ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬನ್ನಿ, ನೀವೂ ಮಸೀದಿ ದರ್ಶನಕ್ಕೆ

ಮಸೀದಿ ಕುರಿತು ಜನರಲ್ಲಿ ಇರುವ ಪೂರ್ವಗ್ರಹಗಳನ್ನು ದೂರ ಮಾಡುತ್ತಿದೆ ‘ಮಸೀದಿ ದರ್ಶನ’ ಅಭಿಯಾನ
Last Updated 30 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಹಾಗೆ ನೋಡಿದರೆ ಇದು ಹೊಸದೇನೂ ಅಲ್ಲ. ಇಡೀ ದೇಶದಲ್ಲಿ ಮತ್ತು ನಮ್ಮ ರಾಜ್ಯದಲ್ಲಿಯೂ ಹತ್ತು–ಹನ್ನೆರಡು ವರ್ಷಗಳಿಂದ ಇದು ನಡೆಯುತ್ತಿದೆ. ಸಾಮಾಜಿಕ, ರಾಜಕೀಯ ಕಾರಣಗಳಿಗಾಗಿ ಇತ್ತೀಚೆಗೆ ಇದರ ಮಹತ್ವ ಒಂದು ರೀತಿ ಹೆಚ್ಚಾಗಿರುವುದರಿಂದ ‘ಮಸೀದಿ ದರ್ಶನ’ ಕಾರ್ಯಕ್ರಮ ಪ್ರಚಾರವನ್ನು ಪಡೆಯುತ್ತಿದೆ.

ಕನ್ನಡದಲ್ಲಿ ಮಸೂತಿ, ಮಸೀದಿ ಎಂದೆಲ್ಲಾ ಕರೆಯಲಾಗುವ ಕಟ್ಟಡದ ಅರೇಬಿಕ್ ಹೆಸರು ‘ಮಸ್-ಜಿದ್’ ಎಂದು. ಮುಸ್ಲಿಮರು ಅಲ್ಲಾಹುವಿಗೆ ಸರ್ವಾಂಗ ಸಹಿತವಾಗಿ ತಮ್ಮ ಅರ್ಪಣೆಯನ್ನು ಸೂಚಿಸುವ ರೀತಿಯಲ್ಲಿ ಮೊಣಕಾಲ ಮೇಲೆ ಬಾಗಿ ನೆಲಕ್ಕೆ ಮುಖ ಮತ್ತು ಹಣೆಯನ್ನು ಹಚ್ಚುವ ಪ್ರಾರ್ಥನಾ ವಿಧಿಗೆ ‘ಸಜ್‍ದಾಹ್’ ಎನ್ನುತ್ತಾರೆ. ಇಂಥ ಸಜ್‍ದಾಹ್ ಮಾಡುವ ಒಂದು ನಿಗದಿತ ತಾಣ ‘ಮಸ್-ಜಿದ್’, ಮಸೀದಿ.

ಮಸೀದಿ, ಮದರಸಾ ಮತ್ತು ದರ್ಗಾ ಮೂರೂ ಬೇರೆ ಬೇರೆ. ಮದರಸಾದಲ್ಲಿ ಧಾರ್ಮಿಕ, ಕೆಲವು ಕಡೆ ಸರ್ಕಾರಿ ಪಠ್ಯದ ಪ್ರಕಾರ ಸಾರ್ವತ್ರಿಕ ಶಿಕ್ಷಣ ನಡೆಯುತ್ತದೆ, ದರ್ಗಾದಲ್ಲಿ ಒಬ್ಬ ಸಂತರ ಸಮಾಧಿ ಇರುತ್ತದೆ. ಎಲ್ಲಾ ಧರ್ಮದ ಜನ ದರ್ಗಾಗಳಿಗೆ
ನಡೆದುಕೊಳ್ಳುತ್ತಾರೆ. ಪ್ರತೀ ದರ್ಗಾದ ಜೊತೆಯಲ್ಲಿ ಯಾವುದಾದರೂ ಒಂದು ‘ಪವಾಡ’ದ ಕಥೆ ಹೊಂದಿಕೊಂಡಿರುತ್ತದೆ. ಇಲ್ಲಿ ಜನ ವಿವಿಧ ರೀತಿಯ ಕಾಣಿಕೆಗಳನ್ನು ಒಪ್ಪಿಸಿ ಹರಕೆ ಹೊತ್ತುಕೊಳ್ಳುತ್ತಾರೆ. ಸದ್ದುಗದ್ದಲ. ಆದರೆ, ಮಸೀದಿಗೆ ಯಾವುದೇ ‘ಪವಾಡ’ದ ನಂಟು ಇಲ್ಲ. ಯಾವುದೇ ಸಮಾಧಿ, ಸಂಕೇತಗಳು ಅಲ್ಲಿರುವುದಿಲ್ಲ. ವಿಶಾಲವಾದ, ಸ್ವಚ್ಛವಾದ ಸ್ಥಳ, ಪ್ರಶಾಂತವಾದ ವಾತಾವರಣ, ಧ್ಯಾನಕ್ಕೆ ಪ್ರಶಸ್ತವಾದ ತಾಣ. ಇಲ್ಲಿ ಮುಸ್ಲಿಂ ಸಮುದಾಯದವರು ವೈಯಕ್ತಿಕವಾಗಿ, ಮುಖ್ಯವಾಗಿ ಸಾಮೂಹಿಕ ವಾಗಿ, ದಿನಕ್ಕೆ ಐದು ಬಾರಿ ನಮಾಜನ್ನು ಸಲ್ಲಿಸುತ್ತಾರೆ.

ನಿರ್ದಿಷ್ಟ ಸಮುದಾಯದವರು ಎಂಬ ಕಾರಣಕ್ಕೆ ಮಸೀದಿಯಲ್ಲಿ ಯಾವುದೇ ನಿಷೇಧ, ತಾರತಮ್ಯ ಇಲ್ಲ. ಇಲ್ಲಿ ಬೇರೆಯವರು ಮುಟ್ಟಿದರೆ ಮೈಲಿಗೆಯಾಗುವ ಯಾವುದೇ ವಸ್ತುಗಳಿಲ್ಲ. ಇಲ್ಲಿ ಎಲ್ಲವೂ ಶೂನ್ಯ, ಬಯಲು.

ಮಸೀದಿಯಲ್ಲಿ ಮುಸ್ಲಿಂ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬ ಒಂದು ನಂಬಿಕೆ ಪ್ರಚಲಿತವಾಗಿದೆ. ಆದರೆ ವಾಸ್ತವ ಬೇರೆ. ಮುಸ್ಲಿಮರಲ್ಲಿ ಸಾಮೂಹಿಕ ನಮಾಜಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಇದರಲ್ಲಿ ನಮಾಜಿಗಳು ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಾನಮಾನಗಳನ್ನು ಮಸೀದಿಯ ಹೊರಗೇ, ಚಪ್ಪಲಿ ಬಿಡುವ ಕಡೆ ಕಳಚಿಟ್ಟು ಒಳಗೆ ಪ್ರವೇಶಿಸಬೇಕು. ನಮಾಜಿಗೆ ಸಾಲುಗಳಲ್ಲಿ ನಿಂತಾಗ ಸ್ವಲ್ಪವೂ ಜಾಗ ಬಿಡದೆ ಹೆಗಲಿಗೆ ಹೆಗಲು ತಾಗಿಸಿಕೊಂಡು ನಿಲ್ಲಬೇಕು. ನಮಾಜನ್ನು ಸಲ್ಲಿಸುವ ಕ್ರಮದಲ್ಲಿ ಎಲ್ಲರೂ ಸೊಂಟದಿಂದ ಬಾಗಬೇಕು, ಮೊಣಕಾಲೂರಿ ಹಣೆಯನ್ನು ನೆಲಕ್ಕೆ ತಾಗಿಸಬೇಕು ಎಂಬೆಲ್ಲಾ ಪದ್ಧತಿಗಳಿವೆ. ಇಂಥ ಪ್ರಾರ್ಥನೆಯ ಸ್ಥಳದಲ್ಲಿ ಮಾತ್ರ ಪುರುಷರು ಮತ್ತು ಮಹಿಳೆಯರು ಒಟ್ಟಿಗೇ ನಿಲ್ಲುವ ಪದ್ಧತಿ ಇಲ್ಲ. ಮನೆಗಳಲ್ಲಿ ಮಾಡುವ ಇತರ ಧಾರ್ಮಿಕ ವಿಧಿಗಳಲ್ಲಿ ಸ್ತ್ರೀಯರು ಸಮಾನವಾಗಿ ಭಾಗವಹಿಸುತ್ತಾರೆ. ಅವರೂ, ಮುಖ್ಯವಾಗಿ ರಂಜಾನ್ ಮತ್ತು ಬಕ್ರೀದ್ ಹಬ್ಬದ ವಿಶೇಷ ಸಂದರ್ಭದಲ್ಲಿ ಯಾರಾದರೂ ಒಬ್ಬರ ಮನೆಯಲ್ಲಿ ಸೇರಿ ಸಾಮೂಹಿಕವಾಗಿಯೂ ನಮಾಜು ಮಾಡುತ್ತಾರೆ.

ಬಹಳಷ್ಟು ವಿಸ್ತಾರವಾದ ಸಂಕೀರ್ಣವನ್ನು ಹೊಂದಿರುವ ದೇಶದ ಹಲವು ಮಸೀದಿಗಳಲ್ಲಿ ಮಹಿಳೆ ಯರಿಗೂ ಸಾಮೂಹಿಕ ನಮಾಜಿಗಾಗಿ ಅವರದೇ ಆದ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಚಿಕ್ಕ ಮಸೀದಿಗಳಲ್ಲಿ ಇದು ಕಾಣದೇ ಇದ್ದರೆ ಸ್ಥಳದ ಅಭಾವ ಮಾತ್ರ ಕಾರಣ. ಇದಲ್ಲದೆ ಮಸೀದಿ ಸಂಕೀರ್ಣ ದಲ್ಲಿಯೇ ಇರುವ ಗ್ರಂಥಾಲಯ, ಸಭಾಂಗಣದಂತಹ ಸಾಮಾನ್ಯ ಸ್ಥಳಗಳಲ್ಲಿ ಸ್ತ್ರೀಯರು ಮತ್ತು ಪುರುಷರು ಒಟ್ಟಾಗಿಯೇ ಭಾಗವಹಿಸುತ್ತಾರೆ.

ಎಲ್ಲ ಧರ್ಮಗಳಲ್ಲಿ ಇರುವ ಹಾಗೆ ಮುಸ್ಲಿಮ ರಲ್ಲಿಯೂ ಸಂಪ್ರದಾಯವಾದಿಗಳು ಇರುತ್ತಾರೆ. ಇವರಿಗೆ ಧರ್ಮದ ಆಳ– ಅಗಲದ ಪರಿಚಯ ಇರುವುದಿಲ್ಲ, ಇವರು ಅವರವರೇ ಹುಟ್ಟಿಸಿಕೊಂಡು ಮೂಢಾಚರಣೆಗಳನ್ನು ಅನುಸರಿಸುತ್ತಾರೆ. ಇಂಥ ಕೆಲವರು ಮಹಿಳೆಯರು, ಇತರ ಧರ್ಮೀಯರು ಮಸೀದಿಯ ಒಳಗೆ ಬರಬಾರದು ಎಂಬ ಭ್ರಮೆಗೆ ಒಳಗಾಗಿದ್ದಿರಬೇಕು. ಆದರೆ, ಜಮಾತೆ ಇಸ್ಲಾಮ್ ಇ ಹಿಂದ್ ಮತ್ತು ಅದರ ಸಹಸಂಸ್ಥೆಗಳು ಈ ಮೌಢ್ಯವನ್ನು ಹೋಗಲಾಡಿಸಿ, ‘ಬನ್ನಿ, ಮಸೀದಿಯನ್ನು ನೀವೂ ನೋಡಿ’ ಎನ್ನುವ ರೀತಿಯ ಸಾರ್ವಜನಿಕ ಅಭಿಯಾನವನ್ನು ಆರಂಭಿಸಿವೆ. ‘ಮಸೀದಿಯ ಕುರಿತು ಆಗದವರು ಕಟ್ಟಿರುವ ಕಥೆಗಳನ್ನು ನಂಬುವ ಬದಲು, ನೀವೇ ಕಣ್ಣಾರೆ ನೋಡಿ’ ಎಂಬುದೇ ಈ ಅಭಿಯಾನದ ಧ್ಯೇಯ.

ಕಳೆದ ಭಾನುವಾರ ಬೆಂಗಳೂರಿನ ಬನ್ನೇರುಘಟ್ಟದ ಮಸೀದಿಯೊಂದರಲ್ಲಿ ಆಯೋಜಿಸಲಾಗಿದ್ದ ‘ಮಸೀದಿ ದರ್ಶನ’ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರೂ ಇದ್ದರು, ಇನ್ನೂರಕ್ಕೂ ಹೆಚ್ಚು ಜನ ಇತರ ದೇಶಬಾಂಧವರು ಇದರ ಪ್ರಯೋಜನವನ್ನು ಪಡೆದರು. ತಮ್ಮ ತಮ್ಮ ಜಾತಿ, ಧರ್ಮದೊಂದಿಗೆ ಮಸೀದಿಗೆ ಬಂದರು, ಹೊರಹೋಗುವಾಗಲೂ ಅವರ ಜಾತಿ, ಧರ್ಮ ಅದೇ ಆಗಿತ್ತು, ಬದಲಾಗಿದ್ದು, ಮಸೀದಿಯ ಬಗ್ಗೆ ಅವರಿಗಿದ್ದ ಧೋರಣೆ.

ನಿಗೂಢಗಳು ನಮ್ಮನ್ನು ಒಡೆಯುವ ಪಿತೂರಿ ಮಾಡುತ್ತವೆ. ಪರಸ್ಪರ ಅರಿವು ನಮ್ಮಲ್ಲಿ ಸೌಹಾರ್ದವನ್ನು ತರುತ್ತದೆ. ಸಂವಿಧಾನ ಮತ್ತು ಮಾನವತೆಯ ಆಶಯವೂ ಇದೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT