ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಚಬೇಕಿದೆ ಮಹತ್ವಾಕಾಂಕ್ಷೆ!

Last Updated 1 ಜನವರಿ 2020, 20:12 IST
ಅಕ್ಷರ ಗಾತ್ರ

ರಾಷ್ಟ್ರೀಯ ಶಿಕ್ಷಣ ನೀತಿ–2019ರ ಕರಡು ದೇಶಕ್ಕೆ ಭವ್ಯವಾದ ‘ಉದಾರ ಶಿಕ್ಷಣ’ವನ್ನು ನೀಡುವ ಮಹತ್ವಾಕಾಂಕ್ಷೆಯನ್ನು ಮುಂದಿಟ್ಟಿದೆ. ಆದರೆ ವಾಸ್ತವದಲ್ಲಿ ಪ್ರಭುತ್ವವು ವಿಶ್ವವಿದ್ಯಾಲಯಗಳಿಗೆ ಬೇಕಾದ ಸ್ವಾಯತ್ತತೆಯನ್ನು ಒದಗಿಸದೆ, ಅವುಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿದೆ. ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಇತ್ತೀಚೆಗೆ ಉಂಟಾದ ಬಿಕ್ಕಟ್ಟಗಳನ್ನು ಈ ವಿಪರ್ಯಾಸದ ಉದಾಹರಣೆಯಾಗಿ ನೋಡಬಹುದು.

ಇನ್ನೊಂದೆಡೆ, ರಾಜ್ಯದ ವಿಶ್ವವಿದ್ಯಾಲಯಗಳು ಗುಣಾತ್ಮಕ ಶಿಕ್ಷಣ ಮತ್ತು ಸಂಶೋಧನೆಗೆ ಸಂಬಂಧಿಸಿದ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ವಿಶೇಷವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆಡಳಿತಗಾರರಲ್ಲಿ ಬೌದ್ಧಿಕ ಮಹತ್ವಾಕಾಂಕ್ಷೆಯ ಕೊರತೆ ಎದ್ದು ಕಾಣುವಂತಿರುವುದು ನಾವು ಕಾಳಜಿ ವಹಿಸಬೇಕಾದ ಸಂಗತಿ. ಏಕೆಂದರೆ, ಒಂದು ಸಂಸ್ಥೆಯು ತನ್ನ ಕಾರ್ಯಚಟುವಟಿಕೆಗೆ ಸಂಬಂಧಿಸಿದ ಎಲ್ಲ ವರ್ಗದವರಲ್ಲಿಯೂ ‘ಹೆಬ್ಬಯಕೆ’ ಅಥವಾ ‘ಮಹತ್ವಾಕಾಂಕ್ಷೆ’ಯನ್ನು ಹುಟ್ಟುಹಾಕುವುದು ಸಂಸ್ಥೆ ಹಾಗೂ ಅದಕ್ಕೆ ಸಂಬಂಧಪಟ್ಟವರ ಹಿತದೃಷ್ಟಿಯಿಂದ ಹೆಚ್ಚು ಉಪಯುಕ್ತವಾದುದು. ಯಾವ ಸಂಸ್ಥೆಯು ಹೀಗೆ ಇರುವುದಿಲ್ಲವೋ ಅದು ತನ್ನ ಕಾರ್ಯನಿರ್ವಹಣೆಯಲ್ಲಿ ಗಮನಾರ್ಹ ಸಾಧನೆ ಮಾಡುವುದಿಲ್ಲ. ಜಗತ್ತಿನ ಅತ್ಯುತ್ತಮ ಸಂಸ್ಥೆಗಳು ಈ ಬಗೆಯಲ್ಲಿ ಮಹತ್ವಾಕಾಂಕ್ಷೆಗಳನ್ನು ಹಂಚುವ ಗುಣ ಹೊಂದಿರುತ್ತವೆ.

ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಮಹತ್ವಾಕಾಂಕ್ಷೆಯನ್ನು ತುಂಬಬೇಕು ಎಂದ ತಕ್ಷಣ ನಮ್ಮ ನೆನಪಿಗೆ ಬರುವುದು ಜೆಎನ್‌ಯು. ಅಲ್ಲಿ ಕಲಿತವರು ಮತ್ತು ಕಲಿಸುತ್ತಿರುವವರು ಹೇಳುವ ಪ್ರಕಾರ, ಮೊದಲು ತನ್ನ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಹೆಬ್ಬಯಕೆಯನ್ನು ಹುಟ್ಟುಹಾಕುವುದು ಅಲ್ಲಿನ ವಿಶೇಷ. ಅತ್ಯುನ್ನತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಇರಬಹುದು, ಎಂ.ಎ., ಎಂ.ಫಿಲ್ ಅಥವಾ ಪಿಎಚ್‍.ಡಿ.ಮಾಡಿ, ಅಂತರರಾಷ್ಟ್ರೀಯ ಗುಣಮಟ್ಟದ ಪ್ರಬಂಧ, ಮಹಾಪ್ರಬಂಧಗಳನ್ನು ರಚಿಸುವುದಾಗಿರಬಹುದು, ಅವು ಶ್ರೇಷ್ಠಮಟ್ಟದ್ದಾಗಿರಬೇಕೆಂಬ ಹೆಬ್ಬಯಕೆಯನ್ನು ಜೆಎನ್‍ಯು ಕ್ಯಾಂಪಸ್ ವಿದ್ಯಾರ್ಥಿಗಳಲ್ಲಿ ಬೆಳೆಸುತ್ತದೆ. ಈ ವಿಶ್ವವಿದ್ಯಾಲಯದ ಬಗ್ಗೆ ಕೆಲವರು ಏನೇ ಟೀಕೆಗಳನ್ನು ಮಾಡಬಹುದು. ಆದರೆ ವಿದ್ಯಾರ್ಥಿಗಳಲ್ಲಿ ಅದು ಸೃಷ್ಟಿಸುವ ಉತ್ಕಟವಾದ ಬೌದ್ಧಿಕ ಮಹತ್ವಾಕಾಂಕ್ಷೆಯನ್ನು ಗುರುತಿಸಲೇಬೇಕು.

ಇಂತಹ ಉದಾಹರಣೆಗಳ ಜಾಡು ಹಿಡಿದು ನಮ್ಮ ವಿದ್ಯಾಸಂಸ್ಥೆಗಳ ಬಗ್ಗೆ ಕೊಂಚ ಆಲೋಚನೆ ಮಾಡಬೇಕಾಗಿದೆ. ಹೇಗಾದರೂ ಮಾಡಿ ಒಂದು ಡಿಗ್ರಿ ತೆಗೆದುಕೊಳ್ಳಬೇಕೆಂಬುದಕ್ಕೇ ಪಿಎಚ್‍.ಡಿ ಮಾಡಲು ಬರುವ ಹೆಚ್ಚಿನವರ ಅಪೇಕ್ಷೆ ಸೀಮಿತವಾಗಿರುತ್ತದೆ. ನಮ್ಮ ಸಂಶೋಧನಾ ಲೇಖನಗಳು ಜಗತ್ತಿನ ಅತ್ಯುತ್ತಮ ವಿದ್ವತ್ ಪತ್ರಿಕೆಗಳಲ್ಲಿ ಪ್ರಕಟವಾಗಬೇಕು, ನಮ್ಮ ಪುಸ್ತಕಗಳು ಪ್ರತಿಷ್ಠಿತ ಪ್ರಕಾಶನಗಳಿಂದ ಪ್ರಕಟಗೊಳ್ಳಬೇಕು, ನಾವು ಒಂದು ಹೊಸ ಸಿದ್ಧಾಂತವನ್ನು ಮಂಡಿಸುವ ಸಂಶೋಧನೆ ಕೈಗೊಳ್ಳಬೇಕು ಎಂಬಂತಹ ಹೆಬ್ಬಯಕೆಗಳನ್ನು ಅವರಲ್ಲಿ ಕಾಣದಿರುವುದು ನಮ್ಮ ಶೈಕ್ಷಣಿಕ ಸಂಸ್ಕೃತಿಯ ಮಿತಿಯಾಗಿದೆ.

ವಿದ್ಯಾರ್ಥಿಗಳಷ್ಟೇ ಅಲ್ಲ ಮೇಷ್ಟ್ರುಗಳು, ಸಂಶೋಧನಾಕಾರರು, ಆಡಳಿತಾಧಿಕಾರಿಗಳು, ಮುಖ್ಯಸ್ಥರು ಸಹ ಮಹತ್ವಾಕಾಂಕ್ಷಿಗಳಾಗಬೇಕು. ರಾಜ್ಯದ ವಿಶ್ವವಿದ್ಯಾಲಯಗಳ ಇತಿಹಾಸವನ್ನು ಮೆಲುಕು ಹಾಕಿದರೆ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದ ಡಿ.ಸಿ.ಪಾವಟೆ ಹಾಗೂ ಮೈಸೂರು ವಿಶ್ವವಿದ್ಯಾಲಯವನ್ನು ಬೆಳೆಸಿದ ಕುವೆಂಪು ಅಂಥವರಿಗೆ ಸಾಂಸ್ಥಿಕ ಮಹತ್ವಾಕಾಂಕ್ಷೆ ಇಲ್ಲದಿದ್ದರೆ ಅವುಗಳನ್ನು ಈ ಮಟ್ಟದಲ್ಲಿ ನೋಡಲಾಗುತ್ತಿರಲಿಲ್ಲವೇನೊ! ಹಂಪಿಯ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದ ಚಂದ್ರಶೇಖರ ಕಂಬಾರರಿಗೆ ಕನ್ನಡದಲ್ಲಿ ಜ್ಞಾನ ಸೃಷ್ಟಿಯಾಗಬೇಕೆಂಬ ಹೆಬ್ಬಯಕೆ ಇತ್ತು. ಅದಕ್ಕಾಗಿಯೇ ಅವರು ಕನ್ನಡದ ವಿದ್ವಾಂಸರನ್ನು ಕಲೆಹಾಕಿ, ಅವರಿಂದ ಕನ್ನಡದಲ್ಲಿ ಜ್ಞಾನಕೃಷಿ ಮಾಡಿಸಿದ್ದು. ಈ ಹೆಬ್ಬಯಕೆಯನ್ನು ಎಂ.ಎಂ.ಕಲಬುರ್ಗಿ ಅವರು ಮುಂದುವರಿಸಿದ್ದು ಇತಿಹಾಸ.

ಹಾಗಾದರೆ ಈ ಮಹತ್ವಾಕಾಂಕ್ಷೆಯ ಸ್ವರೂಪ ಎಂತಹದ್ದಿರಬೇಕು? ‘ಮಹತ್ವಾಕಾಂಕ್ಷೆ’ ಎನ್ನುವುದನ್ನು ಒಂದು ನಿರ್ದಿಷ್ಟವಾದ ಅರ್ಥದಲ್ಲಿ ಇಲ್ಲಿ ಬಳಸಲಾಗಿದೆ. ಹೇಗಾದರೂ ಮಾಡಿ ಅಧಿಕಾರ, ಸಂಪತ್ತನ್ನು ಗಿಟ್ಟಿಸಿಕೊಳ್ಳುವ ಋಣಾತ್ಮಕ ಗುಣವಾಗಿ ಅಲ್ಲ. ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್‌ಗೂ ರಾಜಕೀಯ ಮಹತ್ವಾಕಾಂಕ್ಷೆ ಇತ್ತು. ನೈತಿಕವಾಗಿ ಸಮರ್ಪಕ ಗುರಿಯನ್ನು ಹೊಂದಿರದ ಕಾರಣ ಅದನ್ನು ದುರಾಸೆ ಎಂದು ಕರೆಯಬಹುದು. ಆದರೆ ನಮ್ಮ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯನ್ನು ಉತ್ಕೃಷ್ಟತೆಯ ಹಂಬಲವೆಂದು ವ್ಯಾಖ್ಯಾನಿಸಬಹುದು.

ಈ ಉತ್ಕೃಷ್ಟತೆಯನ್ನು ಬಯಸುವುದು ಒಳ್ಳೆಯದೆ. ಏಕೆಂದರೆ ಅದು ನಮ್ಮ ವೈಯಕ್ತಿಕ ಸಾಮರ್ಥ್ಯ, ಸಂಪನ್ಮೂಲಗಳನ್ನು ವೃದ್ಧಿಸುತ್ತದೆ. ನಮ್ಮ ಗುರಿಗಳು ಸ್ಪಷ್ಟವಾಗುತ್ತವೆ. ಸಂಸ್ಥೆಗಳಲ್ಲಿ ನಡೆಯುವ ದಿನನಿತ್ಯದ ಕೆಲಸಗಳಿಗೆ ರಾಜಮಾರ್ಗಗಳನ್ನು ತೋರಿಸುತ್ತದೆ. ಈ ಕಾರಣದಿಂದಲೇ ನಾವು ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿಜನ್ ಮತ್ತು ಮಿಶನ್ ಸ್ಟೇಟ್‍ಮೆಂಟ್‍ಗಳನ್ನು ಹೊಂದಿರುವುದು.

ಅವು ನಮ್ಮ ಸಾಂಸ್ಥಿಕ ಹೆಬ್ಬಯಕೆಗಳನ್ನು ಉಚ್ಚರಿಸುವ ಘೋಷವಾಕ್ಯಗಳು. ಆದರೆ ಅವು ಕೇವಲ ‘ನ್ಯಾಕ್‍’ಗಾಗಿ ಬಳಸುವ ಕೃತಕ ಸಾಲುಗಳಾಗಿವೆ. ಅವುಗಳಿಗೆ ರ‍್ಯಾಂಕಿಂಗ್‍ನ ವ್ಯಸನವಿದೆಯೇ ಹೊರತು, ಶ್ರೇಷ್ಠ ಮಟ್ಟದ ಶೈಕ್ಷಣಿಕತೆಯನ್ನು ಅನುಸರಿಸಬೇಕೆಂಬ ಆತ್ಮತೃಪ್ತಿಯ ಹೆಬ್ಬಯಕೆ ಇಲ್ಲವಾಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT