ಸೋಮವಾರ, ಡಿಸೆಂಬರ್ 6, 2021
23 °C
ಬಿಜೆಪಿಯ ಈ ದೌರ್ಬಲ್ಯವನ್ನು ಬಳಸಿಕೊಳ್ಳುವ ಅವಕಾಶ ವಿರೋಧ ಪಕ್ಷಗಳಿಗೆ ಇದೆ

ಸಂಗತ: ಮೋದಿ ಜಪ ಮತ್ತು ಪಕ್ಷದ ಮಿತಿ

ಡಾ. ಪಿ.ಎಸ್.ಜಯರಾಮು Updated:

ಅಕ್ಷರ ಗಾತ್ರ : | |

Prajavani

ಕೋವಿಡ್-19 ಸಾಂಕ್ರಾಮಿಕವು ಭುಗಿಲೆದ್ದ ನಂತರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆ ಮೊದಲ ಬಾರಿಗೆ ನವದೆಹಲಿಯಲ್ಲಿ ಈಚೆಗೆ ನಡೆಯಿತು. ಐದು ರಾಜ್ಯಗಳಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ, ಗೊತ್ತುಗುರಿ ಕುರಿತು ಚರ್ಚೆಯಾಗಿದೆ.

ಈ ದಿಸೆಯಲ್ಲಿ ಪಕ್ಷದ ಸನ್ನದ್ಧತೆಯ ಭಾಗವಾಗಿ, ಡಿ. 25ರೊಳಗೆ 10.4 ಲಕ್ಷ ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಸಮಿತಿಗಳನ್ನು ಸ್ಥಾಪಿಸಲು, ಮತದಾರರ ಪಟ್ಟಿಯ ಪ್ರತೀ ಪುಟವನ್ನು ನೋಡಿಕೊಳ್ಳಲು ‘ಪನ್ನಾ ಸಮಿತಿ’ಗಳನ್ನು ರಚಿಸಲು ನಿರ್ಧರಿಸಲಾಗಿದೆ. ಚುನಾವಣೆಗಳನ್ನು ಗೆಲ್ಲುವ, ಅಧಿಕಾರ ಗಳಿಸುವ ಹಾಗೂ ಉಳಿಸಿಕೊಳ್ಳುವ ಮಹತ್ವಾಕಾಂಕ್ಷೆಯ ವಿಷಯದಲ್ಲಿ ಬಿಜೆಪಿಗೆ ಬೇರೆ ಯಾವ ಪಕ್ಷವೂ ಸಾಟಿಯಲ್ಲ.

ಕೋವಿಡ್ ನಿಯಂತ್ರಣಕ್ಕೆ 100 ಕೋಟಿ ಡೋಸ್‌ ಲಸಿಕೆ ಹಾಕಿರುವುದನ್ನು ಜನರ ಮುಂದಿಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಾಂಕ್ರಾಮಿಕವನ್ನು ನಿಭಾಯಿಸಿದ ವಿಧಾನವನ್ನು ಮತದಾರರಿಗೆ ವಿವರಿಸುವಂತೆ, ಚುನಾವಣೆಯನ್ನು ಎದುರುಗೊಳ್ಳಲಿರುವ ರಾಜ್ಯಗಳ ನಾಯಕರಿಗೆ ಸೂಚಿಸಲಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಸಭೆಯ ಪ್ರಮುಖ ಉದ್ದೇಶವು ಮೋದಿಯವರನ್ನು ಪಕ್ಷದ ಸಂರಕ್ಷಕನೆಂದು ಬಿಂಬಿಸುವುದು, ಮುಂದಿನ ಚುನಾವಣೆಗಳಲ್ಲಿ ಪಕ್ಷವು ಅವರ ಮೇಲೆ ಅವಲಂಬಿತವಾಗಿರುವುದನ್ನು ಪುನರುಚ್ಚರಿಸುವುದೇ ಆಗಿತ್ತು ಎಂದು ಅನಿಸುತ್ತದೆ.

ಪುನರ್‌ರಚಿತ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಅವರನ್ನು ಉಳಿಸಿ ಕೊಳ್ಳಲಾಗಿದೆ. ಆದರೆ, ಸರ್ಕಾರದ ಕೆಲವು ನೀತಿಗಳ ಬಗ್ಗೆ ನಿಷ್ಠುರವಾಗಿ ಅಭಿಪ್ರಾಯ ವ್ಯಕ್ತಪಡಿಸಿರುವ ವರುಣ್ ಗಾಂಧಿ, ಮೇನಕಾ ಗಾಂಧಿ ಮತ್ತು ಡಾ. ಸುಬ್ರಮಣಿಯನ್‌ ಸ್ವಾಮಿ ಅವರನ್ನು ಕೈಬಿಡಲಾಗಿದೆ. ಮೋದಿಯವರ ಪಟ್ಟಶಿಷ್ಯರ ಸಾಲಿಗೆ ಹೊಸದಾಗಿ ಸೇರಿರುವ ಅಶ್ವಿನಿ ವೈಷ್ಣವ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಮೋದಿಯವರ ಮಾತು–ನಿಲುವುಗಳಲ್ಲಿ ನಿಷ್ಠೆ ಹೊಂದಿದವರು ಮಾತ್ರ ಕಾರ್ಯಕಾರಿಣಿಯ ಸದಸ್ಯರಾಗಿರಲು ಸಾಧ್ಯ ಎನ್ನುವ ಸಂದೇಶವನ್ನು ಈ ನಿರ್ಣಯಗಳು ಸಾರಿವೆ. 

ಪದ ಬಳಕೆಯ ಬಗ್ಗೆ ವಿಶಿಷ್ಟ ಒಲವು ಹೊಂದಿರುವ ಮೋದಿ, ಪಕ್ಷವು ‘ಸೇವಾ’ (ಸೇವೆ), ‘ಸಂಕಲ್ಪ್’ (ಸಂಕಲ್ಪ) ಮತ್ತು ‘ಸಮರ್ಪಣ್’ಗಾಗಿ (ಅರ್ಪಣೆ) ನಿಂತಿದೆ ಎಂದು ಹೇಳಿದರು. ಆದರೆ, ಈ ‘ಮೌಲ್ಯ’ಗಳನ್ನು ಎಲ್ಲಾ ಹಂತದ ನಾಯಕರು ಅನುಸರಿಸುತ್ತಿದ್ದಾರೆಯೇ ಎಂಬ ಬಗ್ಗೆ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ರಾಜಕೀಯ ನಡವಳಿಕೆಯ ವಿಷಯದಲ್ಲಿ ಬಿಜೆಪಿಯು ಇತರ ಪಕ್ಷಗಳಿಗಿಂತ ಭಿನ್ನವಾಗೇನೂ ಇಲ್ಲ, ಅಲ್ಲಿಯಂತೆ ‘ವೀಲಿಂಗ್-ಡೀಲಿಂಗ್’ ಇಲ್ಲೂ ನಡೆಯುತ್ತಿದೆ ಎಂಬುದು ಪ್ರಜ್ಞಾವಂತ ನಾಗರಿಕರಿಗೆ ಗೊತ್ತಿರುವ ಸಂಗತಿಯೇ.

ಬಿಜೆಪಿಗೆ ಕುಟುಂಬ ರಾಜಕಾರಣದಲ್ಲಿ ನಂಬಿಕೆ ಇಲ್ಲ ಎಂದು ಪ್ರತಿಪಾದಿಸಿದ ಮೋದಿ, ಕಾಂಗ್ರೆಸ್ ಪಕ್ಷದ ಮೇಲೆ ನೆಹರೂ ಕುಟುಂಬದ ಹಿಡಿತವನ್ನು ಉಲ್ಲೇಖಿಸಿದರು. ಬಿಜೆಪಿ ಮುಖಂಡರು ಮುಂಬರುವ ದಿನಗಳಲ್ಲೂ ಚುನಾವಣಾ ಪ್ರಚಾರದ ಸಮಯದಲ್ಲಿ ನೆಹರೂ ಕುಟುಂಬವನ್ನು ಗುರಿಯಾಗಿಸಿಕೊಳ್ಳುವುದು ನಿಶ್ಚಿತ. ಅದೇನೇ ಇರಲಿ, ಇಂತಹ ಟೀಕೆ ಎದುರಿಸಬೇಕಾದ ಸ್ಥಿತಿ ಏಕೆ ಬಂದಿದೆ ಎಂಬುದರ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುವುದರ ಜೊತೆಗೆ ಈ ಕುರಿತ ಪ್ರಶ್ನೆಗೆ ಉತ್ತರಿಸಬೇಕಾಗಿದೆ.

ಸಭೆಯಲ್ಲಿ ರಾಜಕೀಯ ನಿರ್ಣಯವನ್ನು ಯೋಗಿ ಆದಿತ್ಯನಾಥ ಮಂಡಿಸಿದರು. ಇದು, ಪಕ್ಷದಲ್ಲಿ ಅವರಿಗೆ ನೀಡಿರುವ ಪ್ರಾಮುಖ್ಯವನ್ನು ಸೂಚಿಸುತ್ತದೆ. ಕೆಲವೇ ತಿಂಗಳಲ್ಲಿ ನಡೆಯಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅಧಿಕಾರ ಉಳಿಸಿಕೊಂಡರೆ, ಅವರ ವರ್ಚಸ್ಸು ಇಮ್ಮಡಿಸು ತ್ತದೆ. ಕೆಲವು ಊಹಾಪೋಹಗಳ ಪ್ರಕಾರ, ಅವರು 2024ರಲ್ಲಿ ಮೋದಿಯವರಿಗೆ ಸವಾಲಾಗಿ ಹೊರಹೊಮ್ಮಬಹುದು. ಸಭೆಯಲ್ಲಿ ಮಂಡಿಸಿದ ಗೊತ್ತುವಳಿಯ ಒಂದು ಅಂಶವು ‘ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ, ಶಾಂತಿ ಮತ್ತು ಅಭಿವೃದ್ಧಿ’ಯ ಅಧ್ಯಾಯದ ಕುರಿತದ್ದಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರ ಕೈಗೊಂಡ ಉಪಕ್ರಮಗಳು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಪೂರ್ಣಗೊಳಿಸಿರುವುದನ್ನು ಅದು ಸೂಚಿಸುತ್ತದೆ. ವಾಸ್ತವದಲ್ಲಿ, ಹಿಂಸಾಚಾರ ಮತ್ತು ಅಸುರಕ್ಷತೆಯ ಭಾವ ಕಾಶ್ಮೀರ ಕಣಿವೆಯಲ್ಲಿ ಈಗಲೂ ಮುಂದುವರಿದಿದೆ. 

ರಾಜಕೀಯ ಗೊತ್ತುವಳಿಯು ಕೃಷಿಗೆ ಸಂಬಂಧಿಸಿದ ಕಾಯ್ದೆಗಳು, ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಚೀನಾದೊಂದಿಗಿನ ಆತಂಕಕಾರಿ ಸ್ಥಿತಿ ಬಗ್ಗೆ ಏನನ್ನೂ ಒಳಗೊಂಡಿಲ್ಲ (ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ಶುಕ್ರವಾರ ಘೋಷಿಸಿದ್ದಾರೆ). ಚೀನಾಕ್ಕೆ ಗಟ್ಟಿ ಸಂದೇಶ ರವಾನಿಸುವ ಅವಕಾಶವನ್ನು ಪಕ್ಷ ಈ ಮೂಲಕ ಕಳೆದುಕೊಂಡಿದೆ.

ಇದೇನೇ ಇರಲಿ, ಒಬ್ಬ ನಾಯಕನ ಮೇಲಿನ ಅತಿಯಾದ ಅವಲಂಬನೆಯು ಪಕ್ಷಕ್ಕೆ ಎಲ್ಲ ಕಾಲಕ್ಕೂ ಎಲ್ಲ ರಾಜ್ಯಗಳಲ್ಲೂ ಮತ ಮತ್ತು ಗೆಲುವು ತಂದುಕೊಡಬಲ್ಲದು ಎಂದು ನಿರೀಕ್ಷಿಸುವಂತಹ ಸ್ಥಿತಿಯು ಪಕ್ಷವೊಂದರ ದೌರ್ಬಲ್ಯದ ಸಂಕೇತವೂ ಹೌದು. ವಿಧಾನಸಭಾ ಚುನಾವಣೆಗಳಲ್ಲಿ ವಿರೋಧ ಪಕ್ಷಗಳಿಗೆ ಬಿಜೆಪಿಯ ಈ ಸ್ಥಿತಿಯೇ ಅನುಕೂಲಕರ ಅಂಶವಾಗಿ ಪರಿಣಮಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ‍

ಲೇಖಕ: ರಾಜ್ಯಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಬೆಂಗಳೂರು ವಿಶ್ವವಿದ್ಯಾಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು