ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಹಸಿವೆ ಎಂಬ ಹೆಬ್ಬಾವು

ಭಾರತವು ಜನಸಂಖ್ಯೆ– ಸಂಪತ್ತು ಎರಡರಲ್ಲಿಯೂ ಶ್ರೀಮಂತವಾಗಿದ್ದರೂ ಹಸಿವಿನ ಸೂಚ್ಯಂಕದಲ್ಲಿ ಕುಸಿಯಲು ಕಾರಣವೇನು?
Last Updated 19 ಅಕ್ಟೋಬರ್ 2022, 23:30 IST
ಅಕ್ಷರ ಗಾತ್ರ

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ (ಜಿಎಚ್‍ಐ) ಭಾರತದ ಸ್ಥಾನ (121 ದೇಶಗಳ ಪೈಕಿ 107ನೇ ಸ್ಥಾನ) ಈ ಸಲ ಮತ್ತಷ್ಟು ಕುಸಿದಿರುವುದರ ಕುರಿತು ಚರ್ಚೆ ಬಿರುಸಿನಿಂದ ಸಾಗಿದೆ. ಹಸಿವಿನ ಸೂಚ್ಯಂಕದಲ್ಲಿ, ಕೃಷಿ ಪ್ರಧಾನ ರಾಷ್ಟ್ರವೊಂದರ ಇಂತಹ ಕೆಳಮುಖ ಚಲನೆಯು ಅನೇಕ ಪ್ರಶ್ನೆಗಳಿಗೆ ಕಾರಣವಾಗುತ್ತದೆ. ತ್ರೇತಾಯುಗ ಕಳೆದು ದ್ವಾಪರಯುಗ ಶುರುವಾಗುವ ಹೊತ್ತಿಗೆ 12 ವರ್ಷಗಳ ಕಾಲ ದೀರ್ಘ ಬರಗಾಲ ಸೃಷ್ಟಿಯಾದದ್ದರ ಬಗ್ಗೆ ಮಹಾಭಾರತದ ಶಾಂತಿಪರ್ವದಲ್ಲಿ ಪ್ರಸ್ತಾಪಿಸಲಾಗಿದೆ. ಎಲ್ಲಿ ನೋಡಿದರೂ ಜನ, ಜಾನುವಾರುಗಳು ರಾಶಿ ರಾಶಿಯಾಗಿ ಸತ್ತು ಬಿದ್ದಿರುವ ಚಿತ್ರಣವನ್ನು ಅಲ್ಲಿ ನೀಡಲಾಗಿದೆ. ಇಂತಹ ಬರಗಾಲವೇನೂ ಇತ್ತೀಚಿನ ದಶಕಗಳಲ್ಲಿ ದೇಶದಲ್ಲಿ ಎದುರಾಗಿಲ್ಲ. ಒಂದಿಷ್ಟು ಅತಿವೃಷ್ಟಿ- ಅನಾವೃಷ್ಟಿ ಅಲ್ಲಲ್ಲಿ ಉಂಟಾಗಿದ್ದರೂ ಅವು ಅದೃಷ್ಟವಶಾತ್‌ ತೀರಾ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡಿಲ್ಲ.

ಭಾರತದ ಜಿಡಿಪಿಯು ಈಗ ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ದೇಶದ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ಸಂಪತ್ತು ಶೇಕಡ 1ರಷ್ಟು ಶ್ರೀಮಂತರ ಬಳಿ ಸಂಗ್ರಹಗೊಂಡಿದೆ ಎಂದು ಆಕ್ಸ್‌ಫ್ಯಾಮ್ ವರದಿಯೊಂದು ಹೇಳಿದೆ. ಭಾರತವು ಜನಸಂಖ್ಯೆ ಹಾಗೂ ಸಂಪತ್ತು ಎರಡರಲ್ಲಿಯೂ ಶ್ರೀಮಂತವಾಗಿದೆ. ಹೀಗಿದ್ದೂ ಹಸಿವಿನ ಸೂಚ್ಯಂಕದಲ್ಲಿ ದೇಶವು ಹೀಗೆ ಕೆಳಗೆ ಬೀಳಲು ಕಾರಣವೇನು?

ದೇಶದಲ್ಲಿ ಆಹಾರ ಧಾನ್ಯಗಳ ಕೊರತೆಯಿಲ್ಲ. ಆದರೆ ಅವು ಸರ್ಕಾರದ ಅಧೀನದ ಗೋದಾಮುಗಳಲ್ಲಿ ಸಂಗ್ರಹಗೊಂಡಿವೆ. ಸಂಪತ್ತಾಗಿ ಕೆಲವರ ಬಳಿ ಶೇಖರಗೊಂಡಿವೆ. ಅಗತ್ಯ ಇರುವವರಿಗೆ ಅಗತ್ಯ ಪ್ರಮಾಣದಲ್ಲಿ ವಿತರಣೆಯಾಗುತ್ತಿಲ್ಲ. ಇದನ್ನೇ ಕವಿ ಬೇಂದ್ರೆ ‘ಅನ್ನ ಇದೆ ಎಲ್ಲಿ ಇಲ್ಲ? ಇಲ್ಲೆ ಸುತ್ತುಮುತ್ತಿದೆ’ (ಅನ್ನಯಜ್ಞ) ಎಂದಿದ್ದರು.

ಗೌತಮ ಬುದ್ಧ ತನ್ನ ಶಿಷ್ಯರಿಗೆ ಕೇಳಿದ ಪ್ರಶ್ನೆ- ‘ಜಗತ್ತಿನಲ್ಲಿ ಯಾವುದು ಅತಿ ಭಯಂಕರ ರೋಗ’. ಅವರೆಲ್ಲ ತಮತಮಗೆ ತೋಚಿದ ಉತ್ತರ
ಗಳನ್ನು ನೀಡಿದ ಮೇಲೆ ಬುದ್ಧ ಹೇಳಿದ್ದು ‘ಜಗತ್ತಿನಲ್ಲಿ ಹಸಿವೆಯನ್ನು ಮೀರಿದ ರೋಗವಿಲ್ಲ. ಅದನ್ನು ಗೆಲ್ಲುವ ಹೋರಾಟವೇ ಈ ಜೀವನ’. ವಿವೇಕಾನಂದರು ವಿದೇಶದಲ್ಲಿದ್ದಾಗ ಭಾರತದಲ್ಲಿ ಉಂಟಾದ ಕ್ಷಾಮದಿಂದಾಗಿ ಜನ ಹಸಿವೆಯಿಂದ ಸಾಯುತ್ತಿರುವ ವರದಿಗಳನ್ನು ಓದಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರಂತೆ. ‘ಜನ ರೋಗರುಜಿನಗಳಿಂದ ಸತ್ತರೆ ಅದು ಸಹಜ. ಆದರೆ ಉಣ್ಣಲು ಮುಷ್ಟಿ ಅನ್ನವೂ ದೊರೆಯದೆ ಸಾಯುತ್ತಿರುವುದನ್ನು ನೋಡುವುದು ನನ್ನಿಂದಾಗದು’ ಎಂದಿದ್ದರು ಅವರು. ಕನ್ನಡದ ಆದಿವಚನಕಾರ ಜೇಡರ ದಾಸಿಮಯ್ಯ, ‘ಹಸಿವೆಯೆಂಬ ಹೆಬ್ಬಾವು, ಬಸಿರ ಬಂದು ಹಿಡಿದಡೆ, ವಿಷವೇರಿತ್ತಯ್ಯಾ ಆಪಾದಮಸ್ತಕಕ್ಕೆ’ ಎಂದು ಹಸಿವಿನ ತೀವ್ರತೆಯ ಕುರಿತು ಹೇಳಿದ್ದಾರೆ.

ಹೂಡಿಕೆದಾರರ ಸಮಾವೇಶ ಆಯೋಜಿಸುತ್ತೇವೆ. ಉದ್ಯಮಿಗಳಿಗೆ ನಾನಾ ಬಗೆಯ ರಿಯಾಯಿತಿಗಳನ್ನು ಘೋಷಿಸುತ್ತೇವೆ. ಬಂಡವಾಳ ಅಷ್ಟು ಬಂತು ಇಷ್ಟು ಬಂತು ಎಂದು ಹೇಳುತ್ತೇವೆ. ಇದರಿಂದ ಎಷ್ಟು ಜನರಿಗೆ ಉದ್ಯೋಗ ದೊರೆಯಿತೋ? ದೇಶದ ಬಡವರ ಸ್ಥಿತಿಗತಿಯಂತೂ ಸುಧಾರಣೆಯಾಗಿಲ್ಲ. ಸಂಪತ್ತಿನ ಅಸಮಾನ ಹಂಚಿಕೆಯಿಂದ ಉಳ್ಳವರು ಹಾಗೂ ಬಡವರ ನಡುವಿನ ಅಂತರ ದಿನೇದಿನೇ ಹೆಚ್ಚಾಗುತ್ತಿರು ವುದನ್ನು ದೇಶದ ಸಾಮಾನ್ಯ ಪ್ರಜೆ ಅಸಹಾಯಕತೆಯಿಂದ ನೋಡುವಂತಾಗಿದೆ. ಆರ್ಥಿಕ ಅಭಿವೃದ್ಧಿಯ ಪ್ರಯೋಜನ ಕೂಡ ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂಬ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಸಲಹೆ ಆಳುವ ಜನರಿಗೆ ಬೇಕಾಗಿಲ್ಲ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯೊಂದರ ಪ್ರಕಾರ, ವಿಶ್ವದ ಒಟ್ಟು ಬಡವರ ಪೈಕಿ ಶೇಕಡ 25ರಷ್ಟು ಜನ ಭಾರತದಲ್ಲಿಯೇ ಇದ್ದಾರೆ. ಬಡವರ ಪಾಲಿನ ಅವಕಾಶಗಳ ನಿರಾಕರಣೆಯಿಂದ ಬಡತನದ ವಿಸ್ತರಣೆಯಾಗುತ್ತಿದೆ. ಆರ್ಥಿಕವಾಗಿ ಅತಿ ಕೆಳಮಟ್ಟದಲ್ಲಿರುವ ಜನರ ಜೀವನ ಸುಧಾರಣೆಯಿಂದ ಬರುವ ಆರ್ಥಿಕ ಪ್ರಯೋಜನವನ್ನು ನಮ್ಮ ನೆರೆಯ ದೇಶ ಚೀನಾ ಬಹುಬೇಗ ಅರಿತುಕೊಂಡಿತು. ಆ ದಿಸೆಯಲ್ಲಿ ಅನೇಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರಿಂದ ಹಸಿವು- ಅಪೌಷ್ಟಿಕತೆಯ ಸಮಸ್ಯೆಯು ಆ ದೇಶವನ್ನು ಅಷ್ಟಾಗಿ ಕಾಡುತ್ತಿಲ್ಲ. ಇನ್ನೊಂದು ಮುಖ್ಯವಾದ ಸಮಸ್ಯೆಯನ್ನು ನಾವಿಲ್ಲಿ ಗಮನಿಸಬೇಕಾಗಿದೆ. ಪ್ರಪಂಚದಲ್ಲಿ ಉತ್ಪಾದನೆಯಾಗುವ ಆಹಾರದ ಮೂರನೇ ಒಂದು ಪಾಲು ವ್ಯರ್ಥವಾಗುತ್ತಿದೆ.

ನಮ್ಮ ದೇಶದಲ್ಲಂತೂ ತಟ್ಟೆಯಲ್ಲಿ ಆಹಾರವನ್ನು ಬಿಟ್ಟು ಏಳುವುದನ್ನು ಸಾಮಾಜಿಕ ಪ್ರತಿಷ್ಠೆ ಎಂಬಂತೆ ಸಂಭ್ರಮಿಸುವ ಮನಸ್ಸುಗಳಿವೆ. ಕೆಲವರು ತಿಂದಿದ್ದನ್ನು ಜೀರ್ಣಿಸಿಕೊಳ್ಳಲು ನಾನಾ ಬಗೆಯ ಕಸರತ್ತುಗಳನ್ನು ಮಾಡುತ್ತಾರೆ. ಇನ್ನು ಕೆಲವರಿಗೆ ದಿನದ ಹೊಟ್ಟೆ ಹೊರೆಯುವುದು ಹೇಗೆ ಎಂಬ ಚಿಂತೆ. ಬಡತನ ನಿರ್ಮೂಲನೆಗೆ ಹಲವಾರು ಕಾರ್ಯಕ್ರಮಗಳು ಘೋಷಣೆಯಾಗಿವೆ. ಅದಕ್ಕಾಗಿ ಅಪಾರ ಹಣ ವೆಚ್ಚವಾಗಿದೆ. ಆದರೆ ಬಡತನದ ಬೇಗೆ ಮಾತ್ರ ಹೆಚ್ಚುತ್ತಲೇ ಇರುವುದು ಅತ್ಯಂತ ನೋವಿನ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT