಮವಾಗೇನೂ ಇಲ್ಲ. ಅಸಂಘಟಿತ ವಲಯದ ಕಾರ್ಮಿಕರ ಸ್ಥಿತಿಯಂತೂ ಶೋಚನೀಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಸರ್ಕಾರದ ಸಾಧನೆಗಳ ಪಟ್ಟಿಯಲ್ಲಿ ಉಲ್ಲೇಖವಾಗಿವೆಯೇ ಹೊರತು, ಕಾರ್ಮಿಕರ ಜೀವನಮಟ್ಟ ಉತ್ತಮಪಡಿಸುವಲ್ಲಿ ಸಫಲವಾಗಿಲ್ಲ. ಉದಾಹರಣೆಗೆ ಹೇಳುವುದಾದರೆ, ನಮ್ಮಲ್ಲಿ ವಾರದ ರಜೆ ಕಾಯ್ದೆ– 1942ರ ಪ್ರಕಾರ, ವಾರದ ಒಂದು ದಿನ ಕಾರ್ಮಿಕರಿಗೆ ಕಡ್ಡಾಯವಾಗಿ ರಜೆ ನೀಡಬೇಕು. ಎಲ್ಲ ಅಂಗಡಿಗಳು, ರೆಸ್ಟೊರೆಂಟ್‍ಗಳು, ಚಿತ್ರಮಂದಿರಗಳಂತಹ ಕಡೆ ಎದ್ದು ಕಾಣುವಂತೆ ನಿಗದಿತ ದಿನದಂದು ‘ರಜೆ’ ಎಂದು ಬರೆದಿರಬೇಕು. ಇದು ಪಾಲನೆ ಆಗುತ್ತಿದೆಯೇ? ಈ ಬಗ್ಗೆ ಕಾರ್ಮಿಕ ಕಲ್ಯಾಣ ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದಾರೆಯೇ? ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ಕಾರ್ಮಿಕರ ವಿಷಯ ಪ್ರಸ್ತಾಪಿಸುತ್ತವೆಯೇ? ಈ ಬಗ್ಗೆ ಸ್ವಯಂಸೇವಾ ಸಂಸ್ಥೆಗಳು ಎಷ್ಟರಮಟ್ಟಿಗೆ ಕೆಲಸ ಮಾಡುತ್ತಿವೆ? ಇವೆಲ್ಲದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಕಾರ್ಮಿಕರ ಹಿತರಕ್ಷಣೆಗೆ ಪೂರಕವಾಗಿ ಸುಪ್ರೀಂ ಕೋರ್ಟ್‌ ಪ್ರಮುಖ ತೀರ್ಪುಗಳನ್ನು ನೀಡಿದ್ದರೂ ಅವುಗಳ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ. ಕಾರ್ಮಿಕ ಕಲ್ಯಾಣ ಅಧಿಕಾರಿಗಳಿಗಾಗಲಿ, ಸರ್ಕಾರಕ್ಕಾಗಲಿ, ಕಾರ್ಮಿಕರಿಗಾಗಲಿ ಈ ತೀರ್ಪುಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಹಾಗಿದ್ದರೆ ಈ ಸೌಲಭ್ಯವಂಚಿತರ ಹಕ್ಕುಗಳನ್ನು ಸಂರಕ್ಷಿಸುವ ಹೊಣೆ ಯಾರದು? ತಾತ್ಕಾಲಿಕವಾಗಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೂ ವೇತನಸಹಿತ ಹೆರಿಗೆ ರಜೆ ನೀಡಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಬಗ್ಗೆ ಅಧಿಕಾರಿಗಳು ಅಥವಾ ಕಾರ್ಖಾನೆಗಳ ಮಾಲೀಕರು ಲಕ್ಷ್ಯ ವಹಿಸಿದಂತೆ ಕಾಣುವುದಿಲ್ಲ.

ಕಟ್ಟಡ ಕಾರ್ಮಿಕರಾದ ಪುರುಷ ಹಾಗೂ ಮಹಿಳೆಯರ ನಡುವೆ ವೇತನ ತಾರತಮ್ಯ ಇದೆ. ನಿರ್ಮಾಣ ಸ್ಥಳದಲ್ಲಿನ ಶೆಡ್‍ಗಳಲ್ಲಿ ಉಳಿದುಕೊಳ್ಳುವ ಕಾರ್ಮಿಕರ ಮಕ್ಕಳು ಸಿಮೆಂಟ್ ದೂಳನ್ನು ಸೇವಿಸಿ, ಶುದ್ಧ ನೀರು, ಸೂಕ್ತ ಆಹಾರದ ವ್ಯವಸ್ಥೆ ಇಲ್ಲದೆ ಸೊರಗುತ್ತಿದ್ದಾರೆ. ಶಿಕ್ಷಣ, ಆರೋಗ್ಯದಂತಹ ಮೂಲ ಸೌಕರ್ಯಗಳಿಂದಲೂ ವಂಚಿತರಾಗಿರುತ್ತಾರೆ. ಕಾರ್ಮಿಕರು ಕಟ್ಟಡಗಳನ್ನು ಪೂರ್ಣಗೊಳಿಸಿ ಇನ್ನೊಂದೆಡೆ ಕೆಲಸಕ್ಕೆ ಹೊರಟಾಗ ಅವರ ಮಗುವೊಂದು ಹೀಗೆ ಪ್ರಶ್ನಿಸುತ್ತದೆ– ‘ಅಮ್ಮಾ ಹೊಸ ಮನೆಗಳನ್ನು ಕಟ್ಟಿಕೊಡ್ತೀವಿ. ಆದರೆ ನಾವ್ಯಾಕೆ ಅಲ್ಲಿ ವಾಸ ಮಾಡಲ್ಲ?’ ಈ ಮಾತು ಕಾರ್ಮಿಕರ ಸಂಕಷ್ಟಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುವಂತಿದೆ. ಕಾರ್ಮಿಕ ಕಾನೂನುಗಳನ್ನು ಯಥಾವತ್ತಾಗಿ ಅನುಷ್ಠಾನ ಮಾಡಿದರೆ, ಸರ್ಕಾರ ಈ ಮುಗ್ಧ ಪ್ರಶ್ನೆಗೆ ಸ್ವಲ್ಪ ಮಟ್ಟಿಗಾದರೂ ಉತ್ತರ ಕೊಡಬಹುದು!

ಕನಿಷ್ಠ ವೇತನ ಕಾಯ್ದೆ, ಬೋನಸ್ ಕಾಯ್ದೆ, ಸಮಾನ ವೇತನ ಕಾಯ್ದೆ, ಔದ್ಯೋಗಿಕ ಕಾನೂನು, ಫ್ಯಾಕ್ಟರಿ ಕಾಯ್ದೆ, ರಾಜ್ಯ ಕಾರ್ಮಿಕರ ಆರೋಗ್ಯ ವಿಮಾ ಕಾಯ್ದೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ... ಹೀಗೆ ಹಲವಾರು ಕಾನೂನುಗಳು ಪರಿಣಾಮಕಾರಿಯಾಗಿ ಜಾರಿ ಆಗದಿರುವುದಕ್ಕೆ ಮಾಹಿತಿ ಕೊರತೆ, ಅನಕ್ಷರತೆ, ಬಡತನ ಹಾಗೂ ಹಣಕಾಸು ಕೊರತೆ ಮುಖ್ಯ ಕಾರಣ.ಈ ಕಾನೂನುಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ನಡೆಯುವುದು ತೋರಿಕೆಗಾಗಿ ಎಂಬಂತಾಗಿದೆ. ಅಲ್ಲಿ ಮಂಡನೆಯಾಗುವ ಶಿಫಾರಸುಗಳು ಆ ಹವಾನಿಯಂತ್ರಿತ ಸಭಾಂಗಣಗಳಲ್ಲಿಯೇ ಸತ್ತು ಹೋಗುತ್ತವೆ.

ಕಾರ್ಮಿಕರ ಕಲ್ಯಾಣದ ವಿಷಯದಲ್ಲಿ ಮಾಧ್ಯಮಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದು. ಕಾರ್ಮಿಕ ಸಂಘಟನೆಯ ಶತಮಾನದ ಸಂಭ್ರಮದಲ್ಲಾದರೂ ಸರ್ಕಾರಗಳು ಎಚ್ಚೆತ್ತು, ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಮುಂದಾಗಬೇಕು. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ, ವಸತಿ ವ್ಯವಸ್ಥೆ ದೊರಕಿಸಿಕೊಡುವ ಪ್ರಯತ್ನ ಮಾಡಬೇಕು. ಬಹುಮುಖ್ಯವಾಗಿ, ಕಾರ್ಮಿಕ ಕಲ್ಯಾಣ ಅಧಿಕಾರಿಗಳು ಎಲ್ಲಾ ಬಗೆಯ ಕಾರ್ಮಿಕರ ಹಕ್ಕುಗಳನ್ನೂ ಕಾಪಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಆಗ, ಕಾರ್ಮಿಕ ಸಂಘಟನೆಯನ್ನು 100 ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ತಂದುದು ಸಾರ್ಥಕವಾಗುತ್ತದೆ.

ಲೇಖಕ: ಹಿರಿಯ ಸಹಾಯಕ ಪ್ರಾಧ್ಯಾಪಕವಿಶ್ವವಿದ್ಯಾಲಯ ಕಾನೂನು ಕಾಲೇಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT