ಭಾನುವಾರ, ನವೆಂಬರ್ 29, 2020
22 °C
ಲೆಕ್ಕಕ್ಕೂ ಇಲ್ಲದ ಆಟಕ್ಕೂ ಇಲ್ಲದ ಈ ವಿದ್ಯಮಾನಕ್ಕೇಕೆ ಇಷ್ಟೊಂದು ಮಹತ್ವ?

ಸಂಗತ| ‘ನೀಲಿ ಚಂದ್ರ’ನಿಗೆ ಬೇಡ ಕೆಂಪುಹಾಸು!

ಯೋಗಾನಂದ Updated:

ಅಕ್ಷರ ಗಾತ್ರ : | |

Prajavani

ಅಪರೂಪವೆಂದು ಪ್ರಚಾರ ಪಡೆದಿರುವ ‘ನೀಲಿ ಚಂದಿರ’ ಅಕ್ಟೋಬರ್ 31ರಂದು ಗೋಚರಿಸಿದ್ದಾಯಿತು. ವಿಶೇಷವಾಗಿ ವಿವಿಧ ಟಿ.ವಿ. ಚಾನೆಲ್‌ಗಳು ರಂಗುರಂಗಾಗಿ ಅದನ್ನು ವಿಶ್ವದ ಏಳು ಅದ್ಭುತಗಳಲ್ಲಿ  ಒಂದೆಂಬಂತೆ ಬಣ್ಣಿಸಿದವು. ಒಂದು ಕ್ಯಾಲೆಂಡರ್ ತಿಂಗಳ ಅವಧಿಯಲ್ಲಿ ಲಾಕ್ಷಣಿಕವಾಗಿ ತಲಾ ಒಂದು ಹುಣ್ಣಿಮೆ ಹಾಗೂ ಒಂದು ಅಮಾವಾಸ್ಯೆ ಸಂಭವಿಸುವುದು ನಮಗೆ ತಿಳಿದಿದ್ದೆ. ಅಕ್ಟೋಬರ್ 1 ಹುಣ್ಣಿಮೆಯಾಗಿತ್ತು, 31ರಂದು ಮತ್ತೊಂದು ಹುಣ್ಣಿಮೆಗೆ ಆಗಸ ಸಾಕ್ಷಿಯಾದುದನ್ನು ಬಿಟ್ಟರೆ ಯಾವುದೇ ಅತಿಶಯವೂ ಇರಲಿಲ್ಲ.

ಒಂದೇ ತಿಂಗಳು ಎರಡು ಹುಣ್ಣಿಮೆಗಳನ್ನು ಕಸಿದು ಕೊಳ್ಳುವುದು ಹಿಂದೆ ನಡೆದಿದೆ, ಮುಂದೆಯೂ ನಡೆಯುತ್ತದೆ. 2007ರ ಜೂನ್ 30 ‘ನೀಲಿ ಚಂದಿರ’ ದಿನವಾಗಿತ್ತು. 2023ರ ಆಗಸ್ಟ್ 31, 2050ರ ಸೆಪ್ಟೆಂಬರ್ 30- ಈ ದಿನಗಳಲ್ಲಿ ‘ನೀಲಿ ಚಂದಿರ’ ಗಗನವನ್ನು ಅಲಂಕರಿಸಲಿದ್ದಾನೆ. ಮೂವತ್ತೇ ದಿನಗಳಲ್ಲಿ ಎರಡು ಪೂರ್ಣಿಮೆಗಳೆನ್ನುವುದು ವಿರಳಕ್ಕೆ ಕಳಶವಿಟ್ಟಂತೆ ಅನ್ನೋಣ. ಸಾಮಾನ್ಯವಾಗಿ 2-3 ವರ್ಷಗಳಿಗೊಮ್ಮೆ ‘ನೀಲಿ ಚಂದಿರ’ ಸಂಭವಿಸುತ್ತದೆ. ವಾಸ್ತವವಾಗಿ ‘ನೀಲಿ ಚಂದಿರ’ನ ಬಣ್ಣ ನೀಲಿ ಅಲ್ಲವೇ ಅಲ್ಲ. ಹಾಗೊಂದು ವೇಳೆ ನೀಲಿಯಾಗಿ ಕಂಡಿತೆಂದರೆ ಸ್ಥಳೀಯ ವಾತಾವರಣದಲ್ಲಿ ಹೆಚ್ಚು ದೂಳು ಮುತ್ತಿದೆ ಎಂದೇ ಅರ್ಥ.

1883ರಲ್ಲಿ ಇಂಡೊನೇಷ್ಯಾದ ರಕಾಟ ದ್ವೀಪದಲ್ಲಿನ ಕ್ರಾಕಟೋವ ಅಗ್ನಿಪರ್ವತ ತೀವ್ರ ಸ್ಫೋಟಗೊಂಡು ಕಾರಿದ ಬೂದಿ ವರ್ಷವಿಡೀ ಅಲ್ಲಿ ಚಂದಕ್ಕಿ ಮಾಮನನ್ನು ನೀಲಿಯಾಗಿಸಿತ್ತು. ಕಾಳ್ಗಿಚ್ಚಿನಿಂದಲೂ ಹುಣ್ಣಿಮೆಯ ಚಂದ್ರನಿಗೆ ನೀಲಿ ರಂಗು ಒದಗುವುದು. ಪೂರ್ಣ ಚಂದ್ರಗ್ರಹಣದಲ್ಲಿ ಕೆಲವೊಮ್ಮೆ ಚಂದ್ರ ಕೆಂಪಾಗಿ ಕಾಣುವುದಿದೆ. ಹೇಗೂ ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರ ಸುಮಾರು 29 ದಿನಗಳಿಗೊಮ್ಮೆ ಭೂಮಿಯನ್ನು ಸುತ್ತುವ ಕಾರಣ ಒಂದು ತಿಂಗಳಲ್ಲಿ ಎರಡು ಹುಣ್ಣಿಮೆಗಳು ಸಂಭಾವ್ಯವೆ. ಇದರಲ್ಲಿ ಯಾವುದೇ ವಿಶೇಷವಂತೂ ಇಲ್ಲ. ಒಂದು ಋತುಮಾನದಲ್ಲಿ ನಾಲ್ಕು ಹುಣ್ಣಿಮೆಗಳು ಬಂದರೆ ಮೂರನೆಯ ಹುಣ್ಣಿಮೆಯ ಚಂದ್ರನಿಗೆ ‘ನೀಲಿ ಚಂದಿರ’ ಎಂದೂ ಕರೆಯುವುದುಂಟು. ಕೇವಲ 400 ವರ್ಷಗಳ ಹಿಂದೆಯಷ್ಟೆ ‘ನೀಲಿ ಚಂದಿರ’ ಒಕ್ಕಣೆ ಬಳಕೆಗೆ ಬಂದಿತು. ನಾಟಕಕಾರ ಷೇಕ್ಸ್‌ಪಿಯರ್ ‘ಎಂದೋ ಒಮ್ಮೆ’ ಅಥವಾ ‘ಅಸಂಬದ್ಧ’ ಎನ್ನುವುದಕ್ಕೆ ಪರ್ಯಾಯವಾಗಿ ‘ನೀಲಿ ಚಂದಿರ’ ಎಂದು ಬಳಸಿದ.

ಜಗತ್ತಿನಾದ್ಯಂತ ಪ್ರಾಚೀನ ಸಂಸ್ಕೃತಿಗಳಲ್ಲಿ ಖಗೋಳದ ಆಗುಹೋಗುಗಳಿಗೆ ಜನಮಾನಸ ತೀವ್ರ ಭಯ, ಆತಂಕ ಪಟ್ಟಿದ್ದಿದೆ. ಅಂದಿನ ದಿನಗಳಲ್ಲಿ ಆಕಾಶ ಕಾಯಗಳ ಚಹರೆ, ಚಲನವಲನಗಳ ಲಯಬದ್ಧತೆಯೇ ಜನಜೀವನಕ್ಕೆ ಕಾಲದರ್ಶಿ, ದಿಕ್ಸೂಚಿ. ಕಾಳು ಬಿತ್ತಲು, ಕಳೆ ಕೀಳಲು, ಫಸಲು ಸಂಗ್ರಹಿಸಲು ಆಗಸವೇ ಗಡಿಯಾರ. ಸೂರ್ಯ, ಚಂದ್ರರೇ ಮುಳ್ಳುಗಳು. ಗಗನದಲ್ಲಿ ಅಲ್ಪ ಸ್ವಲ್ಪ ವ್ಯತ್ಯಯವಾದರೂ ಏನೋ ಆಗಬಾರದ್ದಾಯಿತೆಂಬ ದಿಗಿಲು, ವ್ಯಾಕುಲ. ಆದರೆ 2000 ವರ್ಷಗಳಿಂದೀಚೆಗೆ ಆಗಸದ ಎಲ್ಲ ಘಟನೆಗಳಿಗೆ ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಿನಲ್ಲಿ ಮಂದಗತಿ ಯಲ್ಲಾದರೂ ವಿವರಣೆಗಳಿಗೆ ಪರಿಶ್ರಮಿಸಲಾಗುತ್ತಿದೆ.

ವಾಸ್ತವ ಮತ್ತು ಮೌಢ್ಯ- ಇವೆರಡರ ನಡುವಿನ ಸಂಘರ್ಷವು ವಿದ್ಯುನ್ಮಾನ ಯುಗವೆಂದು ನಾವು ಮೆರೆ ಯುವ ಇಂದಿನ ನಮಾನಗಳಲ್ಲೂ ಸಾಗಿದೆ. ಇದಕ್ಕೆ ಯಾಂತ್ರಿಕ ತರಗತಿ ಶಿಕ್ಷಣವೇ ಕಾರಣ. ಪರೀಕ್ಷೆಯೇ ವಿದ್ಯಾರ್ಜನೆಯಾದರೆ ಸಾಮಾನ್ಯ ಪ್ರಜ್ಞೆ ಅರಳೀತು ಹೇಗೆ? ಅಂತರಿಕ್ಷದ ವಿರಳತೆಯೇ ಅಂಧಶ್ರದ್ಧೆಗೆ, ದಂತಕಥೆಗೆ, ಕಂದಾಚರಣೆಗೆ, ಮೌಢ್ಯಕ್ಕೆ ಮೂಲ. ಅಂಜಿಕೆಯಿಂದ ಪೂರ್ಣ ಅರಿವಿಗೆ ಬರಲು ಇನ್ನೆಷ್ಟು ಕಾಲ ಬೇಕೆನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.

ಒಂದು ಆಕಾಶಕಾಯ ಇನ್ನೊಂದಕ್ಕೆ ಮರೆಯಾಗುವುದು, ಒಂದಷ್ಟು ಗ್ರಹಗಳು ಸೂರ್ಯನ ಒಂದೇ ಮಗ್ಗುಲಿಗೆ ಬರುವುದು, ಗ್ರಹ ಸೂರ್ಯನಿಗೇ ಅಡ್ಡವಾಗುವುದು, ಧೂಮಕೇತು ಗೋಚರಿಸುವುದು, ಉಲ್ಕೆ ಉರಿದು ಬೀಳುವುದು- ಇಂಥವು ಖಗೋಳ ಧರ್ಮ. ಆಗಸದ ವಿದ್ಯಮಾನಗಳಿಗೆಲ್ಲ ಶುಭ, ಅಶುಭಗಳನ್ನು ಆರೋಪಿಸುವುದು ಅರ್ಥಹೀನ.

ಐರ್ಲೆಂಡ್‌ ಕವಿ ಆಸ್ಕರ್ ವೈಲ್ಡ್ ‘ಸ್ವಾತಂತ್ರ್ಯ, ಪುಸ್ತಕ, ಹೂವು ಮತ್ತು ಚಂದ್ರನಿದ್ದರೆ ಯಾರು ತಾನೇ ಸಂತೋಷಿಗಳಲ್ಲ’ ಎಂದರು. ಎಷ್ಟೋ ಸಂಗತಿಗಳಲ್ಲಿ ಜನಪದರ ಆಂಬೋಣವೇ ಸಮಂಜಸವೆನ್ನಿಸುತ್ತದೆ. ‘ಆಕಾಶ ನೋಡೋಕೆ ನೂಕುನುಗ್ಗಲೇಕೆ?’, ‘ಹೊತ್ತು ಉಟ್ತು, ಹೊತ್ತು ನೆತ್ತಿಗೆ, ಹೊತ್ತು ಮುಳುಗ್ತು’, ‘ತಿಂಗಳ ಮಾಮನಿದ್ದಾಗ ಕಳ್ಳ ಬಂದಾನ’ ಎನ್ನುವಲ್ಲಿ ಅವರ ಆಗಸ ಪ್ರೀತಿ ಅನುರಣಿಸಿರುತ್ತದೆ. ‘ಆಕಾಶಕ್ಕೆ ಏಣಿ ಹಾಕಿದಂತೆ’ ನುಡಿಗಟ್ಟಿನಲ್ಲಿ ಬಾಹ್ಯಾಂತರಿಕ್ಷವು ಅನಂತವೆಂಬ ಪರಿಕಲ್ಪನೆಯಿದೆ. ಇಂದು ನಮ್ಮ ಸೌರವ್ಯೂಹದ ಕಾಯಗಳ ಚಹರೆ, ಚಲನವಲನಗಳು ಬಹುತೇಕ ಪೂರ್ಣವಾಗಿ ನಮಗೆ ತಿಳಿದಿವೆ. ಒಂದು ಗ್ರಹಕ್ಕೆ ಧೂಮಕೇತು ಅಥವಾ ಕ್ಷುದ್ರಗ್ರಹ ಯಾವ ಕ್ಷಣಕ್ಕೆ ಎಷ್ಟು ವೇಗವಾಗಿ ಬಡಿಯಲಿದೆ ಎನ್ನುವುದನ್ನು ನಿಖರವಾಗಿ ಲೆಕ್ಕಹಾಕಲಾಗುತ್ತದೆ. ಇಷ್ಟಾದರೂ ‘ಶಕುನ– ಅಪಶಕುನ’ಗಳು ನಮ್ಮನ್ನು ಕಾಡುತ್ತಿವೆ!

ಸೂರ್ಯ ತುಸು ಬಿಸಿಯೇರಿಸಿಕೊಳ್ಳಲಿ, ಚಂದ್ರ ರವಷ್ಟು ಹಿಗ್ಗಿದಂತೆ ತೋರಲಿ ಅಥವಾ ಉಲ್ಕಾಪಾತ ವಾಗಲಿ, ಹೊಳೆಯುವ ಗ್ರಹ ಮಂಕಾಗಲಿ ಅಲ್ಲೋಲ ಕಲ್ಲೋಲವೇ ಕಾದಿದೆ ಎನ್ನುವಂತೆ ಹೆದರುವುದು ಸಲ್ಲದು. ‘ನೀಲಿ ಚಂದಿರ’ನ ಹುಸಿ ವೈಭವೀಕರಣ ಸಲ್ಲದು, ಅದಕ್ಕೆ ಕೆಂಪುಹಾಸಿನ ಸ್ವಾಗತ ಅಗತ್ಯವಿಲ್ಲ. ಲೆಕ್ಕಕ್ಕೂ, ಆಟಕ್ಕೂ ಇಲ್ಲದ ‘ನೀಲಿ ಚಂದಿರ’ನ ಬೆನ್ನೇರದೆ, ಅಂದು ಪೂರ್ಣಿಮೆ ಎಂದು ಸಡಗರಿಸುವುದೇ ಜಾಣ್ಮೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು