ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಇಂಥ ಸಾಧಕರಲ್ಲವೇ ನಮಗೆ ಮಾದರಿ?

Last Updated 9 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಜನರಿಂದ ಪಡೆದ ಅಧಿಕಾರ, ಅಂತಸ್ತು, ಪದವಿ, ಪುರಸ್ಕಾರಗಳನ್ನು ಜನರ ಉದ್ಧಾರಕ್ಕೇ ವಿನಿಯೋಗಿಸಿದ ಸಂತಸದೃಶರು ನಮ್ಮನ್ನು ಪ್ರಭಾವಿಸಬೇಕಿದೆ, ನಮಗೆ ಮೇಲ್ಪಂಕ್ತಿಯಾಗಬೇಕಿದೆ. ಅದು ಬಿಟ್ಟು, ಅಧಿಕಾರ, ಹಣ, ಅಂತಸ್ತಿಗಾಗಿ ಹಪಹಪಿಸುವ ಇಂದಿನ ನಾಯಕರೇ
ನಮಗೆ ಮಾದರಿಯಾಗುವುದಾದರೆ, ನಮ್ಮ ಹಾಗೂ ಮುಂಬರುವ ಪೀಳಿಗೆಗಳಿಗೆ ಆದರ್ಶಪ್ರಾಯರ ದಿನಮಾನಗಳು ಕೇವಲ ಕಥನಗಳಾಗಿಬಿಡುತ್ತವೆ.

ಬಹುತೇಕ ಅವರ್‍ಯಾರೂ ಸಿರಿವಂತರಲ್ಲ. ಬಡತನವನ್ನೇ ಅಡಿಗಲ್ಲಾಗಿಸಿಕೊಂಡು ಅಸಹಾಯಕತೆಯನ್ನು ಮೆಟ್ಟಿ ಮೇಲೇರಿದರು. ಗಳಿಸಿದ ಸ್ಥಾನಮಾನಗಳಿಗೆ ಕಿಂಚಿತ್ತೂ ಬೀಗದೆ ನಿಷ್ಕಪಟದಿಂದ ನಡೆದುಕೊಂಡರು. ದೂರದರ್ಶಿತ್ವ ಮೆರೆದರು. ಸರಳತೆಯನ್ನು ಪಾಲಿಸಿದರು. ಕೆ.ಕಾಮರಾಜ್ ತಮಿಳುನಾಡಿನ ಮುಖ್ಯಮಂತ್ರಿಯಾದ ಹೊಸದು. ತಾಯಿ ವಾಸವಿದ್ದ ಮನೆಗೆ ನೀರಿನ ನೇರ ಸಂಪರ್ಕ ಒದಗಿಸಲಾಯಿತು. ತಮಗೆ ಯಾವುದೇ ವಿಶೇಷ ಸೌಲಭ್ಯ ಬೇಡವೆಂದ ಅವರು ತಕ್ಷಣವೇ ಸಂಪರ್ಕ ಕಡಿತಕ್ಕೆ ಆದೇಶಿಸಿದರು.

ಹಿಂದಿನ ಸರ್ಕಾರ ಮುಚ್ಚಿದ್ದ 6,000 ಶಾಲೆಗಳನ್ನು ಕಾಮರಾಜರು ಪುನರಾರಂಭಿಸಿದರು, ಹೊಸದಾಗಿ 12,000 ಶಾಲೆಗಳನ್ನು ತೆರೆದರು. ಮಕ್ಕಳಿಗೆ ಶಾಲೆಯು ಮನೆಯ 3 ಕಿ.ಮೀ. ಆಸುಪಾಸಿನಲ್ಲೇ ಇರಬೇಕೆಂಬ ಕಾಳಜಿಯೇ ಅವರ ಧೀಮಂತ ನಾಯಕತ್ವಕ್ಕೆ ಸಾಕ್ಷಿ. ಮಕ್ಕಳು ದುಡಿಮೆಗೆ ಹೋಗಿ ಅಷ್ಟಿಷ್ಟು ಕಾಸನ್ನು ಪೋಷಕರಿಗೆ ಒಪ್ಪಿಸುತ್ತಿದ್ದ ದಿನಗಳವು. ಇನ್ನೆಲ್ಲಿ ಅವರು ಶಾಲೆಗೆ ಬಂದಾರು. ಕಾಮರಾಜರು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಏರ್ಪಡಿಸುವ ಮೂಲಕ ಒಂದೇ ಏಟಿಗೆ ಎರಡು ಗುರಿ ಎನ್ನುವಂತೆ ಕಾರ್ಯ
ಪ್ರವೃತ್ತರಾದರು. ಕನಿಷ್ಠತಮ ಹಸಿವು ನೀಗಿಸಿಕೊಳ್ಳಲಾದರೂ ಮಕ್ಕಳು ಶಾಲೆಯತ್ತ ನಡೆದರು. ಪೋಷಕರಿಗೂ ಇಷ್ಟವಾದ ಈ ಯೋಜನೆ ಮುಂದೆ ದೇಶದಾದ್ಯಂತ ಅನುಕರಣೀಯವಾಯಿತು.

ಹಿರಿಯರಾದವರು ಅಧಿಕಾರದಿಂದ ಸ್ವಯಂ ಹಿಂದೆ ಸರಿದು, ಪಕ್ಷದ ಬಲವರ್ಧನೆಯಲ್ಲಿ ತೊಡಗಬೇಕು, ಯುವಜನತೆಗೆ ಸೇವಾವಕಾಶ ಕಲ್ಪಿಸಿಕೊಡಬೇಕು. ಅವರ ಈ ಆದರ್ಶಕ್ಕೆ ಅವರೇ ಮಾದರಿಯಾದರು. ‘ಕಾಮರಾಜ್ ಸೂತ್ರ’ ಎಂದೇ ಈ ಮಾದರಿ ಜನಪ್ರಿಯವಾಯಿತು.

ಕಸ ಗುಡಿಸಿದರೆ ಮತ್ತ್ಯಾರೂ ಇಷ್ಟು ಸ್ವಚ್ಛವಾಗಿಸಲಾರರು ಎನ್ನುವಂತಿರಬೇಕು. ಇದು ಸರ್ ಎಂ.ವಿಶ್ವೇಶ್ವರಯ್ಯನವರ ಕಾಯಕಶ್ರದ್ಧೆಯಾಗಿತ್ತು. ಸರ್ಕಾರದಿಂದ ಅವರಿಗೆ ನೀಡಲಾಗಿದ್ದ ಕಾರನ್ನು ಅಪ್ಪಿತಪ್ಪಿಯೂ ಸ್ವಂತಕ್ಕೆ ಬಳಸಿಕೊಳ್ಳುತ್ತಿರಲಿಲ್ಲ. ಒಮ್ಮೆ ಅವರು ಮೋಂಬತ್ತಿ ಬೆಳಕಿನಲ್ಲಿ ಲೇಖನಿ, ಹಾಳೆಯೊಂದಿಗೆ ಲೆಕ್ಕಾಚಾರದಲ್ಲಿ ಮಗ್ನರಾಗಿದ್ದರು. ಅವರ ಕಿರಿಯ ಮಿತ್ರರೊಬ್ಬರು ಬಂದರು. ಒಡನೆಯೇ ಬತ್ತಿ ಆರಿಸಿದರು, ಲೇಖನಿ ಮತ್ತು ಹಾಳೆ ಬದಿಗೆ ಸರಿಸಿದರು. ಮೋಂಬತ್ತಿ, ಲೇಖನಿ, ಹಾಳೆ- ಇನ್ನೊಂದು ಸೆಟ್ ಅವರ ಬಳಕೆಗೆ ಸಿದ್ಧವಾಗಿತ್ತು. ಹೀಗೇಕೆ ಅಂತ ಮಿತ್ರರು ವಿಚಾರಿಸುವ ಮುನ್ನವೇ ವಿಶ್ವೇಶ್ವರಯ್ಯನವರು ಹೇಳಿದರು ‘ಅದು ಕಚೇರಿ ಕೆಲಸ, ಇದು ನನ್ನ ಕೆಲಸ’.

ನೆಂಟರೊಬ್ಬರು ಸರ್ಕಾರಿ ಅತಿಥಿ ಗೃಹದಲ್ಲಿ ಒಂದು ತಿಂಗಳು ತಂಗುವ ಅನುಮತಿಗೆ ಗೋಗರೆದರು. ಸರ್‌ ಎಂ.ವಿ. ಸಮ್ಮತಿಸಿದರು. ಆದರೆ ಅವರು ತಿಂಗಳ ಬಾಡಿಗೆ ₹ 250 ತಮ್ಮ ಸಂಬಳದಲ್ಲಿ ಖಟಾಯಿಸಲು ಸರ್ಕಾರಕ್ಕೆ ಅಂದೇ ಪತ್ರ ಬರೆದರು. ಸರಳತೆಗೆ ಪರ್ಯಾಯ ಹೆಸರೆನ್ನಿಸಿದ ಲಾಲ್ ಬಹದ್ದೂರ್‌ ಶಾಸ್ತ್ರಿ ಅವರು ಗೃಹ ಸಚಿವರಾದ ಕೂಡಲೇ ಭ್ರಷ್ಟಾಚಾರದ ನಿರ್ಮೂಲನಕ್ಕಾಗಿ ಸಮಿತಿಯೊಂದನ್ನು ರಚಿಸಿದರು. ಶಾಸ್ತ್ರೀಜಿ ಪ್ರಧಾನಿ ಹುದ್ದೆ ಅಲಂಕರಿಸಿದಾಗ ತಮ್ಮ ಅನುಕೂಲಕ್ಕಾಗಿ ಬ್ಯಾಂಕಿನಿಂದ ₹ 5,000 ಸಾಲ ಪಡೆದು ಕಾರು ಕೊಂಡರು. ಅವರ ಅಕಾಲಿಕ ನಿಧನದ ನಂತರ ಅವರ ಪತ್ನಿ ಆ ಸಾಲ ತೀರಿಸಿದರು. ಪಿ.ವಿ.ನರಸಿಂಹ ರಾವ್ ತಮ್ಮ ಮಗಳ ವೈದ್ಯಕೀಯ ಶಿಕ್ಷಣ ವೆಚ್ಚ ಭರಿಸಲು ಸಾಲ ಮಾಡಿದ್ದರು. ‘ನಾನು ಪ್ರಧಾನಿಯಾದ ಮಾತ್ರಕ್ಕೆ ನಿಮ್ಮ ಅರ್ಹತೆ ಏರಿತೆಂದು ಯಾರಾದರೂ ಭಾವಿಸಿದರೆ ಅದಕ್ಕಿಂತ ಪೊಳ್ಳು ಇನ್ನೊಂದಿಲ್ಲ ತಿಳಿಯಿರಿ’ ಎನ್ನುತ್ತಿದ್ದರು ಅವರು.

