ಶುಕ್ರವಾರ, ಜೂನ್ 25, 2021
24 °C
ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸುವುದು, ಆರೋಗ್ಯ ಕ್ಷೇತ್ರದಲ್ಲಿನ ಸಂಶೋಧನಾ ಚಟುವಟಿಕೆಗೆ ಒತ್ತು ನೀಡುವುದರ ಕಡೆಗೆ ಸರ್ಕಾರ ಈಗಲಾದರೂ ಇಚ್ಛಾಶಕ್ತಿ ತೋರಬೇಕು

ಸಂಗತ | ಆರೋಗ್ಯ ಕ್ಷೇತ್ರ: ಮಹತ್ವ ಮನಗಾಣಿ

ಡಾ. ಎನ್.‌ಸತೀಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌– 19 ದೇಶದಾದ್ಯಂತ ವ್ಯಾಪಿಸಿ ಜನರನ್ನು ದಿಕ್ಕೆಡಿಸಿರುವ ಈ ಸಂದರ್ಭವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಪುನರ್‌ವಿಮರ್ಶೆಗೆ ಒಳಪಡಿಸುವ ಅಗತ್ಯವನ್ನು ಒತ್ತಿ ಹೇಳುತ್ತಿದೆ. ಈಗಿನ ವಿಷಮ ಸ್ಥಿತಿಯಲ್ಲಿ ಸಾರ್ವಜನಿಕರ ವೈದ್ಯಕೀಯ ವೆಚ್ಚವನ್ನು ಭರಿಸಬೇಕಾದದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಾಥಮಿಕ ಕರ್ತವ್ಯವೇ ಸರಿ.

ಸಾರ್ವಜನಿಕ ಆರೋಗ್ಯವು ರಾಜ್ಯ ಪಟ್ಟಿಯಲ್ಲಿ ಬರುವ ವಿಷಯ. ಆದರೂ ಕೇಂದ್ರ ಸರ್ಕಾರವು ಸಂವಿಧಾನದ 249ನೇ ವಿಧಿಯಡಿ ಸಾರ್ವಜನಿಕ ಆರೋಗ್ಯವನ್ನು ‘ರಾಷ್ಟ್ರೀಯ ಹಿತಾಸಕ್ತಿ’ ಎಂದು ಪರಿಗಣಿಸಿ, ಪ್ರತ್ಯೇಕ ಕಾನೂನನ್ನು ರಚಿಸುವ ಅವಶ್ಯಕತೆ ಇದೆ. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಸಂಬಂಧ 1897ರಲ್ಲಿ ರಚಿತವಾದ ಹಳೆ ಕಾಯ್ದೆಯನ್ನೇ ಕೆಲವು ತಿದ್ದುಪಡಿಗಳೊಂದಿಗೆ ಈಗಲೂ ಮುಂದುವರಿಸಿರುವುದು ಅವೈಜ್ಞಾನಿಕ ಹಾಗೂ ಅಸಮಂಜಸ.

ಅಲ್ಲದೆ ಈ ಸಾರ್ವಜನಿಕ ಆರೋಗ್ಯ ಹಕ್ಕನ್ನು ಸಂವಿಧಾನದ ಭಾಗ-3ರ ಮೂಲಭೂತ ಹಕ್ಕಿನ ಅಡಿಯಲ್ಲಿ ಸೇರಿಸದೇ ಇರುವುದು ದುರ್ದೈವದ ಸಂಗತಿ. ಈ ಸಂಬಂಧ ಸುಪ್ರೀಂ ಕೋರ್ಟ್‌ ಹಲವಾರು ಪ್ರಕರಣಗಳಲ್ಲಿ, ಸಾರ್ವಜನಿಕ ಆರೋಗ್ಯ ಹಕ್ಕು ಕೂಡ ಒಂದು ಮೂಲಭೂತ ಹಕ್ಕಾಗಿದ್ದು, ಅದರ ಉಲ್ಲಂಘನೆ ಆದಂತಹ ಸಂದರ್ಭದಲ್ಲಿ ರಾಜ್ಯವನ್ನು ಹೊಣೆ ಮಾಡಬಹುದು ಎಂದು ಹೇಳಿರುವುದು ಗಮನಾರ್ಹ.

ರಾಕೇಶ್ ಚಂದ್ರ ನಾರಾಯಣ್ ವಿರುದ್ಧ ಬಿಹಾರ್ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಪ್ರತಿಯೊಬ್ಬ ನಾಗರಿಕನಿಗೂ ವೈದ್ಯಕೀಯ ಸೌಲಭ್ಯ ಹಾಗೂ ಸವಲತ್ತುಗಳನ್ನು ಆಯಾ ರಾಜ್ಯಗಳು ವ್ಯವಸ್ಥಿತವಾಗಿ ನೀಡಬೇಕು ಎಂದು ನಿರ್ದೇಶಿಸಿದೆ. ಮಜ್ದೂರ್ ಸಭಾ ಸಮಿತಿ ಪ್ರಕರಣದಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳು ಲಭ್ಯವಿಲ್ಲದಿದ್ದರೆ, ಅದು ಸಾರ್ವಜನಿಕ ಆರೋಗ್ಯ ಹಕ್ಕಿನ ಉಲ್ಲಂಘನೆ ಮಾಡಿದಂತೆ ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್‌ ತೀರ್ಪನ್ನು ಆಧರಿಸಿ ಕೇಂದ್ರ ಸರ್ಕಾರವು ಸಾರ್ವಜನಿಕ ಆರೋಗ್ಯದ ಹಕ್ಕನ್ನು ಸಂವಿಧಾನದ ತಿದ್ದುಪಡಿಯ ಮೂಲಕ ಮೂಲಭೂತ ಹಕ್ಕಿನಡಿ ಸೇರಿಸಬೇಕೆಂದು ರಾಷ್ಟ್ರೀಯ ಆರೋಗ್ಯ ನೀತಿ– 2015ರಲ್ಲಿ ಶಿಫಾರಸು ಮಾಡಿತು. ನಂತರ, ಆರೋಗ್ಯ ತುರ್ತುಸ್ಥಿತಿಯ ಸಂದರ್ಭದಲ್ಲಿ ಸರ್ಕಾರಿ ಸಂಸ್ಥೆಗಳಿಗೆ ಅಧಿಕಾರ ನೀಡುವ ಅಗತ್ಯವನ್ನು ಉಲ್ಲೇಖಿಸಿ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಹಾಗೂ ಆರೋಗ್ಯ ಸೇವೆಗಳ ನಿರ್ದೇಶನಾಲಯವು ಜಂಟಿಯಾಗಿ ಸಾರ್ವಜನಿಕ ಆರೋಗ್ಯ (ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ, ಜೈವಿಕ ಭಯೋತ್ಪಾದನೆ ಮತ್ತು ವಿಪತ್ತುಗಳು) ಮಸೂದೆ- 2017 ಅನ್ನು ಸಿದ್ಧಪಡಿಸಿದವು. ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ಕೂಲಂಕಷವಾಗಿ ಪರಿಹರಿಸುವುದು ಮತ್ತು ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಹಳೆ ಕಾಯ್ದೆ ರದ್ದುಗೊಳಿಸುವ ಪ್ರಸ್ತಾವವನ್ನು ಈ ಮಸೂದೆಯಲ್ಲಿ ಸೇರಿಸಲಾಗಿತ್ತು. ಆದರೆ, ಸರ್ಕಾರದ ಬದ್ಧತೆಯ ಕೊರತೆಯಿಂದ ಮಸೂದೆಯು ಸಂಸತ್ತಿನಲ್ಲಿ ಮಂಡನೆಯಾಗಲೇ ಇಲ್ಲ.

ಇಂದು, ಹಳೆಯ ಬ್ರಿಟಿಷ್ ವಸಾಹತು ಕಾಯ್ದೆಯಾದ ಸಾಂಕ್ರಾಮಿಕ ರೋಗ ತಡೆ ಕಾಯ್ದೆ– 1897 ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ– 2005ರ ಮೂಲಕ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವುದು ವಿಪರ್ಯಾಸವೇ ಹೌದು. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ಅತಿ ಹೆಚ್ಚು ಅಧಿಕಾರ ಕೊಡುವಂತಹ ಸಾರ್ವಜನಿಕ ತುರ್ತು ಆರೋಗ್ಯ ಕಾಯ್ದೆಯನ್ನು ರಚಿಸುವ ಅಗತ್ಯವಿದೆ. ಸುಗ್ರೀವಾಜ್ಞೆ ಮೂಲಕ ಕೆಳಕಂಡ ಅಧಿಕಾರಗಳನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡಿ ನಾಗರಿಕರ ಆರೋಗ್ಯವನ್ನು ಕಾಪಾಡಲು ಮುಂದಾಗಬೇಕಾಗಿದೆ. ಅವುಗಳೆಂದರೆ:

ಸರ್ಕಾರಿ ಆಸ್ಪತ್ರೆಗಳ ಸಂಖ್ಯೆ ಕಡಿಮೆ ಇದ್ದು, ಅತಿ ಹೆಚ್ಚು ಸಾವುನೋವು ಸಂಭವಿಸುವಂತಹ ಕೆಟ್ಟ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರವು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು. ಹೆಚ್ಚೆಚ್ಚು ವೆಂಟಿಲೇಟರ್‌ಗಳು, ಆಕ್ಸಿಜನ್ ಕೇಂದ್ರಗಳು ಹಾಗೂ ತುರ್ತು ಅತ್ಯವಶ್ಯಕ ಲಸಿಕೆಗಳು, ಅಗತ್ಯ ಔಷಧಿಗಳನ್ನು ಎಲ್ಲ ಸಾರ್ವಜನಿಕರಿಗೂ ದೊರಕುವಂತೆ ಮಾಡಬೇಕು. ಔಷಧ ಲಭ್ಯತೆ ಹಾಗೂ ಕ್ರಮಬದ್ಧವಾದ ವೈದ್ಯಕೀಯ ನಿರ್ವಹಣೆ ಬಗ್ಗೆ ನಿಗಾ ವಹಿಸಲು ಕಾರ್ಯಪಡೆ ರಚಿಸಿ, ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುವ ಅವ್ಯವಹಾರಗಳನ್ನು ತಡೆಗಟ್ಟಲು ಪ್ರಯತ್ನಿಸಬೇಕು.

ಹಾಸ್ಟೆಲ್‌ಗಳು, ದೇವಾಲಯಗಳು, ಮಠ- ಮಸೀದಿ, ಚರ್ಚ್, ಕಲ್ಯಾಣ ಮಂಟಪ ಹಾಗೂ ಇತರ ಪ್ರದೇಶಗಳನ್ನು ಕೋವಿಡ್ ಆರೈಕೆ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿ ತೆರಿಗೆ ವಿನಾಯಿತಿ ಮೂಲಕ, ದೊಡ್ಡ ಕಂಪನಿಗಳು ಸರ್ಕಾರದ ಜೊತೆ ಕೈಜೋಡಿಸಿ, ವೈದ್ಯಕೀಯ ಸಾಮಗ್ರಿ ಒದಗಿಸಿಕೊಡುವಂತೆ ನೋಡಿಕೊಳ್ಳಬೇಕು. ಕೋವಿಡ್ ಸನ್ನಿವೇಶವನ್ನು ನಿಯಂತ್ರಿಸಲು ಅಸಮರ್ಥವಾಗುವ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆಯ ಮೂಲಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಹೇರಬೇಕು.

ಬಜೆಟ್‌ನಲ್ಲಿ ಇನ್ನು ಮುಂದಾದರೂ ಹೆಚ್ಚು ಅನುದಾನವನ್ನು ಸರ್ಕಾರಿ ಆಸ್ಪತ್ರೆಗಳ ನಿರ್ಮಾಣಕ್ಕೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಶೋಧನೆಗಳನ್ನು ನಡೆಸಲು ಮೀಸಲಿಡುವಂತೆ ಮಾಡಬೇಕು.

ಎಲ್ಲಕ್ಕಿಂತ ಬಹುಮುಖ್ಯವಾಗಿ, ಜನ ತಮ್ಮ ಮೂಲ ಭೂತ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ, ಸಾರ್ವಜನಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಾಧ್ಯ.

ಲೇಖಕ: ಸಹಪ್ರಾಧ್ಯಾಪಕ, ಕಾನೂನು ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು