ಭಾನುವಾರ, ಫೆಬ್ರವರಿ 28, 2021
29 °C
ಮಾಹಿತಿ ಹಕ್ಕು ಅಧಿನಿಯಮದ ಅಡಿ ಒಬ್ಬರೇ ನೂರಾರು ಅರ್ಜಿಗಳನ್ನು ಸಲ್ಲಿಸುತ್ತಿರುವುದನ್ನು ತಡೆಗಟ್ಟಲು ಸದ್ಯಕ್ಕಂತೂ ಸಾಧ್ಯವಿಲ್ಲ

ಹೆಚ್ಚು ಬಾರಿ ‘ಮಾಹಿತಿ’ ಕೇಳುವುದೂ ಹಕ್ಕು

ವೈ.ಜಿ.ಮುರಳೀಧರನ್ Updated:

ಅಕ್ಷರ ಗಾತ್ರ : | |

Prajavani

ಮಾಹಿತಿ ಹಕ್ಕು ಅಧಿನಿಯಮದ ಅಡಿ ನಾಗರಿಕರು ಎಷ್ಟು ಅರ್ಜಿಗಳನ್ನು ಸಲ್ಲಿಸಹುದು? ಸುಪ್ರೀಂ ಕೋರ್ಟ್ ಈ ಕುರಿತು ತೀರ್ಪು ನೀಡಿದೆಯೇ? ಈ ಪ್ರಶ್ನೆಗಳು ಈಗ ಚರ್ಚೆಗೆ ಗ್ರಾಸವಾಗಿವೆ. ಇದಕ್ಕೆ ಕಾರಣ, ಕರ್ನಾಟಕ ಮಾಹಿತಿ ಆಯೋಗವು ಮಾಚೋಹಳ್ಳಿಯ ನಿವಾಸಿ ಗಂಗನರಸಿಂಹಯ್ಯ ಎಂಬುವರ ವಿಷಯದಲ್ಲಿ ಕಳೆದ ವರ್ಷ ನೀಡಿರುವ ತೀರ್ಪು. ಈ ತೀರ್ಪಿನ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇರಲಿಲ್ಲ. ಆದರೆ, ಅದನ್ನು ಆಧರಿಸಿ ಮಾಹಿತಿ ಹಕ್ಕು ಅಧಿಕಾರಿಗಳು ಕೈಗೊಳ್ಳುತ್ತಿರುವ ನಿರ್ಧಾರಗಳನ್ನು ಇತ್ತೀಚೆಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡಿರುವುದು ಚರ್ಚೆಗೆ ನಾಂದಿ ಹಾಡಿದೆ. 

‘ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ’ಯ ಹೆಸರಿನಲ್ಲಿ, ವಿಶ್ವೇಶ್ವರಪುರ ಗ್ರಾಮ ಪಂಚಾಯಿತಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅರ್ಜಿ ಸಲ್ಲಿಸಿ, ಆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜಮೀನು, ಲೇಔಟ್ ಪರಿವರ್ತನೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿವರ ಕೇಳಿದ್ದರು. ಮಾಹಿತಿ ಕೇಳುವಾಗ ‘ಎಷ್ಟು’ ಎಂಬ ಪದ ಉಪಯೋಗಿಸಿದ್ದರು. ಅಧಿಕಾರಿ ಎರಡು ಕಾರಣಗಳನ್ನು ನೀಡಿ ಅರ್ಜಿಯನ್ನು ತಿರಸ್ಕರಿಸಿದ್ದರು. ಮೊದಲನೆಯದಾಗಿ, ಅರ್ಜಿದಾರರು ವೈಯಕ್ತಿಕ ಹೆಸರಿನಲ್ಲಿ ಮಾಹಿತಿ ಕೇಳದೆ ಒಂದು ಸಂಸ್ಥೆಯ ಹೆಸರಿನಲ್ಲಿ ಕೇಳಿದ್ದಾರೆಂದು ಹಾಗೂ ಎರಡನೆಯದಾಗಿ, ಅಧಿನಿಯಮದ ಪ್ರಕಾರ ‘ಎಷ್ಟು’, ‘ಎಲ್ಲಿ’, ‘ಯಾಕೆ’ ಇತ್ಯಾದಿಗೆ ಉತ್ತರಿಸುವ ಅವಕಾಶಇಲ್ಲವೆಂದು ಹೇಳಿದ್ದರು. ಅರ್ಜಿದಾರರು ಕರ್ನಾಟಕ ಮಾಹಿತಿ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಈ ವಿಚಾರಣೆ ವೇಳೆ ಸಾರ್ವಜನಿಕ ಮಾಹಿತಿ ಅಧಿಕಾರಿಯು, ನಾಗರಿಕರು ವರ್ಷದಲ್ಲಿ ಗರಿಷ್ಠ ಮೂರು ಅರ್ಜಿಗಳನ್ನು ಮಾತ್ರ ಸಲ್ಲಿಸಬಹುದೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದು ಹೇಳಿದ್ದರು. ಆಯೋಗ ತನ್ನ ತೀರ್ಪಿನಲ್ಲಿ ಇದನ್ನು ಗಣನೆಗೆ ತೆಗೆದು
ಕೊಳ್ಳದಿದ್ದರೂ ಆ ಹೇಳಿಕೆಯನ್ನು ಉಲ್ಲೇಖಿಸಿದೆ. ಒಬ್ಬ ವ್ಯಕ್ತಿಯಿಂದ ನೂರಾರು ಅರ್ಜಿಗಳನ್ನು ಪಡೆದು ಮಾಹಿತಿ ನೀಡಿ ಸುಸ್ತಾಗಿರುವ ಮಾಹಿತಿ ಅಧಿಕಾರಿಗಳು, ಇದೊಂದು ವರದಾನ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಅವರ ಈ ಸಂತಸಕ್ಕೆ ಯಾವುದೇ ಆಧಾರವಿಲ್ಲ.

ಒಬ್ಬ ವ್ಯಕ್ತಿ ವರ್ಷದಲ್ಲಿ ಎಷ್ಟು ಅರ್ಜಿಗಳನ್ನು ಸಲ್ಲಿಸಬಹುದು ಎಂಬ ಬಗ್ಗೆ ಅಧಿನಿಯಮದಲ್ಲಿ ಉಲ್ಲೇಖವಿಲ್ಲ. ಸುಪ್ರೀಂ ಕೋರ್ಟ್ ಸಹ ಈ ಬಗ್ಗೆ ಯಾವುದೇ ತೀರ್ಪು ನೀಡಿಲ್ಲ. ಕೆಲವೇ ವ್ಯಕ್ತಿಗಳು ನೂರಾರು ಅರ್ಜಿಗಳನ್ನು ಸಲ್ಲಿಸುತ್ತಿರುವುದರಿಂದ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿರುವುದು ನಿಜವಾದರೂ, ಸದ್ಯಕ್ಕೆ ಅದನ್ನು ತಡೆಗಟ್ಟಲು ಸಾಧ್ಯವಿಲ್ಲ.

ಪ್ರಸ್ತುತ ಪ್ರಕರಣದಲ್ಲಿ ಅಧಿಕಾರಿ ಈ ರೀತಿ ತಪ್ಪು ಹೇಳಿಕೆ ನೀಡಿರುವುದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಸುಪ್ರೀಂ ಕೋರ್ಟ್ ನೀಡಿದೆ ಎನ್ನಲಾದ ತೀರ್ಪಿನ ಪ್ರತಿಯನ್ನು ಆಯೋಗ ಕೇಳಬೇಕಿತ್ತು. ಆದರೆ ಮಾಹಿತಿ ಆಯುಕ್ತರು ತೀರ್ಪಿನಲ್ಲಿ ಅದನ್ನು ಉಲ್ಲೇಖಿಸಿದ್ದರೂ ಅದರ ಬಗ್ಗೆ ಏನನ್ನೂ ಹೇಳದಿರುವುದು ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ. 

ಯಾಕೆ, ಏನು, ಎಷ್ಟು, ಎಲ್ಲಿ ಎಂಬಂತಹ ಪ್ರಶ್ನೆಗಳನ್ನು ಕೇಳುವಂತಿಲ್ಲವೆಂದು, ಹೀಗೆ ಕೇಳುವುದು ಅಧಿನಿಯಮದ ಪ್ರಕಾರ ‘ಮಾಹಿತಿ’ ಆಗುವುದಿಲ್ಲವೆಂದು ತೀರ್ಪು ನೀಡಲಾಗಿದೆ. ಆಯೋಗವು ಇದನ್ನು ಪುಷ್ಟೀಕರಿಸಲು ಇತರೆ ಮಾಹಿತಿ ಆಯೋಗ ಮತ್ತು ನ್ಯಾಯಾಲಯದ ತೀರ್ಪುಗಳನ್ನು ಉಲ್ಲೇಖಿಸಿದೆ. ಆದರೆ ಪ್ರಶ್ನಾರ್ಥಕವಾಗಿ ಕೇಳುವುದೆಲ್ಲವನ್ನೂ ‘ಮಾಹಿತಿ’ ಆಗುವುದಿಲ್ಲ ಎಂಬ ಕಾರಣ ನೀಡಿ ತಿರಸ್ಕರಿಸಲು ಸಾಧ್ಯವಿಲ್ಲ. ಅರ್ಜಿದಾರರು ಕೇಳಿರುವ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಕಡತದಲ್ಲಿದ್ದರೆ ಅದನ್ನು ನೀಡಬೇಕಾಗುತ್ತದೆ ಎಂದು ಎಲ್ಲ ತೀರ್ಪುಗಳೂ ಸ್ಪಷ್ಟಪಡಿಸಿವೆ.

ಪ್ರಸ್ತುತ ಪ್ರಕರಣದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನಿನ ವಿಸ್ತೀರ್ಣ ಎಷ್ಟು, ಲೇಔಟ್‍ಗಳು ಎಷ್ಟಿವೆ ಎಂದು ಕೇಳಿದ್ದಾರೆ. ಈ ಮಾಹಿತಿಯನ್ನು ಪ್ರಶ್ನೆಯ ರೂಪದಲ್ಲಿ ಕೇಳದೆ ಮತ್ತಿನ್ಯಾವ ರೀತಿ ಕೇಳಲು ಸಾಧ್ಯ? ಮೇಲಾಗಿ ಪಂಚಾಯಿತಿಯು ಅಧಿನಿಯಮದ ಸೆಕ್ಷನ್ 4(1)(ಬಿ) ಪ್ರಕಾರ ಈ ಮಾಹಿತಿಯನ್ನು ಸ್ವಯಂ ಪ್ರೇರಿತವಾಗಿ ಪ್ರಕಟಿಸಬೇಕು. ಲೇಔಟ್ ಮಾಡಲು ಸ್ವೀಕರಿಸಿರುವ ಅರ್ಜಿಗಳ ವಿವರವನ್ನೂ ಪ್ರಕಟಿಸಿ ತನ್ನ ವೆಬ್‍ಸೈಟ್‍ನಲ್ಲಿ ಅಳವಡಿಸಬೇಕು. ಕರ್ನಾಟಕ ಸರ್ಕಾರದ ‘ಪಂಚಮಿತ್ರ’ ಎಂಬ ವೆಬ್‍ ಜಾಲತಾಣದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ವಿಷಯವನ್ನೂ ಅಳವಡಿಸಲಾಗಿದ್ದು, ಅದರಲ್ಲಿ ವಿಸ್ತೀರ್ಣದ ವಿವರವೂ ಇದೆ. ಬಹಿರಂಗ ಆಗಿರುವ ಮಾಹಿತಿಯನ್ನು ಯಾರು ಯಾವ ರೂಪದಲ್ಲಿ ಕೇಳಿದರೂ ಅದನ್ನು ಕೊಡುವುದಕ್ಕೆ ಅಡಚಣೆ ಏನು?

ಸಂಘ ಅಥವಾ ಸಂಸ್ಥೆಗಳು ಈ ಅಧಿನಿಯಮದ ಮೂಲಕ ಮಾಹಿತಿ ಕೇಳುವುದಕ್ಕೆ ಅರ್ಹವಲ್ಲ ಎಂಬುದು ನಿಜ. ಆದರೆ ಅಧಿನಿಯಮ ಜಾರಿಗೆ ಬಂದ ಈ 13 ವರ್ಷಗಳಲ್ಲಿ ಆಯೋಗಗಳು ಮತ್ತು ನ್ಯಾಯಾಲಯಗಳು, ಅಧಿನಿಯಮದಲ್ಲಿ ಬಳಸಿರುವ ಪದಗಳ ಅರ್ಥ
ವನ್ನು ತೀರ್ಪುಗಳಲ್ಲಿ ವಿಸ್ತಾರವಾಗಿ ವ್ಯಾಖ್ಯಾನಿಸಿವೆ. ಒಬ್ಬ ವ್ಯಕ್ತಿಯು ಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ಅರ್ಜಿ ಸಲ್ಲಿಸಿ, ಕೊನೆಯಲ್ಲಿ ತನ್ನ ಹೆಸರು, ಹುದ್ದೆ, ಸಹಿ ಹಾಕಿದ್ದಲ್ಲಿ ಅದನ್ನು ವ್ಯಕ್ತಿ ತನ್ನ ಸಂಸ್ಥೆಗಾಗಿ ಮಾಹಿತಿ ಕೇಳುತ್ತಿದ್ದಾನೆ ಎಂದು ಅರ್ಥೈಸಿ, ಮಾಹಿತಿ ನೀಡಬೇಕೆಂಬ ಅಭಿಪ್ರಾಯಕ್ಕೆ ಬರಲಾಗಿದೆ. ಅಂತಹ ಸಂದರ್ಭದಲ್ಲಿ ಲೆಟರ್‌ಹೆಡ್‌ ಅನ್ನು ಕೇವಲ ಅಂಚೆ ವಿಳಾಸ ಎಂದು ಭಾವಿಸಬೇಕೆಂದು ಸಹ ಹೇಳಲಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಈ ಅಗತ್ಯಗಳನ್ನು ಪೂರೈಸಿದ್ದಲ್ಲಿ, ಅರ್ಜಿಯನ್ನು ತಿರಸ್ಕರಿಸಲು ಸಾಧ್ಯವಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.