ಭಾರತದ ಮೊದಲ ಮತ್ತು ಕೊನೆಯ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ಕಸ ಗುಡಿಸಲೆಂದು ಏಣಿ ಮೂಲಕ ಮನೆಯ ಅಟ್ಟ ಹತ್ತುತ್ತಿದ್ದರು. ‘ಸರ್, ನೀವು ಜಾರಿಬಿದ್ದರೆ ಗತಿ?’ ಅಂತ ಚಕಿತಗೊಂಡರು ಬಂದ ಸಂದರ್ಶಕರೊಬ್ಬರು. ‘ಹೌದು, ಸಹಾಯಕನನ್ನು ಹತ್ತಿಸಬಹುದು. ಆದರೆ ಆತನೂ ಜಾರಿ ಬೀಳಬಹುದಲ್ಲ!’ ಎಂದರು ರಾಜಾಜಿ. ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್‌ ತಮ್ಮ ವೇತನದ ಅರ್ಧದಷ್ಟು ಮಾತ್ರವೇ ಸಾಕೆಂದರು. ತಮಗೆ ಯಾರೂ ಸ್ಮರಣಿಕೆ, ಉಡುಗೊರೆ
ಗಳನ್ನು ನೀಡಬಾರದೆಂದರು. ಡಾ. ಅಬ್ದುಲ್ ಕಲಾಂ ವಿಧಿವಶರಾದಾಗ ಅವರು ಬಿಟ್ಟುಹೋಗಿದ್ದು ಐದು ಕಪಾಟು ಪುಸ್ತಕಗಳು, ಒಂದಷ್ಟು ಬಟ್ಟೆ ಬರೆ, ಎರಡು ಜೊತೆ ಬೂಟುಗಳು ಮಾತ್ರ.

ಪ್ರಜಾವತ್ಸಲ ಎಂದೇ ಜನಜನಿತವಾಗಿರುವ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಒಮ್ಮೆ ದಿಢೀರನೆ ಅರಮನೆಯ ವಾದ್ಯವೃಂದವಿದ್ದ ಕೊಠಡಿಗೆ ಬಂದರು. ಸೂರಿನ ತಳಭಾಗದಲ್ಲಿ ಕಟ್ಟಿದ್ದ ಜೇಡರ ಬಲೆ ಗಮನಿಸಿದರು. ಸ್ವಲ್ಪವೂ ಬೇಸರಪಟ್ಟುಕೊಳ್ಳದ ಪ್ರಭುಗಳು ‘ಓಹ್, ನಿಮ್ಮ ಉಪಾಸನೆ ಹಾಗಾದರೆ ಭರ್ಜರಿಯಾಗಿರಬೇಕು’ ಎಂದವರೆ ಉದ್ದನೆಯ ಪೊರಕೆ ಹಿಡಿದು ಬಲೆಯನ್ನು ತೆರವುಗೊಳಿಸಿದರು. ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಅವರಿಗೆ ವಿಶೇಷ ಬೋಗಿಯಿರುತ್ತಿತ್ತು. ಅಕ್ಕಪಕ್ಕದ ಬೋಗಿಗಳು ಅವರ ಸಿಬ್ಬಂದಿಗೆ ಮೀಸಲಿರುತ್ತಿದ್ದವು. ರೈಲಿನಲ್ಲಿ ನೂಕುನುಗ್ಗಲಾದರೆ ಒಡೆಯರ್ ಆ ಬೋಗಿಗಳಲ್ಲಿದ್ದ ಸಿಬ್ಬಂದಿಯನ್ನು ತಾವಿದ್ದ ಬೋಗಿಗೆ ಬರಲು ಸೂಚಿಸಿದ ಸಂದರ್ಭಗಳು ಹಲವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT