ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಬಟವಾಡೆ ತರುಣರ ಬವಣೆ

ಅತ್ಯಧಿಕ ಶ್ರಮ ಬೇಡುವ ಕೆಲಸ ಇದು. ಇವರ ಆರೋಗ್ಯ ರಕ್ಷಣೆಗೆ ಸರ್ಕಾರ ಆಗಲೀ, ಕೆಲಸ ನೀಡುವ ಕಂಪನಿಗಳಾಗಲೀ ಅಷ್ಟಾಗಿ ತಲೆಕೆಡಿಸಿಕೊಂಡಂತಿಲ್ಲ
Published 31 ಅಕ್ಟೋಬರ್ 2023, 23:13 IST
Last Updated 31 ಅಕ್ಟೋಬರ್ 2023, 23:13 IST
ಅಕ್ಷರ ಗಾತ್ರ

ಹೋಟೆಲಿನ ಆಹಾರವನ್ನು ಮನೆಯ ವಿಳಾಸಕ್ಕೆ ತಂದುಕೊಟ್ಟ ಡೆಲಿವರಿಬಾಯ್ ಬಾಗಿಲಿನಿಂದ ತುಸು ದೂರವೇ ನಿಂತಿದ್ದ. ಕ್ಯಾಷ್‌ ಆನ್ ಡೆಲಿವರಿ ವಿಧಾನದಲ್ಲಿ ಆಹಾರವನ್ನು ಬುಕ್ ಮಾಡಿದ್ದರಿಂದ ‘ಬನ್ರೀ, ಕ್ಯೂಆರ್ ಕೋಡ್ ತೋರಿಸಿ, ಹಣ ಟ್ರಾನ್ಸ್‌ಫರ್ ಮಾಡುತ್ತೇನೆ’ ಎಂದೆ. ‘ಇರ್ಲಿ ಸರ್, ನನಗೆ ಕೆಮ್ಮು ಜಾಸ್ತಿ ಇದೆ, ಇಲ್ಲಿಂದಲೇ ಲಿಂಕ್ ಕಳಿಸುತ್ತೇನೆ, ಪೇ ಮಾಡಿಬಿಡಿ’ ಎಂದ. ಆಯಿತು ಎಂದು ಲಿಂಕ್ ಬಳಸಿ ಹಣ ಸಂದಾಯಿಸಿದ ನಂತರ ‘ಏಕೆ? ತುಂಬಾ ಕೆಮ್ಮು ಇದ್ದ ಹಾಗಿದೆ, ರೆಸ್ಟ್ ಮಾಡಿರಿ ಇಲ್ಲವೇ ವೈದ್ಯರಲ್ಲಿ ಸಲಹೆ ಪಡೆಯಿರಿ’ ಎಂದೆ. ಅದಕ್ಕೆ ಆತ, ‘ಇದೆಲ್ಲಾ ಮಾಮೂಲು ಸಾರ್, ಬೆಳಿಗ್ಗೆ ಏಳಕ್ಕೆ ಕೆಲಸ ಶುರುಮಾಡಿದ್ದೇನೆ, ಈಗ ರಾತ್ರಿ ಎಂಟಾಗಿದೆ ಇನ್ನೂ ಮನೆಗೆ ಹೋಗಿಲ್ಲ. ಹಗಲೆಲ್ಲಾ ಬಿಸಿಲು, ಉರಿ, ದೂಳಿನಲ್ಲೇ ಇರುತ್ತೇನೆ, ಅದಕ್ಕೇ ಹೀಗಾಗಿದೆ’ ಎಂದ. ಕೊನೆಗೆ ‘ಬರೋ ಸ್ವಲ್ಪ ಆದಾಯದಲ್ಲಿ ಡಾಕ್ಟರಿಗೆ, ಔಷಧಿಗೆ ಅಂತ ಹಣ ಖರ್ಚಾದರೆ, ಮನೆಯವರಿಗೆ ಏನು ಕೊಡುವುದು ಸಾರ್? ನನ್ನ ಬಗ್ಗೆ ಕಾಳಜಿ ತೋರಿದ್ದಕ್ಕೆ ಥ್ಯಾಂಕ್ಸ್’ ಎಂದ.

ಇದು ಈತನೊಬ್ಬನ ಸಮಸ್ಯೆಯಲ್ಲ. ದೇಶದಲ್ಲಿ ‘ಬಟವಾಡೆ ತರುಣ’ರಾಗಿ (ಡೆಲಿವರಿ ಬಾಯ್, ಗರ್ಲ್) ಕೆಲಸ ಮಾಡುತ್ತಿರುವ ಲಕ್ಷಾಂತರ ಜನ ಎದುರಿಸುತ್ತಿರುವ ಸಮಸ್ಯೆ ಇದು. ನಾವು ಆನ್‍ಲೈನ್ ಮುಖಾಂತರ ಖರೀದಿಸುವ ಸಾಮಾನುಗಳನ್ನು ನಿಗದಿತ ಸಮಯಕ್ಕೆ ತಲುಪಿಸುವ ಯುವಕ– ಯುವತಿಯರು, ವಯಸ್ಕರು ಉಸಿರಾಟದ ತೊಂದರೆ, ಗಂಟಲು ಉರಿ, ವಿಪರೀತ ತಲೆನೋವು, ವಾಕರಿಕೆ ಮತ್ತು ತಲೆ ಸುತ್ತುವಿಕೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ವರದಿಗಳಿವೆ. ಒಂದು ಲೆಕ್ಕಾಚಾರದಂತೆ ದೇಶದ ಡೆಲಿವರಿಬಾಯ್‍ಗಳ ಸಂಖ್ಯೆ 83 ಲಕ್ಷದಷ್ಟು. ಇವರೆಲ್ಲ ದೇಶದ ಮಹಾನಗರ, ನಗರ ಮತ್ತು ಉಪನಗರಗಳ ಗಲ್ಲಿ– ಗಲ್ಲಿಗಳಿಗೆ ಆಹಾರ, ಔಷಧಿ, ಪುಸ್ತಕ, ತರಕಾರಿ, ದಿನಸಿ, ಮೊಬೈಲು, ಫರ್ನಿಚರ್, ಹೂವು, ಫ್ಯಾನು... ಹೀಗೆ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಪ್ರತಿಯೊಂದು ವಸ್ತುವನ್ನೂ ಮನೆ–ಮನೆಯ ವಿಳಾಸ ಹುಡುಕಿ ತಲುಪಿಸುತ್ತಾರೆ. ಖರೀದಿದಾರರ ಮುಖಗಳಲ್ಲಿ ನಗುವರಳಿಸುತ್ತಾರೆ. ತುರ್ತು ಆರೋಗ್ಯ ಸೇವೆ ಬಯಸುವವರಿಗೆ ಸರಿಯಾದ ಸಮಯದಲ್ಲಿ ಔಷಧಿ ತಲುಪಿಸಿ ಜೀವ ಉಳಿಸುತ್ತಾರೆ. ತಾವು ಹಸಿದಿದ್ದರೂ ಹಸಿದ ಹೊಟ್ಟೆಗಳಿಗೆ ಆಹಾರ ತಲುಪಿಸಿ ಕೃತಾರ್ಥರಾಗುತ್ತಾರೆ. ಬೆಳಿಗ್ಗೆ ಏಳರ ಹೊತ್ತಿಗೆ ಶುರುವಾಗುವ ಇವರ ಕೆಲಸ ಮಧ್ಯರಾತ್ರಿಯವರೆಗೂ ಮುಂದುವರಿಯುತ್ತದೆ.

ದಿನದ ಬಹುಪಾಲು ಸಮಯ ಜನ– ವಾಹನ ಬಾಹುಳ್ಳವಿರುವ ವೃತ್ತ, ರಸ್ತೆ, ಮಾರ್ಕೆಟ್ ಪ್ರದೇಶಗಳಲ್ಲಿ ಬಿಸಿಲು, ದೂಳಿಗೆ ತೆರೆದುಕೊಳ್ಳುವ ಬಟವಾಡೆ ತರುಣರು ದಿನದಲ್ಲಿ ಏನಿಲ್ಲವೆಂದರೂ ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್‍ಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಟ್ರಾಫಿಕ್ ನಿಯಂತ್ರಿಸುವ ಪೊಲೀಸರು, ಬೀದಿ ಬದಿ ವ್ಯಾಪಾರಿಗಳು, ಬೈಕ್ ಟ್ಯಾಕ್ಸಿ, ಆಟೊರಿಕ್ಷಾ ಓಡಿಸುವವರು ಅತ್ಯಂತ ಕಲುಷಿತ ಗಾಳಿಯನ್ನು ಉಸಿರಾಡುತ್ತಾರೆ. ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾದಂತಹ ಮಹಾನಗರಗಳಲ್ಲಿ ದುಡಿಯುವ ನೌಕರರು ಗಾಳಿಯಲ್ಲಿ ಸೇರಿಕೊಂಡಿರುವ ತೇಲುಕಣ (ಪಾರ್ಟಿಕುಲೇಟ್ ಮ್ಯಾಟರ್- ಪಿಎಂ) ಮತ್ತು ಆವಿಯಾಗುವ ಸಾವಯವ ರಾಸಾಯನಿಕಗಳನ್ನು ವಿಧಿಯಿಲ್ಲದೇ ಉಸಿರಾಡುತ್ತಾರೆ. ಕೋಯಿಕ್ಕೋಡ್‌ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಅಭಿನಯ ಶೇಖರ್ ಪ್ರಕಾರ, ನಗರಗಳ ಗಾಳಿಯಲ್ಲಿ ಟಾಲೀನ್, ಬೆಂಜೀನ್ ಸೇರಿದಂತೆ 54 ಸಾವಯವ ಆವಿಯಾಗುವ ಪದಾರ್ಥಗಳಿವೆ. ದುಡಿಯುತ್ತಿರುವವರ ಪೈಕಿ ಶೇ 67ರಷ್ಟು ಮಂದಿಗೆ ಕಲುಷಿತ ವಾತಾವರಣದಿಂದ ತಮ್ಮ ಆರೋಗ್ಯ ಕೆಡುತ್ತಿದೆ ಎಂಬುದೂ ಅರಿವಿಗೆ ಬರುತ್ತಿಲ್ಲವಂತೆ!

ನಾವು ಉಸಿರಾಡುವ ಗಾಳಿಯ ತೇಲುಕಣಗಳನ್ನು ಪಿಎಂ 10, ಪಿಎಂ 2.5 ಮತ್ತು ಪಿಎಂ 1 ಎಂದು ಗುರುತಿಸಲಾಗುತ್ತದೆ. ಗಾಳಿಯಲ್ಲಿ ಇವು ಕ್ರಮವಾಗಿ ಪ್ರತಿ ಘನ ಮೀಟರ್‌ಗೆ 45, 15 ಮತ್ತು 10 ಮೈಕ್ರೊಗ್ರಾಂಗಿಂತ ಕಡಿಮೆ ಇರಬೇಕು. ಕಳೆದ ವರ್ಷ ದೆಹಲಿ ಸಮೀಪದ ಗಾಜಿಯಾಬಾದ್ ಪ್ರದೇಶದ ಗಾಳಿಯಲ್ಲಿ ಅವುಗಳ ಪ್ರಮಾಣ 516, 180 ಮತ್ತು 113 ಮೈಕ್ರೊಗ್ರಾಂನಷ್ಟಿದ್ದುದು ವರದಿಯಾಗಿತ್ತು. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡವು ಪಿಎಂ 10ರ ಪ್ರಮಾಣ 100 ಮತ್ತು ಪಿಎಂ 2.5ರ ಪ್ರಮಾಣ 60 ಮೈಕ್ರೊಗ್ರಾಂನಷ್ಟಿದ್ದರೆ ಅಂಥ ಅಪಾಯವೇನೂ ಇಲ್ಲ ಎನ್ನುತ್ತದೆ. ಬಹುಕಾಲದವರೆಗೆ 2.5 ಮೈಕ್ರಾನ್ ಗಾತ್ರದ ತೇಲುಕಣಗಳನ್ನು ಉಸಿರಾಡುವವರು ಆಸ್ತಮಾ, ಬ್ರಾಂಕೈಟಿಸ್‍ಗೆ ತುತ್ತಾಗುತ್ತಾರೆ ಮತ್ತು ಅವರಿಗೆ ಜನಿಸುವ ಮಕ್ಕಳಲ್ಲಿ ಅಂಗವೈಕಲ್ಯ ಮತ್ತು ಮನೋದೈಹಿಕ ಬೆಳವಣಿಗೆ ಸಂಬಂಧಿತ ತೊಂದರೆಗಳು ಉಂಟಾಗುತ್ತವೆ ಎಂಬ ವರದಿಗಳಿವೆ.

ಕಡಿಮೆ ಸಂಬಳ, ಅಧಿಕ ದುಡಿಮೆ, ಅತ್ಯಧಿಕ ಶ್ರಮ ಬೇಡುವ ಈ ಕೆಲಸ ಮಾಡುವ ಜನರ ಆರೋಗ್ಯ ರಕ್ಷಣೆಗೆ ಸರ್ಕಾರಗಳಾಗಲೀ, ಕೆಲಸ ನೀಡುವ ಕಂಪನಿಗಳಾಗಲೀ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಪ್ರಾರಂಭದಲ್ಲಿ ಕಾಳಜಿ ತೋರುವ ಕಂಪನಿಗಳು ಗಟ್ಟಿಯಾಗಿ ತಳವೂರಿದ ನಂತರ ಕೆಲಸಗಾರರ ಹಿತವನ್ನು ಕಡೆಗಣಿಸಿಬಿಡುತ್ತವೆ. ಜನಪ್ರಿಯತೆ ಹೆಚ್ಚಾದಂತೆ ‘ನೀನಲ್ಲದಿದ್ದರೆ ಹತ್ತಾರು ಜನ ಸಿಗುತ್ತಾರೆ’ ಎಂಬ ಧೋರಣೆ ತಳೆಯುತ್ತವೆ ಎಂದು ನೊಂದುಕೊಳ್ಳುವ ಅನೇಕ ಕೆಲಸಗಾರರು, ‘ನಮ್ಮ ಹಣೆಯಲ್ಲಿ ಬರೆದಿರುವುದು ಇಷ್ಟೇ ಎಂದು ಸುಮ್ಮನಾಗುತ್ತೇವೆ’ ಎನ್ನುತ್ತಾರೆ. ಹೆಲ್ಮೆಟ್, ಮುಖ, ಕೈಗವಸು, ಜೀವ- ಅಪಘಾತ ವಿಮೆ, ರೆಗ್ಯುಲರ್ ಆರೋಗ್ಯ ತಪಾಸಣೆ ಮಾಡುವ ಎಲ್ಲ ಅವಕಾಶಗಳಿವೆ. ಮಾಡುವವರಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT