ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಿರಿಗರ ಬಡಿದವರು, ಅನ್ನದೇವರ ಮರೆತವರು

ಅಪೌಷ್ಟಿಕತೆಗೂ ಆಹಾರದ ಪೋಲಿಗೂ ನೇರವಾದ ಸಂಬಂಧ ಇರುವುದನ್ನು ಅಧ್ಯಯನ ವರದಿಗಳು ದೃಢಪಡಿಸಿವೆ
ಡಾ. ಲಕ್ಷ್ಮಣ ವಿ.ಎ.
Published 28 ಫೆಬ್ರುವರಿ 2024, 23:30 IST
Last Updated 28 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ದೇಶದಲ್ಲಿ ಒಬ್ಬ ನಾಗರಿಕನಿಗೆ ಸಿಗಬೇಕಾದ ಕನಿಷ್ಠ ಆಹಾರದ ಸಂಪನ್ಮೂಲ ಸರ್ಕಾರದ ಬಳಿ ಇದ್ದರೂ ಅದನ್ನು ಅರ್ಹರಿಗೆ ತಲಪಿಸುವಲ್ಲಿ ವ್ಯವಸ್ಥೆ ವಿಫಲವಾಗುತ್ತಿದೆ. ಆಹಾರ ವಿತರಣೆಯಲ್ಲಿನ ಗೊಂದಲ, ಪಡಿತರ ಚೀಟಿಯ ಅಲಭ್ಯ, ಅಪೌಷ್ಟಿಕತೆ ಹೆಚ್ಚಳ, ಶಿಶು ಮರಣ ಪ್ರಮಾಣ ಹೆಚ್ಚಳದಂತಹ ಸಂಗತಿಗಳು ಮಾಧ್ಯಮಗಳಲ್ಲಿ ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಅಪೌಷ್ಟಿಕತೆಗೂ ಆಹಾರದ ಪೋಲಿಗೂ ನೇರವಾದ ಸಂಬಂಧ ಇರುವುದನ್ನು ಅಧ್ಯಯನ ವರದಿಗಳು ದೃಢಪಡಿಸಿವೆ.

ಬೆಂಗಳೂರಿನಲ್ಲಿ ಆತ್ಮೀಯರೊಬ್ಬರ ಮದುವೆ ಸಮಾರಂಭಕ್ಕೆ ಹೋಗಿದ್ದೆ. ಅದೊಂದು ವೈಭವೋಪೇತ ಮದುವೆ. ಭರ್ಜರಿ ಭೂರಿ ಭೋಜನ. ಸ್ವಾಗತ ಪೇಯ, ಕುರುಕಲು ತಿಂಡಿ, ಹತ್ತು ಹಲವು ತರಹದ ಭಕ್ಷ್ಯ ಭೋಜ್ಯಗಳು. ಇನ್ನು ಊಟದ ಮೇಜಿನ ಮೇಲಂತೂ ಬಗೆ ಬಗೆಯ ಸಿಹಿ, ಖಾರದ ಖಾದ್ಯ, ಪೇಯಗಳು. ತಿನ್ನಲು ಬಹು ಆಯ್ಕೆಗಳಿದ್ದ ಈ ಅವಕಾಶದಲ್ಲಿ, ಯಾವುದು ತಿಂದು ಯಾವುದು ಬಿಡಲಿ ಎಂಬ ಹಪಹಪಿಯಿಂದ ಎಲ್ಲರೂ ತಮ್ಮ ತಮ್ಮ ತಟ್ಟೆಯಲ್ಲಿ ಅರ್ಧದಷ್ಟು ಊಟವನ್ನು ಪೋಲು ಮಾಡಿದ್ದರು. ಇದನ್ನು ನೋಡಿ ಬಲು ಬೇಸರವಾಯಿತು. ಬರೀ ಮದುವೆ, ಗೃಹಪ್ರವೇಶ, ನಾಮಕರಣದ ಸಂಭ್ರಮದಲ್ಲಷ್ಟೇ ಅಲ್ಲ, ಬಹುತೇಕ ದೊಡ್ಡ ದೊಡ್ಡ ಹೋಟೆಲುಗಳಲ್ಲೂ ಈ ರೀತಿ ಅರೆಬರೆ ತಿಂದು ಎದ್ದು ಹೋದವರ ತಟ್ಟೆಗಳನ್ನು ನಾವು ದಿನನಿತ್ಯ ನೋಡುತ್ತೇವೆ.

