ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತ್ತೀಯ ಕೊರತೆ: ಕುತೂಹಲಕ್ಕೆ ಅವಕಾಶವೆಲ್ಲಿ?

ಯಾವುದೋ ದೊಡ್ಡ ನಿರೀಕ್ಷೆ ಕೈಗೂಡದಿದ್ದಾಗ ಕೊನೇ ಕ್ಷಣದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಸಚಿವರು ಬಜೆಟ್ ಮಂಡಿಸಬೇಕಾಯಿತೇ?
Last Updated 10 ಜುಲೈ 2019, 19:45 IST
ಅಕ್ಷರ ಗಾತ್ರ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2019-20ನೇ ಸಾಲಿನ ಬಜೆಟ್ ಭಾಷಣದ ಪ್ರಾರಂಭದಲ್ಲೇ, ‘ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಸರ್ಕಾರವು ವಿತ್ತೀಯ ಶಿಸ್ತು ಕಾಯ್ದುಕೊಂಡಿದೆ’ ಎಂದು ಕೊಂಡಾಡಿದರು. ವಿತ್ತೀಯ ಕೊರತೆ ಪ್ರಮಾಣವನ್ನು ನಿಯಂತ್ರಿಸುವ ರೂಪದಲ್ಲಿ ಈ ಶಿಸ್ತು ಪ್ರಕಟವಾಗಿದೆ ಎಂದು ತಿಳಿಸಲು ಪ್ರಯತ್ನಿಸಿದರು.

ಬಜೆಟ್‌ ಮಂಡನೆ ಬಳಿಕ ನಿರ್ಮಲಾ ಅವರು ಅದರ ಪ್ರತಿಯನ್ನು ಸಂಸತ್ತಿಗೆ ಒ‍ಪ್ಪಿಸಿ ಕುಳಿತುಕೊಂಡರು. ಸಂಸತ್ತಿನ ಸಂಪ್ರದಾಯದಂತೆ ಲೋಕಸಭಾಧ್ಯಕ್ಷರು ಮತ್ತೆ ಅವರನ್ನು ಆಹ್ವಾನಿಸಿದಾಗ, ‘ಬಜೆಟ್ ಯೋಜನೆ ಹಾಗೂ ಕಾರ್ಯಕ್ರಮಗಳಿಗೆ ನಿಗದಿಯಾದ ಮೊತ್ತದ ವಿವರಗಳನ್ನು ಪ್ರತ್ಯೇಕವಾಗಿ ಜೋಡಿಸಲಾಗಿದೆ’ ಎಂದು ತಿಳಿಸಿದರು. ಹಿಂದಿನ ಹಣಕಾಸು ಸಚಿವರಂತೆ ಅವರು ಈ ವಿವರಗಳನ್ನು ಏಕೆ ಬಜೆಟ್ ಭಾಷಣದಲ್ಲಿ ಸೇರಿಸಲಿಲ್ಲ? ‘2019-20ನೇ ಸಾಲಿನಲ್ಲಿ ವಿತ್ತೀಯ ಕೊರತೆಯ ಅಂದಾಜನ್ನು ಶೇ 3.4ರಿಂದ ಶೇ 3.3ಕ್ಕೆ ಇಳಿಸಲಾಗಿದೆ’ ಎಂದ ಸಚಿವೆ, ಕುತೂಹಲದ ಕಾರಣಕ್ಕಾಗಿ ಇದನ್ನು ತಿಳಿಸುತ್ತಿರುವುದಾಗಿ ಹೇಳಿದರು! ಸರ್ಕಾರಕ್ಕೆ ಸವಾಲೊಡ್ಡುತ್ತಿರುವ ಕೊರತೆಯ ಮಾಹಿತಿಯನ್ನು ಪ್ರಧಾನ ಬಜೆಟ್ ಭಾಷಣದಲ್ಲಿ ಸೇರಿಸದೆ, ಸಂಸತ್ತಿಗೆ ಬಜೆಟ್‌ ಪ್ರತಿಯನ್ನು ಒಪ್ಪಿಸಿದ ಮೇಲೆ ಅದನ್ನು ಪ್ರತ್ಯೇಕವಾಗಿ ಸಲ್ಲಿಸಿದ್ದರ ಔಚಿತ್ಯವೇನು? ಯಾವುದೋ ದೊಡ್ಡ ನಿರೀಕ್ಷೆ ಕೈಗೂಡದಿದ್ದಾಗ ಕೊನೇ ಕ್ಷಣದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಸಚಿವರು ಬಜೆಟ್ ಮಂಡಿಸಬೇಕಾಯಿತೇ? ಸಂಸತ್ತಿಗೆ ತಿಳಿಸಲೇಬೇಕಾದ ಮಾಹಿತಿಯ ಪೂರೈಕೆ ವಿಷಯದಲ್ಲಿ ಕುತೂಹಲದ ಪ್ರಶ್ನೆ ಎಲ್ಲಿ ಬರುತ್ತದೆ?

ಎಲ್ಲಾ ಉದ್ದೇಶಗಳಿಗೆ ತಗಲುವ ಒಟ್ಟು ಸಾರ್ವಜನಿಕ ವೆಚ್ಚ ಮತ್ತು ಎಲ್ಲಾ ಮೂಲಗಳಿಂದ ಬರುವ ಒಟ್ಟು ಸಾರ್ವಜನಿಕ ಆದಾಯದ ನಡುವಣ ಅಂತರವೇ ವಿತ್ತೀಯ ಕೊರತೆ. ಜಿಡಿಪಿಗೆ ವಿತ್ತೀಯ ಕೊರತೆಯ ಶೇಕಡಾವಾರು ಪ್ರಮಾಣದಲ್ಲಾಗುವ ಏರಿಳಿತಗಳು ಸಾರ್ವಜನಿಕ ಹಣಕಾಸಿನ ಸ್ಥಿತಿಗತಿಯನ್ನು ತೋರಿಸುತ್ತವೆ. ವಿತ್ತೀಯ ಕ್ರೋಡೀಕರಣವೆಂದರೆ, 2004ರ ಜುಲೈ 4ರಿಂದ ಜಾರಿಗೆ ಬಂದ 2003ರ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ (ಎಫ್.ಆರ್.ಬಿ.ಎಂ) ಕಾನೂನಿನ ಪರಿಧಿಯಲ್ಲಿ ವಿತ್ತೀಯ ಕೊರತೆಯನ್ನು ನಿಭಾಯಿಸುವುದು ಎಂದರ್ಥ. ಈ ಕಾನೂನಿನ ಅನ್ವಯ, ವಿತ್ತೀಯ ಕೊರತೆಯ ಪ್ರಮಾಣ ಜಿಡಿಪಿಯ ಶೇ 3ರ ಮಿತಿಯನ್ನು ದಾಟಬಾರದು.

ವಿತ್ತೀಯ ಕೊರತೆಯ ಸಮಸ್ಯೆಗೆ ಪರಿಹಾರವೇ ಇಲ್ಲವೆಂದಲ್ಲ. 2011-12ನೇ ಸಾಲಿನಲ್ಲಿ ಈ ಕೊರತೆಯ ಪ್ರಮಾಣ ಶೇ 5.9ರಷ್ಟಕ್ಕೆ ಏರಿದಾಗ, ಆಗಿನ ವಿತ್ತ ಸಚಿವ ಪ್ರಣವ್ ಮುಖರ್ಜಿ ತೀವ್ರ ಟೀಕೆಗೊಳಗಾದರು. ‘ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಂದಾಯವಾಗ ಬೇಕಾದ ₹ 5,29,432 ಕೋಟಿಯನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಿದರೆ ವಿತ್ತೀಯ ಕೊರತೆಯೇ ಇರುವುದಿಲ್ಲ’ ಎಂದು ಎಡಪಂಥೀಯ ನಾಯಕ ಸೀತಾರಾಂ ಯೆಚೂರಿ ವಾದಿಸಿದ್ದರು.

ಆನೆಗೆ ವಾಡಿಕೆಯಂತೆ ಕೊಡಬೇಕಾದ ಅನ್ನವನ್ನು ಕೊಡದೇ ಹೋದಾಗ, ಅದು ಸಿಟ್ಟಿಗೆದ್ದು ಭತ್ತದ ಗದ್ದೆಗೆ ನುಗ್ಗಿದರೆ ಆಗುವ ಪರಿಣಾಮವನ್ನು ತೆರಿಗೆ ವಸೂಲಿಯ ವಿಚಾರಕ್ಕೆ ಸ್ವಾರಸ್ಯಕರವಾಗಿ ಹೋಲಿಸಿ, ನಿರ್ಮಲಾ ಸಂಸತ್ತಿನಲ್ಲಿ ಸೈ ಎನಿಸಿಕೊಂಡರು. ಸಮರ್ಥ ರಾಜಕೀಯ ನಾಯಕತ್ವವುಳ್ಳ, ಬಹುಮತದ ಬಲವಿರುವ ಸರ್ಕಾರ, ತೆರಿಗೆಗಳ್ಳರ ವಿರುದ್ಧ ಏಕೆ ‘ಆನೆ ಬಲ’ ಪ್ರದರ್ಶಿಸಬಾರದು? ದಶಕಗಳಿಂದ ಬಾಕಿ ಇರುವ ತೆರಿಗೆ ಹಣವನ್ನು ಸಂಗ್ರಹಿಸಿ ವಿತ್ತೀಯ ಕೊರತೆಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಾರದು?

2014ರ ಜುಲೈ 10ರಂದು, ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದರು. ವಿತ್ತೀಯ ಕ್ರೋಡೀಕರಣಕ್ಕೆ ಪೂರಕವಾದ ಗುರಿಯುಳ್ಳ ಮಾರ್ಗಸೂಚಿಯನ್ನು ಅವರು ಸಂಸತ್ತಿನ ಮುಂದೆ ಇಟ್ಟರು. ವಿತ್ತೀಯ ಕೊರತೆಯ ಪ್ರಮಾಣವನ್ನು 2015-16ರಲ್ಲಿ ಶೇ 3.6ಕ್ಕೂ, 2016-17ರಲ್ಲಿ ಶೇ 3ಕ್ಕೂ ಇಳಿಸುವ ಗುರಿ ಆ ಮಾರ್ಗಸೂಚಿಯಲ್ಲಿತ್ತು. 2017-18ನೇ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ಶೇ 3ಕ್ಕೆ ಸೀಮಿತಗೊಳಿಸುವ ಸಂಕಲ್ಪವನ್ನು ಜೇಟ್ಲಿ ಘೋಷಿಸಿದ್ದರು. ಅದು ಸಹ ಕೈಗೂಡಲಿಲ್ಲ. ವಿತ್ತೀಯ ಕೊರತೆ ಶೇ 3ಕ್ಕೆ ಸೀಮಿತಗೊಳ್ಳಬೇಕೆಂದು, ಕೇಂದ್ರ ಸರ್ಕಾರವೇ ರಚಿಸಿದ ಎನ್.ಕೆ. ಸಿಂಗ್ ನೇತೃತ್ವದ ಸಮಿತಿ ಸಲಹೆ ಮಾಡಿತ್ತು. ಆದರೆ, ವಿತ್ತೀಯ ಕೊರತೆಯ ಪ್ರಮಾಣ ಶೇ 3.3ರಷ್ಟಾಗಬಹುದೆಂದು 2018ರ ಫೆ. 1ರ ಬಜೆಟ್ ಭಾಷಣದಲ್ಲಿ ಜೇಟ್ಲಿ ಅಂದಾಜಿಸಿದ್ದರು. ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳಲು ಅವರು ಬದ್ಧತೆಯಿಂದ ಪ್ರಯತ್ನಿಸಿದರಾದರೂ, ಈ ಅಂದಾಜು ತಪ್ಪಿ, ವಿತ್ತೀಯ ಕೊರತೆ ಪ್ರಮಾಣ 2018– 19ನೇ ಸಾಲಿನಲ್ಲಿ ಶೇ 3.4ರಷ್ಟಾಗಿದೆ.

ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಅಗತ್ಯಗಳನ್ನು ಗಮನಿಸಿ, ವಿತ್ತೀಯ ಕೊರತೆಯ ಪ್ರಮಾಣವನ್ನು ಶೇ 3ರ ಮಿತಿಗಿಂತ ಸ್ವಲ್ಪ ಹೆಚ್ಚಿಸಲು ಅವಕಾಶ ಇರಬೇಕೆಂಬ ವಾದ ಹುಟ್ಟಿಕೊಂಡಿದೆ. ಇದನ್ನು ವಿರೋಧಿಸುವ ಅರ್ಥಶಾಸ್ತ್ರಜ್ಞರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಎನ್.ಕೆ. ಸಿಂಗ್ ನೇತೃತ್ವದ ಸಮಿತಿಯು ವಿತ್ತೀಯ ಕೊರತೆಯ ಪ್ರಮಾಣವನ್ನು ಶೇ 2.5ಕ್ಕೆ ಇಳಿಸಬೇಕೆಂದು ಶಿಫಾರಸು ಮಾಡಿದೆ. ಇದನ್ನೆಲ್ಲ ಗಮನಿಸಿದಾಗ, 2003ರ ಕಾನೂನಿಗೆ ಮಹತ್ವದ ತಿದ್ದುಪಡಿ ತರುವ ಅಗತ್ಯವಿರುವಂತೆ ತೋರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT