ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರ್ಯಾದೆ’ಗಾಗಿ ಬೇಕು ಜನಾಂದೋಲನ

‘ಮರ್ಯಾದೆಗೇಡು ಹತ್ಯೆ’ ತಡೆಗೆ ಪ್ರತ್ಯೇಕ ಕಾನೂನು ರೂಪಿಸಬೇಕಾಗಿದೆ
Last Updated 21 ಜುಲೈ 2019, 20:15 IST
ಅಕ್ಷರ ಗಾತ್ರ

ತನ್ನ ಮಗಳು ಬೇರೊಂದು ಜಾತಿಯ ಹುಡುಗನನ್ನು ವಿವಾಹವಾಗಿದ್ದಕ್ಕೆ, ಜಾತಿವಾದಿ ತಂದೆಯೊಬ್ಬ ತನ್ನ ಅಳಿಯನನ್ನು ಕೊಲ್ಲಲು ₹ 1.13 ಕೋಟಿ ಸುಪಾರಿ ಕೊಟ್ಟಿದ್ದ ಪ್ರಸಂಗವೊಂದು ತೆಲಂಗಾಣದಲ್ಲಿ ಕಳೆದ ವರ್ಷ ಬೆಳಕಿಗೆ ಬಂದಿತ್ತು. ಗರ್ಭಿಣಿ ಮಗಳ ಕಣ್ಣೆದುರಿ ನಲ್ಲಿಯೇ ಅಳಿಯನನ್ನು ಕೊನೆಗೆ ಕೊಲ್ಲಿಸಿಯೇಬಿಟ್ಟ. ಈ ಕೊಲೆಗೆ ಪ್ರಮುಖ ಕಾರಣ, ತಾನು ‘ಮೇಲ್ಜಾತಿ’ ಹಾಗೂ ತನ್ನ ಮಗಳು ಮದುವೆಯಾದದ್ದು ದಲಿತನನ್ನು ಎಂಬುದೇ ಆಗಿತ್ತು. ಇಂತಹ ಕೊಲೆಗಳಿಗೆ ನಮ್ಮ ಸಮಾಜ ‘ಮರ್ಯಾದಾ ಹತ್ಯೆ’ ಎಂಬ ಅಸಂಬದ್ಧ ಹೆಸರನ್ನು ಬೇರೆ ಇಟ್ಟುಬಿಟ್ಟಿದೆ. ಆದರೆ ಈ ರೀತಿಯ ಕೊಲೆಗಳು ದೇಶದ ಮರ್ಯಾದೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುವ ‘ಮರ್ಯಾದೆಗೇಡು ಹತ್ಯೆ’ಗಳಾಗಿವೆ.

ಜಾತಿ, ಧರ್ಮ, ಜನಾಂಗ ಹಾಗೂ ವರ್ಣದ ಹೆಸರಿನಲ್ಲಿ ಇಂತಹ ಹತ್ಯೆಗಳು ವಿಶ್ವದಾದ್ಯಂತ ನಡೆಯುತ್ತಿವೆ. ನಮ್ಮ ದೇಶದಲ್ಲಂತೂ ಇದಕ್ಕೆ ಜಾತಿಯೇ ಮೂಲ ಕಾರಣವಾಗಿದೆ. ಧರ್ಮದ ಕಾರಣಕ್ಕೂ ಆಗಾಗ ಹತ್ಯೆಗಳಾಗಿವೆ. ಈ ಮರ್ಯಾದೆಗೇಡು ಹತ್ಯೆಗಳಿಗೆ ಮುಖ್ಯ ಕಾರಣ ‘ಶುದ್ಧ ರಕ್ತ’ವೆಂಬ ಭ್ರಮೆ. ಸತ್ಯವೆಂದರೆ, ಈಗ ಯಾವುದೇ ಖಂಡದಲ್ಲಿಯೂ ಶುದ್ಧ ರಕ್ತದ ಜನಾಂಗವೇ ಇಲ್ಲ. ಎಲ್ಲೆಲ್ಲೂ ಸಂಕರಕ್ಕೊಳಗಾದ ಜನಾಂಗವೇ ಜೀವಿಸುತ್ತಿದೆ. ಆದರೂ ಜಗತ್ತಿನ ಸಂಪ್ರದಾಯವಾದಿಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಗಾಗಿ ‘ಶುದ್ಧ ರಕ್ತ’ವೆಂಬ ಅಮಲನ್ನು ಮುಗ್ಧರ ಮನದಲ್ಲಿ ಸಮರ್ಥವಾಗಿ ತುಂಬುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಭಾರತದಲ್ಲಿ ಸೃಷ್ಟಿಯಾಗಿರುವ, ಜನರನ್ನು ಒಡೆದು ಆಳುವ ಜಾತಿ ಪದ್ಧತಿಯು ಈ ‘ಶುದ್ಧ ರಕ್ತ’ವೆಂಬ ಬಲಿಪೀಠದಲ್ಲಿ ‘ಮರ್ಯಾದೆ’ಯ ಹೆಸರಿನಲ್ಲಿ ಯುವ ಜೀವಗಳನ್ನು ಬಲಿ ಪಡೆಯುತ್ತಿದೆ.

2011ರ ಜನಗಣತಿಯ ಪ್ರಕಾರ, ದೇಶದ ಜನಸಂಖ್ಯೆಯ ಶೇ 41ರಷ್ಟು ಮಂದಿ 20 ವರ್ಷದೊಳಗಿನ ಯುವಕ–ಯುವತಿಯರಾಗಿದ್ದಾರೆ. ದೇಶವನ್ನು ಸದೃಢವಾಗಿ ಕಟ್ಟಲು ಈ ಯುವ ಮನ ಸ್ಸುಗಳಿಗೆ ಕರೆ ಕೊಡುವುದಕ್ಕೆ ಸಕಾಲ ಇದು. ಆದರೆ ಯುವಜನರಲ್ಲಿ ಆಧುನಿಕತೆ, ವೈಜ್ಞಾನಿಕ ದೃಷ್ಟಿಕೋನ ಬೆಳೆಸುವ ಬದಲು ನಮ್ಮ ಹಿರಿತಲೆಗಳು, ಜಾತಿಯನ್ನು ಮುಂದು ಮಾಡಿಕೊಂಡು ಸಾಮಾಜಿಕವಾಗಿ ಭಯ ಮೂಡಿಸುವ ಕೃತ್ಯಕ್ಕೆ ಕೈ ಹಾಕಿವೆ. ಇದು ಯುವಶಕ್ತಿಯ ಸಾಮರ್ಥ್ಯವನ್ನು ಅಕ್ಷರಶಃ ಕುಂದಿಸುತ್ತದೆ. ಇಂತಹ ಭಯೋತ್ಪಾದನೆಯು ಸಂಘಟಿತವಾಗಿ ‘ಖಾಪ್ ಪಂಚಾಯತ್’, ‘ಶಾಲಿಷಿ’, ‘ಕಟ್ಟಾ ಪಂಚಾಯತ್’ಗಳ ಮೂಲಕ ಹರಡುತ್ತಾ ಭಾರತದ ಸಂವಿಧಾನಕ್ಕೇ ಸಡ್ಡು ಹೊಡೆಯುತ್ತಾ ಬಂದಿದೆ.

‘ಆನರ್‌ ಬೇಸ್ಡ್‌ ವಯೊಲೆನ್ಸ್‌ ಅವೇರ್‌ನೆಸ್‌ ನೆಟ್‌ವರ್ಕ್‌’ ಪ್ರಕಾರ, ಪ್ರಪಂಚದಾದ್ಯಂತ ವರ್ಷಕ್ಕೆ ಸರಾಸರಿ 5,000 ‘ಮರ್ಯಾದೆಗೇಡು ಹತ್ಯೆ’ಗಳು ನಡೆಯುತ್ತವೆ. ಅವುಗಳಲ್ಲಿ ಭಾರತದಲ್ಲಿಯೇ 1,000 ಹತ್ಯೆಗಳಾಗುತ್ತಿವೆ. ಪಾಕಿಸ್ತಾನದಲ್ಲಿಯೂ 1,000 ಹತ್ಯೆಗಳಾಗುತ್ತಿವೆ. ಭಾರತದ ಸಂವಿಧಾನ ಮತ್ತು ಹಿಂದೂ ವಿವಾಹ ಕಾಯ್ದೆಯು ವ್ಯಕ್ತಿಗೆ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಎಲ್ಲ ಸ್ವಾತಂತ್ರ್ಯವನ್ನು ನೀಡಿದ್ದರೂ ಜಾತಿ ಕುರಿತಾದ ಸಂಪ್ರದಾಯವಾದಿಗಳ ಅಂಧಪ್ರಜ್ಞೆಯು ಅದಕ್ಕಿನ್ನೂ ಹಸಿರು ನಿಶಾನೆ ತೋರದೆ, ಕರುಳ ಬಳ್ಳಿಗಳನ್ನೇ ಕ್ರೂರವಾಗಿ ಹತ್ಯೆ ಮಾಡುವ ಹಂತಕ್ಕೆ ಇಳಿದಿದೆ. ಕೊಲೆ ಎಂಬುದು ‘ಮರ್ಯಾದೆ’ ತಂದುಕೊಡುವ ಅಸ್ತ್ರವಾಗಿರುವುದು ಇಡೀ ದೇಶಕ್ಕೆ ಮಾಡುತ್ತಿರುವ ದ್ರೋಹವಾಗಿದೆ.

ಉತ್ತರಪ್ರದೇಶದಲ್ಲಿ ಮೇಲ್ವರ್ಗದ ಶಾಸಕರೊಬ್ಬರ ಪುತ್ರಿಯು ದಲಿತ ಯುವಕನನ್ನು ಪ್ರೀತಿಸಿ, ಮದುವೆಯಾಗಲು ಮನಸ್ಸು ಮಾಡಿರುವುದಕ್ಕೆ ಚಿತ್ರಹಿಂಸೆ ಅನುಭವಿಸುತ್ತಿರುವ ಘಟನೆ ಇತ್ತೀಚೆಗೆ ಬಹಿರಂಗವಾಗಿದೆ. ಈ ಸಂಗತಿಯನ್ನು ಸ್ವತಃ ಯುವತಿಯೇ ವಿಡಿಯೊ ಮೂಲಕ ಹಂಚಿಕೊಂಡಿದ್ದಳು. ಪೊಲೀಸರ ಮೊರೆ ಹೋದ ಈ ಪ್ರೇಮಿಗಳ ಮೇಲೆ ಕೋರ್ಟ್ ಆವರಣದಲ್ಲಿಯೇ ತಂದೆಯ ಕಡೆಯವರು ಹಲ್ಲೆ ನಡೆಸಿದ ಸುದ್ದಿಯೂ ಬಿತ್ತರವಾಗಿದೆ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಜಾತಿ ಮೀರಿ ವೋಟುಗಳು ಚಲಾವಣೆಯಾಗಿವೆ ಎನ್ನುತ್ತಿದ್ದ ರಾಜಕೀಯ ವಿಶ್ಲೇಷಕರು ಮತ್ತು ನಾಯಕರು ಇಂತಹ ಘಟನೆಗಳನ್ನು ತಮ್ಮ ಸ್ಮೃತಿಪಟಲದೊಳಕ್ಕೆ ಬಿಟ್ಟು
ಕೊಳ್ಳುವುದೇ ಇಲ್ಲ ಎನಿಸುತ್ತದೆ.

‘ಮರ್ಯಾದೆಗೇಡು ಹತ್ಯೆ’ಯಂತಹ ಕೃತ್ಯಗಳ ತಡೆಗೆ ಪ್ರತ್ಯೇಕ ಕಾನೂನು ತುರ್ತಾಗಿ ಬೇಕಾಗಿದೆ. 2009ರಲ್ಲಿ ಆಗಿನ ಗೃಹ ಸಚಿವ ಪಿ.ಚಿದಂಬರಂ ಅವರ ಮುಂದೆ ‘ಮರ್ಯಾದೆಗೇಡು ಹತ್ಯೆ’ ತಡೆಗೆ ಪ್ರತ್ಯೇಕ ಕಾನೂನು ರಚನೆಯಾಗಬೇಕೆಂಬ ಪ್ರಸ್ತಾವವಿತ್ತು. ರಾಜ್ಯಗಳು ಇಂತಹ ಪ್ರಕರಣಗಳಿಗೆ ಪ್ರತ್ಯೇಕ ಕಾನೂನು ರೂಪಿಸಬಹುದೆಂಬ ಆದೇಶವೂ 2010ರಲ್ಲಿ ಹೊರಬಿತ್ತು. ಆದರೆ, ಯಾವ ರಾಜ್ಯವೂ ಕಾನೂನು ರೂಪಿಸಲಿಲ್ಲ.

ಇಲ್ಲಿಯವರೆಗೆ ನಡೆದಿರುವ ಇಂತಹ ಹತ್ಯೆಗಳಲ್ಲಿ ಗಂಡು ಅಥವಾ ಹೆಣ್ಣು ಇಬ್ಬರಲ್ಲಿ ಒಬ್ಬರು ‘ದಲಿತ’ರಾಗಿರುವ ಪ್ರಕರಣಗಳೇ ಹೆಚ್ಚಾಗಿವೆ. ಇದರಿಂದ ಕೇಂದ್ರವೇ ಇದಕ್ಕೆ ಪ್ರತ್ಯೇಕ ಕಾನೂನು ರೂಪಿಸಬೇಕೆಂಬ ಮಾನವ ಹಕ್ಕು ಹೋರಾಟಗಾರರ ಹಕ್ಕೊತ್ತಾಯಕ್ಕೆ ಮಣಿದು, ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರವು 2015ರಲ್ಲಿ ರಾಜ್ಯಗಳನ್ನು ಕೇಳಿಕೊಂಡಿತ್ತು. ಆದರೆ ಇದುವರೆಗೆ ಆ ಕಾಯ್ದೆಯ ಬಗ್ಗೆ ಮಾಹಿತಿಯೇ ಬಂದಿಲ್ಲ. ‘ಮರ್ಯಾದೆಗೇಡು ಹತ್ಯೆ’ ತಡೆಗೆ ಆದಷ್ಟು ಬೇಗ ಪ್ರತ್ಯೇಕವಾದ ಕಠಿಣ ಕಾನೂನು ರೂಪಿಸಿ, ನಮ್ಮ ದೇಶದ ‘ಮರ್ಯಾದೆ’ಯನ್ನು ಉಳಿಸಬೇಕಾದುದು ಇಂದಿನ ತುರ್ತಾಗಿದೆ. ಆದರೆ, ಜನಮಾನಸದಲ್ಲಿರುವ ಭ್ರಮೆಗಳನ್ನು ಸುಟ್ಟುಹಾಕಲು ಬರೀ ಕಾನೂನಿಗೆ ಸಾಧ್ಯವಿಲ್ಲ. ಹೀಗಾಗಿ, ಇಂತಹ ಹತ್ಯೆಗಳ ವಿರುದ್ಧ ಜನಾಂದೋಲನ ರೂಪುತಾಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT