ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಮಕ್ಕಳೆದುರು ಮಾದರಿಯಾಗಬೇಕಾದ್ದು...

ಬುದ್ಧಿ ಬೆಳೆದಂತೆಲ್ಲಾ ತನ್ನ ಭಾವಪರಿಧಿಯ ವಿಸ್ತಾರದಲ್ಲಿ ಹೆಚ್ಚೆಚ್ಚು ಸಂವೇದನಾಶೀಲಆಗಬೇಕಿದ್ದ ಮನುಷ್ಯಕುಲ ಈ
Last Updated 21 ಅಕ್ಟೋಬರ್ 2022, 23:15 IST
ಅಕ್ಷರ ಗಾತ್ರ

ಮನುಷ್ಯ ಪ್ರಕೃತಿಯ ಕೂಸು, ಪರಿಸರ ಇರುವಂತೆಯೇ ಅವನ ಇರವು. ಸಂಶೋಧನೆಗಳ ಪ್ರಕಾರ, ಜೀವಿಯ ಬೆಳವಣಿಗೆಯಲ್ಲಿ ಆನುವಂಶೀಯತೆ ಮತ್ತು ಪರಿಸರ ಪ್ರಮುಖ ಪಾತ್ರ ವಹಿಸುತ್ತವಾದರೂ ಜೀವಿಯ ಬೌದ್ಧಿಕ ಮತ್ತು ಮಾನಸಿಕ ವ್ಯಕ್ತಿತ್ವಗಳು ಆಮೂಲಾಗ್ರವಾಗಿ ರೂಪುಗೊಳ್ಳುವುದು ಪಾರಿಸರಿಕ ಪ್ರಭಾವದಲ್ಲಿಯೇ.

ತಾನಿರುವ ಪರಿಸರದ ಗತಿಶೀಲ ಪ್ರಕ್ರಿಯೆಗಳ ಬಗೆಗಿನ ಕುತೂಹಲ, ಹೊಂದಾಣಿಕೆ ಮತ್ತು ಸ್ಪಂದನೆಯ ಜೀವಂತಿಕೆಯಲ್ಲಿ ಮನುಷ್ಯಜೀವಿ
ಯೊಂದರ ಬುದ್ಧಿ-ಭಾವಗಳು ವಿಕಸಿಸುತ್ತವೆ. ಪ್ರಕೃತಿಯೊಟ್ಟಿಗಿನ ಸಹವಾಸ ಮತ್ತು ಯೋಗ್ಯ ಸಹಭಾಗಿತ್ವದಲ್ಲಿ ಮನಸು ದಿನೇದಿನೇ ಅರಳುತ್ತದೆ. ನಮ್ಮೊಳಗೊಂದು ಸಂತುಲಿತ ವ್ಯಕ್ತಿತ್ವ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಈ ಅಂಶಗಳು ಹೆಚ್ಚು ಪೂರಕ.

ಆದರೆ, ಸಂಪಾದನೆಯೆಂದರೆ ಹಣ, ಆಸ್ತಿ, ಅಧಿಕಾರ, ಗೆಲುವು ಮಾತ್ರ ಅಂದುಕೊಂಡು ಅವುಗಳ ಹಿಂದೆ ಬಿದ್ದಿರುವ ಮನುಷ್ಯನ ಭಾವಪ್ರಪಂಚ ದಿನೇದಿನೇ ಬರಡಾಗುತ್ತಿದೆ. ಕಡೆಯಲ್ಲಿ ಕಾತರ, ಉತ್ಸಾಹ, ನಿರೀಕ್ಷೆ, ನಂಬಿಕೆಗಳ ಕೀಲಿಕೈಯನ್ನು ಕಳೆದುಕೊಂಡು ಪರದಾಡುವ ಮಾನಸಿಕತೆ ಅವನದ್ದು. ಮನಸು ಬೆಸೆಯಬೇಕಾದ ಕಡೆಗೆಲ್ಲಾ ಕೃತಕತೆ, ಅಹಂಕಾರಗಳು ಆವರಿಸಿವೆ. ಈಗೆಲ್ಲಾ ಕಟ್ಟುವುದಕ್ಕಿಂತ ಕೆಡವಲು ಉಮೇದು ಹೆಚ್ಚು. ಯಂತ್ರಗಳನ್ನೇ ಪೂರ್ಣ ಅವಲಂಬಿಸುತ್ತ ಬದುಕಿನಲ್ಲಿ ಮಾನವೀಯತೆಯ ಪಸೆ ಬತ್ತಿಸಿಕೊಂಡು ತಾನೂ ಯಾಂತ್ರಿಕಗೊಳ್ಳುತ್ತಿದ್ದಾನೆ.

ಸದಾಕಾಲ ಮಾನವೀಯತೆಯ ಉಳಿವು, ಜೀವಪರ ನಿಲುವು, ಸುಸ್ಥಿರ ಬೆಳವಣಿಗೆಗಳನ್ನು ಕಾಪಿಟ್ಟುಕೊಳ್ಳಬೇಕಾದವನು ತನ್ನದೇ ಸೃಷ್ಟಿಯಾದ ಜಾತಿ, ಧರ್ಮ, ಭಾಷೆ, ಪ್ರದೇಶ, ಗಡಿಬೇಲಿಗಳ ಸಂಕೋಲೆಯೊಳಗೆ ಮತ್ತೆಮತ್ತೆ ಸಿಲುಕಿಕೊಳ್ಳುತ್ತಿದ್ದಾನೆ. ಹಾಗೆ ಹಗೆದ್ವೇಷ ಗಳನ್ನು ಉಸಿರಾಡುತ್ತ ನಿತ್ಯವೂ ನಿದ್ದೆ-ನೆಮ್ಮದಿಗಳನ್ನು ಕಳೆದುಕೊಂಡು ಹೊರಳಾಡುತ್ತಿರುವ ವಿಲಕ್ಷಣ ಜೀವಿಯೇ ಈ ಮನುಷ್ಯ. ಕಾಲಾಂತರದಿಂದ ಕಾಪಿಟ್ಟುಕೊಂಡುಬಂದ ಸಹಚರರ ಬಗೆಗಿನ ಒಲವು, ಪರಸ್ಪರರೊಟ್ಟಿಗಿನ ಸೌಹಾರ್ದ ಸಂಬಂಧಗಳನ್ನು ಜತನದಿಂದ ಸಂರಕ್ಷಿಸಿಕೊಳ್ಳದಿದ್ದಲ್ಲಿ ಉಳಿಗಾಲವಿಲ್ಲ ಎಂಬುದನ್ನು ಬೇಗ ಅರಿತಷ್ಟೂ ಕ್ಷೇಮ.

ದಾರ್ಶನಿಕರಾಗಿದ್ದ ಜಿಡ್ಡು ಕೃಷ್ಣಮೂರ್ತಿಯವರ ಮಾತಿನಂತೆ ‘ಸಿಟ್ಟು, ಅಹಂಕಾರ, ಗೊಂದಲ ಮತ್ತು ಸಂಘರ್ಷ ಇವನ್ನೆಲ್ಲಾ ಪ್ರೀತಿ ಮಾತ್ರ ವಾಸಿಮಾಡಬಲ್ಲದು. ತೀವ್ರ ಥರದ ಎಡಪಂಥ ಅಥವಾ ಬಲಪಂಥ ವ್ಯವಸ್ಥೆಗಳು ಯಾರಿಗೂ ಯಾವತ್ತಿಗೂ ಅಮಲು ತರಬಲ್ಲವೇ ವಿನಾ ಸುಖ-ಶಾಂತಿಯನ್ನಲ್ಲ. ಪ್ರೀತಿ ಇರುವೆಡೆ ಒಡೆತನ ಇರುವುದಿಲ್ಲ, ಬಂಧುತ್ವ ಇರುತ್ತದೆ, ನಿರ್ಬಂಧವಲ್ಲ’. ಹೌದು, ನಮ್ಮ ಹಿಡಿಯಷ್ಟ ಗಲದ ಹೃದಯದಲ್ಲಿ ಇಡಿಯ ಜಗತ್ತನ್ನು ಹಿಡಿಸುವಷ್ಟು ಜಾಗವಿದೆ. ಕುಟುಂಬ ಸದಸ್ಯರಲ್ಲಿ ತೋರುವ ಪ್ರೀತಿ, ಕರುಣೆ, ಕಾಳಜಿಗಳನ್ನು ‘ವಸುಧೈವ ಕುಟುಂಬಕಂ’ ತತ್ವದಡಿ ಇನ್ನಿತರರಿಗೂ ಜೀವಕೋಟಿಗೂ ಹಂಚಬೇಕು, ಅವಷ್ಟನ್ನೇ ತಾನಲ್ಲಿ ಸಂಪಾದಿಸಿಕೊಳ್ಳಬೇಕು. ಮನುಷ್ಯ ಜನ್ಮಕ್ಕೆ ಅದು ಸಾಧ್ಯ ಮತ್ತು ಅತ್ಯಂತ ಹೆಚ್ಚು ಮಿದುಳಿನ ಬೆಳವಣಿಗೆ ಕಂಡಿರುವ ಜೀವಿಯೊಂದು ಬದುಕಬೇಕಾದ ರೀತಿಯೂ ಅದೇ. ಸ್ವಧರ್ಮದ ಮತ್ತನ್ನೇರಿಸಿಕೊಂಡು ದ್ವೇಷ ಕಾರುವುದಕ್ಕಿಂತ ಪರಧರ್ಮ ಸಹಿಷ್ಣುತೆಯಲ್ಲಿ ನರಜನ್ಮ ಮಾಗಬೇಕು. ಆಗಮಾತ್ರವೇ ನೆಲದ ಕಣಕಣವೂ ಕರುಣಾಮಯ, ಸಹ್ಯ, ಸುಂದರ. ‘ಆನಂದಮಯ ಈ ಜಗ ಹೃದಯ’.

ಬುದ್ಧಿ ಬೆಳೆದಂತೆಲ್ಲಾ ತನ್ನ ಭಾವಪರಿಧಿಯ ವಿಸ್ತಾರದಲ್ಲಿ ಹೆಚ್ಚೆಚ್ಚು ಸಂವೇದನಾಶೀಲನಾಗಬೇಕಿದ್ದ ಮನುಷ್ಯಕುಲ ಈ ಪರಿ ಮೃಗೀಯವಾಗುತ್ತಿರಲು ಕಾರಣವೇನು? ಅರಿವು, ಪ್ರಜ್ಞೆಗಳನ್ನು ಬಿತ್ತಬೇಕಿದ್ದ ಶಿಕ್ಷಣಕ್ರಮವು ದಾರುಣವಾಗಿ ಸೋತುಹೋಯಿತೇ? ಇದು ದಯೆ, ದಾಕ್ಷಿಣ್ಯ, ಪ್ರೀತಿ, ಪ್ರಾಮಾಣಿಕತೆ, ಸಂಯಮ, ಸಹಬಾಳ್ವೆಯನ್ನು ಬಿತ್ತಬೇಕಿದ್ದ ಜಾಗೃತ ಸಮಾಜವಿಂದು ತನ್ನ ಹೊಣೆ ಗಾರಿಕೆ ಮರೆತ ಕುರುಹೇ? ಅನುಮಾನ ಕಾಡುತ್ತದೆ.

ಇತ್ತೀಚೆಗೆ ಸಭೆಯೊಂದರಲ್ಲಿ ಸ್ವಾಮೀಜಿಯೊಬ್ಬರು ಪೋಷಕವರ್ಗಕ್ಕೆ ಹೇಳಿದ ಕಿವಿ ಮಾತೇನೆಂದರೆ, ‘ನಮ್ಮ ಮಕ್ಕಳೆದುರು ಮಾದರಿಯಾಗಿ ತೋರಬೇಕಾದ್ದು ಸುಶಿಕ್ಷಿತರು ಮತ್ತು ಸುಸಂಸ್ಕೃತರನ್ನು ಮಾತ್ರ. ನಾವೆಲ್ಲಾ ಅಂಥವರನ್ನು ಒಪ್ಪುತ್ತಾ ಮೆಚ್ಚುತ್ತಾ ಹೋದಂತೆ ತಾವೂ ಅವರಂತಾಗಬೇಕು ಅನ್ನುವುದು ಮಕ್ಕಳ ಮನದ ಆಶಯ, ಆದರ್ಶ ಮತ್ತು ಕನಸಾಗುತ್ತದೆ. ಮಾಧ್ಯಮಗಳು ಮತ್ತು ಮನೆಯ ಹಿರಿಯರೆಲ್ಲಾ ರಾಜಕಾರಣಿಗಳು, ಸಿನಿಮಾ ನಟನಟಿಯ ರನ್ನು ಸಾಧಕರೆಂದು ಹೊಗಳುತ್ತಿರುವ ಕಾರಣಕ್ಕೇ ಇವತ್ತಿನ ಮಕ್ಕಳು ಆತಂಕಕಾರಿ ಸ್ಥಿತಿಯನ್ನು ತಲುಪುತ್ತಿರುವುದು ಕೂಡ ಸಹಜವೆನಿಸುತ್ತದೆ. ರಾಜಕಾರಣಿಗಳನ್ನು ಆದರ್ಶವೆಂದು ಬಗೆವೆಡೆ ಮಕ್ಕಳು ಕುತಂತ್ರ ಬುದ್ಧಿ, ಕಪಟತನ ಮತ್ತು ಆತ್ಮವಂಚನೆಗಳನ್ನಷ್ಟೇ ಆರಾಧಿಸುವಂತಾಗುತ್ತಾರೆ. ಇನ್ನು ಕ್ರಿಕೆಟಿಗರು ಆದರ್ಶವಾದ ಕಡೆ ಮಕ್ಕಳು ಶೋಕಿ ಮನಃಸ್ಥಿತಿಯ ಗುಲಾಮರಾಗುವುದಿದೆ. ಎಲ್ಲದಕ್ಕಿಂತ ಸಿನಿಮಾದವರನ್ನು ಅಭಿ ಮಾನಿಗಳಾಗಿ ಅನುಸರಿಸಿದರಂತೂ ಮುಗಿಯಿತು ಮೂರುಹೊತ್ತೂ ಮೇಕಪ್ಪು, ಗಳಿಗೆಗೊಮ್ಮೆ ತಲೆಬಾಚಿಕೊಳ್ಳುವ ಮರುಳು. ಅಸಹಜ ಭಾಷೆ, ವೇಷ, ನಡೆ-ನಿಲುವು’!

ನಿಜ, ಮಾನವೀಯ ಕಳಕಳಿಯುಳ್ಳ ವಿಜ್ಞಾನಿಗಳು, ವಿದ್ಯಾವಂತರು, ಛಲವುಳ್ಳ ಕ್ರೀಡಾಳುಗಳು, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕ್ಷೇತ್ರದ ಕಟ್ಟಾಳುಗಳು, ಜೀವಪರ ತುಡಿತದ ಸಂತರು, ದಾರ್ಶ ನಿಕರು, ಹೋರಾಟಗಾರರೆಲ್ಲಾ ಮಕ್ಕಳು-ಯುವ ಸಮೂಹದೆದುರು ಆದರ್ಶವಾಗಿ ನೆಲೆಯಾಗಬೇಕು. ಆಗಮಾತ್ರವೇ ಮುಂದಿನ ತಲೆಮಾರು ಶಾಂತಿ, ನೆಮ್ಮದಿಯನ್ನೂ ಮಾನವೀಯತೆಯ ಪಸೆಯನ್ನೂ ಉಳಿಸಿಕೊಂಡೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT