ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ತಾಯಿನುಡಿ ಮತ್ತು ಸಾಂಸ್ಕೃತಿಕ ಅಸ್ಮಿತೆ

ಮಾತೃಭಾಷೆಯನ್ನು ಅಲಕ್ಷಿಸುವ ಯಾವುದೇ ಬಗೆಯ ಶಿಕ್ಷಣ ಮಾದರಿಗಳು ಮಕ್ಕಳ ಕಲಿಕೆಗೆ ಪ್ರತಿಕೂಲವಾಗುತ್ತವೆ
Last Updated 21 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಮಾತೃಭಾಷೆ ಅಥವಾ ತಾಯಿನುಡಿ ನಾವು ಸ್ವಾಭಾವಿಕವಾಗಿ ಅರ್ಜಿಸುವ ಮೊದಲ ಭಾಷೆ. ಮಗು ಜನಿಸಿದ ನಂತರ ಅದು ಆಲಿಸಲಾರಂಭಿಸುವ ಭಾಷೆ. ತನ್ನ ಸುತ್ತಮುತ್ತಲಿನ ವಸ್ತು ವೈವಿಧ್ಯಗಳನ್ನು ತಾಯಿ ಉಚ್ಚರಿಸುವ ಶಬ್ದಗಳಿಂದ, ಆಡುವ ಮಾತಿನಿಂದ ಮಗು ಪರಿಚಯಿಸಿಕೊಳ್ಳುತ್ತದೆ. ಅದಕ್ಕೆ ಅನ್ಯಭಾಷೆಗಳನ್ನು ಕಲಿಯಲು ಮಾತೃಭಾಷೆಯೇ ವೇದಿಕೆ.

ಮಗುವಿಗೆ ತಾಯಿನುಡಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಕಟ್ಟಿಕೊಡುತ್ತದೆ. ಒಂದು ಸಂಸ್ಕೃತಿಯ ಸಮರ್ಥ ಅವಲೋಕನ, ಅಧ್ಯಯನಕ್ಕೆ ಭಾಷಾಜ್ಞಾನವೇ ಸಾಧನ. ಮಾತೃಭಾಷೆ ನಮ್ಮ ಸಂಸ್ಕೃತಿ ಮತ್ತು ಅದರ ಬೇರುಗಳೊಂದಿಗೆ ನಮಗೆ ಸಂಪರ್ಕ ಕಲ್ಪಿಸುತ್ತದೆ. ಬಾಲ್ಯದಿಂದಲೇ ಮಾತೃಭಾಷೆಯಲ್ಲಿ ಹಿಡಿತವಿದ್ದರೆ ಮುಂದೆ ನಾಲ್ಕಾರು ಭಾಷೆಗಳಲ್ಲಿ ಪರಿಣತಿಯ ಜೊತೆಗೆ ಪ್ರಯೋಗ ಕೌಶಲವೂ ಮಕ್ಕಳಿಗೆ ಸುಲಭವಾಗಿ ಪ್ರಾಪ್ತವಾಗುತ್ತದೆ.

ತಾಯಿನುಡಿಯ ವ್ಯಾಕರಣ ತಿಳಿದರೆ ವಿವಿಧ ಭಾಷೆಗಳ ಶಬ್ದಗಳ ಅರ್ಥ ಕಠಿಣವೆನ್ನಿಸದು. ಮನೆಯೆಂಬ ಮೊದಲ ಪಾಠಶಾಲೆಯಲ್ಲಿ ಮಗು ಕಲಿಕೆ ಆರಂಭಿಸುತ್ತದೆ ಸರಿಯೆ. ಆದರೆ ಅದು ಶಾಲೆಗೆ ಬಂದಾಗ ಪರಕೀಯ ಭಾಷೆಯಲ್ಲಿ ಕಲಿಯತೊಡಗಿದಾಗ ಕಲಿಕೆಯ ವೇಗ ತಗ್ಗುತ್ತದೆ. ಅದೇ ಶಾಲೆಯಲ್ಲೂ ಮಾತೃಭಾಷೆಯಲ್ಲೇ ಕಲಿಯಲಾರಂಭಿಸಿದರೆ ಕಲಿಕೆ ತ್ವರಿತವಷ್ಟೇ ಅಲ್ಲ, ಅಧಿಕ ಧಾರಣಾಶಕ್ತಿ ಕೂಡ ದೊರೆಯುತ್ತದೆ.

ಹೊಸ ವಿಚಾರಗಳನ್ನು ಅನುಸಂಧಾನಿಸುವಾಗ ಪರಾಮರ್ಶನಕ್ಕೆ ಮಿದುಳಿಗೊಂದು ಅಡಿಪಾಯ ಅಗತ್ಯ. ಆ ಮೊದಲ ಹಾಗೂ ಅತಿ ಬಲಿಷ್ಠ ಅಡಿಪಾಯವೇ ಮಾತೃಭಾಷೆ. ಅಂದಹಾಗೆ ಅತ್ತ ಅಧ್ಯಾಪಕರಿಗೂ ಮಗುವಿಗೆ ಅದರ ಮಾತೃಭಾಷೆಯಲ್ಲೇ ಬೋಧಿಸುವುದು ಸುಲಭ.

