ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಇರಲಿ ವೃತ್ತಿಘನತೆಯ ಪ್ರಜ್ಞೆ

ವೃತ್ತಿಯೊಂದು ನಮ್ಮಿಂದ ಏನನ್ನು ಬಯಸುತ್ತದೆ ಎನ್ನುವುದನ್ನು ಮನಗಂಡು, ಅದಕ್ಕೆ ಅನುಗುಣವಾಗಿ ಮಾನಸಿಕವಾಗಿ ಸಿದ್ಧರಾಗಬೇಕು
Last Updated 12 ಜೂನ್ 2022, 20:00 IST
ಅಕ್ಷರ ಗಾತ್ರ

ಕಳೆದ ವರ್ಷದ ‘ನೀಟ್’ನಲ್ಲಿ ಅತ್ಯುತ್ತಮ ರ್‍ಯಾಂಕ್‍ನೊಂದಿಗೆ ತೇರ್ಗಡೆಯಾದ ನನ್ನ ಪರಿಚಿತರ ಮಗ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯಲು ನಿರಾಕರಿಸಿದ ಸಂಗತಿ ನನಗೆ ಅಚ್ಚರಿಯನ್ನುಂಟು ಮಾಡಿತು. ಈ ಕುರಿತು ಪ್ರಶ್ನಿಸಿದಾಗ, ‘ವೈದ್ಯಕೀಯ ವೃತ್ತಿ ಸದಾಕಾಲ ಸೇವೆಯನ್ನು ಬಯಸುವಂತಹದ್ದು. ಅಲ್ಲಿ ವೈಯಕ್ತಿಕ ಬದುಕಿಗೆ ಹೆಚ್ಚಿನ ಅವಕಾಶವಿಲ್ಲ. ಹಗಲು ಹೊತ್ತು ಬಿಡಿ, ರಾತ್ರಿ ವೇಳೆಯಲ್ಲೂ ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕು. ವೈಯಕ್ತಿಕ ಬದುಕಿನ ಆಶೋತ್ತರಗಳನ್ನು ಬದಿಗೊತ್ತಿ ಆ ವೃತ್ತಿಯಲ್ಲಿ ಸಾಧಿಸುವಂತಹದ್ದಾದರೂ ಏನಿದೆ?’ ಎಂದು ಹೇಳಿದ. ಅವನ ಪ್ರತಿಕ್ರಿಯೆ ಕೇಳಿ ಒಂದುಕ್ಷಣ ದಂಗಾಗಿ ಹೋದೆ.

ಪ್ರತಿಭಾವಂತನಾದ ಅವನು ವೈದ್ಯಕೀಯ ವೃತ್ತಿಯನ್ನು ಆರಿಸಿಕೊಂಡರೆ ಸಮಾಜಕ್ಕೊಬ್ಬ ಸೇವಾ ಮನೋಭಾವದ ವೈದ್ಯ ದೊರೆಯುವನೆಂದು ಮೊದಲಿನಿಂದ ಭರವಸೆ ಇಟ್ಟುಕೊಂಡಿದ್ದ ನನಗೆ, ಆ ಸಂದರ್ಭ ಅವನ ಪ್ರತಿಕ್ರಿಯೆಯಿಂದ ನಿರಾಸೆಯ ಜೊತೆಗೆ ಅವನಲ್ಲಿನ ವೃತ್ತಿಘನತೆಯ ಅರಿವಿನ ಕೊರತೆಯಿಂದ ಮನಸ್ಸಿಗೆ ನೋವಾಯಿತು.

ಕೆಲವು ವೃತ್ತಿಗಳೇ ಹಾಗೆ, ಸದಾಕಾಲ ಒಂದಿಷ್ಟು ಅಗತ್ಯಗಳನ್ನು ಬಯಸುತ್ತವೆ. ವೈದ್ಯಕೀಯ ವೃತ್ತಿಯನ್ನು ಆರಿಸಿಕೊಳ್ಳುವ ವ್ಯಕ್ತಿ ಹಗಲು ರಾತ್ರಿಯೆಂಬ ಭೇದವಿಲ್ಲದೆ ಸದಾಕಾಲ ರೋಗಿಗಳ ಸೇವೆಗೆ ತೆರೆದುಕೊಳ್ಳುವ ಮುಕ್ತ ಮನಸ್ಸು ಹೊಂದಿರಬೇಕು. ಶಿಕ್ಷಕ ವಿದ್ಯಾರ್ಥಿಗಳಿಗೆ ಮಾದರಿಯಾಗುವ ವ್ಯಕ್ತಿತ್ವವನ್ನು ರೂಪಿಸಿಕೊಂಡಿರಬೇಕು. ಪೊಲೀಸ್‌ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವವರು ಕಾನೂನಿನ ಪರಿಪಾಲಕರಾಗಿರಬೇಕು. ಗ್ರಂಥಪಾಲಕ ಪುಸ್ತಕಗಳ ಓದಿನ ಆರಾಧಕನಾಗಿರಬೇಕು.

ವೃತ್ತಿಯೊಂದನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಆ ವೃತ್ತಿ ನಮ್ಮಿಂದ ಏನನ್ನು ಬಯಸುತ್ತದೆ ಎನ್ನುವುದನ್ನು ಮನಗಾಣಬೇಕು. ಅದಕ್ಕೆ ಅನುಗುಣವಾಗಿ ಮಾನಸಿಕವಾಗಿ ಸಿದ್ಧರಾಗಬೇಕು. ಇಲ್ಲಿ ತ್ಯಾಗ ಮಾಡುತ್ತಿದ್ದೇನೆ ಅಥವಾ ವೈಯಕ್ತಿಕ ಬದುಕನ್ನು ಕಳೆದುಕೊಳ್ಳುತ್ತಿದ್ದೇನೆ ಎನ್ನುವುದಕ್ಕಿಂತ ವೃತ್ತಿಘನತೆಯನ್ನು ಎತ್ತಿ ಹಿಡಿಯುವುದು ಆದ್ಯತೆಯಾಗಬೇಕು. ಸಂಬಳ ಮತ್ತು ಸವಲತ್ತುಗಳು ಬೇಕು ಎನ್ನುವುದಾದರೆ ಅದರೊಂದಿಗೆ ವೃತ್ತಿಯು ಬೇಡುವ ಕೆಲವು ಅವಶ್ಯಕತೆಗಳನ್ನು ಮೈಗೂಡಿಸಿಕೊಳ್ಳುವುದೂ ಅತ್ಯಗತ್ಯ.

‘ವಿದ್ಯಾರ್ಥಿಗಳಿಗೆ ಪರೋಕ್ಷವಾಗಿಯಾದರೂ ತಿಳಿದು ಅವರ ಚಾರಿತ್ರ್ಯಕ್ಕೆ ಕೆಟ್ಟ ಮಾದರಿಯಾಗುವ ಯಾವ ಕೆಲಸವನ್ನೂ ಖಾಸಗಿಯಲ್ಲಿ ಕೂಡ ಮಾಡುವುದು ಅಧ್ಯಾಪಕನಿಗೆ ಸಲ್ಲುವುದಿಲ್ಲ. ಅಂಥವನು ಆ ವೃತ್ತಿಯನ್ನು ಬಿಟ್ಟುಬಿಡಬೇಕು ಎಂದು ನಾನು ದೃಢವಾಗಿ ನಂಬಿದವನು. ಉಪಾಧ್ಯಾಯನ ಘನತೆ ಇರುವುದು ಅವನ ಸಂಬಳದಿಂದಲ್ಲ- ವಿದ್ವತ್ತು, ಚಾರಿತ್ರ್ಯದಿಂದ ಕೂಡಿದ ವ್ಯಕ್ತಿತ್ವ ಮತ್ತು ಬೋಧನಾಶಕ್ತಿಗಳಿಂದ’ ಎಂದಿದ್ದಾರೆ ಎಸ್.ಎಲ್.ಭೈರಪ್ಪ ತಮ್ಮ ಆತ್ಮಕತೆ ‘ಭಿತ್ತಿ’ಯಲ್ಲಿ.

ತಮ್ಮ ವ್ಯಕ್ತಿತ್ವದ ಹಿರಿಮೆಯಿಂದ ತಮ್ಮ ವೃತ್ತಿಗೊಂದು ಘನತೆ ತಂದುಕೊಟ್ಟವರ ಅನೇಕ ಉದಾಹರಣೆಗಳಿವೆ. ಬಿಪಿನ್‍ಚಂದ್ರ ರಾಯ್ ಅವರು ಸೇವಾ ಮನೋಭಾವದಿಂದ ವೈದ್ಯಕೀಯ ಲೋಕದಲ್ಲಿ ಚಿರಸ್ಮರಣೀಯರಾಗಿ ಉಳಿದಿರುವರು. ಜುಲೈ 1ರಂದು ಅವರ ಜನ್ಮದಿನವನ್ನು ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ಅತ್ಯುತ್ತಮ ಸೇವೆ ಸಲ್ಲಿಸಿದ ವೈದ್ಯರಿಗೆ ‘ಬಿ.ಸಿ.ರಾಯ್’ ಪ್ರಶಸ್ತಿಯನ್ನು ಕೊಡುವುದರ ಮೂಲಕ ರಾಯ್ ಅವರ ಹೆಸರನ್ನು ಅಜರಾಮರಗೊಳಿಸಲಾಗಿದೆ. ಎಂಜಿನಿಯರ್ ಹುದ್ದೆಗೆ ಎಂ.ವಿಶ್ವೇಶ್ವರಯ್ಯನವರು ಪ್ರತಿಭೆ ಮತ್ತು ಪ್ರಾಮಾಣಿಕತೆಯಿಂದ ವಿಶಿಷ್ಟ ಘನತೆ ತಂದುಕೊಟ್ಟರು. ವಿಜ್ಞಾನಿ ಎಂದಾಕ್ಷಣ ಥಟ್ಟನೆ ನೆನಪಾಗುವುದು ಅಬ್ದುಲ್ ಕಲಾಂ ಅವರ ಹೆಸರು. ಕುವೆಂಪು ತಮ್ಮ ಮಹಾಕೃತಿ ‘ಶ್ರೀ ರಾಮಾಯಣ ದರ್ಶನಂ’ ಸಮರ್ಪಿಸಿದ್ದು ತಮ್ಮನ್ನು ತುಂಬ ಪ್ರಭಾವಿಸಿದ ಗುರುಗಳಾದ ವೆಂಕಣ್ಣಯ್ಯನವರಿಗೆ. ರಾಜ್‌ಕುಮಾರ್‌ ಅವರು ಕಲೆಯ ಘನತೆಗೆ ಕುಂದುಬರದಂತೆ ಬದುಕಿದರು. ರಾಜಕಾರಣಿಯಾಗಿ ರಾಮಮನೋಹರ ಲೋಹಿಯಾ ಇವತ್ತಿಗೂ ಮಾದರಿ ವ್ಯಕ್ತಿ.

ಬದಲಾದ ಕಾಲಘಟ್ಟದಲ್ಲಿ ವೃತ್ತಿಘನತೆ ಹಿನ್ನೆಲೆಗೆ ಸರಿದು ಹಣ ಗಳಿಕೆಯೇ ಮುನ್ನೆಲೆಗೆ ಬಂದಿದೆ. ಅದಕ್ಕೆಂದೇ ಇಲ್ಲಿ ನೀತಿ ಪಾಠ ಬೋಧಿಸುವ ಶಿಕ್ಷಕರೂ ಅಕ್ರಮ ಗಳಿಕೆಗೆ ಮುಂದಾಗುತ್ತಾರೆ. ಕಾನೂನನ್ನು ಎತ್ತಿಹಿಡಿಯಬೇಕಾದ ವೃತ್ತಿಯಲ್ಲಿ ಇರುವವರೇ ಅನ್ಯಾಯ ಎಸಗುತ್ತಾರೆ. ದೇಶದ ನೀತಿ, ನಿಯಮಗಳನ್ನು ರೂಪಿಸುವವರೇ ಅನೀತಿಯ ಮಾರ್ಗ ಹಿಡಿಯುತ್ತಾರೆ. ಕೆಲವೊಮ್ಮೆ ಪಾಲಕರ ಒತ್ತಾಯ ಮತ್ತು ಮಹತ್ವಾಕಾಂಕ್ಷೆಗೆ ಮಣಿದು ಮಕ್ಕಳು ತಮಗೆ ಇಷ್ಟವಿಲ್ಲದ ಕೋರ್ಸು- ವೃತ್ತಿಗೆ ಸೇರಿಕೊಳ್ಳುವುದುಂಟು. ವೃತ್ತಿಯಲ್ಲಿ ಆಸಕ್ತಿಯೇ ಇಲ್ಲದ ವ್ಯಕ್ತಿಯಿಂದ ವೃತ್ತಿಘನತೆಯನ್ನು ನಿರೀಕ್ಷಿಸುವುದಾದರೂ ಹೇಗೆ? ಆಗ ನಷ್ಟವಾಗುವುದು ಸಮಾಜಕ್ಕೆ ವಿನಾ ವ್ಯಕ್ತಿ ಅಥವಾ ಕುಟುಂಬಕ್ಕಲ್ಲ.

ವೃತ್ತಿಘನತೆಯ ಪ್ರಜ್ಞೆಯನ್ನು ಕಳೆದುಕೊಂಡರೆ, ಸಾಲು ಸಾಲು ಕೊಲೆಗಳನ್ನು ಮಾಡಿಯೂ ಜನಮನ್ನಣೆಗೆ ಪಾತ್ರವಾಗುವ ಸಿನಿಮಾ ಮಾಧ್ಯಮದ ಕಥಾನಾಯಕರ ಪಾತ್ರಗಳೇ ನಮ್ಮ ಯುವಜನಾಂಗಕ್ಕೆ ಮಾದರಿಯೂ ಆದರ್ಶವೂ ಆಗುವ ದುರಂತಕ್ಕೆ ನಾವೇ ಹೊಣೆಯಾಗಬೇಕಾಗುತ್ತದೆ.

ಯಶವಂತ ಚಿತ್ತಾಲರ ‘ಪುರುಷೋತ್ತಮ’ ಪುಸ್ತಕದಲ್ಲಿ ಹೀಗೊಂದು ಮಾತಿದೆ ‘ನಿರ್ಜೀವ ಕಲ್ಲಿನಂತೆ ತೆಪ್ಪಗೆ ಬಿದ್ದ ಮಾವಿನ ಗೊರಟೆಗೂ ತಿಳಿವಳಿಕೆ ಉಂಟಂತಲ್ಲಪ್ಪಾ, ತನ್ನ ಜನ್ಮದ ಸಾರ್ಥಕ್ಯ ಇರುವುದು ಸೂರ್ಯನತ್ತ ಮುಖ ಮಾಡಿದ ಮರವಾಗುವುದರಲ್ಲೆಂದು’. ಇಂಥದ್ದೊಂದು ಘನತೆಯನ್ನು ಮನುಷ್ಯ ರೂಢಿಸಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT