ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ–ಚನ್ನರಾಯಪಟ್ಟಣದ ರೈತರು ಸರ್ಕಾರದ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ನಡೆಸುತ್ತಿರುವ ಹೋರಾಟ ಐತಿಹಾಸಿಕವಾದುದು. ಈ ಹೋರಾಟ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ರೈತರ ಈ ಸುದೀರ್ಘ ಹೋರಾಟಕ್ಕೆ ಭೂಮಿಯ ಮೇಲೆ ಅವರಿಗಿರುವ ಸಂಬಂಧ, ಅವಲಂಬನೆ ಮತ್ತು ಪ್ರೀತಿಯೇ ಕಾರಣವಾಗಿದೆ.

ಒಮ್ಮೆ ಭೂಮಿ ಕಳೆದುಕೊಂಡವನು ಜೀವನಪೂರ್ತಿ ಅತಂತ್ರನಾಗುತ್ತಾನೆ ಮಾತ್ರವಲ್ಲ, ತಲೆಮಾರುಗಳಿಂದ ಬಂದಿರುವ ಸಂಪತ್ತನ್ನೂ ಕಳೆದುಕೊಳ್ಳುತ್ತಾನೆ. ಆ ಕಾರಣದಿಂದಲೇ, ಯಾವುದೇ ವ್ಯಕ್ತಿ ಭೂಮಿಯನ್ನು ಮಾರುವ, ಕಳೆದುಕೊಳ್ಳುವ ಮುನ್ನ ನೂರು ಸಲ ಯೋಚಿಸುತ್ತಾನೆ. ಇದೇ ಮನಃಸ್ಥಿತಿಯಲ್ಲಿ ಚನ್ನರಾಯಪಟ್ಟಣದ ರೈತರು ತೊಳಲಾಟ ಅನುಭವಿಸುತ್ತಿದ್ದಾರೆ.

ಒಂದು ತುಂಡು ಭೂಮಿ ಇದೆ ಎಂದರೆ ರೈತನಿಗೆ ದೊಡ್ಡ ಶಕ್ತಿ ಇದ್ದಂತೆ. ಕೃಷಿಕ ತನಗೆ ಬೇಕಾದ್ದನ್ನು ಬೆಳೆದುಕೊಂಡು, ಹೆಚ್ಚಾದ್ದನ್ನು ಮಾರಾಟ ಮಾಡಿ, ಅಗತ್ಯ ವಸ್ತುಗಳನ್ನು ಕೊಳ್ಳುತ್ತಾನೆ. ವ್ಯವಸಾಯದ ಜೊತೆಗೆ ಕುರಿ, ಕೋಳಿ ಸಾಕುತ್ತಾನೆ; ಹಾಲು, ಮೊಸರು, ಬೆಣ್ಣೆ, ಹಣ್ಣು–ಹಂಪಲು, ತರಕಾರಿ ಬೆಳೆದು ನಗರ ಪ್ರದೇಶದ ಜನರಿಗೆ ನೀಡುತ್ತಾನೆ. ಯಾವುದೇ ರೀತಿಯ ಶಿಕ್ಷಣ, ತರಬೇತಿ ಇಲ್ಲದೆಯೂ ವ್ಯವಸಾಯದ ಕೆಲಸಕ್ಕೆ ಕೂಲಿಗೆ ಬರುವವರಿಗೂ ದಿನಕ್ಕೆ ಕನಿಷ್ಠ ₹500 ದೊರಕುತ್ತದೆ.

ಉದ್ಯೋಗ ಸೃಷ್ಟಿಯಲ್ಲಿ ವ್ಯವಸಾಯ ಕ್ಷೇತ್ರಕ್ಕೆ ಸರಿಸಾಟಿಯಿಲ್ಲ. ಎಷ್ಟೆಲ್ಲಾ ಕೊಡುಗೆ ನೀಡುತ್ತಿರುವ ಅನ್ನದಾತರನ್ನು ಭೂಸ್ವಾಧೀನದ ಹೆಸರಿನಲ್ಲಿ ಅತಂತ್ರರನ್ನಾಗಿ ಮಾಡುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ. ಇಲ್ಲಿ ಚನ್ನರಾಯಪಟ್ಟಣ ಸಾಂಕೇತಿಕವಷ್ಟೇ. ರಾಜ್ಯದಲ್ಲಿ ಅನೇಕ ಚನ್ನರಾಯಪಟ್ಟಣಗಳಿವೆ. ಅಲ್ಲಿನವರೆಲ್ಲರೂ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಆ ಭೂಮಿಯಲ್ಲಿ ರೈತರ ಪೂರ್ವಜರ ಅಂತ್ಯಕ್ರಿಯೆಯ ಸ್ಮೃತಿಗಳೂ ಇವೆ. ಕೃಷಿಯ ಜೊತೆಗೆ ಪೂರ್ವಸೂರಿಗಳ ಸ್ಮೃತಿಗಳ ಭಾವನಾತ್ಮಕ ಸಂಬಂಧದಿಂದಲೂ ರೈತರನ್ನು ದೂರ ಮಾಡುವ ಪ್ರಕ್ರಿಯೆ ಸಮಾಜದ ಮಾನಸಿಕ ಆರೋಗ್ಯವನ್ನೂ ಹಾಳುಗೆಡವಲಿದೆ.

ವ್ಯವಸಾಯ ಕ್ಷೇತ್ರದ ಮತ್ತೊಂದು ಕೊಡುಗೆ, ಅದು ಪರಿಸರ ಸ್ನೇಹಿಯಾಗಿರುವುದು. ಆದರೆ, ಕೃಷಿ ಭೂಮಿಯಲ್ಲಿ ಆರಂಭಗೊಳ್ಳುವ ಕಾರ್ಖಾನೆಗಳು ಪರಿಸರವನ್ನು ಕಲುಷಿತ ಗೊಳಿಸುತ್ತವೆ. ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಇಂದು ಕಲುಷಿತವಾಗಿರಲು ಕಾರಣ ಅದರ ಸುತ್ತಮುತ್ತಲಿನ ಕಾರ್ಖಾನೆಗಳು.

ಅವಳಿ ನಗರಗಳ ಸ್ಥಾಪನೆಗೆ, ವಿದೇಶಿ ವಿಶ್ವವಿದ್ಯಾಲಯ ಸ್ಥಾಪನೆಗೆ, ಕಾರ್ಖಾನೆಗಳು, ವಿಮಾನ ನಿಲ್ದಾಣ, ಮೆಟ್ರೊ ರೈಲು ಯೋಜನೆ ಮುಂತಾದವುಗಳಿಗಾಗಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಕೆಲವು ವಿಚಿತ್ರಗಳಿವೆ. ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೊ ಮಾರ್ಗ ನಿರ್ಮಿಸುವ ಪ್ರಸ್ತಾವವಿದೆ. ಮೆಟ್ರೊ ರೈಲು ನಗರ ಪ್ರದೇಶಗಳಿಗೆ ಮಾತ್ರ ಅನುಕೂಲ. ಬೆಂಗಳೂರಿನಿಂದ ತುಮಕೂರಿಗೆ ಈಗಾಗಲೇ ಜೋಡಿ ರೈಲು ಮಾರ್ಗವಿದ್ದು, ಮೆಟ್ರೊಗಿಂತ ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ದರದಲ್ಲಿ ಪ್ರಯಾಣಿಸಬಹುದು.

ಮೆಟ್ರೊ ಯೋಜನೆ ಕೈಬಿಟ್ಟರೆ, ನೂರಾರು ಎಕರೆ ಭೂಸ್ವಾಧೀನದ ಅಗತ್ಯವೂ ಇಲ್ಲವಾಗುತ್ತದೆ. ಭೂಮಿ ಕೊಟ್ಟವರು ಪರಿಹಾರ ಪಡೆಯುವುದೂ ಸುಲಭವಲ್ಲ. ಅಣೆಕಟ್ಟುಗಳ ನಿರ್ಮಾಣಕ್ಕಾಗಿ ಊರು– ಜಮೀನುಗಳನ್ನುಕಳೆದುಕೊಂಡವರಿಗೆ ತೃಪ್ತಿಕರ ಪುನರ್ವಸತಿ ಸೌಲಭ್ಯ ಕಲ್ಪಿಸಿರುವ ನಿದರ್ಶನಗಳು ವಿರಳ. ಮುಳುಗಡೆ ಆದವರು ಚಪ್ಪಲಿ ಸವೆಸಿ ಪರಿಹಾರ ಪಡೆದುಕೊಂಡಿದ್ದಾರೆ. ಹೊಸ ಪ್ರದೇಶದಲ್ಲಿ ಹೊಂದಿಕೊಂಡವರು ಕೆಲವರು, ಹೊಂದಿಕೊಳ್ಳಲು ಆಗದವರು ಹಲವರು!

ಕಾರ್ಖಾನೆಗಳು ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಪಡೆದ ಜಮೀನು ನಿಗದಿತ ಉದ್ದೇಶಗಳಿಗೆ ಬಳಕೆಯಾಗದೆ ಉಳಿದಿರುವುದೂ ಇದೆ. ಅಂಥ ಭೂಮಿಯು ರಿಯಲ್ ಎಸ್ಟೇಟ್ನವರ ಪಾಲಾಗುತ್ತದೆ. ಪ್ರವಾಸೋದ್ಯಮ ಇಲಾಖೆ ತನ್ನ ವಶದಲ್ಲಿರುವ ಭೂಮಿಯನ್ನು ಮಾರಾಟ ಮಾಡುತ್ತದೆಂದು ಇತ್ತೀಚೆಗೆ ಸುದ್ದಿಯಾಗಿತ್ತು. ಜಿಲ್ಲೆಗೊಂದು ವಿಶ್ವವಿದ್ಯಾಲಯ ತಲೆಯೆತ್ತಿರುವ ದಿನಗಳಿವು. ಜಿಲ್ಲೆಗೊಂದು ವಿಜ್ಞಾನ ಕೇಂದ್ರ ಬರುತ್ತಿದೆ. ಜಿಲ್ಲೆಗೊಂದು ಗಾಂಧಿ ಭವನ ಬರುತ್ತಿದೆ. ಇವೆಲ್ಲವುಗಳಿಗೂ ಭೂಮಿ ಬೇಕೇ ಬೇಕು. ಆದರೆ, ಅದನ್ನು ಬಡ ರೈತರಿಂದಲೇ ಸ್ವಾಧೀನಪಡಿಸಿಕೊಳ್ಳಬೇಕೇ? ಶ್ರೀಮಂತರು, ರಾಜಕಾರಣಿಗಳು ತಮ್ಮ ವಶದಲ್ಲಿ ನೂರಾರು, ಸಾವಿರಾರು ಎಕರೆ ಭೂಮಿಯನ್ನು ಇಟ್ಟುಕೊಂಡಿದ್ದಾರೆ. ಅಭಿವೃದ್ಧಿಗೆ ಬಡವರ ಭೂಮಿಯೇ ಬೇಕೆಂದೇನಿಲ್ಲ!

ಈ ಹಿಂದೆ ಎಚ್.ಎ.ಎಲ್. ವಿಮಾನ ನಿಲ್ದಾಣವಿತ್ತು. ಪ್ರಸ್ತುತ ದೇವನಹಳ್ಳಿ ವಿಮಾನ ನಿಲ್ದಾಣ ಬಂದಿದೆ. ಮೈಸೂರು, ಶಿವಮೊಗ್ಗ, ಬೆಳಗಾವಿ, ಬೀದರ್, ಕಲಬುರಗಿ ಮುಂತಾದ ಕಡೆಗಳಲ್ಲಿ ವಿಮಾನ ನಿಲ್ದಾಣಗಳು ಬಂದಿವೆ. ಆದರೂ, ಹೊಸ ವಿಮಾನ ನಿಲ್ದಾಣಕ್ಕೆ 6 ಸಾವಿರ ಎಕರೆ ಭೂಮಿ ಬೇಕೆನ್ನುತ್ತಾರೆ! ಇನ್ನೆಷ್ಟು ವಿಮಾನ ನಿಲ್ದಾಣಗಳು ಬೇಕು? ನಾವು ಭೂಮಿ ಕೊಡುವುದಾಗಿ ಒಪ್ಪಿಕೊಂಡು ಬಂದಿದ್ದೇವೆ, ನೀವು ತಕರಾರು ಮಾಡದೇ ಭೂಮಿಯನ್ನು ಕೊಡಿ ಎಂದು ಕೈಗಾರಿಕಾ ಸಚಿವರು ಹೇಳುತ್ತಾರೆ. ಯಾರನ್ನು ಕೇಳಿ ಅವರು ಒಪ್ಪಿಗೆ ನೀಡಿದ್ದಾರೆ? ಇನ್ನು ಹತ್ತು ಎಕರೆ ಬೇಕಾದ ಕಡೆಯಲ್ಲಿ ಐವತ್ತು ಎಕರೆ, ಐವತ್ತು ಎಕರೆ ಬೇಕಾದ ಕಡೆ ಐನೂರು ಎಕರೆ ಸ್ವಾಧೀನಪಡಿಸಿಕೊಳ್ಳುವುದೂ ಇದೆ!

ಸರ್ಕಾರಗಳು ತಮ್ಮ ಭೂಸ್ವಾಧೀನ ನೀತಿಯನ್ನು ಪರಿಷ್ಕರಿಸಲೇಬೇಕಾಗಿದೆ. ಅನಿವಾರ್ಯ ಸಂದರ್ಭದಲ್ಲಿ, ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಪಡೆದು ಕೊಳ್ಳಬಹುದೇ ಹೊರತು ಕೃಷಿಯೋಗ್ಯ ಭೂಮಿಯನ್ನಲ್ಲ. ರೈತರ ಒಪ್ಪಿಗೆ ಇಲ್ಲದೆ ಅವರ ಭೂಮಿಯನ್ನು ಪಡೆಯಲು ಪ್ರಯತ್ನಿಸುವುದಂತೂ ಅಮಾನವೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.