ಭಾಷಿಕ ಮತ್ತು ಸಾಂಸ್ಕೃತಿಕ ವೈವಿಧ್ಯದ ಜೊತೆಗೆ ಬಹುಭಾಷಾ ಸಿದ್ಧಾಂತದ ಜಾಗೃತಿಗಾಗಿ 1999ರಲ್ಲಿ ಯುನೆಸ್ಕೊ ಪ್ರತಿವರ್ಷವೂ ಜಾಗತಿಕ ಮಟ್ಟದಲ್ಲಿ ಫೆಬ್ರುವರಿ 21ರಂದು ‘ಅಂತರರಾಷ್ಟ್ರೀಯ ಮಾತೃಭಾಷಾ ದಿನ’ ಆಚರಿಸುವ ಅಭಿಯಾನಕ್ಕೆ ನಿರ್ಣಯಿಸಿತು. 2002ರಲ್ಲಿ ವಿಶ್ವಸಂಸ್ಥೆ ಅದನ್ನು ಅನುಮೋದಿಸಿತು.

ಕೆಲ ವರ್ಷಗಳ ಹಿಂದಿನ ಸಂಗತಿ. ಕನ್ನಡದ ಪ್ರಸಿದ್ಧ ಸಾಹಿತಿಯೊಬ್ಬರು ಒಂದು ಸಮಾರಂಭದಲ್ಲಿ ಭಾಗ
ವಹಿಸಿದ್ದರು. ಅವರ ಮಾತಿನ ಸರದಿ ಬಂದಾಗ ಸಭಿಕರನ್ನು ‘ಕನ್ನಡದಲ್ಲಿ ಮಾತಾಡಲೋ ಅಥವಾ ಇಂಗ್ಲಿಷಿನಲ್ಲೋ’ ಎಂದು ಕೇಳಿದರು. ಅದಕ್ಕೆ ಒಂದಷ್ಟು ಜನ ಮಾತ್ರವೆ ‘ಕನ್ನಡ ಸಾರ್’ ಎಂದರು. ಸಭೆಯ ಇಂಗಿತ ಸಾಹಿತಿಗೆ ಅರ್ಥವಾಯಿತು. ‘ನೋಡಿ, ಇಂಗ್ಲಿಷ್ ನನ್ನ ಭಾಷೆಯೂ ಅಲ್ಲ, ನಿಮ್ಮ ಭಾಷೆಯೂ ಅಲ್ಲ. ಆದ್ದರಿಂದ ಕನ್ನಡದಲ್ಲೇ ನನ್ನ ಭಾಷಣ’ ಅಂತ ಅವರು ಹೇಳಿದಾಗ ಪ್ರಚಂಡ ಕರತಾಡನವಾಯಿತು.

ಮಾತೃಭಾಷೆಯಿಂದ ಮಾತ್ರವೇ ಆಂಗಿಕ ಭಾಷೆಗೆ ಲಯಬದ್ಧತೆ ಸಾಧ್ಯವಾಗುತ್ತದೆ. ನಮ್ಮ ಬದುಕಿನ ಗ್ರಹಿಕೆಗಳಿಗೆ ನಿರ್ದಿಷ್ಟ ಸ್ವರೂಪ ನೀಡುವ ಮಾತೃಭಾಷೆ ತಿಳಿದೂ ತಿಳಿಯದಂತೆ ನಟಿಸುವುದು ಆತ್ಮವಂಚನೆ.

ಕನ್ನಡದ ಸಂದರ್ಭಕ್ಕೆ ಬರೋಣ. ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುವುದೆಂದರೆ ಬಹುತೇಕ ಪೋಷಕರಿಗೆ ಎಣೆಯಿಲ್ಲದ ಸಂತಸ. ಇನ್ನು ಮಕ್ಕಳು ವಿದ್ಯಾವಂತರಾಗಲು ಯಾವ ಅಡೆತಡೆಯೂ ಇಲ್ಲವೆಂಬ ಹುಸಿ ನಿರಾಳತೆ. ಆದರೆ ವಾಸ್ತವ ಭಿನ್ನವೇ ಇದೆ. ಶಾಲಾ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದದೆಯೂ ವಿಜ್ಞಾನಿಗಳಾಗಬಹುದು, ವೈದ್ಯರಾಗಬಹುದು, ಪರಿಸರ ತಜ್ಞರಾಗಬಹುದು. ಹಾಗಾಗಲು ಅಗತ್ಯ ಆತ್ಮವಿಶ್ವಾಸ ಕಟ್ಟಿಕೊಡುವುದು ಕರಗತವಾಗಿಸಿಕೊಂಡ ಕನ್ನಡವೇ.

‘ಅಂವ ಇಂಗ್ಲಿಷ್‍ನಾಗೆ ಕಲಿಯಾಕ್ಕೋಗಿ ನಮ್ಮ ಜೋಡಿ ಮಾತಾಡೋದೆ ಬಿಟ್ಟ’ ಎನ್ನುವ ಕೆಲ ನೆಂಟರಿಷ್ಟರ ದೂರಿಗೆ ಆಸ್ಪದವಾಗುವುದು ಸಾಮಾನ್ಯ ಸಂಗತಿಯಲ್ಲ. ತಾಯಿನುಡಿಗೆ ಹೊರತಾದ ಭಾಷೆ ನಮ್ಮ ನಮ್ಮವರೊಡನೆಯ ಆಪ್ತತೆ ಕಸಿದುಕೊಳ್ಳುವುದು. ಗಾಂಧೀಜಿ ‘ಇಂಗ್ಲಿಷ್ ಅಥವಾ ಯಾವುದೇ ವಿದೇಶಿ ಭಾಷೆ ಶಿಕ್ಷಣ ಮಾಧ್ಯಮವಾದರೆ ನಮ್ಮ ಮಕ್ಕಳ ಮಿದುಳು, ನರಗಳು ಬಳಲುತ್ತವೆ. ಅವರು ಬಾಯಿಪಾಠ, ಅಣಕಿಗೆ ಶರಣಾಗುತ್ತಾರೆ. ಸ್ವದೇಶದಲ್ಲೇ ಪರದೇಶಿಗಳಾದಾರು’ ಎಂದು ಒದಗುವ ವಿಪರ್ಯಾಸವನ್ನು ಬಿಡಿಸಿಟ್ಟಿದ್ದಾರೆ.

ದುರ್ದೈವ ಗೊತ್ತೇ? ನಗರಗಳಲ್ಲಿ ಬಹುತೇಕ ಪೋಷಕರು ತಮ್ಮ ಮಕ್ಕಳು ಜಾಗತಿಕ ಮಟ್ಟದ ನಾಗರಿಕರಾಗಲು ಬಯಸುತ್ತಾರೆ. ಹಾಗಾಗಿ ಇಂಗ್ಲಿಷ್, ಜರ್ಮನ್, ಫ್ರೆಂಚ್ ಮುಂತಾದ ಭಾಷೆಗಳು ಅರಳು ಹುರಿದಂತೆ. ಇನ್ನು ಮಾತೃಭಾಷೆಯಲ್ಲಿ ಓದು ಬರಹವಿರಲಿ, ಮಾತನಾಡಲೂ ಬಾರದಂತಹ ಪರಿಸ್ಥಿತಿ.

ಗುಣಮಟ್ಟದ ಇಂಗ್ಲಿಷ್‍ನಲ್ಲಿಲ್ಲ ಎಂಬ ಕಾರಣಕ್ಕೆ ಅದೆಷ್ಟೋ ಸಂಶೋಧನಾ ಪ್ರಬಂಧಗಳು ತಿರಸ್ಕೃತ
ವಾಗುವುದಿದೆ. ಆಯಾ ಸಂಶೋಧಕರ ಪೈಕಿ ಕೆಲವರಾದರೂ ತಮ್ಮ ಮಾತೃಭಾಷೆಯಲ್ಲಿ ಯೋಚಿಸಿದ ನಂತರವೇ ಇಂಗ್ಲಿಷಿನಲ್ಲಿ ಪ್ರಬಂಧ ರಚಿಸಿದ್ದರೆ ಪ್ರಶಸ್ತಿ ಲಭಿಸುತ್ತಿತ್ತು ಎಂದು ಪರಿತಪಿಸಿದ್ದೂ ಉಂಟು.

ಶಿಕ್ಷಣದ ಗುಣಮಟ್ಟ ಸುಧಾರಿಸುವ ದಿಸೆಯಲ್ಲಿ ಭಾಷಾ ನೀತಿಗಳು ಮಾತೃಭಾಷೆಯಲ್ಲಿನ ಪರಿಣತಿಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ತಾಯಿನುಡಿಯನ್ನು ಅಲಕ್ಷಿಸುವ ಶಿಕ್ಷಣ ಮಾದರಿಗಳು ಮಕ್ಕಳಿಗೆ ಪ್ರತಿಕೂಲವಾಗುತ್ತವೆ. ಮಕ್ಕಳ ಪಾಲಿಗೆ ನಿಜಕ್ಕೂ ನೀಡಬಹುದಾದ ಅಕ್ಷರಶಃ ಮೌಲಿಕ ಉಡುಗೊರೆಯೆಂದರೆ ಮಾತೃಭಾಷೆಯ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT