ಮಂಗಳವಾರ, ಏಪ್ರಿಲ್ 7, 2020
19 °C

ಪಿತೃಪ್ರಧಾನ ಚಿಂತನೆಯ ಕೊಂಡಿ

ಎಚ್.ಕೆ.ಶರತ್ Updated:

ಅಕ್ಷರ ಗಾತ್ರ : | |

Prajavani

ತನ್ನ ಒಳಿತಿಗೆ ಮಾರಕವಾಗುವ ಆಲೋಚನಾಕ್ರಮದ ಪೋಷಣೆಗೆ ಸಮಾಜ ಇನ್ನಿಲ್ಲದ ಮುತುವರ್ಜಿ ತೋರುವುದಾದರೂ ಏಕೆ? ಮೌಲ್ಯಗಳ ರೂಪದಲ್ಲಿ ತಾನು ಹೇರುವ ಚಿಂತನೆಗಳು, ಒಟ್ಟಾರೆ ಮನುಕುಲದ ಒಳಿತನ್ನಾದರೂ ಕಾಯುವವೇ ಎಂದು ಪರಿಶೀಲಿಸುವ ವ್ಯವಧಾನ ನಮ್ಮ ಚಲನಶೀಲ ಸಮಾಜದಲ್ಲಿ ಇನ್ನೂ ಮೈಗೂಡಿಲ್ಲವೇ?

ಐದು ವರ್ಷಗಳ ಹಿಂದೆ ಮದುವೆಯಾಗಿರುವ ಸ್ನೇಹಿತ, ತಮಗೆ ಮಕ್ಕಳಾಗಿಲ್ಲವೆಂಬ ಕಾರಣಕ್ಕೆ ಅನುಭವಿಸುತ್ತಿರುವ ಮಾನಸಿಕ ಹಿಂಸೆ ಗಮನಿಸಿದಾಗಲೆಲ್ಲ ಮೇಲಿನ ಪ್ರಶ್ನೆಗಳು ಹಾದು ಹೋಗುತ್ತವೆ. ‘ನಮಗೆ ಮಕ್ಕಳಾಗದಿದ್ದರೂ ಸಮಸ್ಯೆ ಇಲ್ಲ. ನಾವಿಬ್ಬರೂ ಕೊನೆವರೆಗೂ ಅನ್ಯೋನ್ಯವಾಗಿದ್ದರೆ ಸಾಕು. ಆದರೆ ಮನೆಯವರು, ಸಂಬಂಧಿಕರು ಹಾಗೂ ಪರಿಚಯಸ್ಥರು ಕೇಳುವ ಪ್ರಶ್ನೆಗಳು ಹಾಗೂ ವರ್ತಿಸುವ ರೀತಿಗೆ ನೊಂದುಕೊಳ್ಳುವ ನನ್ನ ಹೆಂಡತಿ, ಐವಿಎಫ್ (ಇನ್‍ ವಿಟ್ರೊ ಫರ್ಟಿಲೈಜೇಷನ್) ಒಳಗೊಂಡಂತೆ ಯಾವ ಚಿಕಿತ್ಸೆಯನ್ನಾದರೂ ಪಡೆಯಲು ತಾನು ಸಿದ್ಧವೆಂದು ಹಟ ಹಿಡಿದು ಕುಳಿತಿದ್ದಾಳೆ. ಅದೆಲ್ಲ ಬೇಡವೆಂದರೂ ಕೇಳುತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದ. ತನ್ನ ವಿದ್ಯಾಭ್ಯಾಸ ಮತ್ತು ಮದುವೆಗೆ ಮಾಡಿರುವ ಸಾಲ ತೀರಿಸಲಾಗದೆ ಮೊದಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅವನಿಗೆ, ದುಬಾರಿ ವೆಚ್ಚದ ಚಿಕಿತ್ಸೆಯ ಮೊರೆ ಹೋಗಿ ಮಗು ಪಡೆಯುವುದು ಸರಳ ಆಯ್ಕೆಯೇನೂ ಅಲ್ಲ. ಹಾಗಾಗಿ ತಮಗೆ ಮಗು ಆದರೂ ಸರಿ, ಆಗದಿದ್ದರೂ ಚಿಂತೆ ಇಲ್ಲ ಎಂಬ ನಿಲುವಿಗೆ ಅಂಟಿಕೊಳ್ಳಲು ಪ್ರಯತ್ನಿಸುತ್ತಿದ್ದಾನಾದರೂ, ಸಮಾಜ ತನ್ನ ಆಯ್ಕೆಯನ್ನು ಅನುಮೋದಿಸದಿರುವುದು ಅವನನ್ನು ಗೊಂದಲಕ್ಕೆ ದೂಡಿದೆ.

ಜನಸಂಖ್ಯೆಯ ಹೆಚ್ಚಳ ತಂದೊಡ್ಡುವ ಸಮಸ್ಯೆಗಳ ಅರಿವು ಬಹುತೇಕ ಎಲ್ಲರಿಗೂ ಇದೆ. ಹೀಗಿದ್ದರೂ ಮಕ್ಕಳಾಗದ ದಂಪತಿಯನ್ನು ನಮ್ಮ ಸಮಾಜ ನೋಡುವ ರೀತಿ ಅಸಹ್ಯಕರವಾದುದು. ಮಗುವಿಗೆ ಜನ್ಮ ನೀಡದ ಹೆಣ್ಣನ್ನು ಹೀಗಳೆಯಲು ಇರುವ ಪದಪುಂಜಗಳು ಹಾಗೂ ಮಗುವನ್ನು ಹೆತ್ತು ಹೊತ್ತು ಸಾಕುವ ಪ್ರಕ್ರಿಯೆಯ ಸುತ್ತ ಕಡೆದು ನಿಲ್ಲಿಸಿರುವ ತ್ಯಾಗ, ಪರಿಶ್ರಮ, ಸಹನೆಯ ಪ್ರತಿಮೆಗಳು, ತಾಯಿಯಾಗದ ಹೆಣ್ಣುಜೀವದ ನೈತಿಕಸ್ಥೈರ್ಯವನ್ನೇ ಕಸಿದುಕೊಳ್ಳುವಷ್ಟು ಸಶಕ್ತವಾಗಿವೆ.

ದಂಪತಿಯು ಮಗು ಹೊಂದುವುದು ಅನಿವಾರ್ಯವೆಂಬ ಒತ್ತಡವನ್ನು ಸಮಾಜ ಹೇರುತ್ತಲೇ ಬಂದಿದೆ. ಪುರುಷನ ಗಂಡಸ್ತನ ಮತ್ತು ಮಹಿಳೆಯ ಹೆಣ್ತನ ಸಾಬೀತುಪಡಿಸುವ ಹತಾರವಾಗಿಯೇ ಮಗು ಇಂದಿಗೂ ಬಿಂಬಿತವಾಗುತ್ತಿದೆ. ವಿಪರ್ಯಾಸವೆಂದರೆ, ಇಂತಹ ಚಿಂತನಾಕ್ರಮದ ಬಿಗಿಹಿಡಿತದಿಂದ ಸಮಾಜವನ್ನು ಪಾರು ಮಾಡಲು ನೆರವಾಗಬೇಕಿದ್ದ ಆಧುನಿಕತೆ, ಮಗು ಪಡೆಯುವ ಒತ್ತಡದಲ್ಲಿರುವ ದಂಪತಿಯನ್ನೇ ಕೇಂದ್ರೀಕರಿಸಿ ಹೊಸದೊಂದು ಮಾರುಕಟ್ಟೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಬಾಡಿಗೆ ತಾಯ್ತನ ಸೌಲಭ್ಯ ಹಾಗೂ ಬಂಜೆತನ ನಿವಾರಣೆಗೆಂದೇ ಚಿಕಿತ್ಸೆ ನೀಡಲು ಹುಟ್ಟಿಕೊಳ್ಳುತ್ತಿರುವ ಆಸ್ಪತ್ರೆಗಳು ಈ ಮಾರುಕಟ್ಟೆಗಿರುವ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತಿವೆ. ಹೇಗಾದರೂ ಸರಿ, ತಮ್ಮದೇ ಮಗು ಪಡೆಯಬೇಕೆಂಬ ಜಿದ್ದಿಗೆ ಬೀಳುವ ದಂಪತಿಗೆ ಮಗು ಹೊಂದದೆಯೂ ನೆಮ್ಮದಿಯ ಬದುಕು ಸಾಗಿಸುವ ಅಥವಾ ದತ್ತು ಪ್ರಕ್ರಿಯೆ ಮೂಲಕ ಮಗು ಹೊಂದುವ ಸಾಧ್ಯತೆಯತ್ತ ಸರಾಗವಾಗಿ ಹೊರಳಲು ಅನುವು ಮಾಡಿಕೊಡಬೇಕಿದ್ದ ಚಿಂತನಾಕ್ರಮ ರೂಢಿಸಿಕೊಳ್ಳಲು ಸಮಾಜ ನೆರವಾಗಬಾರದೇ?

ಈ ಬಂಜೆತನ ನಿವಾರಣಾ ಮಾರುಕಟ್ಟೆಯು ಆಲೋಚನೆಯಲ್ಲಿ ಆಧುನಿಕತೆ ಮೈಗೂಡಿಸಿಕೊಳ್ಳದೆ ಆಧುನಿಕ ತಂತ್ರಜ್ಞಾನವನ್ನಷ್ಟೇ ಅಪ್ಪಿಕೊಳ್ಳಲು ಹಂಬಲಿಸುವ ಸಮಾಜದ ಧೋರಣೆಗೂ ಕನ್ನಡಿ ಹಿಡಿಯುತ್ತಿದೆ.

ಹೇಗಾದರೂ ಮಕ್ಕಳನ್ನು ಹೊಂದಲೇಬೇಕೆಂಬ ಹಂಬಲದಿಂದ ತಮ್ಮ ಆರೋಗ್ಯ ಹಾಗೂ ದುಡಿಮೆಯ ಬಹುಪಾಲು ಹಣವನ್ನು ಅದಕ್ಕಾಗಿ ವ್ಯಯಿಸುವ ನಿರ್ಧಾರವನ್ನು ಹಲವರು ಕೈಗೊಳ್ಳುತ್ತಿರುವ ವೇಳೆಯಲ್ಲಿಯೇ, ತಮಗೆ ಮಕ್ಕಳೇ ಬೇಡ ಎಂಬ ನಿಲುವಿಗೆ ಕೆಲವರಾದರೂ ಅಂಟಿಕೊಳ್ಳುತ್ತಿರುವುದೂ ಗಮನಾರ್ಹ. ಕೆಲವು ದಶಕಗಳಿಂದೀಚೆಗೆ ಜಗತ್ತಿನಾದ್ಯಂತ ಹೆಚ್ಚೇನೂ ಸದ್ದು ಮಾಡದೆ ಪಸರಿಸುತ್ತಿರುವ ‘ಆ್ಯಂಟಿನ್ಯಾಟಲಿಸಂ’ (ಮಕ್ಕಳು ಬೇಡ ಎಂಬ ಮನಃಸ್ಥಿತಿ) ಚಿಂತನೆಯಿಂದ ಪ್ರಭಾವಿತರಾದವರು ಕೂಡ ನಮ್ಮಲ್ಲಿದ್ದಾರೆ. ಹೀಗೆ ಯೋಚಿಸುವ ಜನರ ಗುಂಪಿನ ಸಭೆ ಕಳೆದ ವರ್ಷ ಬೆಂಗಳೂರಿನಲ್ಲೂ ಜರುಗಿತ್ತು. ಮಕ್ಕಳನ್ನು ಹೊಂದಲು ತಾವು ಏಕೆ ಸಿದ್ಧರಿಲ್ಲ ಎಂಬುದಕ್ಕೆ, ಈ ಚಿಂತನೆಗೆ ತೆರೆದುಕೊಂಡವರು ನೀಡುವ ಕಾರಣಗಳ ಪಟ್ಟಿ ಕೂಡ ಆಸಕ್ತಿದಾಯಕವಾಗಿದೆ. ‘ನಾವು ರೂಪಿಸಿರುವ ವಿಷಮ ಸಮಾಜಕ್ಕೆ ಮತ್ತೊಂದು ಜೀವ ಬಂದು ಬಳಲುವುದನ್ನು ಈ ಮೂಲಕ ತಪ್ಪಿಸುತ್ತಿದ್ದೇವೆ’ ಎನ್ನುವ ಇವರ ವಾದವನ್ನು ತಳ್ಳಿಹಾಕಲು ಸಾಧ್ಯವಿರದಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಜನರ ನಡುವಿನ ಸೌಹಾರ್ದವನ್ನು ಹಾಳುಗೆಡಹುವ ಧಾರ್ಮಿಕ ಮೂಲಭೂತವಾದಿಗಳೇ ಹೆಚ್ಚೆಚ್ಚು ಮಕ್ಕಳನ್ನು ಹೆರಲು ಕರೆ ನೀಡುವುದನ್ನು ಗಮನಿಸಿದರೆ, ಪಿತೃಪ್ರಧಾನ ಚಿಂತನೆಯ ಕೊಂಡಿಗಳು ಹೇಗೆಲ್ಲ ಚಾಚಿಕೊಂಡಿವೆ ಎಂಬುದರ ಅರಿವಾಗುವುದು.

ಮಕ್ಕಳನ್ನು ಹೊಂದುವುದು ಸಾಮಾಜಿಕ ಒತ್ತಡವಾಗದೆ ವ್ಯಕ್ತಿಗತ ಆಯ್ಕೆಯಾಗಿ ಮಾತ್ರ ಪರಿಗಣಿಸಲ್ಪಟ್ಟರೆ, ಈ ಕಾರಣಕ್ಕಾಗಿ ಮಾನಸಿಕ ಕ್ಷೋಭೆಗೊಳಗಾಗುವ ಜನರ ಬದುಕಿನಲ್ಲಿ ತುಸುವಾದರೂ ನೆಮ್ಮದಿ ಮೂಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)