ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸೋಂಕಿನ ಸರಪಣಿ ತುಂಡರಿಸಲು ಸಾಧ್ಯವೇ?

Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಅಕ್ಷರ ಗಾತ್ರ

ಇದು ಅಸಹ್ಯಕರವಷ್ಟೇ ಅಲ್ಲ ಗಂಭೀರ ಪ್ರಕರಣವೂ ಹೌದು. ಆ ರೈತ ದಂಪತಿಯ ಎರಡೂವರೆ ವರ್ಷದ ಮಗು ಮನೆಯಲ್ಲಿ ಶೌಚಾಲಯವಿದ್ದರೂ ಮಲವಿಸರ್ಜನೆ ಮಾಡುವುದು ಮಾತ್ರ ಹಿತ್ತಲಿನಲ್ಲಿ. ಆ ಕೆಲಸ ಮುಗಿದ ಕೂಡಲೇ ಅವರ ಸಾಕುನಾಯಿ ತಕ್ಷಣ ಎಲ್ಲವನ್ನೂ ತಿಂದು ಸ್ವಚ್ಛ ಮಾಡುತ್ತಿತ್ತು! ಆ ಸಮಯದಲ್ಲಿ ಮಗುವಿನ ಪೃಷ್ಠ ಭಾಗವನ್ನು ಅಕ್ಕರೆಯಿಂದ ನೆಕ್ಕುತ್ತಿದ್ದುದೂ ಉಂಟು. ಇಷ್ಟೇ ಆಗಿದ್ದರೆ ಈ ಪ್ರಕರಣವನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯ ಇರುತ್ತಿರಲಿಲ್ಲ. ನಮ್ಮ ಹಲವು ಹಳ್ಳಿಗಳು ಮತ್ತು ಕೊಳೆಗೇರಿಗಳಲ್ಲಿ ಇಂತಹ ದೃಶ್ಯ ತೀರಾ ಸಾಮಾನ್ಯ ಎಂಬುದು ಕಟು ವಾಸ್ತವ!

ಆ ನಾಯಿ ಇದ್ದಕ್ಕಿದ್ದಂತೆ ಉದ್ರೇಕಗೊಂಡು ಕಂಡ ಕಂಡ ನಾಯಿ, ಜಾನುವಾರುಗಳನ್ನು ಕಚ್ಚುವುದು, ಮನುಷ್ಯರನ್ನು ಅಟ್ಟಿಸಿಕೊಂಡು ಹೋಗುತ್ತಿರುವ ದೂರು ಬರುತ್ತಿದ್ದಂತೆಯೇ ಆ ಹಳ್ಳಿಗೆ ಧಾವಿಸಬೇಕಾಯಿತು. ಅದಕ್ಕೆ ಹುಚ್ಚು ಹಿಡಿದಿದ್ದು ಖಚಿತವಾದ್ದರಿಂದ ಅಷ್ಟೊತ್ತಿಗಾಗಲೇ ಹಳ್ಳಿಗರು ಅದನ್ನು ಹೊಡೆದು ಸಾಯಿಸಿದ್ದೂ ಆಗಿತ್ತು. ನಾಯಿಗೆ ರೇಬಿಸ್ ರೋಗ ತಗುಲಿದ್ದರಿಂದ ಅದರ ಜೊಲ್ಲಿನ ಸಂಪರ್ಕಕ್ಕೆ ಬಂದವರು ಸುರಕ್ಷತಾ ದೃಷ್ಟಿಯಿಂದ ರೇಬಿಸ್ ಲಸಿಕೆ ತೆಗೆದುಕೊಳ್ಳಲೇಬೇಕು. ಅದೃಷ್ಟವಶಾತ್ ಮನುಷ್ಯರ್ಯಾರೂ ಕಚ್ಚಿಸಿಕೊಂಡಿರಲಿಲ್ಲ. ಕಡಿತಕ್ಕೊಳಗಾಗಿದ್ದ ಜಾನುವಾರುಗಳಿಗೆ ಲಸಿಕೆ ಹಾಕುವ ವ್ಯವಸ್ಥೆಯಾಯಿತು.

‘ಸರ್, ನಮ್ಮ ಪಾಪುಗೆ ಇಂಜಕ್ಷನ್ ಕೊಡಿಸಬೇಕಾ?’ ಹೊರಡುವಾಗ ಆ ತಾಯಿ ಕೇಳಿದ್ದಳು. ತುಸು ಕೆದಕಿದಾಗಲೇ ಆಕೆ ಬಾಯಿಬಿಟ್ಟಿದ್ದು ಮಲವಿಸರ್ಜನೆಯ ಈ ಅಭ್ಯಾಸದ ಬಗ್ಗೆ. ಕೇಳಿದಾಗ ನಿಜಕ್ಕೂ ಗಾಬರಿಯಾಗಿತ್ತು. ಮಗುವಿನ ಪೃಷ್ಠ ಭಾಗವನ್ನು ಗಮನಿಸಿದಾಗ ಆತಂಕ ಮತ್ತಷ್ಟು ಏರಿತ್ತು! ಅಲ್ಲೆಲ್ಲಾ ಸಣ್ಣ ಸಣ್ಣ ಕಜ್ಜಿಗಳು. ಇದು ಚಿಕ್ಕ ಮಕ್ಕಳಲ್ಲಿ ಅಪರೂಪವಲ್ಲದಿದ್ದರೂ ಇಲ್ಲಿನ ವಿಷಯವೇ ಬೇರೆ. ಆ ನಾಯಿ ಹುಚ್ಚು ಕೆದರಿ ಓಡಿಹೋಗುವ ಹಿಂದಿನ ದಿನವೂ ಅಲ್ಲೆಲ್ಲಾ ನೆಕ್ಕಿತ್ತು! ಜೊಲ್ಲಿನಲ್ಲಿರುವ ರೇಬಿಸ್ ವೈರಾಣುಗಳು ಗಾಯದ ಮೂಲಕ ಮಗುವಿನ ದೇಹ ಸೇರಿರುವ ಸಾಧ್ಯತೆ ತುಂಬಾ ಹೆಚ್ಚು. ಅಪಾಯದ ಬಗ್ಗೆ ಮನವರಿಕೆ ಮಾಡಿಕೊಟ್ಟು ತಕ್ಷಣ ಲಸಿಕೆ ಕೊಡಿಸುವಂತೆ ಸಲಹೆ ನೀಡಿದಾಗ ಪೋಷಕರ ಮೊಗದಲ್ಲಿ ಭೀತಿ ಎದ್ದು ತೋರುತ್ತಿತ್ತು.

ಹೌದು, ಕೇಂದ್ರ ನರವ್ಯೂಹವನ್ನು ಬಾಧಿಸುವ, ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಯಾವುದೇ ಮದ್ದಿಲ್ಲದೆ ಮರಣ ನಿಶ್ಚಿತವಾಗಿರುವ ರೇಬಿಸ್ (ಹುಚ್ಚುನಾಯಿ ರೋಗ) ಪ್ರಾಣಿಜನ್ಯ ರೋಗಗಳಲ್ಲೇ ಅತಿ ಮಾರಕವಾದದ್ದು. ಪಶು, ಪಕ್ಷಿ, ಕೀಟಗಳಿಂದ ಮಾನವನಿಗೆ ಸೋಂಕು ಹರಡುವಂತೆ ಮನುಜನೂ ಹಲವು ಕಾಯಿಲೆಗಳನ್ನು ಪಶುಗಳಿಗೆ ದಾಟಿಸಬಲ್ಲ. ಮಾನವನ ಸೋಂಕು ರೋಗಗಳಲ್ಲಿ ಶೇ 60ಕ್ಕೂ ಅಧಿಕ ಕಾಯಿಲೆಗಳಿಗೆ ಪ್ರಾಣಿಗಳೇ ಮೂಲ. ಅದರಲ್ಲೂ ಇತ್ತೀಚೆಗೆ ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ಬಹುತೇಕ ವ್ಯಾಧಿಗಳಿಗೂ ಪಶುಗಳಿಗೂ ಸಂಬಂಧವಿದೆ.

ರೋಗಾಣುಗಳು ಸೋಂಕಿತ ಜೀವಿಯ ನೇರ ಸಂಪರ್ಕ, ಉಸಿರಿನ ಮೂಲಕ, ಕಲುಷಿತ ನೀರು, ಆಹಾರದ ಮೂಲಕ ಇಲ್ಲವೆ ಉಣ್ಣೆ, ಹೇನು, ಚಿಗಟ, ಸೊಳ್ಳೆ, ಬಾವಲಿಯಂತಹ ವಾಹಕಗಳ ಮುಖಾಂತರವೂ ಹರಡಬಹುದು.

ಕೆಲವು ಪ್ರಾಣಿಜನ್ಯ ರೋಗಗಳು ಅಷ್ಟೇನೂ ಅಪಾಯಕಾರಿಯಲ್ಲ. ಮತ್ತೆ ಕೆಲವು ತೀರಾ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕುವುದಲ್ಲದೆ ಮಾರಣಾಂತಿಕವಾಗಬಹುದು. ರೇಬಿಸ್ ಅಲ್ಲದೆ ಹಕ್ಕಿ ಜ್ವರ, ಬಾವಲಿ ಜ್ವರ, ಝಿಕಾ, ಎಬೋಲ, ಕೋವಿಡ್-19, ಆಂತ್ರಾಕ್ಸ್, ಪ್ಲೇಗ್, ಹುಚ್ಚುಹಸು ರೋಗ, ಇಲಿಜ್ವರ, ಕ್ಷಯ, ಕಂದು ರೋಗ (ಬ್ರುಸೆಲ್ಲೋಸಿಸ್), ಮಂಗನಕಾಯಿಲೆ, ಹಂದಿ ಜ್ವರ, ಮಂಗನ ಜ್ವರ, ಫಂಗಸ್ ಸಮಸ್ಯೆಗಳು, ಲಾಡಿಹುಳ, ಜಂತುಹುಳ, ಕೊಕ್ಕೆಹುಳುಗಳ ಬಾಧೆಗಳು ಪ್ರಮುಖವಾದವು.

ಜುಲೈ 6 ವೈದ್ಯಕೀಯ ಕ್ಷೇತ್ರದಲ್ಲಿ ಚಾರಿತ್ರಿಕ ದಿನ. ವಿಶ್ವದ ಮೊದಲ ಲಸಿಕಾ ಪ್ರಯೋಗದ ಮೂಲಕ ಜೀವಸಂಕುಲದ ಸಂರಕ್ಷಣೆಗೆ ಮುನ್ನುಡಿ ಬರೆದ ದಿನ. ಭಯಾನಕ ರೇಬಿಸ್ ಕಾಯಿಲೆಗೆ ಮದ್ದು ಹುಡುಕುವ ದಿಸೆಯಲ್ಲಿ ಫ್ರೆಂಚ್ ಸೂಕ್ಷ್ಮಾಣುಶಾಸ್ತ್ರಜ್ಞ ಲೂಯಿಸ್ ಪ್ಯಾಶ್ಚರ್ 1881ರಲ್ಲಿ ಪ್ರಯತ್ನ ಶುರು ಮಾಡಿದ್ದರು. ಸೋಂಕಿತ ನಾಯಿಯ ಜೊಲ್ಲು ರಸವನ್ನು ಮೊಲಗಳ ದೇಹಕ್ಕೆ ಸೇರಿಸಿದಾಗ ಅವು ಹುಚ್ಚು ರೋಗದಿಂದ ಬಳಲುವುದನ್ನು ಕಂಡುಕೊಂಡ ಪ್ಯಾಶ್ಚರ್, ಆ ಮೊಲಗಳ ಮೆದುಳು ಹುರಿಯನ್ನು ಒಣಗಿಸಿ, ಅರೆದು ನಾಯಿಗಳಿಗೆ ನೀಡಿದಾಗ ರೇಬಿಸ್ ಬಾರದ್ದನ್ನು ಕಂಡುಕೊಂಡರು. 1885ರ ಜುಲೈ 6ರಂದು ತಾವು ಸಂಶೋಧಿಸಿದ ಈ ಚುಚ್ಚುಮದ್ದನ್ನು ಹುಚ್ಚು ನಾಯಿಯೊಂದರಿಂದ ತೀವ್ರ ಕಡಿತಕ್ಕೊಳಗಾಗಿದ್ದ ಜೋಸೆಫ್ ಮೆಸ್ಟರ್ ಎಂಬ 9 ವರ್ಷದ ಬಾಲಕನ ಮೇಲೆ ಪ್ರಯೋಗಿಸಿದರು. ಹುಡುಗ ರೋಗದಿಂದ ಪಾರಾಗಿದ್ದು ವಿಶ್ವವನ್ನೇ ಬೆರಗಾಗಿಸಿತ್ತು. ಮಾರಣಾಂತಿಕ ಪ್ರಾಣಿಜನ್ಯ ರೋಗವೊಂದಕ್ಕೆ ಚೊಚ್ಚಲ ಲಸಿಕೆ ನೀಡಿದ ಈ ದಿನವನ್ನು ಪ್ರತಿವರ್ಷ ‘ವಿಶ್ವ ಪ್ರಾಣಿಜನ್ಯ ರೋಗ ದಿವಸ’ ಎಂದು ಆಚರಿಸಲಾಗುತ್ತಿದೆ.

ನಮ್ಮ ಬಹುತೇಕ ಜಾನುವಾರು ಮಾಲೀಕರು, ಪಶು-ಪಕ್ಷಿಗಳ ಸಾಂಗತ್ಯದಲ್ಲಿ ಇರುವವರು, ಮುದ್ದು ಪ್ರಾಣಿಗಳ ಒಡೆಯರಿಗೆ ಪ್ರಾಣಿಗಳಿಂದ ಬರಬಹುದಾದ ಕಾಯಿಲೆಗಳು, ಕಂಟಕಗಳ ಕುರಿತಾದ ಅರಿವು ಕನಿಷ್ಠ ಮಟ್ಟದಲ್ಲಿರುವುದು ದುರದೃಷ್ಟಕರ. ಕೆಲವರಂತೂ ತಮ್ಮ ಸಾಕುಪ್ರಾಣಿಗಳು ಅನಾರೋಗ್ಯಕ್ಕೆ ತುತ್ತಾದಾಗ ತಮಗೂ ಕಾಯಿಲೆ ಅಂಟಬಹುದೆಂಬ ಭಯದಲ್ಲಿ ಶುಶ್ರೂಷೆ ಮಾಡಲು ಹಿಂದೇಟು ಹಾಕುವುದೂ ಉಂಟು. ಕೊರೊನಾ ಸೋಂಕಿನ ಸಮಯದಲ್ಲಿ ರೋಗಾಣುಗಳು ನಾಯಿಗಳಿಂದಲೂ ಹರಡಬಹುದು ಎಂಬ ಸುಳ್ಳು ಸುದ್ದಿಯಿಂದಾಗಿ ತಾವು ಸಾಕಿದ ಮುದ್ದುಪ್ರಾಣಿಗಳನ್ನು ಬೀದಿಗಟ್ಟಿದವರ ಸಂಖ್ಯೆಯೂ ದೊಡ್ಡದಿತ್ತು!

ಮಾನವ, ಪ್ರಾಣಿ ಮತ್ತು ಪರಿಸರದ ಆರೋಗ್ಯ ಒಂದಕ್ಕೊಂದು ಪೂರಕ. ಒಂದರ ಅನಾರೋಗ್ಯ ಮತ್ತೊಂದನ್ನು ತೀವ್ರವಾಗಿ ಬಾಧಿಸಬಲ್ಲದು. ಈ ಮೂರೂ ಸ್ವಾಸ್ಥ್ಯಗಳನ್ನು ಒಂದಾಗಿ ಪರಿಗಣಿಸಿ ಪರಿಹಾರ ಹುಡುಕುವ ‘ಒನ್ ಹೆಲ್ತ್’ (ಒಂದು ಆರೋಗ್ಯ) ಪರಿಕಲ್ಪನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದು ಇಂದಿನ ಅನಿವಾರ್ಯ. ವೈದ್ಯಕೀಯ, ಪಶುವೈದ್ಯಕೀಯ ಮತ್ತು ಪರಿಸರ ತಜ್ಞರು, ವಿಜ್ಞಾನಿಗಳು, ಕ್ಷೇತ್ರ ಮಟ್ಟದ ಕಾರ್ಯಕರ್ತರು ಒಗ್ಗೂಡಿ, ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ಪ್ರಾಣಿಜನ್ಯ ರೋಗಗಳ ನಿಯಂತ್ರಣದ ಜೊತೆಗೆ ಸೋಂಕಿನ ಸರಪಣಿಯನ್ನೂ ತುಂಡರಿಸಲು ಸಾಧ್ಯ. ಇಂತಹ ಇಚ್ಛಾಶಕ್ತಿ ನಮಗಿದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT