-ರಾಜಕುಮಾರ ಕುಲಕರ್ಣಿ

ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ತರಬೇತಿ ಶಿಬಿರದಲ್ಲಿ ಇತ್ತೀಚೆಗೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದೆ. ಶಿಬಿರಾರ್ಥಿಗಳಲ್ಲಿ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಹೊಸ ಸಂಗತಿಗಳನ್ನು ತಿಳಿದುಕೊಳ್ಳಬೇಕೆನ್ನುವ ಆಸಕ್ತಿ ಮತ್ತು ಕುತೂಹಲ ಇದ್ದುದು ಕಂಡುಬಂತು. ಉಪನ್ಯಾಸದ ಕೊನೆಗೆ ಇಪ್ಪತ್ತು ಪ್ರಶ್ನೆಗಳ ಕಿರುಪರೀಕ್ಷೆಯನ್ನು ನೀಡಲಾಯಿತು. ಪಡೆದ ಅಂಕಗಳನ್ನು ಆಧರಿಸಿ, ಅವರಿಗೆ ವೃತ್ತಿಯಲ್ಲಿ ಆಸಕ್ತಿ ಇದೆಯೋ ಇಲ್ಲವೋ ಎಂಬುದನ್ನು ಮೌಲ್ಯಮಾಪನದ ಮೂಲಕ ಗುರುತಿಸಲಾಯಿತು. ಪ್ರತಿಶತ 90ರಷ್ಟು ಶಿಬಿರಾರ್ಥಿಗಳು ವೃತ್ತಿಯಲ್ಲಿ ಆಸಕ್ತಿ ಇರುವ ಗುಂಪಿಗೆ ಸೇರ್ಪಡೆಯಾದರು.

‘ನಿಮ್ಮ ಗ್ರಂಥಾಲಯ ವ್ಯಾಪ್ತಿಯಲ್ಲಿನ ಓದುಗರಿಗೆ ಅಗತ್ಯವಾದ ಪುಸ್ತಕಗಳು ನಿಮ್ಮಲ್ಲಿವೆಯೇ’ ಎಂದು ಶಿಬಿರಾರ್ಥಿಗಳನ್ನು ಕೇಳಿದಾಗ, ಹೆಚ್ಚಿನವರ ಉತ್ತರ ನಕಾರಾತ್ಮಕವಾಗಿತ್ತು. ಪುಸ್ತಕ ಆಯ್ಕೆ ಸಮಿತಿಯಾಗಲೀ, ಕೇಂದ್ರ ಗ್ರಂಥಾಲಯವಾಗಲೀ ಗ್ರಾಮೀಣ ಗ್ರಂಥಾಲಯಗಳಿಂದ ಬೇಡಿಕೆಯ ಪುಸ್ತಕಗಳ ಪಟ್ಟಿಯನ್ನು ಪಡೆಯುವುದಿಲ್ಲವೆಂಬ ಸಂಗತಿ ತಿಳಿದುಬಂತು. ಕೇಂದ್ರ ಗ್ರಂಥಾಲಯ ಪೂರೈಸುವ ಪುಸ್ತಕಗಳನ್ನಷ್ಟೇ ಸಂಗ್ರಹಿಸಿಡುವ ಕೆಲಸ ತಮ್ಮದೆಂದು ಕೆಲವರು ಬೇಸರ ವ್ಯಕ್ತಪಡಿಸಿದರು. ಪರಿಣಾಮವಾಗಿ, ಗ್ರಾಮೀಣ ಭಾಗದ ಓದುಗರಿಗೆ ಅಗತ್ಯವಾದ ಪುಸ್ತಕಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ರಾಜ್ಯದ ಗ್ರಾಮೀಣ ಭಾಗದ ಜನಜೀವನ, ಉದ್ಯೋಗ, ಕೃಷಿಯಲ್ಲಿ ವಿಭಿನ್ನತೆ ಇದೆ. ಹೀಗಾಗಿ, ಒಂದೇ ಪ್ರಕಾರದ ಪುಸ್ತಕಗಳನ್ನು ಎಲ್ಲ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಒದಗಿಸುವುದು ಅವೈಜ್ಞಾನಿಕ. ಐದು ಸಾವಿರಕ್ಕೂ ಹೆಚ್ಚು ಪಂಚಾಯಿತಿ ಗ್ರಂಥಾಲಯಗಳು ರಾಜ್ಯದಲ್ಲಿವೆ. ಇವನ್ನು ವಿಭಾಗವಾರು ವಿಂಗಡಿಸಿ, ಆಯಾ ಭಾಗದ ಜನರ ಆಸಕ್ತಿ, ಅಭಿರುಚಿ, ಅಗತ್ಯಗಳಿಗೆ ಅನುಸಾರವಾಗಿ ಪುಸ್ತಕಗಳು ಪೂರೈಕೆಯಾಗಬೇಕು.

ಕಥೆ, ಕಾದಂಬರಿಯಂತಹ ಸಾಹಿತ್ಯ ಕೃತಿಗಳನ್ನು ಮಾತ್ರ ಗ್ರಂಥಾಲಯಗಳಲ್ಲಿ ಸಂಗ್ರಹಿಸಿ ಇಡುತ್ತೇವೆ ಎನ್ನುವುದು ವಿತಂಡವಾದವಾಗುತ್ತದೆ. ಗ್ರಂಥಾಲಯಗಳು ಮಾಹಿತಿ ಕೇಂದ್ರಗಳೂ ಆಗಬೇಕಾಗಿರುವುದರಿಂದ ಆಯಾ ಗ್ರಾಮೀಣ ಪ್ರದೇಶದ ಕೃಷಿ, ಪರಿಸರ, ಸರ್ಕಾರದ ಸವಲತ್ತುಗಳು ಮತ್ತು ಜನಜೀವನವನ್ನು ಆಧರಿಸಿದ ಪುಸ್ತಕಗಳು ಸಿಗುವಂತೆ ಆಗಬೇಕು. ಗ್ರಾಮೀಣ ಭಾಗದ ಮಕ್ಕಳ ಓದಿನ ಅಭಿರುಚಿಯ ವಿಕಸನಕ್ಕೆ ಅಗತ್ಯವಾದ ಪುಸ್ತಕಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನೆರವಾಗುವ ಮಾಹಿತಿ ಕೂಡ ಲಭ್ಯವಾಗಬೇಕು.

ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಗ್ರಂಥಾಲಯಗಳ ದುಃಸ್ಥಿತಿ ಕುರಿತು ಬರೆಯುತ್ತ ಹೀಗೆ ಹೇಳುತ್ತಾರೆ, ‘ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಬೇಕಾದ ಮೂಲ ಅಗತ್ಯಗಳಾದ ಸುಸಜ್ಜಿತ ಕಟ್ಟಡ, ಕಪಾಟುಗಳು, ಅಗತ್ಯದ ಗ್ರಂಥಗಳು, ಎಲ್ಲ ಪತ್ರಿಕೆಗಳನ್ನು ಒದಗಿಸಿಕೊಟ್ಟರೆ ನಮ್ಮ ಸಾಮಾಜಿಕ ರಚನೆಯ ಸ್ವರೂಪವೇ ಬದಲಾಗಬಹುದು. ಹಳ್ಳಿಯ ರೈತನೊಬ್ಬನಿಗೆ ಅಗತ್ಯವಾದ ಮಾಹಿತಿ ಇಂತಹ ಗ್ರಂಥಾಲಯಗಳಲ್ಲಿ ಸಿಗುವಂತೆ ಅದರ ಸ್ವರೂಪವನ್ನು ರೂಪಿಸಿದರೆ ನಮ್ಮ ಗ್ರಂಥಾಲಯಗಳು ಜನಸ್ನೇಹಿಯಾಗಬಹುದು’.

ಗ್ರಂಥಾಲಯ ಇಲಾಖೆಯು ಪುಸ್ತಕ ಆಯ್ಕೆ ಮತ್ತು ಖರೀದಿ ಪ್ರಕ್ರಿಯೆಯನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ಪುಸ್ತಕಗಳ ಆಯ್ಕೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಲಹೆ, ಸೂಚನೆಗಳನ್ನು ಪಡೆಯುತ್ತಿಲ್ಲ. ಜಿಲ್ಲಾ ಕೇಂದ್ರ ಗ್ರಂಥಾಲಯಗಳಿಗೂ ಜಿಲ್ಲೆಯ ಲೇಖಕರು, ಪ್ರಕಾಶಕರ ಇಂತಿಷ್ಟು ಪ್ರಮಾಣದ ಪುಸ್ತಕಗಳ ಖರೀದಿಯನ್ನು ಹೊರತುಪಡಿಸಿದರೆ ಹೆಚ್ಚಿನ ಅಧಿಕಾರವಿಲ್ಲ. ಅನೇಕ ಪ್ರಕಾಶಕರು ಆರೋಪಿಸುವಂತೆ, ಕೆಲವು ಪುಸ್ತಕ ಪ್ರಕಾಶಕರು ಆಯ್ಕೆ ಸಮಿತಿ ಮತ್ತು ಗ್ರಂಥಾಲಯ ಇಲಾಖೆಯ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ.

ಸಾರ್ವಜನಿಕ ಗ್ರಂಥಾಲಯಗಳಿಗೆಂದೇ ಪುಸ್ತಕಗಳನ್ನು ಪ್ರಕಟಿಸುವ ಇಂಥ ಪ್ರಕಾಶಕರು ಒಬ್ಬರೇ ಹಲವು ಹೆಸರಿನ ಪ್ರಕಾಶನ ಸಂಸ್ಥೆಗಳ ಮೂಲಕ ಪುಸ್ತಕಗಳನ್ನು ಪೂರೈಸುತ್ತಾರೆ. ಇಲ್ಲಿ ಅಧಿಕಾರಿಗಳು ಮತ್ತು ಪ್ರಕಾಶಕರ ವೈಯಕ್ತಿಕ ಹಿತಾಸಕ್ತಿ ಮುನ್ನೆಲೆಗೆ ಬಂದು, ಓದುಗರ ಬೇಡಿಕೆ ಮತ್ತು ಅಗತ್ಯ ಹಿನ್ನೆಲೆಗೆ ಸರಿಯುತ್ತವೆ. ಇಂಥ ವಾತಾವರಣದಲ್ಲಿ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರು ಓದುಗರ ಬೇಡಿಕೆಗೆ ಸ್ಪಂದಿಸುವುದು ದೂರದ ಮಾತು.

ಇತ್ತೀಚೆಗೆ ನಿಧನರಾದ ವಿಮರ್ಶಕ ಜಿ.ಎಚ್.ನಾಯಕ ಅವರ ಕುರಿತು ಬರೆದ ಲೇಖನದಲ್ಲಿ ಎಚ್.ಎಸ್.ರಾಘವೇಂದ್ರ ರಾವ್ ಅವರು ಉಲ್ಲೇಖಿಸಿರುವ ಒಂದು ಪ್ರಕರಣ ಹೀಗಿದೆ- ‘ನಾಯಕ್ ಅವರು ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ನೇಮಕವಾದಾಗ ಎರಡೋ ಮೂರೋ ದಿನಗಳಲ್ಲಿ ಸಾವಿರಾರು ಪುಸ್ತಕಗಳನ್ನು ಆಯ್ಕೆ ಮಾಡಬೇಕಾಗಿ ಬಂತು. ಸರಿಯಾಗಿ ಓದಿ ಮೌಲ್ಯಮಾಪನ ಮಾಡಲು ಅವಕಾಶ ಕೊಡದಿದ್ದರೆ ಈ ಕೆಲಸವೇ ಬೇಡವೆಂದು ಆ ಕ್ಷಣವೇ ರಾಜೀನಾಮೆ ಕೊಟ್ಟವರು ನಮ್ಮ ನಾಯಕರು. ಅವರ ಅಧ್ಯಕ್ಷ ಪದವಿ ಆ ಸಭೆಗೇ ಮುಗಿದು ಹೋಯಿತು’. ಆದರೆ ಜಿ.ಎಚ್.ನಾಯಕ ಅವರಂತೆ ಮನಃಸಾಕ್ಷಿಗನುಗುಣವಾಗಿ ನಡೆದುಕೊಳ್ಳುವ ವ್ಯಕ್ತಿಗಳು ಈಗ ಸಿಗುವುದು ವಿರಳ.

ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರು ಎದುರಿಸುತ್ತಿರುವ ಇನ್ನೊಂದು ಸಮಸ್ಯೆ ಎಂದರೆ, ಅವರು ಎರಡು ಪ್ರತ್ಯೇಕ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸಬೇಕಿದೆ. ಸಂಬಳವನ್ನು ಜಿಲ್ಲಾ ಪಂಚಾಯಿತಿ ಪಾವತಿಸಿದರೆ, ಗ್ರಂಥಾಲಯ ಇಲಾಖೆಯು ಪುಸ್ತಕಗಳನ್ನು ಪೂರೈಸುತ್ತದೆ. ಇವುಗಳ ನಡುವೆ ಹೊಂದಾಣಿಕೆಯಿದ್ದಾಗ ಮಾತ್ರ ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ. ಜೊತೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮತ್ತು ಮೇಲ್ವಿಚಾರಕರ ಮಧ್ಯೆ ಸಮನ್ವಯದ ಕೊರತೆ ಕೂಡ ಪ್ರಮುಖ ಸಮಸ್ಯೆಯಾಗಿದೆ. ಸಂಬಳವನ್ನು ನಿಯಮಿತವಾಗಿ ಪಾವತಿಸದೆ ವಿಳಂಬ ಮಾಡುತ್ತಿರುವುದು ಮೇಲ್ವಿಚಾರಕರಲ್ಲಿ ಕೆಲಸದ ನಿರಾಸಕ್ತಿಗೆ ಕಾರಣವಾಗಿದೆ. ಇಲಾಖೆಗಳ ನಡುವಣ ಸಂಘರ್ಷ ಮತ್ತು ಪುಸ್ತಕ ಖರೀದಿ ಪ್ರಕ್ರಿಯೆಯ ಕೇಂದ್ರೀಕೃತ ವ್ಯವಸ್ಥೆಯಿಂದಾಗಿ ಗ್ರಾಮೀಣ ಗ್ರಂಥಾಲಯಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಸುಧಾರಣೆ ಆಗಬೇಕಾಗಿರುವುದು ತಳಮಟ್ಟದಲ್ಲಲ್ಲ, ನೀತಿ ನಿಯಮಗಳನ್ನು ರೂಪಿಸುವ ಮತ್ತು ದೂರದಲ್ಲಿ ಕುಳಿತು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಮೇಲ್ಮಟ್ಟದಲ್ಲಿ ಆಗಬೇಕು. ವಿಪರ್ಯಾಸವೆಂದರೆ, ನಾವು ಸದಾಕಾಲ ತಳಮಟ್ಟದ ಸುಧಾರಣೆಗಳತ್ತ ಗಮನಹರಿಸುತ್ತ ಮೇಲ್ಮಟ್ಟದ ಆಡಳಿತಶಾಹಿಯನ್ನು ಮರೆತುಬಿಡುತ್ತೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.