ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯುದಯಕ್ಕೆ ‘ಅಧ್ಯಯನ’ ಫಲಶ್ರುತಿ

ಸಮಾಜಕ್ಕೆ ಪ್ರಯೋಜನಕಾರಿಯಾಗಬಲ್ಲ ಸಲಹೆ, ಸೂಚನೆಗಳನ್ನು ಸರ್ಕಾರಕ್ಕೆ ತಲುಪಿಸುವ ವ್ಯವಸ್ಥೆ ಜಾರಿಗೆ ಬಂದರೆ, ಪಿಎಚ್‌.ಡಿ ಅಧ್ಯಯನಗಳ ಗುಣಮಟ್ಟ ಸುಧಾರಿಸೀತು
Last Updated 22 ಜುಲೈ 2019, 19:35 IST
ಅಕ್ಷರ ಗಾತ್ರ

ಭಾರತದ ವಿಶ್ವವಿದ್ಯಾಲಯಗಳಲ್ಲಿ ಇತ್ತೀಚಿನ ವರ್ಷ ಗಳಲ್ಲಿ ಪಿಎಚ್.ಡಿ ಪ್ರಬಂಧಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಆದರೆ ಈ ಖಾಸಗಿ ಅಧ್ಯಯನಗಳ ಗುಣಮಟ್ಟದಲ್ಲಾದ ಅಗಾಧ ಕುಸಿತವನ್ನು ಯುಜಿಸಿ ಗಂಭೀರವಾಗಿ ಪರಿಗಣಿಸಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸಲ್ಲಿಕೆಯಾದ ಪ್ರಬಂಧಗಳ ಮರುಮೌಲ್ಯಮಾಪನಕ್ಕೆ ಅದು ವಿಶೇಷ ವ್ಯವಸ್ಥೆ ಮಾಡುತ್ತಿರುವುದು ಸ್ವಾಗತಾರ್ಹ. ಪಿಎಚ್.ಡಿ ಎಂಬ ‘ಬಿಕ್ಕಟ್ಟು’ ಇರುವುದು, ಪಿಎಚ್.ಡಿ ವ್ಯಾಸಂಗದ ಸುಧಾರಣೆಯ ಮಾರ್ಗ ಇಕ್ಕಟ್ಟಾಗಿರುವುದು ಸುಳ್ಳಲ್ಲ.

ಹಾಗೆಂದ ಮಾತ್ರಕ್ಕೆ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಸ್ವೀಕೃತಿ ಪಡೆದ ಎಲ್ಲಾ ಪಿಎಚ್.ಡಿ ಪ್ರಬಂಧಗಳೂ ಕಳಪೆಯಾಗಿವೆ ಎಂಬ ನಿರ್ಧಾರಕ್ಕೆ ಬರಲಾಗದು. ಎಷ್ಟೋ ಪ್ರಬಂಧಗಳಲ್ಲಿ ಸಮಾಜಕ್ಕೆ ಬೇಕಾದ ಸತ್ಯ ಸಂಗತಿಗಳಿದ್ದವು, ನೀತಿ ನಿರ್ಮಾಣಕ್ಕೆ, ಆಡಳಿತ ವ್ಯವಸ್ಥೆಗೆ ಉಪಯುಕ್ತವಾಗಬಲ್ಲ ಸಲಹೆ, ಸೂಚನೆಗಳಿದ್ದವು. ಆದರೆ ಈ ಅಧ್ಯಯನಗಳಲ್ಲಿದ್ದ ಸಲಹೆ ಸೂಚನೆಗಳನ್ನು ಸರ್ಕಾರ ನಡೆಸುವವರು ಅಭಿವೃದ್ಧಿ ಉದ್ದೇಶಗಳಿಗೆ ಬಳಸಿಕೊಳ್ಳಲೇ ಇಲ್ಲ. ಪ್ರಬಂಧಗಳಲ್ಲಿರುವ ಸಲಹೆ, ಸೂಚನೆಗಳು ಸರ್ಕಾರದ ಗಮನಕ್ಕೆ ಹೋಗುವ ಸಾಧ್ಯತೆ ಖಚಿತವಾದರೆ, ಅವುಗಳ ಗುಣಮಟ್ಟ ಸುಧಾರಿಸಬಹುದೆಂದು ನಿರೀಕ್ಷಿಸಬಹುದು.

1950 ಮತ್ತು 60ರ ದಶಕಗಳಲ್ಲಿ ರಾಜ್ಯ ಸರ್ಕಾರಗಳು ಭೂಸುಧಾರಣಾ ಯೋಜನೆಗಳನ್ನು ಜಾರಿಗೆ ತಂದವು. ಹಲವು ರಾಜ್ಯಗಳಲ್ಲಿ ಜಾರಿಗೆ ಬಂದ, ಕಳ್ಳಗಿಂಡಿಗಳನ್ನು ಹೊಂದಿದ ಅರೆಬರೆ ಶಾಸನಗಳನ್ನು ಬಳಸಿಕೊಂಡು ಭೂಮಾಲೀಕರು ಗೇಣಿದಾರರನ್ನು ಒಕ್ಕಲೆಬ್ಬಿಸಿದರು. ಶಾಸನ, ಪರಿಹಾರವಾಗುವ ಬದಲು ವಾಸ್ತವದಲ್ಲಿ ಶಾಪವಾಯಿತು. ಸಾಕಷ್ಟು ಪಿಎಚ್.ಡಿ ಪ್ರಬಂಧಗಳು ಭೂಸುಧಾರಣಾ ಕಾನೂನುಗಳ ವೈಫಲ್ಯಗಳನ್ನು ತೆರೆದಿಟ್ಟಿದ್ದವು. ಕಾನೂನುಗಳಿಗೆ ಬೇಕಾದ ತಿದ್ದುಪಡಿಗಳನ್ನೂ ಸೂಚಿಸಿದ್ದವು. ಇವನ್ನೆಲ್ಲ ರಾಜ್ಯ ಸರ್ಕಾರಗಳ ಗಮನಕ್ಕೆ ತರುವ ಪ್ರತ್ಯೇಕ ವ್ಯವಸ್ಥೆ ಇರಲಿಲ್ಲವಾದ್ದರಿಂದ, ಭೂಸುಧಾರಣೆ ವೈಫಲ್ಯಗಳು ಮುಂದುವರಿದವು.

ಕೃಷಿ ಅರ್ಥಶಾಸ್ತ್ರದ ನಿಯತಕಾಲಿಕಗಳಲ್ಲೂ ಕೃಷಿರಂಗದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ವಿದ್ವತ್ಪೂರ್ಣ ಲೇಖನಗಳು ಪ್ರಕಟವಾಗಿದ್ದವು. ಇವನ್ನೆಲ್ಲ ರಾಜ್ಯ ಸರ್ಕಾರಗಳು ಲಕ್ಷ್ಯಕ್ಕೆ ತೆಗೆದುಕೊಳ್ಳದ ಕಾರಣ, ರೈತ ಸಮುದಾಯ ಬವಣೆಯ ಬದುಕು ನಡೆಸುವಂತಾಯಿತು. ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ವರದಿ ಇದನ್ನು ಖಚಿತಪಡಿಸಿದೆ.

ಮಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ದಲ್ಲಿ ಬ್ಯಾಂಕಿಂಗ್, ಕೃಷಿ, ಸಣ್ಣ ಕೈಗಾರಿಕೆ, ಪ್ರವಾ ಸೋದ್ಯಮ, ಪಂಚಾಯತ್ ರಾಜ್, ಭೂಸುಧಾರಣೆ, ಗ್ರಾಮೀಣಾಭಿವೃದ್ಧಿಯಲ್ಲಿ ಮೂಲ ಸೌಕರ್ಯಗಳ ಪಾತ್ರ, ಗ್ರಾಮೀಣ ಜನರ ವಲಸೆ- ಹೀಗೆ ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪಿಎಚ್.ಡಿ ಪ್ರಬಂಧಗಳಿವೆ. ಕೆಲವು ವರದಿಗಳು ಪುಸ್ತಕಗಳಾಗಿ ಬೆಳಕಿಗೆ ಬಂದಿವೆ. ಈ ಖಾಸಗಿ ಅಧ್ಯಯನಗಳಲ್ಲಿ ಅಭಿವೃದ್ಧಿ ಪ್ರಕ್ರಿಯೆಗೆ ಬೇಕಾದ ಸಲಹೆ, ಸೂಚನೆಗಳಿವೆ. ಇತರ ವಿಶ್ವವಿದ್ಯಾಲಯಗಳಲ್ಲೂ ಉಪಯುಕ್ತ ಸಲಹೆಗಳನ್ನು ನೀಡುವ ಅನೇಕ ಅಧ್ಯಯನಗಳಾಗಿವೆ. ಆಧುನಿಕ ತಂತ್ರಜ್ಞಾನ ಇರುವಾಗಲೂ, ಸಮಾಜಕ್ಕೆ ಪ್ರಯೋಜನಕಾರಿಯಾಗಬಲ್ಲ ಸಲಹೆ, ಸೂಚನೆಗಳನ್ನು ಸಂಬಂಧಪಟ್ಟ ಸರ್ಕಾರಿ ವಿಭಾಗಗಳಿಗೆ ತಲುಪಿಸುವ ವ್ಯವಸ್ಥೆ ವಿಶ್ವವಿದ್ಯಾಲಯಗಳಲ್ಲಿ ಈಗಲೂ ಇಲ್ಲ.

ಅಮೆರಿಕದಲ್ಲಿ 55 ವರ್ಷಗಳ ಹಿಂದೆ ನಡೆದ ಒಂದು ಘಟನೆ, ಖಾಸಗಿ ಅಧ್ಯಯನಕ್ಕೆ ಆಡಳಿತ ವಲಯದಲ್ಲಿ ಮನ್ನಣೆ ನೀಡುವ ಅಲ್ಲಿನ ಉನ್ನತ ಪರಂಪರೆಗೆ ಸಾಕ್ಷಿಯಾಯಿತು. 1962ರಲ್ಲಿ ಪ್ರಕಟವಾದ, ಪ್ರಾಧ್ಯಾಪಕ ಮೈಕೆಲ್ ಹೆರಿಂಗ್ಟನ್ ಅವರು ಬರೆದ, ಕೇವಲ 185 ಪುಟಗಳ ‘The Other America: Poverty in the United States’ ಹೆಸರಿನ ಪುಸ್ತಕವು ಅಮೆರಿಕದಲ್ಲಿದ್ದ ಬಡತನದ ಮೇಲೆ ಹೊಸ ಬೆಳಕು ಚೆಲ್ಲಿತು. ಅಲ್ಲಿನ ಫೆಡರಲ್ ಸರ್ಕಾರ 1911ರಿಂದ ಬಡವರನ್ನು ಗುರುತಿಸಲು ಬಳಸುತ್ತಿದ್ದ ಮಾನದಂಡದ ಮಿತಿಗಳನ್ನು ತಮ್ಮ ಆಳವಾದ ಸಂಶೋಧನೆಯ ಮೂಲಕ ಅವರು ಹೊರಹಾಕಿದರು. ಆ ಮಾನದಂಡವು ಗೋಚರವಾಗುತ್ತಿರುವ ಬಡತನವನ್ನಷ್ಟೇ ಗುರಿಯಾಗಿಸಿಕೊಂಡು, ದೇಶದಲ್ಲಿ ವ್ಯಾಪಕವಾದ ಅಗೋಚರ ಬಡತನವನ್ನು ನಿರ್ಲಕ್ಷಿಸಿದೆ ಎಂದು ಹೆರಿಂಗ್ಟನ್ ವಾದಿಸಿದ್ದಲ್ಲದೆ, ಅಮೆರಿಕದಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬ ಬಡವನಿದ್ದಾನೆಂದು ಹೇಳಿ, ಅಲ್ಲಿಯ ಸರ್ಕಾರಕ್ಕೆ ಆಘಾತ ನೀಡಿದ್ದರು. ಫೆಡರಲ್ ವ್ಯವಸ್ಥೆಯು ಬಡವರ ಕ್ಷೇಮಾಭಿ ವೃದ್ಧಿಗಾಗಿ ಸಾಮಾಜಿಕ ಭದ್ರತಾ ಜಾಲವನ್ನು ವಿಸ್ತೃತ ಗೊಳಿಸಬೇಕೆಂಬ ಸಲಹೆ ನೀಡಿದ್ದರು. 1963ರಲ್ಲಿ ಅಮೆರಿಕದ ಅಧ್ಯಕ್ಷರಾದ ಲಿಂಡನ್ ಜಾನ್ಸನ್ ಅವರು ಬಡತನದ ವಿರುದ್ಧ ಸಮರ ಸಾರಿದ್ದರು. ಹೆರಿಂಗ್ಟನ್ ಅವರ ಚಿಂತನೆಯ ಮಹತ್ವವನ್ನು ಗುರುತಿಸಿ, ಅವರನ್ನು ಸಾಮಾಜಿಕ ಭದ್ರತಾ ಜಾಲದ ಸಲಹೆಗಾರನನ್ನಾಗಿ ನೇಮಿಸಿ ಹಿರಿಮೆ ಮೆರೆದರು.

ದೊಡ್ಡ ವೆಚ್ಚವಿಲ್ಲದ, ಅಪಾರ ಸಾಮಾಜಿಕ ಲಾಭವುಳ್ಳ ಇಂಥ ಪರಂಪರೆಯು ಭಾರತದಲ್ಲಿ ದೇಶ ಮಟ್ಟದಲ್ಲೂ, ರಾಜ್ಯ ಮಟ್ಟದಲ್ಲೂ ಬೆಳೆಯಬೇಕಾಗಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ‘ಸಂಶೋಧನೆ ಯಿಂದ ಶಿಕ್ಷಣ, ಶಿಕ್ಷಣದಿಂದ ಸಂಶೋಧನೆ’ ಎನ್ನುವ ಮಹತ್ವದ ವಿಚಾರ 2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿದೆ. ಆದರೆ ಉನ್ನತ ಶಿಕ್ಷಣ ರಂಗದ ಸಂಶೋಧನೆಗಳ (ಖಾಸಗಿ ಅಧ್ಯಯನಗಳೂ ಸೇರಿದಂತೆ) ಫಲಶ್ರುತಿಯನ್ನು ಅಭಿವೃದ್ಧಿ ಉದ್ದೇಶಗಳಿಗೆ ಬಳಸಿಕೊಳ್ಳುವ ಬಗ್ಗೆ ಸ್ಪಷ್ಟ ಚಿಂತನೆ ಇದರಲ್ಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT