ಗುರುವಾರ , ಆಗಸ್ಟ್ 13, 2020
23 °C
ರಾಷ್ಟ್ರ, ದೇಶಭಕ್ತಿ, ರಾಷ್ಟ್ರೀಯತೆ ಎಂಬ ಭವ್ಯವಾದ ಪರಿಕಲ್ಪನೆಗಳು ಧರ್ಮದ ಪರಿಧಿಯಲ್ಲಿ ಸಿಲುಕಬಾರದು

ರಾಷ್ಟ್ರೀಯತೆ ಮತ್ತು ಧರ್ಮ

ಡಾ. ಶಿವಲಿಂಗಸ್ವಾಮಿ ಎಚ್.ಕೆ. Updated:

ಅಕ್ಷರ ಗಾತ್ರ : | |

Prajavani

ವಿವಿಧ ರಾಜಕೀಯ ಪಕ್ಷಗಳ ಸೈದ್ಧಾಂತಿಕ ನಿಲುವುಗಳ ಫಲವಾಗಿ ‘ರಾಷ್ಟ್ರೀಯತೆ’ ಮತ್ತು ‘ರಾಷ್ಟ್ರಭಕ್ತಿ’ ಎಂಬ ಪರಿಕಲ್ಪನೆಗಳು ಜನರ ಭಾವನೆಗಳಿಗೆ ಮಾತ್ರ ಒಳಪಟ್ಟಿರದೆ ‘ರಾಷ್ಟ್ರ ನಿರ್ಮಾಣ’ ಎಂಬ ಧಾರ್ಮಿಕ ರಾಜಕಾರಣದ ಪರಿಧಿಯಲ್ಲಿ ಇರುವುದು ಭಾರತದ ಇಂದಿನ ರಾಜಕೀಯ ಪರಿಸ್ಥಿತಿ.

ಇದರ ದೆಸೆಯಿಂದಾಗಿ ಉದ್ಭವಿಸುತ್ತಿರುವ ಇಂದಿನ ವಿದ್ಯಮಾನಗಳು ಸರ್ವತೋಮುಖ ಅಭಿವೃದ್ಧಿಯ ಸಿದ್ಧಾಂತವನ್ನು ಮರೆಯಾಗಿಸಿ, ರಾಷ್ಟ್ರೀಯತೆ ಎಂಬ ಪರಿಕಲ್ಪನೆಯನ್ನು ಧಾರ್ಮಿಕವಾಗಿ ಅರ್ಥೈಸುತ್ತಿವೆ. ಇದರ ಹಿನ್ನೆಲೆಯಲ್ಲಿ  ಈ ವಿಭಜನಾತ್ಮಕವಾದ ರಾಜಕೀಯವು ಸೃಷ್ಟಿ ಮಾಡುತ್ತಿರುವ ರಾಷ್ಟ್ರೀಯತೆಯ ಅವಶ್ಯಕತೆ ಇದೆಯೇ ಮತ್ತು ನಮಗೆ ಎಂತಹ ರಾಷ್ಟ್ರೀಯತೆ ಬೇಕು ಎಂಬ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳುವ ಅನಿವಾರ್ಯ ಈಗ ಎದುರಾಗಿದೆ.

ಯುರೋಪಿನಲ್ಲಿ ರಾಷ್ಟ್ರೀಯತೆಯ ವ್ಯಾಪಕತೆಯನ್ನು ಉಲ್ಲೇಖಿಸುತ್ತಾ ಬೆನೆಡಿಕ್ಟ್ ಆಂಡರ್ಸನ್ ಎಂಬ ಚಿಂತಕ ತಮ್ಮ ‘ಇಮ್ಯಾಜಿನ್ಡ್ ಕಮ್ಯುನಿಟೀಸ್’ ಪುಸ್ತಕದಲ್ಲಿ, ‘ರಾಷ್ಟ್ರೀಯತೆ ಎಂಬ ಸಿದ್ಧಾಂತ ನಾವು ನಮ್ಮ ದೇಶಕ್ಕೆ ಕಡ್ಡಾಯವಾಗಿ ತೋರಿಸಲೇಬೇಕಾದ ನಿಷ್ಠೆ ಎಂದು ಜನ ನಂಬಿದ್ದರು’ ಎನ್ನುತ್ತಾರೆ. ‘ಈ ಪರಿಕಲ್ಪನೆಯ ವ್ಯಾಪ್ತಿ ಎಷ್ಟೆಂದರೆ, ಒಂದು ರಾಷ್ಟ್ರದ ಜನರಿಗೆ ಪರಸ್ಪರ ಪರಿಚಯವೇ ಇಲ್ಲದಿದ್ದರೂ ನಾವೆಲ್ಲ ಒಂದೇ ಎಂಬ ಕಾಲ್ಪನಿಕ ಸಮುದಾಯವನ್ನು ಸೃಷ್ಟಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ಆಂಡರ್ಸನ್. ರಾಷ್ಟ್ರೀಯತೆಗೆ ಧರ್ಮದ ಬುನಾದಿಗಿಂತ ಸಾಮಾಜಿಕವಾದ ಬುನಾದಿಯೇ ಹೆಚ್ಚಾಗಿ ಇದೆ. ಪರಸ್ಪರ ಪರಿಚಯವಿಲ್ಲದಿದ್ದರೂ ಆಡುವ ಭಾಷೆಗಳಲ್ಲಿನ ಸಾಮ್ಯದಿಂದಾಗಿ ಯುರೋಪಿನಲ್ಲಿ ಎಲ್ಲಾ ನಾಗರಿಕರಲ್ಲಿಯೂ ರಾಷ್ಟ್ರ ಎಂಬ ಕಾಲ್ಪನಿಕ ಸಮುದಾಯದ ಬಗ್ಗೆ ಪವಿತ್ರ ಭಾವನೆ ಮೂಡಿ
ರುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ. 

ಇಸ್ರೇಲಿನ ಇತಿಹಾಸಕಾರ ಯುವಲ್ ನೋವ ಹರಾರಿ ‘ಸೇಪಿಯೆನ್ಸ್- ಎ ಬ್ರೀಫ್ ಹಿಸ್ಟರಿ ಆಫ್ ಹ್ಯೂಮನ್ ಕೈಂಡ್’ ಪುಸ್ತಕದಲ್ಲಿ ಮಾನವನ ವಿಕಸನದ ಬಗ್ಗೆ ಪ್ರಸ್ತಾಪಿಸುತ್ತಾ ‘ಮಾನವನು ಭೂಮಿಯ ಮೇಲಿನ ಎಲ್ಲಾ ಜೀವಿಗಳ ಮೇಲೆ ದಿಗ್ವಿಜಯ ಸಾಧಿಸಲು ಮುಖ್ಯ ಕಾರಣ ಏನೆಂದರೆ, ಅವನು ಬಲವಾಗಿ ನಂಬಿರುವ ಕಲ್ಪನಾತ್ಮಕ ವಿಚಾರಗಳಾದ ದೇವರು, ರಾಷ್ಟ್ರಗಳು, ಹಕ್ಕುಗಳು ಮತ್ತು ಹಣ’ ಎನ್ನುತ್ತಾರೆ.

ಭಾರತದ ಮಟ್ಟಿಗೆ ರಾಷ್ಟ್ರೀಯತೆಯು ಯುರೋಪಿನ ‌‌ಮಾದರಿಯನ್ನು ಪ್ರತಿಧ್ವನಿಸುತ್ತದೆಯೇ ಎಂದು ನೋಡಿದರೆ ನಕಾರಾತ್ಮಕ ಉತ್ತರ ಸಿಗುತ್ತದೆ. ಭಾರತದ ರಾಜಕೀಯ ಶಾಸ್ತ್ರಜ್ಞ ಪಾರ್ಥ ಚಟರ್ಜಿ ತಮ್ಮ ‘ಪಾಲಿಟಿಕ್ಸ್ ಆಫ್ ದಿ ಗವರ್ನ್‌ಡ್’ ಪುಸ್ತಕದಲ್ಲಿ ಏಕರೂಪದ ರಾಷ್ಟ್ರ ನಿರ್ಮಾಣದ ಸಾಧ್ಯತೆಗಳ ಬಗ್ಗೆ ಚರ್ಚಿಸುತ್ತಾರೆ. ಆದರೆ ಸಮಸ್ಯೆಯು ಭಾರತದ ಸಮಾಜದಲ್ಲಿರುವ ಹಲವಾರು ಧರ್ಮಗಳು, ನೂರೆಂಟು ಭಾಷೆಗಳು ಮತ್ತು ಧರ್ಮಗಳೊಳಗೆ ಅಡಗಿರುವ ಆಂತರಿಕ ಒಡಕುಗಳಲ್ಲಿದೆ. ಏಕರೂಪ ರಾಷ್ಟ್ರದ ಪ್ರಸ್ತಾಪದಲ್ಲಿ ಭಾರತದಲ್ಲಿ ಪ್ರಬಲವಾಗಿ ಗೋಚರಿಸುವುದು ಸವರ್ಣೀಯರ ಏಕರೂಪತೆ ಮಾತ್ರ.

ಇದರೊಟ್ಟಿಗೆ ಅಷ್ಟೇ ತೀವ್ರವಾಗಿ ಕಾಣಿಸುವುದು ಉಳಿದ ಹಿಂದೂಗಳ ಮಧ್ಯೆ ಇರುವ ಅಸಮಾನತೆ. ಆದ್ದರಿಂದ ಯುರೋಪಿನಲ್ಲಿ ಸಾಧ್ಯವಾದಂತೆ ಏಕರೂಪದ ರಾಷ್ಟ್ರೀಯತೆಯ ಮಾದರಿಯು ಭಾರತದ ಮಟ್ಟಿಗೆ ಅಸಾಧ್ಯ. ಬದಲಾಗಿ, ನಮ್ಮ ಸಮಾಜದಲ್ಲಿರುವ ವೈವಿಧ್ಯ ಮತ್ತು ಭಿನ್ನತೆಯ ಹಿನ್ನೆಲೆಯಲ್ಲೇ ಒಗ್ಗಟ್ಟನ್ನು ಸೃಷ್ಟಿಸಿ ರಾಷ್ಟ್ರೀಯತೆಯ ಭಾವನೆಯನ್ನು ತಾಳುವುದು ಸೂಕ್ತ ಎನ್ನುತ್ತಾರೆ ಪಾರ್ಥ ಚಟರ್ಜಿ. ಶಶಿ ತರೂರ್ ಅವರು ತಮ್ಮ ‘ವೈ ಐ ಆ್ಯಮ್ ಅ ಹಿಂದೂ’ ಎಂಬ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ: ‘ಹಿಂದೂಯಿಸಂ ಎಂಬ ಧರ್ಮವು ಭಾರತದಲ್ಲಿ ‘ಹಿಂದೂತನ’ ಎಂಬ ಒಂದು ಗುಣವಾಗಿ ಪರಿವರ್ತನೆಗೊಂಡಿದೆ.

ಇದು ಸಾಲದೆಂಬಂತೆ, ಹಿಂದೂ ಎಂಬ ಹೊಸ ಜನಾಂಗವೇ ಸೃಷ್ಟಿಯಾಗಿಬಿಟ್ಟಿದೆ. ಭಾರತದ ಭೌಗೋಳಿಕ ವ್ಯಾಪ್ತಿಯಲ್ಲಿ ಜನಿಸಿರದ ಇತರರಿಗೆ ಭಾರತದ ಬಗ್ಗೆ ಪವಿತ್ರವಾದ ದೇಶಭಕ್ತಿ ಇರಲು ಸಾಧ್ಯವಿಲ್ಲ ಎನ್ನುವ ‘ಹಿಂದುತ್ವ’ ಎಂಬ ಸಿದ್ಧಾಂತ ಹುಟ್ಟಿಕೊಂಡಿದೆ. ಇದರ ಕಾರಣದಿಂದಾಗಿ ರಾಷ್ಟ್ರೀಯತೆ ಎಂಬ ಭವ್ಯವಾದ ಪರಿಕಲ್ಪನೆಯು ಕೋಮುವಾದದ ರೂಪ ಪಡೆದುಕೊಂಡು ವಿವಿಧ ಧರ್ಮಗಳಿಗೆ ಪೂರಕವಾಗಿ ವಿವಿಧ ಮುಖಗಳನ್ನು ಸಹ ಹೊಂದಿದೆ’.

ಪಾರ್ಥ ಚಟರ್ಜಿ ಮತ್ತು ತರೂರ್ ಅವರು ಸ್ಪಷ್ಟಪಡಿಸಿದಂತೆ, ಯುರೋಪಿನಲ್ಲಿ ಉನ್ನತ ವರ್ಗಗಳಲ್ಲಿ ಮಾತ್ರ ಬಳಕೆಯಲ್ಲಿದ್ದ ಲ್ಯಾಟಿನ್ ಭಾಷೆಯನ್ನು ಸಾಮಾನ್ಯ ಜನರ ಭಾಷೆಗಳು ಬುಡಮೇಲಾಗಿಸಿದ ಕಾರಣದಿಂದ ಹುಟ್ಟಿದ ಭಾಷಾ ಸಾಮ್ಯತೆಯು ಜನರನ್ನು ಒಗ್ಗೂಡಿಸಿದರೆ, ವಸಾಹತೋತ್ತರ ಭಾರತದಲ್ಲಿ ರಾಷ್ಟ್ರೀಯತೆಯು ಧರ್ಮಾಂಧತೆ, ದ್ವೇಷ, ಸೇಡು ಮತ್ತು ಆಕ್ರೋಶಭರಿತ ಬೋಧನೆಗಳಲ್ಲಿ ನಲುಗುತ್ತಿರುವುದು ನಮಗೆ ಸ್ಪಷ್ಟವಾಗಿ ತಿಳಿದುಬರುತ್ತದೆ.

ಅನೇಕ ಪ್ರಾಜ್ಞರು, ವಿವೇಕಿಗಳು, ತತ್ವಜ್ಞಾನಿಗಳು, ಧರ್ಮಾಚಾರ್ಯರು ಜನಿಸಿ ಇಡೀ ಜಗತ್ತಿಗೇ ತಿಳಿವಳಿಕೆಯ ಬೆಳಕನ್ನು ತೋರಿದ ನಾಡಿನಲ್ಲೇ ರಾಷ್ಟ್ರ, ದೇಶಭಕ್ತಿ, ರಾಷ್ಟ್ರೀಯತೆ ಎಂಬ ಭವ್ಯವಾದ ಪರಿಕಲ್ಪನೆಗಳು ಧರ್ಮದ ಪರಿಧಿಯಲ್ಲಿ ಸಿಲುಕಬಾರದು. ಯುರೋ
ಪಿನ ಏಕರೂಪದ ಮಾದರಿಯು ಅಸಾಧ್ಯವಿರಬಹುದು. ಆದರೆ ನಮ್ಮಲ್ಲಿರುವ ಎಲ್ಲ ಸಂಕುಚಿತವಾದ ಧೋರಣೆ
ಗಳನ್ನು ಬದಿಗೊತ್ತಿ, ನಮ್ಮ ವೈವಿಧ್ಯವನ್ನೇ ವೈಶಿಷ್ಟ್ಯ ಎಂದು ಭಾವಿಸಿ, ಅದರಲ್ಲಿಯೇ ಏಕತೆಯನ್ನು ಕಾಣುವ ಪ್ರಯತ್ನವು ಸಾಧ್ಯವೇ ಎಂದು ಚಿಂತಿಸಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.