ಇತ್ತೀಚೆಗೆ ಜರ್ಮನಿಗೆ ಪ್ರವಾಸಕ್ಕೆ ಹೋಗಿ ಬಂದ ನನ್ನ ಗೆಳೆಯ ತನ್ನ ಅನುಭವಗಳನ್ನು ಹಂಚಿಕೊಳ್ಳುತ್ತ, ಅಲ್ಲಿಯ ಹೋಟೆಲುಗಳಲ್ಲಿ ನಾವು ತಟ್ಟೆಯಲ್ಲಿ ಆಹಾರವನ್ನೇನಾದರೂ ಉಳಿಸಿದರೆ ಅದಕ್ಕೆ ದಂಡ ತೆರಬೇಕಾಗುತ್ತದೆ ಎಂದು ಹೇಳಿದ್ದು ಕೇಳಿ ಒಂದು ಕ್ಷಣ ದಂಗಾಗಿದ್ದೆ. ಆಹಾರ ಪೋಲು ಮಾಡುವುದನ್ನು ತಡೆಯಲು ಇದೊಂದು ಒಳ್ಳೆಯ ಉಪಾಯವಲ್ಲವೇ ಎಂದು ಯೋಚಿಸುವಂತಾಯಿತು.

ನಾವು ನೀವೆಲ್ಲಾ ಪ್ರತಿದಿನ ಬೆಳಿಗ್ಗೆ ಎದ್ದು ಒಂದು ಲೋಟ ಕಾಫಿ ಸೇವಿಸುವುದರ ಹಿಂದೆ ಒಬ್ಬ ಕಬ್ಬು ಬೆಳೆಗಾರ, ಕಾಫಿ ಬೆಳೆಗಾರ, ಹಾಲು ವ್ಯಾಪಾರಿಯ ಶ್ರಮದ ಅಖಂಡ ತಪನೆಯ ಫಲವಿರುತ್ತದೆ. ನಮ್ಮ ಸುತ್ತಮುತ್ತ ಬದುಕುವ ಪ್ರಾಣಿ ಪಕ್ಷಿಗಳು ಎಂದೂ ತಮ್ಮ ಆಹಾರವನ್ನು ವೃಥಾ ಪೋಲು ಮಾಡುವುದಿಲ್ಲ ಎಂಬುದು ಸುಮ್ಮನೆ ಗಮನಿಸಿದರೆ ತಿಳಿಯುತ್ತದೆ. ತಮ್ಮ ಹೊಟ್ಟೆ ಹಸಿಯದೆ ಹುಲಿ, ಸಿಂಹ, ಚಿರತೆಯೂ ಬೇಟೆಗೆ ಇಳಿಯುವುದಿಲ್ಲ.

ಇಂತಹ ಸಂದರ್ಭದಲ್ಲಿ ಲೇಖಕ ದೇವನೂರ ಮಹಾದೇವ ಅವರು ಹೇಳಿದ ಒಂದು ಕತೆ ನೆನಪಾಗುತ್ತದೆ: ಚಕ್ರವರ್ತಿಯೊಬ್ಬನಿಗೆ ಇಡೀ ಭೂಮಂಡಲವನ್ನೆಲ್ಲ ಗೆದ್ದು ತನ್ನ ಚಕ್ರಾಧಿಪತ್ಯ ಸ್ಥಾಪಿಸಬೇಕೆಂಬ ಬಯಕೆ. ಅದರಂತೆ ತನ್ನ ಪಕ್ಕದ ರಾಜ್ಯದ ಮೇಲೆ ದಂಡೆತ್ತಿ ಹೋದ. ಘನಘೋರ ಯುದ್ಧವೇ ನಡೆಯಿತು. ಲಕ್ಷಾಂತರ ಸೈನಿಕರು ಮಡಿದರು. ಚಕ್ರವರ್ತಿ ಯುದ್ಧ ಭೂಮಿಯಲ್ಲಿ ತಾನು ಹೊಡೆದುರುಳಿಸಿದ ಸೈನಿಕರ ಶವಗಳತ್ತ ಹಮ್ಮಿನಿಂದ ನೋಡುತ್ತಿದ್ದ. ಅವನಿಗೆ ದಿಗ್ಭ್ರಮೆಯಾಗುವ ದೃಶ್ಯವೊಂದು ಕಂಡುಬಂದಿತು. ಆ ನಾಡಿನ ಆದಿವಾಸಿಯೊಬ್ಬ ಹೆಣವೊಂದನ್ನು ಕಿತ್ತು ಗಬಗಬ ತಿನ್ನುತ್ತಿದ್ದ. ಚಕ್ರವರ್ತಿಯನ್ನು ಕಂಡು ಭಯಗೊಂಡ ಆತ ‘ದೊರೆಯೇ ಹಸಿವನ್ನು ತಾಳಲಾರದೆ, ನೀನು ಹೊಡೆದುರುಳಿಸಿದ ಸೈನಿಕನ ಹೆಣವನ್ನು ತಿನ್ನುತ್ತಿದ್ದೇನೆ. ಇದು ನಿನ್ನ ಆಹಾರ, ನಿನ್ನ ಅಪ್ಪಣೆ ಇಲ್ಲದೆ ತಿನ್ನುತ್ತಿದ್ದೇನೆ ಕ್ಷಮಿಸು’ ಎಂದ. ಅದಕ್ಕೆ ಚಕ್ರವರ್ತಿಯು ‘ನಾನು ನರಮಾಂಸ ಭಕ್ಷಕನಲ್ಲ’ ಎಂದ. ಆಗ ಆದಿವಾಸಿ ಹೇಳುತ್ತಾನೆ ‘ನೀನು ನರಮಾಂಸ ಭಕ್ಷಕನಲ್ಲ ಎಂದ ಮೇಲೆ ಇಷ್ಟೆಲ್ಲ ಮನುಷ್ಯರನ್ನು ಏಕೆ ಕೊಂದೆ? ನಾನು ಹಸಿವಾದಾಗ ಮಾತ್ರ ಅನಿವಾರ್ಯವಾದರೆ ಕೊಲ್ಲುತ್ತೇನೆ’.

ಈ ಕತೆಯೊಂದು ರೂಪಕವಾಗಿ ನಿಂತು, ಜೀವನವಿಡೀ ದುಡಿದು ಕೂಡಿಟ್ಟು ತನ್ನ ಸಂಪತ್ತನ್ನು ಪ್ರದರ್ಶಿಸಲು ಹಾತೊರೆಯುವ ಸಿರಿಗರ ಬಡಿದವರು ಮೇಲರಿಮೆಯನ್ನು ಪೋಷಿಸಿಕೊಳ್ಳುವ ಕೆಟ್ಟ ಪ್ರದರ್ಶನದಂತೆ ಕಂಡುಬರುತ್ತದೆ. ಹಸಿದಾಗ ಮಾತ್ರ ತಿನ್ನುವ ಆದಿವಾಸಿ ನಮಗೆ ಆದರ್ಶವಾಗಬೇಕು.

ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜಕೀಯ ಸಮಾವೇಶವೊಂದರಲ್ಲಿ ಉಳಿದ ಆಹಾರವನ್ನು ಬೀದಿಗೆ ಚೆಲ್ಲುತ್ತಿದ್ದ ದೃಶ್ಯವೊಂದನ್ನು ಪತ್ರಿಕೆಯಲ್ಲಿ ನೋಡಿದೆವು. ಸರಳ ಸಾಮಾಜಿಕ ಜೀವನಕ್ಕೆ ಮೇಲ್ಪಂಕ್ತಿ ಹಾಕಬಹುದಾದ ಜನಪ್ರತಿನಿಧಿಗಳೇ ಇಂತಹ ಅಪಸವ್ಯಗಳಲ್ಲಿ ವ್ಯಸ್ತರಾದರೆ ಜನಸಾಮಾನ್ಯರಿಗೆ ತಲುಪಿಸುವ ಸಂದೇಶವಾದರೂ ಎಂತಹದ್ದು?

‘ಅನ್ನ ದೇವರ ಮುಂದೆ ಇನ್ನು ದೇವರಿಲ್ಲ’ ಎಂದು ಸರ್ವಜ್ಞ ಸಾರಿದ. ಇಂದಿಗೂ ಕೆಲವೆಡೆ ಸಾರ್ವಜನಿಕ ಭೋಜನ ಸೇವನೆ ಮಾಡುವಾಗ ಅನ್ನ ದೇವರಿಗೆ ಪ್ರಾರ್ಥನೆ ಮಾಡಿ ಕೈ ಮುಗಿದು ಊಟ ಮಾಡುತ್ತೇವೆ. ದೇವಸ್ಥಾನಗಳಲ್ಲಂತೂ ಊಟವನ್ನು ‘ಪ್ರಸಾದ’ ಎಂದೇ ಸ್ವೀಕರಿಸುತ್ತೇವೆ. ಅಷ್ಟೇ ಏಕೆ, ಊಟ ಮಾಡುವವರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಸಾಲ ಕೊಟ್ಟವನೂ ಸಾಲಗಾರ ಊಟ ಮಾಡಿ ಎದ್ದೇಳುವ ತನಕ ಕಾಯುತ್ತಾನೆ ಎಂಬ ನೈತಿಕತೆಯಲ್ಲಿ ಬದುಕುವ ನಾವೆಲ್ಲಾ, ಆಹಾರ ಪೋಲು ಮಾಡುವುದರಲ್ಲೂ ಹಿಂದೆ ಬಿದ್ದಿಲ್ಲ ಎನ್ನುವುದೊಂದು ದುರಂತ.

ಪ್ರತಿ ಅನ್ನದ ಅಗುಳಿನ ಮೇಲೆ ತಿನ್ನುವವನ ಹೆಸರು ಬರೆಯಲಾಗಿರುತ್ತದಂತೆ. ನಮ್ಮಲ್ಲಿ ಕೊಳ್ಳುವ ಶಕ್ತಿ ಇದ್ದ ಮಾತ್ರಕ್ಕೆ ಇನ್ನೊಬ್ಬರ ಆಹಾರವನ್ನು ಕಿತ್ತುಕೊಳ್ಳುವ ಯಾವ ಅಧಿಕಾರವೂ ನಮಗೆ ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT