ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಆರಾಮ ಜೀವನ, ಅಪಾಯಕ್ಕೆ ಆಹ್ವಾನ!

Published 4 ಜುಲೈ 2024, 19:30 IST
Last Updated 4 ಜುಲೈ 2024, 19:30 IST
ಅಕ್ಷರ ಗಾತ್ರ

ಭಾರತೀಯರಲ್ಲಿ ವಯಸ್ಕರ ಪೈಕಿ ಶೇಕಡ 49.4ರಷ್ಟು ಮಂದಿಗೆ ಅಗತ್ಯ ಪ್ರಮಾಣದಲ್ಲಿ ದೈಹಿಕ ಚಟುವಟಿಕೆ ಇಲ್ಲ. ಅದರಲ್ಲೂ ಮಹಿಳೆಯರ ಪೈಕಿ ಶೇಕಡ 57ರಷ್ಟು ಮಂದಿ ಅಗತ್ಯ ಪ್ರಮಾಣದಲ್ಲಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿಲ್ಲ! ಇದು ಹೀಗೆಯೇ ಮುಂದುವರಿದರೆ 2030ರ ವೇಳೆಗೆ ಭಾರತೀಯರಲ್ಲಿ ಶೇ 60ರಷ್ಟು ಮಂದಿ ಬೊಜ್ಜಿಗೆ ಸಂಬಂಧಿಸಿದ ವಿವಿಧ ರೀತಿಯ ರೋಗಗಳಿಗೆ ತುತ್ತಾಗಲಿದ್ದಾರೆ ಎಂದು ಲ್ಯಾನ್ಸೆಟ್ ಗ್ಲೋಬಲ್ ಹೆಲ್ತ್ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ.

ಅಂದರೆ ಮಧುಮೇಹ ಟೈಪ್ 2, ಆಸ್ತಮಾ, ಮೂಳೆ ಮತ್ತು ಸಂಧಿ ನೋವು, ಉಸಿರಾಟದ ತೊಂದರೆ, ಪಾರ್ಶ್ವವಾಯು, ಚರ್ಮದ ಸಮಸ್ಯೆ, ಕ್ಯಾನ್ಸರ್ ಹೀಗೆ ಅನೇಕ ರೋಗಗಳು ಬರುವ ಸಾಧ್ಯತೆ ಇದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಬೊಜ್ಜು ಕರಗಿ, ಸ್ನಾಯುಗಳು ಬಲಗೊಳ್ಳುತ್ತವೆ. ಮಾತ್ರವಲ್ಲದೆ, ಮೆದುಳಿನ ಒತ್ತಡ ಕಡಿಮೆಗೊಳಿಸುವ ರಾಸಾಯನಿಕಗಳು ಹೆಚ್ಚಲು, ಹೊಸ ನರಕೋಶಗಳು ಬೆಳೆಯಲೂ ಇದು ಸಹಾಯಕ. ಖಿನ್ನತೆ ಮತ್ತು ಮರೆವಿನ ರೋಗ ಬರುವ ಸಾಧ್ಯತೆಯನ್ನೂ ತಡೆಯಬಹುದು. ಆದ್ದರಿಂದಲೇ ವಿಶ್ವ ಆರೋಗ್ಯ ಸಂಸ್ಥೆಯು ಉತ್ತಮ ಆರೋಗ್ಯಕ್ಕೆ ವಯಸ್ಕರು ವಾರವೊಂದರ ಅವಧಿಯಲ್ಲಿ ಆಟ, ವ್ಯಾಯಾಮ, ನಡಿಗೆ, ಓಟ, ಈಜು ಇವೆಲ್ಲವನ್ನೂ ಒಳಗೊಂಡ 150 ನಿಮಿಷಗಳ ಮಧ್ಯಮ ವೇಗದ ಚಟುವಟಿಕೆಗಳಲ್ಲಿ ಅಥವಾ 75 ನಿಮಿಷಗಳ ತೀವ್ರ ವೇಗದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುತ್ತದೆ.

ಚಟುವಟಿಕೆ ಇಲ್ಲದ ಸೋಮಾರಿ ಜೀವನಶೈಲಿ ಹೆಚ್ಚಾಗುತ್ತಿರಲು ಅನೇಕ ಕಾರಣಗಳಿವೆ. ತರಕಾರಿ– ದಿನಸಿ ತರಲು ಹತ್ತಿರದ ಅಂಗಡಿಗೆ ನಡೆಯಬೇಕಿಲ್ಲ, ಬಟ್ಟೆ ತರಲು ಅಂಗಡಿ ಸುತ್ತಬೇಕಿಲ್ಲ, ತಿಂಡಿ ತಿನ್ನಲು, ಸಿನಿಮಾ ನೋಡಲು ಎಲ್ಲೂ ಹೋಗಬೇಕಿಲ್ಲ. ಮೊಬೈಲ್‌ ಮೂಲಕ ಆರ್ಡರ್ ಮಾಡಿದರೆ ಎಲ್ಲವೂ ಕುಳಿತಲ್ಲಿಗೇ ಬರುತ್ತವೆ. ಹೀಗಾಗಿಯೇ, ಐವತ್ತರ ನಂತರದವರಲ್ಲಿ ಹೆಚ್ಚಾಗಿದ್ದ ಜೀವನಶೈಲಿ ಸಂಬಂಧಿತ ರೋಗಗಳು ಈಗ ಮೂವತ್ತರ ಹರೆಯದವರನ್ನೂ ಕಾಡುತ್ತಿವೆ.

ಹಾಗೆ ನೋಡಿದರೆ ಸಮಸ್ಯೆಯ ಹುಟ್ಟು ಬಾಲ್ಯದಿಂದಲೇ ಆರಂಭ. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನರ್ಸರಿಯಿಂದಲೇ ಊಟ, ನಿದ್ದೆ, ಆಟ ಬಿಟ್ಟು ಓದುವ ಸ್ಪರ್ಧೆ ಆರಂಭವಾಗುತ್ತದೆ. ಸುಧಾರಿಸಿದ ಆರ್ಥಿಕ ಮಟ್ಟ, ಕಡಿಮೆಯಾದ ಮಕ್ಕಳ ಸಂಖ್ಯೆ, ಪೋಷಕರ ಅತಿ ಮುದ್ದಿನಿಂದಾಗಿ ಇಂದಿನ ಮಕ್ಕಳಿಗೆ ಆಟ, ಸೈಕಲ್ ತುಳಿಯುವಿಕೆ, ಶಾಲೆಗೆ ನಡೆಯುವುದು, ಈ ರೀತಿಯ ವ್ಯಾಯಾಮಗಳೇ ಇಲ್ಲ. ತಿನ್ನಲು ಜಂಕ್‌ಫುಡ್, ತಾಸುಗಟ್ಟಲೆ ಟಿ.ವಿ, ಕಂಪ್ಯೂಟರ್ ವೀಕ್ಷಣೆ ಇಂದಿನ ಮಕ್ಕಳ ದಿನಚರಿ. ರಜೆಯಲ್ಲೂ ಮಕ್ಕಳಿಗೆ ಒಟ್ಟಾಗಿ ಸೇರಿ ಆಡಲು ಕಾಂಕ್ರೀಟ್ ಕಾಡಿನಲ್ಲಿ ಅವಕಾಶವಿಲ್ಲ. ಅದರ ಬದಲು ಮನೆಯಲ್ಲಿ ಕುಳಿತು ವಿಡಿಯೊ ಗೇಮ್ಸ್ ಆಡುತ್ತಾ, ಕಾರ್ಟೂನ್ ನೋಡುತ್ತ ಕೂರುವುದೇ ಸುಲಭ ಮತ್ತು ಸುರಕ್ಷಿತ ಎನಿಸಿದೆ.

ಇವೆಲ್ಲದರ ಪರಿಣಾಮವಾಗಿ ಅತಿತೂಕದ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಬಾಲ್ಯದಲ್ಲಿ ಶುರುವಾದ ಅಭ್ಯಾಸಗಳು ಹಾಗೆಯೇ ಮುಂದುವರಿಯುವುದು ಸಹಜ. ಪುರುಷರಿಗಿಂತಲೂ ಮಹಿಳೆಯರು ವ್ಯಾಯಾಮದ ವಿಷಯದಲ್ಲಿ ನಿರಾಸಕ್ತಿ ಹೊಂದಿರುವುದು ಸಾಮಾನ್ಯ. ಮನೆಯವರೆಲ್ಲರ ಅಗತ್ಯಗಳನ್ನು ಗಮನಿಸುತ್ತಾ, ಹೊರಗಡೆಯೂ ದುಡಿಯುವ ಆಧುನಿಕ ಮಹಿಳೆಗೆ ಸಮಯ ನಿರ್ವಹಣೆ ಸುಲಭವಲ್ಲ. ಇದರೊಂದಿಗೆ ಋತುಚಕ್ರ, ಬಸಿರು, ಬಾಣಂತನ ಮುಂತಾದ ಸಹಜ ಪ್ರಕ್ರಿಯೆಗಳೂ ನಿಯಮಿತ ವ್ಯಾಯಾಮಕ್ಕೆ ಅಡ್ಡಿ ಆಗಬಹುದು. ಇವಲ್ಲದೆ ಮಹಿಳೆಯರು ಹೇಳುವ ಮತ್ತೊಂದು ಕಾರಣ ‘ಮನೆಯ ಕೆಲಸವನ್ನು ನಾವೇ ಮಾಡುತ್ತೇವೆ, ಬೇರೇನೂ ಬೇಕಿಲ್ಲ’ ಎಂಬುದು.

ಆಶ್ಚರ್ಯವೆಂದರೆ ಇದಕ್ಕೆ ಬಹಳಷ್ಟು ಜನರ ಸಹಮತವಿದೆ! ಆದರೆ ವ್ಯಾಯಾಮ ಎಂದರೆ ಉಸಿರಾಟದ ಗತಿ, ಹೃದಯದ ಬಡಿತವನ್ನು ಏರಿಸುವಂತಹ ಚಟುವಟಿಕೆಯಾಗಬೇಕು. ಹಾಗಾಗಿ ಮನೆಕೆಲಸವೇ ಸಾಕು ಎನ್ನುವಂತಿಲ್ಲ. ಮನೆಯ ಕೆಲಸವನ್ನು ನಾವೇ ಮಾಡಿಕೊಳ್ಳುವುದು ಸ್ವಾವಲಂಬಿಗಳಾಗುವ ದಿಸೆಯಲ್ಲಿ ಒಳ್ಳೆಯದೇ. ಆದರೆ ದಿನವೂ ಒಬ್ಬರೇ ಮನೆಕೆಲಸ ಮಾಡುವಾಗ ಏಕಾಂಗಿತನ- ಏಕತಾನತೆ ಕಾಡುತ್ತದೆ. ಹಾಗಾಗಿ ಎಲ್ಲರೂ ಅದನ್ನು ಹಂಚಿಕೊಂಡು ಮಾಡುವುದು ಸೂಕ್ತ. ಅದರೊಂದಿಗೆ ವಾರಕ್ಕೆ ಐದು ದಿನ ಅರ್ಧ ಗಂಟೆಯಾದರೂ ದೇಹದ ಎಲ್ಲಾ ಭಾಗಗಳಿಗೆ ವ್ಯಾಯಾಮ ನೀಡುವ ನಡಿಗೆ, ಸೈಕಲ್, ಈಜು, ಕುಣಿತ ಇವುಗಳಲ್ಲಿ ಯಾವುದಾದರೂ ಒಂದನ್ನು ಮಾಡಲೇಬೇಕು. ದೈನಂದಿನ ಕೆಲಸಗಳಿಗೆ ವಾಹನ ಬಳಸುವ ಬದಲು ಸಾಧ್ಯವಾಗುವಾಗಲೆಲ್ಲ ನಡೆದುಹೋಗಬೇಕು.

ಕೈತೋಟ ಮಾಡುವುದು, ಲಿಫ್ಟ್ ಬದಲು ಮೆಟ್ಟಿಲುಗಳ ಬಳಕೆ, ಮಕ್ಕಳು–ಸಾಕುಪ್ರಾಣಿಗಳ ಜತೆ ಆಟ, ಇವುಗಳನ್ನು ಅಳವಡಿಸಿಕೊಳ್ಳುವುದು ಸುಲಭ. ಹಾಗೆಯೇ ವ್ಯಾಯಾಮ ಮಾಡಲು ಒಂದೇ ಸಲ ಅರ್ಧ ಗಂಟೆ ಸಮಯ ಸಿಗದಿದ್ದರೆ ತಲಾ ಹತ್ತು ನಿಮಿಷಗಳ ಕಾಲ ಮೂರು ಬಾರಿ ಮಾಡಬಹುದು. ನಮ್ಮ ಅನುಕೂಲಕ್ಕೆ ತಕ್ಕಂತೆ ಯೋಜನೆ ಮತ್ತು ವ್ಯಾಯಾಮದ ರೀತಿಯನ್ನು ಆಯ್ಕೆ ಮಾಡಿಕೊಂಡರೆ ಅನುಸರಿಸುವುದು ಸುಲಭ. ವ್ಯಾಯಾಮವೆಂದರೆ ಇದ್ದಕ್ಕಿದ್ದಂತೆ ಮೋಜಿಗಾಗಿ ಆರಂಭಿಸುವ ಚಟುವಟಿಕೆಯಲ್ಲ. ಅದು ನಮ್ಮ ಬದುಕಿನ ಭಾಗವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT