ಶನಿವಾರ, ಮಾರ್ಚ್ 25, 2023
22 °C
ಭೂಮಿಯ ಬಳಿ ಸುಳಿದಾಡುತ್ತಿರುವ ಕ್ಷುದ್ರಗ್ರಹಕ್ಕೆ ಆಕಾಶನೌಕೆಯೊಂದನ್ನು ಡಿಕ್ಕಿ ಹೊಡೆಸಿ ಅದರ ಪಥ ಬದಲಿಸಿದರೆ ಹೇಗೆ?

ಸಂಗತ: ಕ್ಷುದ್ರಗ್ರಹಕ್ಕೆ ನಾವೇ ಡಿಕ್ಕಿ ಹೊಡೆಸಿದರೆ?!

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಪ್ರತೀ ಸಲ ಭೂಮಿಯ ಸಮೀಪದ ಕಕ್ಷೆಗಳಲ್ಲಿ ಕ್ಷುದ್ರಗ್ರಹ ಪತ್ತೆಯಾದಾಗ, ಅದೆಲ್ಲಿ ಭೂಮಿಗೆ ಅಪ್ಪಳಿಸಿ ಬಿಡುತ್ತದೋ ಎಂಬ ಆತಂಕ ಎದುರಾಗಿ, ಹಳೆಯ ಡಿಕ್ಕಿ ಪ್ರಸಂಗಗಳೆಲ್ಲ ನೆನಪಾಗುತ್ತವೆ. ಖಗೋಳ ವಿಜ್ಞಾನಿಗಳು, ಆಸಕ್ತರು ಅದರ ಗಾತ್ರ, ವೇಗ, ತೂಕ, ಆಕಾರ, ಅಪ್ಪಳಿಸಿದರೆ ಆಗಬಹುದಾದ ಸಂಭಾವ್ಯ ಅನಾಹುತಗಳ ಕುರಿತು ಲೆಕ್ಕ ಹಾಕಲು ಶುರುಮಾಡುತ್ತಾರೆ.

ಕ್ಷುದ್ರಗ್ರಹಗಳು ಭೂಮಿಗೆ ಡಿಕ್ಕಿ ಹೊಡೆಯುವುದು ಹಳೆಯ ಸುದ್ದಿ ಮತ್ತು ವಿದ್ಯಮಾನ. ಈಗ ‘ನಾವೇ ಅದಕ್ಕೆ ಡಿಕ್ಕಿ ಹೊಡೆದರೆ ಹೇಗೆ’ ಎಂಬ ಹೊಸ ಹುಳ ‘ನಾಸಾ’ ವಿಜ್ಞಾನಿಗಳ ತಲೆ ಹೊಕ್ಕಿದೆ. ಆಕಾಶನೌಕೆಯೊಂದನ್ನು ಅತಿ ವೇಗದಲ್ಲಿ ಹಾರಿಸಿ, ಭೂಮಿಯ ಬಳಿ ಸುಳಿದಾಡುತ್ತಿರುವ ಕ್ಷುದ್ರಗ್ರಹಕ್ಕೆ ನೇರ ಡಿಕ್ಕಿ ಹೊಡೆಸಿ ಅದರ ಪಥ ಬದಲಿಸಿದರೆ ಹೇಗೆ ಎಂಬ ಆಲೋಚನೆ ಮಾಡಿರುವ ನಾಸಾ ಅದಕ್ಕೆ ಬೇಕಾದ ತಯಾರಿಯನ್ನೂ ಮುಗಿಸಿದೆ. ಸೌರವ್ಯೂಹದ ಕುರಿತು ತಿಳಿವಳಿಕೆ ಬಂದಾಗಿನಿಂದ, ಕ್ಷುದ್ರಗ್ರಹಗಳು ಎಲ್ಲಿರುತ್ತವೆ, ಭೂಮಿಗೆ ಏಕೆ ಅಪ್ಪಳಿಸುತ್ತವೆ, ಉಲ್ಕೆಗಳಿಗೂ ಅವುಗಳಿಗೂ ಏನು ವ್ಯತ್ಯಾಸ, ಇವುಗಳಲ್ಲಿ ಯಾವುದು ಹೆಚ್ಚು ಅಪಾಯಕಾರಿ ಎಂಬೆಲ್ಲ ಪ್ರಶ್ನೆಗಳು ಸಹಜವಾಗಿಯೇ ಜನಸಾಮಾನ್ಯರ, ವಿದ್ಯಾರ್ಥಿ, ಸಂಶೋಧಕರ ಆಸಕ್ತಿ ಕೆರಳಿಸಿವೆ. ಡಿಕ್ಕಿಯ ಬಗ್ಗೆ ವಿಶ್ವದೆಲ್ಲೆಡೆ ಕುತೂಹಲ ಜಾಸ್ತಿಯಾಗುತ್ತಿದೆ.

ನಾಸಾದ ವಿಜ್ಞಾನಿಗಳು ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಸುವ ಯೋಜನೆಗೆ ಡರ್ಟ್– DART (ಡಬಲ್ ಆಸ್ಟ್ರಾಯಿಡ್ ರಿಡೈರೆಕ್ಷನ್ ಟೆಸ್ಟ್) ಎಂದು ಹೆಸರಿಟ್ಟಿದ್ದು, ಇದೇ ತಿಂಗಳಲ್ಲಿ ಸ್ಪೇಸ್ ಎಕ್ಸ್‌ನ ಫಾಲ್ಕನ್ 9 ರಾಕೆಟ್ ಹಾರಿಸಿ ಭೂಮಿಯ ಹತ್ತಿರದ ಯಾವುದಾದರೊಂದು ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಸಿ ಅದರ ಪಥವನ್ನು ಬದಲಾಯಿಸಲು ಸಾಧ್ಯವೇ ಎಂದು ಪರೀಕ್ಷಿಸುವ ಪ್ರಯತ್ನವಿದು ಎಂದಿದ್ದಾರೆ.

ಕ್ಯಾಲಿಫೋರ್ನಿಯಾದ ವಾಂಡರ್‌ಬರ್ಗ್ ಬಾಹ್ಯಾಕಾಶ ನೆಲೆಯಿಂದ ಇದೇ 23ರಂದು ನಭಕ್ಕೆ ಚಿಮ್ಮಲಿರುವ ಫಾಲ್ಕನ್‍ನಲ್ಲಿ ಕೂತಿರುವ ಸೋಲಾರ್ ಪ್ಯಾನಲ್‍ಗಳುಳ್ಳ, ಗಾಲ್ಫ್ ಮೈದಾನದಲ್ಲಿ ಓಡಾಡುವ ವಾಹನದಷ್ಟಿರುವ ಗಗನನೌಕೆ, ನಾಸಾ ಆಯ್ಕೆ ಮಾಡಿರುವ ಡಿಡಿಮೋಸ್ ಸುತ್ತ ಸುತ್ತುತ್ತಿರುವ ಫುಟ್‍ಬಾಲ್ ಸ್ಟೇಡಿಯಂ ಗಾತ್ರದ ಡೈಮಾರ್ಫೊಸ್ ಎಂಬ ಕ್ಷುದ್ರಗ್ರಹಕ್ಕೆ ಗಂಟೆಗೆ ಸುಮಾರು 24,000 ಕಿ.ಮೀ. ವೇಗದಲ್ಲಿ ಡಿಕ್ಕಿ ಹೊಡೆಯಲಿದೆ. ಇದು ಕ್ಷುದ್ರಗ್ರಹವನ್ನು ಛಿದ್ರ ಮಾಡುವುದಿಲ್ಲ. ಬದಲಿಗೆ ಅದು ಸುತ್ತುವ ಕಕ್ಷೆಯನ್ನು ತುಸು ಬದಲಾಯಿಸುವುದಲ್ಲದೆ, ಅದರ ವೇಗವನ್ನೂ ಕಡಿಮೆಗೊಳಿಸುತ್ತದೆ. ಡಿಕ್ಕಿಗೆ ಒಳಗಾಗಲಿರುವ ಕ್ಷುದ್ರಗ್ರಹ ಭೂಮಿಯತ್ತ ಬರುತ್ತಿಲ್ಲ. ಆದರೆ ಇದಕ್ಕೆ ಯಶಸ್ವಿಯಾಗಿ ಡಿಕ್ಕಿ ಹೊಡೆಯಲು ಸಾಧ್ಯವಾದರೆ, ಮುಂದಿನ ದಿನಗಳಲ್ಲಿ ಭೂಮಿಯ ಹತ್ತಿರ ಸುಳಿಯುವ ಕ್ಷುದ್ರಗ್ರಹದ ದಾರಿ ತಪ್ಪಿಸಲು ಸಾಧ್ಯವಾಗುತ್ತದೆ ಎಂಬುದು ವಿಜ್ಞಾನಿಗಳ ಅಂಬೋಣ.

ನೌಕೆಯು ಕ್ಷುದ್ರಗ್ರಹದ ಹತ್ತಿರವಾದಾಗ ಸ್ವಯಂಚಾಲಿತ ನ್ಯಾವಿಗೇಶನ್ ಚಾಲೂ ಆಗಿ ಡಿಕ್ಕಿ ಹೊಡೆಯುವಂತೆ ಮಾಡುತ್ತದೆ. ಇದಕ್ಕೆ ಕೆಲವೇ ಕ್ಷಣಗಳ ಮುಂಚೆ ನೌಕೆ ಕೃತಕ ಉಪಗ್ರಹವೊಂದನ್ನು ಬಿಡುಗಡೆ ಮಾಡುತ್ತದೆ. ಇಟಾಲಿಯನ್ ಸ್ಪೇಸ್ ಏಜೆನ್ಸಿ ತಯಾರಿಸಿದ ಸ್ಯಾಟಲೈಟ್, ಡಿಕ್ಕಿಯ ತೀವ್ರತೆ ಮತ್ತು ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸುತ್ತದೆ. ಡಿಕ್ಕಿಯಾದಾಗ ಪ್ರಖರ ಬೆಳಕಿನೊಂದಿಗೆ ಅಪಾರ ದೂಳು ಏಳುತ್ತದೆ. ದೂಳು ಕಡಿಮೆಯಾದ ಹಲವು ವರ್ಷಗಳ ನಂತರ ಅಲ್ಲಿಗೆ ತೆರಳುವ ಯುರೋಪಿಯನ್ ಏಜೆನ್ಸಿಯ ಹಠಾ ಗಗನನೌಕೆ ಆಘಾತದ ಪ್ರಮಾಣ ಮತ್ತು ಅಲ್ಲಿನ ಸ್ಪಷ್ಟ ಚಿತ್ರ ರವಾನಿಸುತ್ತದೆ.

ಕ್ಷುದ್ರಗ್ರಹಗಳು ಸಾಮಾನ್ಯವಾಗಿ ಮಂಗಳ ಮತ್ತು ಗುರು ಗ್ರಹಗಳ ನಡುವಿನ ಕಕ್ಷೆಯಲ್ಲಿದ್ದುಕೊಂಡು ಸೂರ್ಯನ ಸುತ್ತ ಸುತ್ತುತ್ತಿರುತ್ತವೆ. ಆಲೂಗಡ್ಡೆ ಅಥವಾ ದುಂಡನೆಯ ಆಕಾರದ ಇವು ಶಿಲೆ ಮತ್ತು ಲೋಹಗಳಿಂದ ಕೂಡಿದ್ದು ಬರಿಯ ಕಣ್ಣಿಗೆ ಅಪರೂಪಕ್ಕೆ ಕಾಣಿಸುತ್ತವೆ. ಸೂರ್ಯನಿಂದ 20ರಿಂದ 80 ಕೋಟಿ ಕಿಲೊ ಮೀಟರ್ ದೂರದಲ್ಲಿರುವ ಇವುಗಳ ಮೇಲ್ಮೈ ಒರಟಾಗಿದ್ದು ಯಾವುದೇ ವಾತಾವರಣ ಇಲ್ಲದ್ದರಿಂದ ಗುರುತ್ವಬಲ ತೀರಾ ಕಮ್ಮಿ ಇರುತ್ತದೆ. ನಮ್ಮ ಸೌರವ್ಯೂಹ ದಲ್ಲಿ ಮಂಗಳ– ಗುರುಗ್ರಹಗಳ ನಡುವೆ 20 ಲಕ್ಷ
ಕ್ಷುದ್ರಗ್ರಹಗಳಿರಬಹುದೆಂಬ ಅಂದಾಜಿದೆ. ಕೆಲವು ಅಡಿಗಳಿಂದ ಹಿಡಿದು ಕಿಲೊ ಮೀಟರ್‌ಗಟ್ಟಲೆ ವ್ಯಾಸ ಹೊಂದಿರುವ ಇವು ದೊಡ್ಡ ಗ್ರಹಗಳ ಸೆಳೆತಕ್ಕೆ ಸಿಲುಕಿ ಉಪಗ್ರಹಗಳಾಗಿ ಬದಲಾದ ಉದಾಹರಣೆಗಳಿವೆ.

ಇಪ್ಪತ್ತೈದು ವರ್ಷಗಳ ಹಿಂದೆ ಭೂಮಿಗೆ ಅತೀ ಸಮೀಪ ಬಂದಿದ್ದ ಈರೋಸ್ ಎಂಬ ಕ್ಷುದ್ರ ಗ್ರಹದ ಮೇಲೆ ವ್ಯೋಮ ನೌಕೆಯನ್ನು ಯಶಸ್ವಿಯಾಗಿ ಇಳಿಸಲಾಗಿತ್ತು. ಆಲೂಗಡ್ಡೆಯಂತಿದ್ದ ಈರೋಸ್ 35 ಕಿ.ಮೀ. ಉದ್ದ ಮತ್ತು 13 ಕಿ.ಮೀ. ಅಗಲವಿತ್ತು. ಭೂಮಿಯಿಂದ ಹಾರಿಸಿದ್ದ ನಿಯರ್ (NEAR – Near Earth Asteroid Rendezvous) ಶೂಮಾಕರ್ ನೌಕೆ ಒಂದು ವರ್ಷ ಈರೋಸ್‍ನ ಸುತ್ತ ಪ್ರದಕ್ಷಿಣೆ ಹಾಕಿ, ಅದರ ಗುಣಲಕ್ಷಣಗಳನ್ನೆಲ್ಲಾ ವಿವರವಾಗಿ ಅಧ್ಯಯನ ಮಾಡಿ, ಮಾಹಿತಿಯನ್ನು ಭೂಮಿಗೆ ರವಾನಿಸಿ, ಇನ್ನೇನು ಕೆಲಸ ಪೂರ್ತಿಯಾಯಿತೆನ್ನುವಾಗ ಅತ್ಯಂತ ನಾಜೂಕಾಗಿ ಚಿಕ್ಕ ಆಕಾಶಕಾಯದ ಮೇಲೆ ಇಳಿದು, ಕೆಲ ಮಾಹಿತಿಯನ್ನು ಭೂಮಿಗೆ ಕಳಿಸಿ, ಎರಡು ವಾರಗಳ ನಂತರ ಸಂಪರ್ಕ ಕಳೆದುಕೊಂಡಿತ್ತು.

ಈಗ, ನೌಕೆ ಡಿಕ್ಕಿ ಹೊಡೆಯುವ ದೃಶ್ಯಕ್ಕಾಗಿ ಇಡೀ ವಿಶ್ವವೇ ಕಾಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು