ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಅಸ್ಮಿತೆ ಮತ್ತು ಕಾರ್ಯತಂತ್ರ

ಬಗೆಬಗೆಯ ಘೋಷಣೆಗಳಿಗಿಂತ, ರೈತರ ಸಾಲ ಮನ್ನಾದ ಭಜನೆಗಿಂತ ಮತದಾರರನ್ನು ಮುಟ್ಟಲು ಈ ಕಾಲಘಟ್ಟ ಬೇರೆಯದನ್ನೇ ಬಯಸುತ್ತದೆ
Last Updated 16 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಮೂರನೇ ಶಕ್ತಿಯಾಗಿ ಜೆಡಿಎಸ್‌ ತಳವೂರುತ್ತಾ ಬಂದಿದ್ದಕ್ಕೆ ಬಹಳಷ್ಟು ಪುರಾವೆಗಳಿವೆ. ಆದರೆ, ಈಗ ಈ ಪಕ್ಷ ತನ್ನ ಅಂತಿಮ ದಿನಗಳನ್ನು ಎಣಿಸುತ್ತಿದೆಯೇ ಎಂಬ ಅನುಮಾನ, ನಿರಾಶೆಯು ಪಕ್ಷದ ಕಾರ್ಯಕರ್ತರನ್ನು ಕಾಡಹತ್ತಿದೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಈ ಪಕ್ಷದ ಗತಿ ಮತ್ತು ಸಾಧನೆಯ ಕಳಪೆತನ ಎದ್ದು ಕಾಣುವಂತಿದೆ. ಬರೀ ಎರಡು ಕ್ಷೇತ್ರಗಳಲ್ಲಿ ಠೇವಣಿ ಉಳಿಸಿಕೊಂಡಿರುವು
ದಲ್ಲದೆ, ಮೂರ್ನಾಲ್ಕು ಕ್ಷೇತ್ರಗಳಲ್ಲಿ ‘ನೋಟಾ’ಕ್ಕಿಂತಲೂ ಕಡಿಮೆ ಮತ ಪಡೆದಿದೆ. ಇದನ್ನು ಗಮನಿಸಿದರೆ, ಕಾಂಗ್ರೆಸ್‌ನಂತೆ ಈ ಪಕ್ಷವೂ ತನ್ನ ಉಳಿವಿಗೆ ಬೇರೆಯದೇ ಆದ ಕಾರ್ಯತಂತ್ರ ಹೆಣೆಯಬೇಕಾದ ಅನಿವಾರ್ಯ ಸೃಷ್ಟಿಯಾಗಿರುವುದನ್ನು ಅಲ್ಲಗಳೆಯಲಾಗದು.

ಅದು, ಎಸ್.ಎಂ.ಕೃಷ್ಣ ಅವರ ಆಳ್ವಿಕೆ. ಮತ್ತೊಮ್ಮೆ ಕೃಷ್ಣ ಮುಖ್ಯಮಂತ್ರಿಯಾಗುವುದು ಶತಃಸಿದ್ಧ ಎಂಬ ವಾದಸರಣಿ ಜೋರಾಗಿತ್ತು. ಜನತಾ ಪರಿವಾರದಲ್ಲಿದ್ದ ಬಹುತೇಕ ಶಾಸಕರು ಕಾಂಗ್ರೆಸ್ ತೆಕ್ಕೆಗೆ ಬಂದಿದ್ದರು. ಇತ್ತ ಬಿಜೆಪಿ ಕೂಡಾ ಬಾಬಾಬುಡನ್‌ಗಿರಿಯಂತಹ ವಿಷಯಗಳನ್ನು ಮತದಾರರತ್ತ ಕೊಂಡೊಯ್ದು, ತನ್ನ ಅಭ್ಯುದಯದ ಶುಭ ಗಳಿಗೆಗೆ ಮುನ್ನುಡಿ ಬರೆಯತೊಡಗಿತ್ತು. ಈ ಎರಡು ರಾಷ್ಟ್ರೀಯ ಪಕ್ಷಗಳ ಮೇಲ್ನೋಟದ ಸ್ಪರ್ಧೆಯಲ್ಲಿ ಜೆಡಿಎಸ್‌ ನಜ್ಜುಗುಜ್ಜಾಗಿ, ಪಕ್ಷದಲ್ಲಿ ಬೆಳ್ಳಿಗೆರೆ ಮಸುಕಾಗಿಯೂ ಕಾಣದಂತಹ ವಾತಾವರಣ ಇತ್ತು. ಆದರೆ, ಆ ಸಂದರ್ಭದಲ್ಲಿ ದೇವೇಗೌಡರು ಉರುಳಿಸಿದ ದಾಳಗಳು, ಕಾಂಗ್ರೆಸ್ ಮೇಲೆ ಅದೆಂತಹ ಪರಿಣಾಮ ಬೀರಿದವೆಂದರೆ, ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರ ಪಡೆಯಲು ಸಿದ್ದರಾಮಯ್ಯನವರ ಬರುವಿಕೆಯವರೆಗೂ ಆ ಪಕ್ಷ ಕಾಯಬೇಕಾಯಿತು.

‘ಮುಂದಿನ ಜನ್ಮವೆನ್ನುವುದೇನಾದರೂ ಇದ್ದರೆ ಮುಸಲ್ಮಾನನಾಗಿ ಹುಟ್ಟಬಯಸುತ್ತೇನೆ’, ‘ದನದ ಮಾಂಸವನ್ನು ಮುಸಲ್ಮಾನರಷ್ಟೇ ತಿನ್ನುವುದಿಲ್ಲ...’ ಎಂಬಂತಹ ಹೇಳಿಕೆಗಳನ್ನು ದೇವೇಗೌಡರು ನೀಡಿದ್ದರು. ಇದರ ಪರಿಣಾಮವಾಗಿ, ಅಧಿಕಾರಾರೂಢ ಕಾಂಗ್ರೆಸ್‌ ಪಕ್ಷ 2004ರ ಚುನಾವಣೆಯಲ್ಲಿ ಕೇವಲ 65 ಸ್ಥಾನಗಳಿಗೆ ಇಳಿಯಿತು. ಬರೋಬ್ಬರಿ 58 ಸೀಟುಗಳನ್ನು ಜೆಡಿಎಸ್‌ ಪಡೆದುಕೊಂಡಿತು.

ಆದರೀಗ ಜೆಡಿಎಸ್‌ ಮತ್ತೆ ಅಂತಹ ಘೋಷಣೆಗಳ ಮೂಲಕ, ಅಖಂಡ ಕರ್ನಾಟಕದ ಪ್ರಾದೇಶಿಕ ಅಸ್ಮಿತೆಯಾಗಿ ಹೊರ ಹೊಮ್ಮುತ್ತದೆ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಈಗಿನ ಚುನಾವಣಾ ತಂತ್ರಗಳು 15 ವರ್ಷಗಳ ಹಿಂದಿನ ತಂತ್ರಗಳಿಗಿಂತ ತೀರಾ ಭಿನ್ನ. ಜಾತಿ, ಧನಬಲ, ಪ್ರಾದೇಶಿಕತೆ, ಭಾಷೆ, ಆಡಳಿತ, ಅದರಲ್ಲಿನ ದಕ್ಷತೆ, ಪ್ರಭೆ, ನಾಯಕತ್ವ ಗುಣ ಇವೆಲ್ಲವನ್ನೂ ಮೀರಿ ಚುನಾವಣಾ ತಂತ್ರಗಳು ಕೆಲಸ ಮಾಡತೊಡಗಿವೆ. ಇದನ್ನರಿಯದೆ ಜೆಡಿಎಸ್‌ನಂತಹ ಪಕ್ಷಗಳು ಸವಕಲಾದ ರಾಜಕಾರಣದ ದಾಳ ಉರುಳಿಸ ತೊಡಗಿರುವುದೇ ವಿಷಾದ ಹಾಗೂ ನಗೆಪಾಟಲಿನ ಸಂಗತಿ.

ಬಿಜೆಪಿಯೊಂದಿಗೆ ಸೇರಿ ಅಧಿಕಾರ ಪಡೆದ ಸ್ವಲ್ಪ ಸಮಯದಲ್ಲೇ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಯಾಗಿ ‘ಜಾತ್ಯತೀತತೆ ಎಂದರೇನು’ ಎಂದು ಕೇಳಿದ್ದು, ಆ ಪಕ್ಷದ ಮೂಲ ತತ್ವ ವನ್ನೇ ಪ್ರಶ್ನಿಸುವಂತಹದ್ದಾಗಿತ್ತು. ಇದು, ದೇವೇಗೌಡರ ಹೇಳಿಕೆಗಳಿಗೆ ವ್ಯತಿರಿಕ್ತವಾಗಿತ್ತು. ಬಿಜೆಪಿ ಜೊತೆ ಸೇರಿ ಅಧಿಕಾರ ಹಂಚಿಕೊಂಡಾಗಲೂ ಅಲ್ಪಸಂಖ್ಯಾತರ ಅವಕೃಪೆಗೆ ಒಳಗಾಗದಿದ್ದ ಜೆಡಿಎಸ್‌ ಅನ್ನು ಈ ಪ್ರಶ್ನೆ, ಮತ್ತೆಂದೂ ಮುಸಲ್ಮಾನರ ವೋಟುಗಳನ್ನು
ಪಡೆಯಲಾರದಷ್ಟು ಹಿಂದಕ್ಕೆ ಒಯ್ಯಿತೇ ಎಂಬುದೂ ಪ್ರಶ್ನೆ. ಆದರೆ ಇವೆಲ್ಲಕ್ಕಿಂತಲೂ ಹೆಚ್ಚಾಗಿ ಜೆಡಿಎಸ್‌ನ ಅಧಃಪತನಕ್ಕೆ ಮುಖ್ಯ ಕಾರಣವಾಗಿದ್ದು ಅದು ಅನುಸರಿ ಸುತ್ತಿರುವ ಲಾಗಾಯ್ತಿನ ಕೇಂದ್ರೀಕೃತ ಪ್ರಚಾರ ವ್ಯವಸ್ಥೆ. ಇದರಿಂದ ಹೊರಬರುವ ಬಗ್ಗೆ ಯೋಚಿಸಲಾರದಷ್ಟು ಈ ಪಕ್ಷ ಭಯಗ್ರಸ್ತವಾಗಿದೆ ಎನ್ನದೇ ವಿಧಿಯಿಲ್ಲ.

ಮೊನ್ನಿನ ಉಪಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರ ಗೆಲುವಿಗೆ ಜಾತಿಯೊಂದೇ ಕಾರಣವೇ? ಯಡಿಯೂರಪ್ಪ ಮತ್ತು ನರೇಂದ್ರ ಮೋದಿಯವರ ವರ್ಚಸ್ಸು ಕಾರಣವೇ? ಖಂಡಿತಾ ಅಲ್ಲ. ಚುನಾವಣೆ ಎದುರಿಸಿದ ವಿಧಾನ ಅವರೆಲ್ಲರನ್ನೂ ದಡ ಸೇರಿಸಿತು. ಭೀಕರ ನೆರೆಯಿಂದ ತಾವು ಮನೆ ಮಠ ಕಳೆದುಕೊಂಡು ರೋದಿಸುತ್ತಿದ್ದಾಗ, ಈ ಅಭ್ಯರ್ಥಿ ಗಳೆಲ್ಲ ಮುಂಬೈ ರೆಸಾರ್ಟಿನಲ್ಲಿದ್ದರು ಎಂಬುದನ್ನು ನೆನಪಿಟ್ಟು
ಕೊಳ್ಳದೆ ಜನ, ಬಿಜೆಪಿಯ ಚುನಾವಣಾ ತಂತ್ರಕ್ಕೆ ವೋಟು ಹಾಕಿದ್ದಾರೆ. ಸಾಲ ಮೇಳ, ಗರೀಬಿ ಹಠಾವೋ, ಬೇಟಿ ಬಚಾವೋ, ಸಬ್ ಕಾ ಸಾತ್ ಸಬ್ ಕಾ ವಿಕಾಸ್ ತರಹದ ಘೋಷಣೆಗಳು ಬೀರುವ ಪರಿಣಾಮಕ್ಕಿಂತ ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ್ದೇನೆ ಎಂಬ ಕುಮಾರಸ್ವಾಮಿಯವರ ಭಜನೆಗಿಂತ ಮತದಾರರನ್ನು ಮುಟ್ಟಲು ಈ ಕಾಲಘಟ್ಟ ಬೇರೆಯದನ್ನೇ ಬಯಸುತ್ತದೆ. ಈ ಕಾರಣದಿಂದಲೇ ‘ಬಾಂಬೆ ಗಿರಾಕಿ’ ಎಂಬ ಮೂದಲಿಕೆಗೆ ಒಳಗಾಗಿದ್ದ ಅಭ್ಯರ್ಥಿಗೆ, ಜೆಡಿಎಸ್‌ ಲಾಗಾಯ್ತಿನ ಭದ್ರಕೋಟೆ ಎಂಬ ಬಿರುದಿಗೆ ಕೂಡಾ ಕ್ಯಾರೇ ಎನ್ನದ ಕೆ.ಆರ್. ಪೇಟೆ ಮತದಾರನನ್ನು ಮೋಡಿ ಮಾಡಿದ ಅಂಶ ಯಾವುದು? ಅದೇ ‘ಪೇಜ್ ಪ್ರಮುಖ್’ ಎಂಬ ಅತ್ಯಂತ ಬುಡಮಟ್ಟದ ಚುನಾವಣಾ ತಂತ್ರ. ಇದನ್ನು ಬಿಜೆಪಿ ಸುವ್ಯವಸ್ಥಿತವಾಗಿ ಮಾಡಿತು.

ಮನೆ ಮನೆಯ ಜೊತೆಗಿನ ಬಿಜೆಪಿ ಕಾರ್ಯಕರ್ತರ ಸಂಪರ್ಕವು ನಿರೀಕ್ಷೆಗಳನ್ನೆಲ್ಲ ತಲೆಕೆಳಗೆ ಮಾಡುವ ರೀತಿಯಲ್ಲಿ ಕೆಲಸ ಮಾಡಿತು ಎಂಬುದನ್ನು, ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಮುಂದಿನ ಕಾರ್ಯಚಟು
ವಟಿಕೆಗೆ ಮಾದರಿಯಾಗಿ ತೆಗೆದುಕೊಳ್ಳಬಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT