ಸೋಮವಾರ, ಜುಲೈ 4, 2022
23 °C
ಷರತ್ತಿಲ್ಲದೆ ನಮ್ಮನ್ನು ಪ್ರೀತಿಸುವ ಸಾಕುಪ್ರಾಣಿಗಳು ನಮ್ಮ ಮನಸ್ಸನ್ನು ನಿರಾಳವಾಗಿ ಇರಿಸುತ್ತವೆ

ಸಂಗತ: ಮುದ್ದು ಮಾಡೋಣ, ಮಾನವೀಯವಾಗೋಣ!

ಬಿ.ಎಸ್.ಭಗವಾನ್ Updated:

ಅಕ್ಷರ ಗಾತ್ರ : | |

Prajavani

ಪಾಳು ಮನೆಯೆಂದು ಹಿಂದೊಮ್ಮೆ ತೊರೆದವರಿಗೆ ಅಲ್ಲಿ ಬೆಕ್ಕಿನ ಮಿಯಾಂವ್ ಧ್ವನಿ ಕೇಳಿಸುತ್ತದೆ. ಒಡನೆಯೆ ಅವರು ಆ ಮನೆಗೆ ವಾಪಸಾಗಲು ನಿರ್ಧರಿಸುತ್ತಾರೆ. ಇದು ಸಾಕುಪ್ರಾಣಿಗಳಿಗೂ ಮನುಷ್ಯರಿಗೂ ಇರುವ ಅವಿನಾಭಾವ ನಂಟನ್ನು ಅನಾವರಣಗೊಳಿಸುವ ಚಿತ್ರಣ. ಸಾಕುಪ್ರಾಣಿಗಳು ಮಾನವೀಯವಲ್ಲ, ನಿಜ. ಆದರೆ ಮನುಷ್ಯನ ಹಲವು ಗುಣಗಳನ್ನು ಮೈಗೂಡಿಸಿಕೊಂಡ ಅವು ದಿಟ್ಟ ವ್ಯಕ್ತಿತ್ವದವು. ಅವುಗಳ ಸಂವೇದನೆಗಳು, ಆದ್ಯತೆಗಳು ಗಾಢವಾದವು.

ಇತರರ ದೃಷ್ಟಿಯಲ್ಲಿ ನಾಯಿ, ಬೆಕ್ಕು, ಮೊಲ, ಗಿಣಿ, ಪಾರಿವಾಳ ಮೊದಲಾದವು ಸಾಕಿದ ಪ್ರಾಣಿಗಳು. ಆದರೆ ಅವನ್ನು ಹೊಂದಿರುವವರಿಗೆ ಅವು ಕುಟುಂಬದ ಸದಸ್ಯರು. ಸಾಕುಪ್ರಾಣಿಗಳು ಷರತ್ತಿಲ್ಲದೆ ಪ್ರೀತಿಸುತ್ತವೆ. ತಮ್ಮನ್ನು ಸಾಕಿದ ಒಡೆಯನಿಗೆ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಸರ್ವಸ್ವವನ್ನೂ ಅರ್ಪಿಸುತ್ತವೆ. ಸಾಕುಪ್ರಾಣಿಗಳು ನಮ್ಮ ಮನಸ್ಸನ್ನು ನಿರಾಳವಾಗಿಯೂ ಇರಿಸುತ್ತವೆ. ತನ್ಮೂಲಕ ನಮ್ಮನ್ನು ಆರೋಗ್ಯವಾಗಿ ಇರಿಸುತ್ತವೆ.

ಮುದ್ದುಪ್ರಾಣಿಗಳೊಂದಿಗೆ ಸಂವಹನ ಕಷ್ಟವೆಂದು ಹಲವರ ಅಂಬೋಣ. ಹಾಗೆ ನೋಡಿದರೆ ಮನುಷ್ಯ- ಮನುಷ್ಯರ ನಡುವೆ ತಾನೆ ಅದೆಷ್ಟು ಸುಗಮ ಸಂವಹನ ಸಾಧ್ಯವಾಗಿದೆ? ನಾಯಿಯು ಮನುಷ್ಯನ ಒಡನಾಡಿಯಾಗಿದೆ. ತನ್ನೊಡೆಯನ ಅಳು, ನಗುವಿನಲ್ಲಿ ಒಂದಾಗುತ್ತದೆ. ಶ್ವಾನಗಳು ತಮ್ಮನ್ನು ಅರ್ಥೈಸಿಕೊಳ್ಳುವುದು ಹೇಗೆಂದು ಮನುಷ್ಯರಿಗೆ ಬೋಧಿಸುತ್ತವೆ.

ಅಮೆರಿಕದ ಪ್ರಸಿದ್ಧ ಕಾದಂಬರಿಕಾರ ಮತ್ತು ಹಾಸ್ಯಪಟು ಕಿಂಕಿ ಫ್ರೈಡ್‍ಮನ್ ‘ಹಣ ತೆತ್ತು ಒಳ್ಳೆಯ ನಾಯಿ ಕೊಳ್ಳಬಹುದು. ಆದರೆ ಅದು ಬಾಲ ಅಲ್ಲಾಡಿಸುವುದು ಮನುಷ್ಯ ಅದರ ಮೇಲಿಟ್ಟ ಪ್ರೀತಿ ಮತ್ತು ವಿಶ್ವಾಸದಿಂದಲೇ’ ಎನ್ನುತ್ತಾರೆ.

ಎಲ್ಲ ಪ್ರಾಣಿಗಳಿಗೂ ಗೌರವಯುತವಾಗಿ ಬದುಕುವ ಹಕ್ಕಿದೆ. 1959ರಲ್ಲಿ ಸ್ಪೇನ್‍ನಲ್ಲಿ ‘ವಿಶ್ವ ಪಶುವೈದ್ಯಕೀಯ ಸಂಘ’ (ಡಬ್ಲ್ಯುವಿಎ) ಸ್ಥಾಪಿತವಾಯಿತು. 2000ದಲ್ಲಿ ಸಾಕುಪ್ರಾಣಿಗಳ ಯೋಗಕ್ಷೇಮದ ನಿಗಾ ದೃಷ್ಟಿಯಿಂದ ಪ್ರತೀ ವರ್ಷ ಏಪ್ರಿಲ್ ಕೊನೆಯ ಶನಿವಾರ ‘ವಿಶ್ವ ಪಶುವೈದ್ಯಕೀಯ ದಿನ’ ಆಚರಿಸಬೇಕೆಂದು ಸಂಘ ನಿರ್ಣಯಿಸಿತು. ಈ ಬಾರಿ ಇಂದು (ಏ. 30) ಆ ಸಂಭ್ರಮ. ಪ್ರಾಣಿಗಳ ಆರೋಗ್ಯ ಪಾಲನೆಯಲ್ಲಿ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಲ್ಲಿ ಶ್ರೀಸಾಮಾನ್ಯರ ಹೊಣೆಗಾರಿಕೆಗಳ ಕುರಿತು ಜಾಗೃತಿ ಮೂಡಿಸುವುದೇ ಈ ಸಂದರ್ಭದ ಧ್ಯೇಯ. ‘ಪಶುವೈದ್ಯಕೀಯ ಶುಶ್ರೂಷೆಯ ಸಬಲೀಕರಣ’ ಘೋಷಣಾ ವಾಕ್ಯದೊಂದಿಗೆ ಅಭಿಯಾನ. ನಾಯಿಯೊಡನೆ ನಡಿಗೆ, ಮೊಲದೊಂದಿಗೆ ಸೂರ್ಯಸ್ನಾನ, ಬೆಕ್ಕಿನೊಂದಿಗೆ ಆಟ, ಗಿಳಿಯನ್ನು ಹೆಗಲಿಗೇರಿಸಿಕೊಳ್ಳುವುದು ಚೇತೋಹಾರಿ.

ಸಾಕುಪ್ರಾಣಿಗಳನ್ನು ಖರೀದಿಸುವ ಬದಲು ಅನಾಥವಾಗಿ ಅಡ್ಡಾಡುತ್ತಾ ಇರುವ ಪ್ರಾಣಿಗಳನ್ನು ಸಾಕುವುದರಿಂದ ಅವಕ್ಕೆ ಸುರಕ್ಷಿತ ಸ್ಥಳಾವಕಾಶ, ಪೌಷ್ಟಿಕ ಆಹಾರ, ಶುದ್ಧ ನೀರು ಒದಗುವುದು. ಜೊತೆಗೆ ಆರೋಗ್ಯ ಸೇವೆಯೂ ಲಭಿಸೀತು. ಉತ್ಸವ, ವಿಜಯೋತ್ಸವ
ಗಳೇ ಇರಲಿ ಅಥವಾ ಪ್ರತಿಭಟನೆ, ರ್‍ಯಾಲಿಗಳೇ ಇರಲಿ ಪ್ರಾಣಿಗಳನ್ನು ಕೈಬಿಡುವುದೇ ಯುಕ್ತ. ಇಂತಲ್ಲಿ ಅಮಾಯಕ ಪ್ರಾಣಿಗಳ ಸಹಭಾಗಿತ್ವಕ್ಕೆ ಏನಾದರೂ ಅರ್ಥವಿದೆಯೇ? ಅವಕ್ಕೆ ವೃಥಾ ಹಿಂಸೆ, ಶಿಕ್ಷೆಯೇ ಹೌದು.

ಮಕ್ಕಳನ್ನು ಉದ್ಯಾನ, ಪ್ರಾಣಿಧಾಮಗಳಿಗೆ ಕರೆದೊಯ್ಯುವಾಗ ಪೋಷಕರು ಆನೆ, ಕುದುರೆ, ಒಂಟೆ ಮೇಲಿನ ಧಿಮಾಕು ಸವಾರಿ, ಸಫಾರಿಗೆ ಆಕರ್ಷಿತರಾಗಬಾರದು. ಮೃಗಾಲಯ, ಸರ್ಕಸ್ ಮನುಷ್ಯರ ಅರಿವಿಗೆ ವಿನಾ ಮನರಂಜನೆಗಲ್ಲ. ಜನಪದರು ಮನೆಯ ಮುಂಬಾಗಿಲಿನಲ್ಲಿ ಕಾಳು, ಹಣ್ಣಿನ ಸಿಪ್ಪೆ ಚೆಲ್ಲುತ್ತಿದ್ದರು.
ನೀರು ತುಂಬಿಸಿದ ಕಲ್ಲುತೊಟ್ಟಿ ಇರಿಸುತ್ತಿದ್ದರು. ಬೀಡಾಡಿ ದನ, ಎಮ್ಮೆಗಳಾದಿಯಾಗಿ ಪ್ರಾಣಿ ಪಕ್ಷಿಗಳು ಅಲ್ಲಿಗೆ ಬಂದು ಅಷ್ಟು ಹಸಿವು, ನೀರಡಿಕೆ ನಿವಾರಿಸಿಕೊಳ್ಳುತ್ತಿದ್ದವು. ಅಪರೂಪಕ್ಕಾದರೂ ಮಹಾನಗರ
ಗಳಲ್ಲೂ ಈ ಪರಿಪಾಟ ಕಾಣಬಹುದು.

ಕೋಗಿಲೆ ಶ್ರೇಷ್ಠ, ಕಾಗೆ ಕನಿಷ್ಠ ಎನ್ನುವ ಭೇದ ಪ್ರಕೃತಿಗಿಲ್ಲ. ಅಂತೆಯೆ ಗೂಬೆ ಅನಿಷ್ಟವಾಗಲು ಸಾಧ್ಯವಿಲ್ಲ. ವಾಸ್ತವವೆಂದರೆ ಗೂಬೆ ಹೊಲಗದ್ದೆಗಳಲ್ಲಿ ವಿಶೇಷವಾಗಿ ಇರುಳಿನಲ್ಲಿ ಅಡ್ಡಾಡುವ ಇಲಿ, ಹೆಗ್ಗಣ
ಗಳನ್ನು ಭಕ್ಷಿಸಿ ಬದುಕುತ್ತದೆ. ಪರಿಸರ ಸಮತೋಲನ ವನ್ನು ಕಾಪಾಡುವ ಅದು ರೈತನ ಮಿತ್ರ. ಯಾವುದೇ ಸಾಕುಪ್ರಾಣಿಯನ್ನು ಕಳೆದುಕೊಳ್ಳುವುದೆಂದರೆ ಮನೆ ಮಂದಿಯನ್ನು ಕಳೆದುಕೊಂಡಷ್ಟೇ ಯಾತನಾಮಯ. ಏಕೆಂದರೆ ನಾವು ಅವನ್ನು ಪ್ರೀತಿಸುತ್ತಿರುತ್ತೇವೆ, ಪ್ರೀತಿಸುವಂತೆ ನಟಿಸುವುದಿಲ್ಲ!

ಪ್ರಾಣಿನಿಂದನೆ ಬಹುರೂಪಿ. ತಮ್ಮ ಶ್ವಾನವನ್ನು ಅದಕ್ಕೂ ಬಲಿಷ್ಠ ಪ್ರಾಣಿಗಳ ಬೇಟೆ, ನಿಯಂತ್ರಣಕ್ಕೆ ಬಳಸಿದರೂ ನಿಂದನೆಯೆ. ‘ಅತ್ತೆ ಮೇಲಿನ ಕೋಪ ಕೊತ್ತಿಯ ಮೇಲೆ’ ಎನ್ನುವಂತೆ ಯಾರದೋ ಮೇಲಿನ ದ್ವೇಷಕ್ಕೆ ಸಾಕುಪ್ರಾಣಿಗಳು ವಿನಾಕಾರಣ ಹೊಡೆತ, ಬಡಿತಕ್ಕೆ ಗುರಿಯಾಗುವುದುಂಟು. ಇಂಥ ಯಾವುದೇ ನಿಂದನೆಯು ಮನೆ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವುದು. ತಮ್ಮ ಶ್ವಾನವೇ ಚುರುಕೆಂಬ ಬೀಗು ಅಸಹಾಯಕ ಬೀದಿ ನಾಯಿಗಳನ್ನು ಹೆದರಿಸುವಲ್ಲಿ ಪರ್ಯಾಪ್ತವಾಗಬೇಕೇ?

ತಾಸಿಗೆ ಸರಾಸರಿ ಮೂರು ಕಿ.ಮೀ. ವೇಗದಲ್ಲಿ ಸಾಗುವ ಸಾಂಪ್ರದಾಯಿಕ ಜೋಡೆತ್ತಿನ ಗಾಡಿಯೊಂದು ಒಂದು ಟನ್ನಿಗಿಂತಲೂ ಹೆಚ್ಚಿನ ಭಾರ ಎಳೆಯಲಾಗದು. ಉಸಿರುಗಟ್ಟಿಸುವಷ್ಟು ಅಧಿಕ ಹೊರೆ ಪೇರಿಸು
ವುದಲ್ಲದೆ ಹೆಚ್ಚಿನ ತಾಸುಗಳು ಎಳೆತದಲ್ಲಿ ತೊಡಗಿಸುವ ಸಂದರ್ಭಗಳೇ ಹೆಚ್ಚು. ಸಾಗಾಣಿಕೆಗೆ ಬಳಸುವ ಎಲ್ಲ ಪ್ರಾಣಿಗಳ ಕಥೆಯೂ ಇದೇ. ಬಳಕೆ ಮಾನವೀಯವಾದರೆ ನಮಗೇ ಆತ್ಮತೃಪ್ತಿ. ಮರದ ಚಕ್ರಗಳ ಬದಲು ಟಯರ್ ಚಕ್ರಗಳ ಅಳವಡಿಕೆ ಪ್ರಾಣಿದಯೆಯತ್ತ ದಿಟ್ಟ ಹೆಜ್ಜೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.